ಮಂಗಳೂರು: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌದ್ಧಿಕ ವಲಯದಲ್ಲಿ ಜನಪ್ರಿಯವಾಗಿದ್ದ ದಲಿತ್ ವಾಯ್ಸ್ ಪತ್ರಿಕೆಯ ಸ್ಥಾಪಕ, ಸಂಪಾದಕ, ಜನಪರ ಬರಹಗಾರ ವಿ.ಟಿ. ರಾಜಶೇಖರ್ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು
ಮಂಗಳೂರಿನ ಶಿವಭಾಗ್‌ನಲ್ಲಿ ರಾಜಶೇಖರ್ ವಾಸಿಸುತ್ತಿದ್ದರು. ಇತ್ತೀಚಿಗೆ ಅವರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಎರಡು ದಶಕಗಳ ಸೇವೆಯ ಬಳಿಕ ದಲಿತ್ ವಾಯ್ಸ್ ಎಂಬ ನಿಯತಕಾಲಿಕ ಆರಂಭಿಸಿ ದಲಿತ ಪರ ಧ್ವನಿಯಾಗಿದ್ದರು.
ದೇಶಾದ್ಯಂತ ದಲಿತ್ ವಾಯ್ಸ್ ಹಾಗೂ ಅದರಲ್ಲಿ ಪ್ರಕಟಿತ ಅವರ ಬರಹಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದ್ದವು. ದಲಿತ-ಬಹುಜನರ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ರಾಜಶೇಖರ್ ಅವರು ಬ್ರಾಹ್ಮಣ್ಯ ಹಾಗು ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದರು. ಅಂಬೇಡ್ಕರ್‌ವಾದಿ ಚಿಂತನೆಯ ಮಹತ್ವದ ಕೃತಿಗಳನ್ನು ರಚಿಸಿರುವ ವಿ. ಟಿ. ರಾಜಶೇಖರ್ ಹಲವು ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.
1932ರಲ್ಲಿ ಉಡುಪಿ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ರಾಜಶೇಖರ್ ಅವರು ತಮ್ಮ ಪದವಿಯ ನಂತರ ಬೆಂಗಳೂರಿನ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ (1959) ಗೆ ಸೇರಿದರು. ನಂತರ ಅವರು ಬಾಂಬೆಗೆ ಬಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸೇರಿದರು. ಉಡುಪಿ ಸಮೀಪದ ಪ್ರತಿಷ್ಠಿತ ಕುಟುಂಬವೊಂದರಲ್ಲಿ ಜನಿಸಿದ ರಾಜಶೇಖರ್ ಅವರಿಗೆ ಅಸ್ಪೃಶ್ಯತೆಯ ನೇರ ಅನುಭವವಿಲ್ಲವಾಗಿದ್ದರೂ, ಅಂಬೇಡ್ಕರ್‌ವಾದಿ ಚಿಂತನೆಯಡಿ ಪ್ರಖರ ಬರಹಗಾರರಾಗಿದ್ದರು. ಮುಂಬೈನ ಹತ್ತಿ ಜವಳಿ ಗಿರಣಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದರಿಂದ, ಅದು ಅವರನ್ನು ಗಿರಣಿ ಕಾರ್ಮಿಕರ ದಬ್ಬಾಳಿಕೆಯ ಸಾಕ್ಷಿಯನ್ನಾಗಿ ಮಾಡಿತ್ತು. ನಂತರ ಅವರು ವರ್ಗ ಹೋರಾಟದ ಅಗತ್ಯವನ್ನು ಅರಿತುಕೊಂಡರು. ಆದರೆ, ಮುಂದೆ ದೇಶದ ಸಮಸ್ಯೆಗಳಿಗೆ ಅಂಬೇಡ್ಕರ್‌ವಾದವೇ ಸೂಕ್ತವೆಂದು ಅರಿತು ಅಂಬೇಡ್ಕರ್‌ವಾದಿ ಬರಹಗಾರರಾಗಿ ಭಾರೀ ಜನಪ್ರಿಯರಾದರು.
ರಾಜಶೇಖರ್ ಬರಹಗಳು ಸಾಕಷ್ಟು ಜನಪ್ರಿಯವಾಗಿವೆ. ಭಾರತದ ಜಾತಿ ವ್ಯವಸ್ಥೆಗೆ ಸಂಬಂಧಿಸಿದ ಅವರು ಸಾಕಷ್ಟು ಪುಸ್ತಕಗಳು ಹಲವಾರು ಚಿಂತಕರು, ಪ್ರಗತಿಪರರನ್ನು ಹುಟ್ಟು ಹಾಕಿವೆ. ದಲಿತ್ ವಾಯ್ಸ್ ಪತ್ರಿಕೆ ಜೊತೆಗೆ ರಾಜಶೇಖರ್ 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ವಿವಿಧ ಭಾಷೆಗಳಿಗೆ ಅನುವಾದಿಸಲಾಗಿದೆ. ಈ ಪುಸ್ತಕಗಳು ಭಾರತದ ತುಳಿತಕ್ಕೊಳಗಾದ ಜನರ ವಿಭಿನ್ನ, ಸ್ವತಂತ್ರ ವಿಷಯಗಳ ಬಗ್ಗೆ ಹೆಚ್ಚು ವಿವರಗಳನ್ನೊಳಗೊಂಡಿವೆ. ಇವುಗಳಲ್ಲಿ ‘Caste – A Nation within the Nationʼ ಲಂಡನ್‌ನಲ್ಲಿ LISA ಅಂತರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿದೆ.
‘Caste – A Nation within the Nationʼ (ಜಾತಿ – ರಾಷ್ಟ್ರದೊಳಗೆ ಒಂದು ರಾಷ್ಟ್ರ) ಇದು ಭಾರತದ ಜಾತೀಯತೆಯ ವಿವಿಧ ಸಮಸ್ಯೆಗಳನ್ನು ತಿಳಿಸುವ ಪ್ರಬಂಧಗಳ ಸಂಗ್ರಹವಾಗಿದೆ. ಇದು ಜಾತಿಗಳು ಮತ್ತು ಉಪಜಾತಿಗಳಲ್ಲಿ ಅಂತರ್ಗತವಾಗಿರುವ ಅಸ್ಮಿತೆಯ ರಾಜಕೀಯವನ್ನು ಎತ್ತಿ ತೋರಿಸುತ್ತದೆ. ಇದಲ್ಲದೆ, ಈ ಸಂಗ್ರಹದಲ್ಲಿನ ಪ್ರಬಂಧಗಳು ಜಾಗತೀಕರಣದ ಹಿನ್ನೆಲೆಯಲ್ಲಿ ಪ್ರತಿರೋಧಕ ಜನಾಂಗೀಯ ಗುರುತಿನ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಮಹಾನ್ ದಲಿತಪರ, ಶೋಷಿತಪರ ಬರಹಗಾರನ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಹಿತ ನಾಡಿನ ಹೋರಾಟಗಾರರು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ರಾಜಶೇಖರ್ ಅವರ ಅಂತಿಮ ಸಂಸ್ಕಾರ ಉಡುಪಿಯ ಓಂತಿಬೆಟ್ಟುವಿನಲ್ಲಿ ಗುರುವಾರ ನಡೆಯಲಿದೆ.