ಬೆಂಗಳೂರು (10-11-2023): ರಾಜ್ಯ ಬಿಜೆಪಿಯ ನೂತನ ಸಾರಥಿಯ ಆಯ್ಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಕಟಿಸಿದ್ದಾರೆ. ಕರ್ನಾಟಕ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರದ ಶಾಸಕರಾದ ಬಿ.ವೈ.ವಿಜಯೇಂದ್ರ ಅವರನ್ನು ನಿಯುಕ್ತಿಗೊಳಿಸಿದ್ದಾರೆ.
ಚುನಾವಣೆಯ ಬಳಿಕ ನಿಸ್ತೇಜಗೊಂಡಿದ್ದ ಪಕ್ಷದ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಈ ಬಾರಿ ಯುವಕರಿಗೆ ಮಣೆ ಹಾಕಿರುವ ಬಿಜೆಪಿ ಈ ಆಯ್ಕೆಯ ಮೂಲಕ ರಾಜ್ಯದಲ್ಲಿ ಮತ್ತೆ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಹೊಸ ಹುರುಪಿನೊಂದಿಗೆ ಎದುರಿಸಲು ಯೋಜನೆ ರೂಪಿಸಿದಂತಿದೆ.
ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಗೆ ಹಲವಾರು ಹಿರಿಯ ನಾಯಕರ ಹೆಸರುಗಳು ಚರ್ಚೆಯಲ್ಲಿ ಇದ್ದವಾದರೂ ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸುಪತ್ರ ವಿಜಯೇಂದ್ರಗೆ ಅಧ್ಯಕ್ಷ ಗಾದಿ ಒಲಿದಿದೆ.