ಕುಂಬಳಗೋಡು (14-11-2023): ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 10 ನೇ ಆವೃತ್ತಿಯು ನಾನಾ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ವರ್ತೂರು ಸಂತೋಷ್ ಹುಲಿ ಉಗುರಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲುವಾಸಿಯಾಗಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರ ಮತ್ತೆ ಇದೀಗ ಅವರು ಬಿಗ್ ಬಾಸ್ ಮನೆಗೆ ಮರುಪ್ರವೇಶ ಮಾಡಿದ್ದಾರೆ.
ಇದೀಗ ಬಿಗ್ ಬಾಸ್ ಮತ್ತೊಂದು ಪ್ರಕರಣದಲ್ಲಿ ಸುದ್ದಿಯಲ್ಲಿದೆ. ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಕುಂಬಳಗೋಡು ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ಅವರು ಭೋವಿ ಸಮುದಾಯಕ್ಕೆ ಅವಮಾನವಾಗುವಂತಹ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ಭೋವಿ ಸಂಘದ ರಾಜ್ಯಾಧ್ಯಕ್ಷೆ ಪದ್ಮಾ.ಪಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಷಾ ವಿರುದ್ಧ ಕುಂಬಳಗೋಡು ಠಾಣೆಯಲ್ಲಿ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ದಿನಾಂಕ 8 ನೇ ತಾರೀಖಿನಂದು ಪ್ರಸಾರವಾಗಿದ್ದ ಸಂಚಿಕೆಯಲ್ಲಿ ದ್ರೋಣ್ ಪ್ರತಾಪ್ ಅವರೊಂದಿಗೆ ಮಾತನಾಡುವಾಗ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎನ್ನುವುದು ದೂರುದಾರರ ಆರೋಪವಾಗಿದ್ದು, ಈ ಹಿನ್ನೆಲೆಯಲ್ಲಿ ಭೋವಿ ಸಮಾಜದ ನೂರಾರು ಮಂದಿ ಬಿಗ್ ಬಾಸ್ ಮನೆ ಹತ್ತಿರ ತೆರಳಿ ಪ್ರತಿಭಟನೆ ಮಾಡಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಅಟ್ರಾಸಿಟಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.