ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿ ಸಯ್ಯದ್ ಬಶೀರ್ ಎಂಬಾತನನ್ನು ಪೊಲೀಸರು ಸುಳ್ಯದಲ್ಲಿ ಬಂಧಿಸಿದ್ದಾರೆ. ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದು, ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂದಿಸಲಾಗಿದೆ.
ಘಟನೆಯ ಬಳಿಕ ಪರಾರಿಯಾಗಲೆತ್ನಿಸಿದ ಬಶೀರ್‌ನನ್ನು ಬೆಳ್ತಂಗಡಿ ಪೊಲೀಸರು ಸುಳ್ಯದಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಘಟನೆಯ ಬಳಿಕ ತಡರಾತ್ರಿ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಸ್ಫೋಟಗೊಂಡ ಕಟ್ಟಡದ ಪಕ್ಕದ ಮನೆಯಲ್ಲಿ ವೃದ್ಧ ದಂಪತಿಯಿದ್ದು, ಸ್ಫೋಟದ ವೇಳೆ ಅವರು ಮನೆಯಿಂದ ಹೊರಗಿದ್ದುದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಅವರ ಮನೆಗೆ ಹಾನಿಯಾಗಿದೆ. ಸುತ್ತಮುತ್ತಲಿನ ಕೆಲವು ಮನೆಗಳಿಗೆ ಹಾನಿಯಾಗಿದೆ.