ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆಯಿಂದ ವಿಶ್ವ ದಾಖಲೆಗೆ ಯತ್ನ | ಭರದ ಸಿದ್ಧತೆ
ಬೆಂಗಳೂರು: ನ.18 ಮತ್ತು 19ರಂದು ವಿಧಾನಸೌಧದ ಶಾಸಕರ ಭವನದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಬೃಹತ್ ಲೈವ್ ಪೇಂಟಿಂಗ್ ಕಾರ್ಯಕ್ರಮ ನಡೆಯಲಿದೆ. ಸುಮಾರು 1,200 ಚದರ ಅಡಿ ವಿಸ್ತಾರದ ಬೃಹತ್ ಕ್ಯಾನ್ವಾಸ್‌ನಲ್ಲಿ ಈ ಪೇಂಟಿಂಗ್ ನಡೆಯಲಿದ್ದು, ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆಯು ಈ ಮೂಲಕ ವಿಶ್ವ ದಾಖಲೆಯ ಯತ್ನ ಮಾಡುತ್ತಿದೆ.
ಇಡೀ ಜಗತ್ತಿನಲ್ಲೇ ನಮ್ಮ ದೇಶದ ಸಂವಿಧಾನ ಶ್ರೇಷ್ಠ ಸಂವಿಧಾನ. ತಮ್ಮ ಜೀವನದ ಶ್ರೇಷ್ಠ ಅಧ್ಯಯನದ ಮೂಲಕ ಪರಮಪೂಜ್ಯ, ಮಹಾನಾಯಕ, ಸಂವಿಧಾನಶಿಲ್ಪಿ, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಪರಮ ಪವಿತ್ರ ಸಂವಿಧಾನವನ್ನು ನಮಗೆ ನೀಡಿದ್ದು, ಅವರ ದೂರಗಾಮಿ ದೃಷ್ಟಿಕೋನವು ದೇಶವನ್ನು ಇಂದು ಪ್ರಗತಿಯ ಪಥದತ್ತ ಕೊಂಡೊಯ್ಯುತ್ತಿದೆ. ಸಮಸ್ತ ಭಾರತೀಯರಿಗೆ ಸಮಪಾಲು-ಸಮಬಾಳು ನೀತಿಯಡಿ ರೂಪುಗೊಂಡಿರುವ ಈ ಸಂವಿಧಾನಕ್ಕೆ ಇದೀಗ 75ನೇ ವರ್ಷದ ಸಂಭ್ರಮ. ನಮ್ಮ ಸಂವಿಧಾನದ ಅಮೃತ ಮಹೋತ್ಸವದ ಸಂಭ್ರಮವನ್ನು ಸಂಭ್ರಮಿಸಲು ದೇಶಾದ್ಯಂತ ನೂರಾರು ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಆ ಪ್ರಕಾರ, ನಮ್ಮ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ (ರಿ.) ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ವರಿಗೂ ಸಮಾನತೆಯ, ಸಹಬಾಳ್ವೆಯ, ಸಹೋದರತ್ವದ ಸಂದೇಶ ಸಾರಿರುವ ನಮ್ಮ ಸಂವಿಧಾನವನ್ನು 1949ರ ನವೆಂಬರ್ 26ರಂದು ದೇಶದ ನಾಗರಿಕರಾದ ನಾವು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಸಂವಿಧಾನ ಅಂಗೀಕಾರಗೊಂಡಿರುವ ನವೆಂಬರ್ 26ರಂದು ಭಾರತದ ಸಂವಿಧಾನದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಸಂಬಂಧಿಸಿ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ (ರಿ.) ವತಿಯಿಂದ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಹತ್ವದ ಎರಡು ವಿಶ್ವ ದಾಖಲೆಗಳಿಗೆ ಯತ್ನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಕುರಿತ ಜನಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮಗಳ ಜೊತೆಗೆ ನಿರಂತರ ಜಾಗೃತಿ ಕಾರ್ಯಕ್ರಮಗಳೂ ಮುಂದುವರಿಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಅರುಣ ಕುಮಾರ್ ನಾಗರಾಜ ದಿವಾಣಜಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮುಖ್ಯವಾಗಿ, ನವೆಂಬರ್ 18 ಮತ್ತು ನವೆಂಬರ್ 19ರಂದು ವಿಧಾನಸೌಧದ ಶಾಸಕರ ಭವನದ ಆವರಣದಲ್ಲಿ ಸುಮಾರು 20ರಿಂದ 30 ಜನ ಖ್ಯಾತ ಚಿತ್ರ ಕಲಾವಿದರು 30 ಅಡಿ ಎತ್ತರ, 40 ಅಡಿ ಅಗಲದ ಒಟ್ಟು 1200 ಚದರ ಅಡಿಯ ಬೃಹತ್ ಕ್ಯಾನ್ವಾಸ್ ಮೇಲೆ ಭಾರತದ ಪ್ರಜಾಪ್ರಭುತ್ವದ ಪಿತಾಮಹ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಬೃಹತ್ ಕಲಾಕೃತಿಯನ್ನು ಸತತ ಎರಡು ದಿನಗಳ ʻಲೈವ್ ಪೈಂಟಿಂಗ್ʼ ಮಾಡಿ ವಿಶ್ವ ದಾಖಲೆ ನಿರ್ಮಿಸಲು ಯತ್ನಿಸಲಾಗುತ್ತದೆ. ಈ ಪೇಂಟಿಂಗ್ ಅನ್ನು ನ.26ರಂದು ಸಂವಿಧಾನ ದಿನದಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಅನಾವರಣ ಮಾಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ..
ಅಲ್ಲದೆ, ನ.26ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟಿಸುವ ನಿರೀಕ್ಷೆಯಿದೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಘನ ಉಪಸ್ಥಿತಿ ಇರಲಿದ್ದು, ಅವರು ಸಂವಿಧಾನ ಪೀಠಿಕೆ ಬೋಧನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ (ರಿ.) ಪ್ರಸ್ತುತಿಯ ʻಮನೆ ಮನಕೆ ಸಂವಿಧಾನʼ ಎಂಬ ಸಂವಿಧಾನ ಗೀತೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಅಲ್ಲದೆ, ಸಂವಿಧಾನ ಕುರಿತು ನಿರ್ಮಾಣಗೊಂಡಿರುವ ಸಾಕ್ಷ್ಯಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಲೋಕಾರ್ಪಣೆ ಮಾಡಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗೌರವಾನ್ವಿತ ಸಚಿವರುಗಳು, ವಿರೋಧ ಪಕ್ಷದ ನಾಯಕರುಗಳು, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಮಾಜಿ ಸಚಿವರುಗಳು, ಮಾಜಿ ಶಾಸಕರುಗಳು ಮತ್ತು ಆಡಳಿತಾತ್ಮಕ ಮುಖ್ಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎನ್ನಲಾಗಿದೆ.