ಬೆಂಗಳೂರು (12-11-2023): ಬೆಂಗಳೂರಿನಲ್ಲಿ ಸೆಪ್ಟೆಂಬರ್ 30 ರಂದು ರಾತ್ರಿ ನಡೆದಿದ್ದ ಕಾರು ಆಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಪಘಾತದ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೋಲಿಸರು ನ್ಯಾಯಾಲಯಕ್ಕೆ ಸುಮಾರು 80 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರೊಂದಿಗೆ ಸುಮಾರು ಅರವತ್ತು ಸಾಕ್ಷಿಗಳನ್ನು ಪೊಲೀಸರು ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ನಟ ನಾಗಭೂಷಣ್ ಕಾರಿನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ ಮತ್ತು ಅಜಾಗರೂಕತೆ, ಅತಿವೇಗದ ಚಾಲನೆಯೆ ಅಪಘಾತಕ್ಕೆ ಕಾರಣ ಎಂದು ಆರ್.ಟಿ.ಓ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ನಟ ನಾಗಭೂಷಣ್ ಕಾರು ಚಾಲನೆ ಸಂದರ್ಭದಲ್ಲಿ ಮದ್ಯಪಾನ ಮಾಡಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದರೂ ಸಹ ಇದೀಗ ಅವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದರು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿಯಿದೆ.
ನಾಗಭೂಷಣ್ ಕಾರು ಅಪಘಾತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಅವರ ಪತಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಬರುವ ವೇಳೆ ನಾಗಭೂಷಣ ಕಾರು ಅಪಘಾತಕ್ಕೀಡಾಗಿತ್ತು. ರಾತ್ರಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ ಎಂಬ ಮಹಿಳೆ ಸಾವನ್ನಪ್ಪಿದ್ದರು.