ಬೆಂಗಳೂರು: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ಮಂಗಳೂರು ಇದರ ನಿಯೋಗವು ಶುಕ್ರವಾರ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವರು ಡಾ. ಹೆಚ್. ಸಿ. ಮಹದೇವಪ್ಪರನ್ನು ಭೇಟಿಯಾಗಿ ಒಳ ಮೀಸಲಾತಿ ಹಾಗೂ ಸಮುದಾಯದ ಉಪಜಾತಿ ಕುರಿತು ಸಮಾಲೋಚನೆ ನಡೆಸಿತು. ತಮ್ಮ ಸಮುದಾಯಕ್ಕೆ ಪ್ರತ್ಯೇಕ ಅಸ್ಮಿತೆಯನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಸಮುದಾಯದ ಉಪಜಾತಿಯ ಪ್ರತ್ಯೇಕ ಗೌರವಾನ್ವಿತ ಹೆಸರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶಿಸಲು ಮನವಿ ಮಾಡಲಾಯಿತು. ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜಾತಿ ಜನಗಣತಿಯ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ದೈವಗಳನ್ನು ಕುಲದೈವಗಳೆಂದು ನಂಬುವ ಆದಿ ದ್ರಾವಿಡ ಸಮುದಾಯವು ಸ್ಥಳೀಯವಾಗಿ ವಿವಿಧ ಹೆಸರುಗಳ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ ನಿಯೋಗವು ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿತು. ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳಿಂದ ಸೃಷ್ಟಿಯಾಗಿರುವ ಆಕ್ಷೇಪಾರ್ಹ ಮನ್ಸ ಪದಕ್ಕೆ ಸಮುದಾಯದ ತೀವ್ರ ಆಕ್ಷೇಪವಿರುವ ಕುರಿತು ಹಾಗೂ ರಾಜ್ಯ ಆದಿ ದ್ರಾವಿಡ ಸಂಘವೂ ಇದನ್ನು ತೀವ್ರವಾಗಿ ವಿರೋಧಿಸುತ್ತಿರುವ ಬಗ್ಗೆಯೂ ಸಚಿವರಿಗೆ ನಿಯೋಗವು ಮನವರಿಕೆ ಮಾಡಿಕೊಟ್ಟಿತು.
ಸಂಘದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ನಿಯೋಗಕ್ಕೆ ಭರವಸೆ ನೀಡಿದರು. ಒಳ ಮೀಸಲಾತಿ ಜಾರಿಗೊಳಿಸುವಾಗ ತುಳು ಭಾಷಿಕ ಆದಿ ದ್ರಾವಿಡ ಸಮುದಾಯವನ್ನು ಪರಿಶಿಷ್ಟ ಜಾತಿಗಳ ಬಲಗೈ ಗುಂಪಿನಲ್ಲಿ ಗುರುತಿಸುವಂತೆಯೂ ಮನವಿ ಮಾಡಲಾಯಿತು.
ಸಚಿವರ ನಿವಾಸದಲ್ಲಿ ಸುಮಾರು ಒಂದು ಗಂಟೆ ಕಾಲ ನಿಯೋಗವನ್ನು ಕೂರಿಸಿಕೊಂಡು ಸಚಿವರು ಸುಧೀರ್ಘ ಸಮಾಲೋಚನೆ ನಡೆಸಿ, ಸಮುದಾಯದ ಕುರಿತಂತೆ ಸವಿವರವಾದ ಮಾಹಿತಿ ಪಡೆದುಕೊಂಡರು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.)ದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಕಾರ್ಯದರ್ಶಿ ಸುರೇಶ್ ಪಿ. ಬಿ., ದ..ಕ.. ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸುರೇಶ್ ಆರ್ಡಿ ಕೊಪ್ಪ, ಉಡುಪಿ ಜಿಲ್ಲಾಧ್ಯಕ್ಷ ಶೇಖರ್ ಕಂಪನ್, ಸಂಘದ ಮುಂಚೂಣಿ ನಾಯಕರುಗಳಾದ ಜಯ ಜಿ.ಕೆ. ಪುತ್ತೂರು, ಅಣ್ಣಪ್ಪ ಕೆರೆಕ್ಕಾಡು ಪುತ್ತೂರು, ರತ್ನಾಕರ್ ಪಳ್ಳಿ ಕಾರ್ಕಳ, ಪುಟ್ಟರಾಜು ಹಾಸನ ರಮೇಶ್ ಬೆಳಗೊಡು ಹಾಸನ ಮತ್ತು ಲೋಕೇಶ್ ಮಡಿಕೇರಿ ಮುಂತಾದವರು ನಿಯೋಗದಲ್ಲಿದ್ದರು.
ಇದಕ್ಕೂ ಮೊದಲು ನಿಯೋಗವು ಒಳ ಮೀಸಲಾತಿ ಸಂಬಂಧಿಸಿದ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಕಾಂತರಾಜ್ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿ ಅಗತ್ಯ ವಿಷಯಗಳನ್ನು ಅವರಿಗೆ ಮನವರಿಕೆ ಮಾಡಿ ಮನವಿಯನ್ನು ಸಲ್ಲಿಸಿತು.

