ನವದೆಹಲಿ: ದೇಶಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಈ ನಡುವೆ ಹೊಸದಾಗಿ ನಿರ್ಮಿಸಲಾಗಿರುವ 1,200 ಕೋಟಿ ರೂ. ವೆಚ್ಚದ ಸಂಸತ್ ಭವನ ಸೋರುತ್ತಿದೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸಹಿತ, ಸಂಸದರು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತೇ ಒಳ್ಳೆಯದಿತ್ತು ಎಂದು ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್, ಹೊರಗಡೆ ಪೇಪರ್ ಸೋರಿಕೆ, ಒಳಗಡೆ ನೀರು ಸೋರಿಕೆ ಎಂದು ವ್ಯಂಗ್ಯವಾಡಿದ್ದಾರೆ.
ಲೋಕಸಭೆಯಲ್ಲಿ ವಿಷಯದ ಕುರಿತು ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ ಕೂಡ ಇದಕ್ಕೆ ಟ್ವೀಟ್ ಮಾಡಿದ್ದು, 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಂಸತ್ತು ಈಗ 120 ರೂಪಾಯಿಯ ಬಕೆಟ್ ಮೇಲೆ ಅವಲಂಬಿತವಾಗಿದೆ ಎಂದು ವ್ಯಂಗ್ಯವಾಡಿದೆ.