ಬೆಂಗಳೂರು: ದೇಶದ ಸಂವಿಧಾನಕ್ಕೆ 75 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಬೃಹತ್ ಕ್ಯಾನ್ವಾಸ್ ಮೇಲೆ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರರಚನೆಯ ಲೈವ್ ಪೇಂಟಿಂಗ್ ಮಾಡುವ ಮೂಲಕ ವಿಶ್ವ ದಾಖಲೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕಾರ್ಯಕ್ರಮದ ಆಯೋಜನೆ ಮಾಡಿರುವ ವಿಶ್ವ ಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆ ತಿಳಿಸಿದೆ. ವಿಧಾನಸೌಧದ ಶಾಸಕರ ಭವನದ ಆವರಣದಲ್ಲಿ ಈ ಕುರಿತಂತೆ ಭರದ ಸಿದ್ಧತೆ ನಡೆಯುತ್ತಿದೆ.
ಕಾರ್ಯಕ್ರಮ ಏನು?
ನವೆಂಬರ್ 26ಕ್ಕೆ ಭಾರತದ ಸಂವಿಧಾನವು ಅಂಗೀಕಾರವಾಗಿ 75 ವರ್ಷಗಳು ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ‘ಅಮೃತ ಮಹೋತ್ಸವ ಕಾರ್ಯಕ್ರಮ’ದ ಸವಿನೆನಪಿಗಾಗಿ ವಿಧಾನಸೌಧದ ಶಾಸಕರ ಭವನದ ಆವರಣದಲ್ಲಿ 30 ಅಡಿ ಉದ್ದ, 40 ಅಡಿ ಅಗಲದ ಒಟ್ಟು 1200 ಚದರ ಅಡಿಯ ಬೃಹತ್ ಕ್ಯಾನ್ವಾಸ್ ಮೇಲೆ ನವೆಂಬರ್ 18, 19 ಎರಡು ದಿನಗಳ ಕಾಲ ‘ಲೈವ್ ಪೇಂಟಿಂಗ್’ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಚಿತ್ರಕಲೆಯನ್ನು 20-30 ಖ್ಯಾತ ಕಲಾವಿದರು ರಚಿಸಲಿದ್ದಾರೆ. ಈ ಲೈವ್ ಪೇಂಟಿಂಗ್ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಮತ್ತು ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ನವೆಂಬರ್ 18 ರಂದು ಚಾಲನೆ ನೀಡಲಿದ್ದಾರೆ. ಇದು ವಿಶ್ವದಾಖಲೆಯ ಪ್ರಯತ್ನವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 26ರಂದು ಒಟ್ಟಾಗಿ ಪರದೆ ಎಳೆಯುವ ಮೂಲಕ ಈ ಬೃಹತ್ ಕಲಾಕೃತಿಯನ್ನು ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯ ಬೃಹತ್ ಕ್ಯಾನ್ವಾಸ್ ಮೇಲೆ ಡಾ.ಬಿ. ಆರ್.ಅಂಬೇಡ್ಕರ್ ಅವರ ಚಿತ್ರ ರಚನೆಗೆ ಭರದ ಸಿದ್ಧತೆ ನಡೆಯುತ್ತಿದೆ.