ಬೆಂಗಳೂರು: ಭಾರತದ ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವಗುರು ಬುದ್ಧ ಪ್ರೊಡಕ್ಷನ್ಸ್ ಸಂಸ್ಥೆ, ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಕುರಿತಾದ ಬೃಹತ್ ಚಿತ್ರಪಟವನ್ನು 30×40 ಅಡಿ ಅಳತೆಯಲ್ಲಿ, ಒಟ್ಟು 1,200 ಚದರ ಅಡಿಯ ಕ್ಯಾನ್ವಾಸ್ ಮೇಲೆ ರಚಿಸುವ ಮೂಲಕ ವಿಶ್ವದಾಖಲೆಗೆ ಯತ್ನಿಸಿದೆ. ಶಾಸಕರ ಭವನದ ಆವರಣದಲ್ಲಿ ಹಾಕಲಾಗಿದ್ದ ಪೆಂಡಾಲ್ ಒಳಗೆ ಬೃಹತ್ ಕ್ಯಾನ್ವಾಸ್ ಸಿದ್ಧಪಡಿಸಿಕೊಂಡು, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸುಮಾರು ಇಪ್ಪತ್ತು ಕಲಾವಿದರು ಈ ಪ್ರಯತ್ನ ನಡೆಸಿದರು.
ನ.18ರ ಸಂಜೆ 5 ಗಂಟೆಗೆ ಸರಿಯಾಗಿ ಎಲ್ಲಾ ಚಿತ್ರ ಕಲಾವಿದರು ಬ್ರಶ್ ಮತ್ತು ಬಣ್ಣದ ಸಹಿತ ಫೋಟೊಗೆ ಪೋಸ್ ನೀಡಿ, ಚಿತ್ರ ರಚಿಸಲು ಆರಂಭಿಸಿದರು. ಕಲಾವಿದರು 1200 ಚದರ ಅಡಿಯ ಕ್ಯಾನ್ವಾಸ್‌ನಲ್ಲಿ ವಿವಿಧ ಭಾಗಗಳನ್ನು ವಿಂಗಡಿಸಿಕೊಂಡು, ಚಿತ್ರ ರಚನೆಯಲ್ಲಿ ತೊಡಗಿದರು. ಖಾಲಿಯಿದ್ದ ದೊಡ್ಡ ಬಿಳಿಯ ಕ್ಯಾನ್ವಾಸ್ ನಿಧಾನವಾಗಿ ಬಣ್ಣಗಳನ್ನು ತುಂಬಿಕೊಳ್ಳುತ್ತಾ ಸಾಗಿತು. ಮುಖ್ಯ ಕಲಾವಿದರು ತಮ್ಮ ಯೋಜನೆಯಂತೆ ಚಿತ್ರಗಳನ್ನು ಬಿಡಿಸಿದರೆ, ಉಳಿದ ಕಲಾವಿದರು ಅವುಗಳಿಗೆ ಬಣ್ಣಗಳನ್ನು ತುಂಬುವ ಕೆಲಸದಲ್ಲಿ ನಿರತರಾದರು.
ಸಂವಿಧಾನದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಈ ದಾಖಲೆಯನ್ನು ನಿರ್ಮಿಸಲು ಕಲಾವಿದರು ಶ್ರಮಿಸಿದರು. ಕ್ಯಾನ್ವಾಸ್‌ನ ಎಡಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಕಲಾವಿದರ ಕುಂಚದಲ್ಲಿ ಸೊಗಸಾಗಿ ಅರಳಿತು. ಅಲ್ಲದೆ, ಬಲಭಾಗದಲ್ಲಿ ಭಾರತದ ಸಂವಿಧಾನದ ಪೀಠಿಕೆಯು ಶಿಲಾ ಶಾಸನದ ರೂಪದಲ್ಲಿ ಚಿತ್ರಿತವಾಯಿತು.
ಕ್ಯಾನ್ವಾಸ್‌ನ ಪ್ರಧಾನ ಭಾಗದಲ್ಲಿ ಕಾಮನಬಿಲ್ಲಿನ ಬಣ್ಣಗಳು ನೀರಿನಂತೆ ಹರಿದು ಸಾಗುವ ಕಲಾಕೃತಿ ರಚನೆಯಾಯಿತು. ಇದರ ಮೇಲೆ ಸಂವಿಧಾನಕ್ಕೆ 75 ವರ್ಷ, ಅಮೃತ ಮಹೋತ್ಸವ ಕಾರ್ಯಕ್ರಮ ಎಂಬ ಅಕ್ಷರಗಳು ಮೂಡಿದವು. ಕಾಮನಬಿಲ್ಲಿನ ಬಣ್ಣಗಳ ಕೆಳಗೆ ಮಾನವ ವಿಕಾಸ, ದೇಶದ ಪ್ರಗತಿಯನ್ನು ಬಿಂಬಿಸುವ ವಿವಿಧ ಚಿತ್ರಗಳನ್ನು ಕಲಾವಿದರು ರಚಿಸಿದರು. ಪ್ರಧಾನವಾಗಿ ಶಿಕ್ಷಣ, ಆರೋಗ್ಯ, ಸಮಾಜ, ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ, ಸಾರಿಗೆ ಸಂಪರ್ಕದಲ್ಲಾದ ಕ್ರಾಂತಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ರಂಗದಲ್ಲಾದ ಪ್ರಗತಿಯನ್ನು ಬಿಂಬಿಸುವ ಚಿತ್ರಗಳು ಮೂಡಿದವು. ಆಡಳಿತದ ಶಕ್ತಿಸೌಧಗಳಾದ ಸಂಸತ್ ಭವನ, ವಿಧಾನಸೌಧದ ಚಿತ್ರಗಳು ಮತ್ತು ಕಾಮನಬಿಲ್ಲಿನ ಬಣ್ಣಗಳ ಮೇಲೆ ಉದಯಿಸುತ್ತಿರುವ ಸೂರ್ಯನನ್ನು ಚಿತ್ರಿಸಿದರು.
ಸಂವಿಧಾನದ ಪೀಠಿಕೆಯ ಕೆಳಗೆ ವಿಶ್ವಗುರು ಬುದ್ಧ ಬೋಧಿ ವೃಕ್ಷದ ಕೆಳಗೆ ಧ್ಯಾನದಲ್ಲಿ ಕುಳಿತಿರುವ ಚಿತ್ರ ರಚನೆಯಾಯಿತು. ಸುಧೀರ್ಘ 13 ಗಂಟೆಗಳ ಅವಧಿಯ ಚಿತ್ರ ರಚನೆಯು ಅಂತಿಮ ಹಂತ ತಲುಪಿ, ಸರ್ಕಾರದ ಚಿಹ್ನೆಯ ಚಿತ್ರ ಮುದ್ರೆಯ ರೂಪದಲ್ಲಿ ಮೂಡಿಬಂತು. ಹೀಗೆ, ಎಲ್ಲಾ ಕಲಾವಿದರು ಸೇರಿ ಬೃಹತ್ ಕಲಾಕೃತಿ ಸೃಷ್ಟಿಸಿ ವಿಶ್ವದಾಖಲೆಗೆ ಪ್ರಯತ್ನಿಸಿದರು.
ಈ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲಾ ಕಲಾವಿದರು ತಾವು ರಚಿಸಿದ ಕಲಾಕೃತಿಯ ಎದುರು ಸಾಮೂಹಿಕವಾಗಿ ನಿಂತು ಭಾವಚಿತ್ರ ತೆಗೆಸಿಕೊಂಡು ಶ್ರಮಿಸಿದರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಬಹಳಷ್ಟು ಸಾರ್ವಜನಿಕರು, ಆರಕ್ಷಕ ಸಿಬ್ಬಂದಿ, ಅಧಿಕಾರಿಗಳು ಸಾಕ್ಷಿಯಾದರು. ಅಂತಿಮವಾಗಿ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಚಿತ್ರ ಕಲಾಕೃತಿಯ ಅಡಿಯಲ್ಲಿ ಸಹಿ ಮಾಡುವ ಮೂಲಕ ಚಿತ್ರ ರಚನೆ ಕಾರ್ಯಕ್ಕೆ ತೆರೆ ಎಳೆದರು.
ಖ್ಯಾತ ಕಲಾವಿದರುಗಳಾದ ಕೆ.ಕೆ. ಮಕ್ಕಾಳೆ, ಎ.ಜಿ. ನೆಲ್ಲಗಿ, ಶಂಕರ್ ಕಡಕುಂಟ್ಲ ಮುಂತಾದವರ ನೇತೃತ್ವದಲ್ಲಿ ಈ ಬೃಹತ್ ಚಿತ್ರ ರಚನೆಯ ಕಾರ್ಯ ನಡೆಯಿತು. ಇದೊಂದು ವಿಶ್ವದಾಖಲೆಯ ಪ್ರಯತ್ನವಾಗಿದ್ದು, ಈ ಸಂಬಂಧಿತ ದಾಖಲೆಗಳನ್ನು ಸಂಬಂಧಿತ ಸಂಸ್ಥೆಗಳಿಗೆ ರವಾನಿಸಲಾಗುತ್ತದೆ. ಅದನ್ನು ಪರಿಶೀಲಿಸಿ ಶೀಘ್ರದಲ್ಲೇ ದಾಖಲೆಯ ಪ್ರಮಾಣಪತ್ರ ದೊರೆಯುವ ಭರವಸೆಯಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ವಿಶ್ವಗುರು ಬುದ್ಧ ಸಂಸ್ಥೆಯ ಪ್ರಧಾನ ನಿರ್ದೇಶಕ ಅರುಣ ಕುಮಾರ್ ನಾಗರಾಜ್ ದಿವಾಣಜಿ, ಯೋಜನೆಯ ವ್ಯವಸ್ಥಾಪಕ ಕನ್ನಾಯಕನಹಳ್ಳಿ ಕುಮಾರ್ ರಾಮೇಗೌಡ (ಮಹಾದೇವಸ್ವಾಮಿ), ಕಾರ್ಯಕ್ರಮದ ಸಂಚಾಲಕರುಗಳಾದ ಬೀರೇಶ್ ಬಿ.ಆರ್., ಸಿದ್ದಲಿಂಗಮೂರ್ತಿ, ಹೆಚ್. ಸತೀಶ್ ಕುಮಾರ್, ಸಂಯೋಜಕರುಗಳಾದ ಸುರೇಶ್ ಪಿ.ಬಿ., ಶರಣಕುಮಾರ್ ದಿವಾಣಜಿ ಮತ್ತು ಸಂಸ್ಥೆಯ ಇತರ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು. ಹಲವು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಕಡಿಮೆ ಅವಧಿಯಲ್ಲಿ ರಚನೆಯಾದ ಬೃಹತ್ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.