– ಸುರೇಶ್ ಪಿ.ಬಿ.
ವಕೀಲರು
ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರಗಳು ಕೋಟಿ, ಕೋಟಿ ಅನುದಾನ ಘೋಷಿಸುತ್ತವೆ. ನೋಡುವವರು ಮತ್ತು ಕೇಳುವವರಲ್ಲಿ ಎಸ್ಸಿ/ಎಸ್ಟಿಗಳಿಗೆ ತುಂಬಾ ಖುಷಿಯಾಗುತ್ತದೆ, ಇತರರಿಗೆ ಕಣ್ಣು ಕುಕ್ಕುತ್ತದೆ. ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆಗಳಲ್ಲಂತೂ ಸಾವಿರಾರು ಕೋಟಿ ಅನುದಾನ ಪ್ರತಿ ಬಜೆಟ್ನಲ್ಲಿ ಘೋಷಣೆಯಾಗುತ್ತಲೇ ಇರುತ್ತದೆ. ಆದರೆ ಮೂಡುಬಿದಿರೆಯಂತಹ ತಾಲೂಕು ಮಟ್ಟಕ್ಕೆ ತಲುಪುವಾಗ ಅದು ಪರಿಶಿಷ್ಟ ಸಮುದಾಯಗಳಿಗೆ ಎಷ್ಟು ತಲುಪುತ್ತದೆ? ಅದರಲ್ಲೂ ಅರ್ಹ ನೈಜ ಫಲಾನುಭವಿಗಳಿಗೆ ಎಷ್ಟು ತಲುಪುತ್ತದೆ? ಎಂಬುದನ್ನು ನೋಡುವಾಗ ದೊಡ್ಡ ವಿಷಾಧದ ಭಾವ ಮೂಡಿಸುತ್ತದೆ. ಮೂಡುಬಿದಿರೆ ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿಗೆ ಒಳಪಟ್ಟಿದ್ದಾಗ ಮೂಡುಬಿದಿರೆ-ಕಾರ್ಕಳ ಭಾಗದಲ್ಲಿ ದಲಿತ ಚಳವಳಿಯು ಅತ್ಯಂತ ಸಕ್ರಿಯ ಹಾಗೂ ಸದೃಢವೂ ಆಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಇಲ್ಲಿ ದಲಿತ ಚಳವಳಿಯು ದುರ್ಬಲವಾಗಿ, ಈಗಂತೂ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದೇ ಹೇಳಬೇಕು. ಹೀಗಾಗಿ ಇಲ್ಲಿನ ಪರಿಶಿಷ್ಟ ಸಮುದಾಯಗಳನ್ನು ಕೇಳುವವರೇ ಇಲ್ಲವಾಗಿದೆ. ಈಗ ಪರಿಶಿಷ್ಟ ಜಾತಿ ಸಮುದಾಯಗಳಾದ ಆದಿದ್ರಾವಿಡ, ಮುಗೇರರಂತಹ ಉಪಜಾತಿ ಸಂಘಟನೆಗಳು ಸಕ್ರಿಯವಾಗಿವೆಯಾದರೂ ಅವು ಆಡಳಿತವನ್ನು ಅಲುಗಾಡಿಸುವಷ್ಟು ಸಮರ್ಥವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಯಾಕೆಂದರೆ ಹಿಂದೆ ದಲಿತ ಸಂಘರ್ಷ ಸಮಿತಿ (ದ.ಸಂ.ಸ.)ದ ಲೆಟರ್ ಹೆಡ್ ಹಿಡಿದುಕೊಂಡು ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಅಲ್ಲಿ ಅಧಿಕಾರಿಗಳು ಅಲರ್ಟ್ ಆಗುತ್ತಿದ್ದರು. ತಕ್ಷಣವೇ ಕಾರ್ಯಾಚರಣೆ ಚುರುಕುಗೊಂಡು ಸಂಘಟನೆಯ ನಾಯಕರು ಕೇಳಿದ ವಿಷಯಕ್ಕೆ ಕೆಲವೇ ಗಂಟೆಗಳೊಳಗೆ ನ್ಯಾಯ ಸಿಗುತ್ತಿತ್ತು. ಆದರೆ ಈಗ ಹಾಗಿಲ್ಲ. ಸಂಘಟನೆಗಳು ಆಡಳಿತ ಕಚೇರಿಗಳ ಮುಂದೆ ಬಿದ್ದು ಹೊರಳಾಡಿದರೂ ಕೇಳುವವರೇ ಇಲ್ಲ. ಯಾಕೆಂದರೆ, ಸಂಘಟನೆಯೊಳಗೆ ಸಮನ್ವಯತೆ ಇಲ್ಲದಿರುವುದು, ಪರಸ್ಪರ ಕಾಲೆಳೆಯುವಿಕೆ, ಪರಸ್ಪರ ನಿಂದನೆ, ಪರಸ್ಪರ ಅಪನಂಬಿಕೆ ಸಂಘಟನೆಗಳನ್ನು ದುರ್ಬಲಗೊಳಿಸಿದೆ. ಸಂಘಟನೆಯ ನಾಯಕರ ಹಿಂದೆ ಕನಿಷ್ಠ ಸಂಖ್ಯೆಯ ಕಾರ್ಯಕರ್ತರು ಇಲ್ಲದಿರುವುದು ಅಧಿಕಾರಿಗಳಿಗೆ ಗೊತ್ತಿದೆ. ಹೀಗಾಗಿ ಅವರು ಇವರ ಯಾವುದೇ ಬೇಡಿಕೆಗಳಿಗೆ ಮನ್ನಣೆ ನೀಡುತ್ತಿಲ್ಲ.
ಇತ್ತೀಚಿಗೆ ಮೊದಲ ಬಾರಿ ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಿತು. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸುಮಾರು 32,611 ಕೋಟಿ ರೂ. ಅನುದಾನ ಘೋಷಣೆಯಾಯಿತು. ತನ್ನ ಪಕ್ಷ ಬಲವರ್ಧನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಭಾಗದಲ್ಲಿ ಈ ಕ್ಯಾಬಿನೆಟ್ ಸಭೆ ಆಯೋಜಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಈ ಭಾಗದ ಮಠ, ಮಂದಿರಗಳಿಂದ ಹಿಡಿದು ವಿವಿಧ ಅಲ್ಪಸಂಖ್ಯಾತರ ಸಂಘ-ಸಂಸ್ಥೆಗಳಿಗೂ ಕೋಟಿ ಕೋಟಿ ಅನುದಾನ ಘೋಷಿಸಲಾಯಿತು. ಆದರೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬುತ್ತಿರುವ, ನಿರ್ಣಾಯಕ ವೋಟ್ ಬ್ಯಾಂಕ್ ಆಗಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಸಮುದಾಯಗಳ ಸಂಘ ಸಂಸ್ಥೆಗಳಿಗಾಗಲಿ, ಸಮುದಾಯಗಳ ಸಮಗ್ರ ಕಲ್ಯಾಣಕ್ಕಾಗಲಿ ಒಂದು ಬಿಡಿಗಾಸನ್ನೂ ಘೋಷಣೆ ಮಾಡಲಾಗಿಲ್ಲ. ಇಷ್ಟು ದೊಡ್ಡದಾದ ಅನುದಾನದ ಪ್ಯಾಕೇಜ್ ಘೋಷಣೆ ಮಾಡುವಾಗ ಸರಕಾರಕ್ಕೆ ಇಲ್ಲಿನ ದುರ್ಬಲ ಸಮುದಾಯಗಳು ನೆನಪಾಗಲಿಲ್ಲ. ಇದೀಗ ಘೋಷಣೆ ಮಾಡಿರುವ 36,611 ಕೋಟಿ ರೂ.ಯಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಯಾಕೆ ಹಕ್ಕಿಲ್ಲ? ಈ ಭಾಗದಲ್ಲಿ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತಮಗೆ ದೊಡ್ಡ ನ್ಯಾಯ ಸಿಗಬಹುದು ಎಂದು ಎಲ್ಲಾ ಪರಿಶಿಷ್ಟ ಸಮುದಾಯಗಳು ಭಾರೀ ನಿರೀಕ್ಷೆ ಇಟ್ಟಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ಎಂದಿನಂತೆ ಈ ಭಾಗದ ಪರಿಶಿಷ್ಟ ಸಮುದಾಯಗಳನ್ನು ತೀರಾ ನಿರ್ಲಕ್ಷ್ಯಕ್ಕೊಳಪಡಿಸಿದೆ. ತಮ್ಮ ಸಮುದಾಯಗಳ ಬೇಡಿಕೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ವಿಫಲವಾದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಜೀನಾಮೆಗೆ ಆಗ್ರಹಗಳು ಕೇಳಿಬಂದವು. ಕೆಲವು ದಶಕಗಳಿಂದ ಕಾಂಗ್ರೆಸ್ ನಲ್ಲಿ ನಿಷ್ಠಾವಂತರಾಗಿ ವಿವಿಧ ಹುದ್ದೆಗಳನ್ನು ಅನುಭವಿಸಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡರುಗಳೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ತಮ್ಮ ಆಕ್ರೋಶ ಹೊರಹಾಕಿದರು. ಆದರೆ, ಇದನ್ನು ಮನಗಂಡ ಕಾಂಗ್ರೆಸ್ ಮುಖಂಡರು ತಕ್ಷಣದ ಆಕ್ರೋಶ ಶಮನಗೊಳಿಸಲು ಸಮುದಾಯದ ಮುಖಂಡರನ್ನು ಕರೆಸಿಕೊಂಡು ಮಾತುಕತೆಗಳನ್ನು ನಡೆಸಿ ಸದ್ಯಕ್ಕೆ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅದರಲ್ಲೂ ದೊಡ್ಡಮಟ್ಟದಲ್ಲಿ ಆಕ್ರೋಶ ಹೊರಹಾಕಿದ್ದ ಆದಿದ್ರಾವಿಡ ಸಮುದಾಯವನ್ನು ಸಮಾಧಾನ ಪಡಿಸಲು ಆ ಸಮುದಾಯದ ನಿಯೋಗವನ್ನು ಬೆಂಗಳೂರಿಗೆ ಕರೆಸಿಕೊಂಡು ಸಮಾಜ ಕಲ್ಯಾಣ ಸಚಿವರನ್ನು ಭೇಟಿಯಾಗಿಸಿ, ತಾವು ಕೇಳಿದ್ದ ಬೇಡಿಕೆಯನ್ನು ಈಡೇರಿಸುವುದಾಗಿ ಘೋಷಿಸಲಾಯಿತು. ಆದರೆ ತಾವು ಕೇಳಿದ್ದ ತಮ್ಮ ಸಮುದಾಯದ ಕುಲದೈವಗಳಾದ ಶ್ರೀ ಸತ್ಯಸಾರಮಾನಿ ಕಾನದ ಕಟದರ ಮೂಲಕ್ಷೇತ್ರಕ್ಕೆ ಅನುದಾನ, ತಮ್ಮ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುದಾನ, ಡಿ.ಸಿ. ಮನ್ನಾ ಭೂಮಿ ಹಂಚಿಕೆ ಮುಂತಾದ ಯಾವುದೇ ಬೇಡಿಕೆಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಆದೇಶ ಜಾರಿಯಾಗಿಲ್ಲ. ಈ ಬಗ್ಗೆ ಸಮುದಾಯದೊಳಗೆ ಇನ್ನೂ ಅಸಮಾಧಾನ ಮಡುಗಟ್ಟಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿನ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಅತಿದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯವೆಂದರೆ ಅದು ಆದಿದ್ರಾವಿಡ ಸಮುದಾಯ. ಮೂಡುಬಿದಿರೆಯಲ್ಲೂ ಇದೇ ಸಮುದಾಯ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಮೂಡುಬಿದಿರೆ ಈ ಸಮುದಾಯಕ್ಕೆ ಪವಿತ್ರ ಕೇಂದ್ರಸ್ಥಾನವಿದ್ದಂತೆ. ಸಮುದಾಯವು ಅತ್ಯಂತ ಭಯಭಕ್ತಿ ವಿನಯದಿಂದ ಆರಾಧಿಸುವ ತಮ್ಮ ಕುಲದೈವಗಳಾದ ಶ್ರೀ ಸತ್ಯಸಾರಮಾನಿ ಕಾನದ ಕಟದರು ದೈವತ್ವ ಪಡೆದ ಮೂಲಕ್ಷೇತ್ರ ತಾಲೂಕಿನ ಮಿಜಾರು ಗ್ರಾಮದ ಅಲೇರಿ ಎಂಬಲ್ಲಿದೆ. ಅಲ್ಲದೆ, ಶ್ರೀ ಸತ್ಯ ಸಾರಮಾನಿ ಕಾನದ ಕಟದರ ತಾಯಿ ಸತ್ಯದಪ್ಪೆ ಬೊಲ್ಲೆಯ ಜನ್ಮಸ್ಥಳ ಹಾಗೂ ತವರು ಇದೇ ಮೂಡುಬಿದಿರೆಯ ಕೋಟೆಬಾಗಿಲಿನಲ್ಲಿದೆ. ಪಾಡ್ದನದಲ್ಲಿ ಈ ಪ್ರದೇಶವನ್ನು ಇಟ್ಟೆಕೊಪ್ಪ ಪೆರಿಯಮಂಜ ಎಂದು ಉಲ್ಲೇಖಿಸಲಾಗಿದೆ. ಈ ಎರಡೂ ಕ್ಷೇತ್ರಗಳೂ ಅಜೀರ್ಣ ಸ್ಥಿತಿಯಲ್ಲಿವೆ. ಹೀಗಾಗಿ ಸಮುದಾಯವು ಈ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಹಲವು ವರ್ಷಗಳಿಂದ ಪರಿತಪಿಸುತ್ತಿದೆ. ಈ ಎರಡೂ ಕ್ಷೇತ್ರಗಳ ಮೂಲ ಜಾಗಗಳು ಖಾಸಗಿಯವರ ಪಾಲಾಗಿರುವುದರಿಂದ ಅದನ್ನು ಖರೀದಿಸಿಯೇ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ. ಹೀಗಾಗಿ ಸಮುದಾಯದ ಸಂಘಟನೆಗಳು ಒಗ್ಗಟ್ಟಾಗಿ ಮೊದಲು ಮಿಜಾರು ಅಲೇರಿ ಕ್ಷೇತ್ರವನ್ನು ಜೀರ್ಣೋದ್ದಾರ ಮಾಡಲೆಂದು ಆ ಜಮೀನನ್ನು ಖರೀದಿಸಲು ಮುಂದಾಗಿವೆ. ಅದಕ್ಕಾಗಿ ಈಗಾಗಲೇ ಸುಮಾರು 1 ಎಕರೆಯಷ್ಟು ಜಮೀನನ್ನು ದೇಣಿಗೆ ಸಂಗ್ರಹದ ಮೂಲಕ ಖರೀದಿಸಲಾಗಿದೆ. ಈ ಕ್ಷೇತ್ರದಲ್ಲಿನ ಉಳಿಕೆ ಜಮೀನು ಖರೀದಿಗೆ ಸರ್ಕಾರದ ಅನುದಾನಕ್ಕಾಗಿ ಸಮುದಾಯ ಕಾಯುತ್ತಿದೆ. ಈಗ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಆದಿದ್ರಾವಿಡರ ಮೂಲಕ್ಷೇತ್ರದ ಜೀರ್ಣೋದ್ಧಾರಕ್ಕೆ ಅನುದಾನ ನೀಡುವುದಾಗಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಯಾವುದೇ ಅನುದಾನ ಮಂಜೂರಾಗಿಲ್ಲ. ಕಳೆದ ಮಂಗಳೂರು ಕ್ಯಾಬಿನೆಟ್ ಸಭೆಯ ಕಾರಣಕ್ಕಾಗಿ ಈಗ ಅನುದಾನ ಬಿಡುಗಡೆಯ ಘೋಷಣೆಯಾಗಿದೆ. ಆದರೆ ಆ ಕುರಿತು ಅಧಿಕೃತ ಆದೇಶ ಅಥವಾ ಅಧಿಸೂಚನೆ ಜಾರಿಯಾದ ಬಗ್ಗೆ ಯಾವುದೇ ಮಾಹಿತಿಯಿಲ್ಲ.
ರಾಜ್ಯದ ಬಲಗೈ ಗುಂಪಿನಲ್ಲಿ ಬರುವ ಪ್ರಬಲ ಅಂಬೇಡ್ಕರ್ ವಾದಿ ಸಮುದಾಯವಾದ ತುಳುನಾಡಿನ ತುಳುಭಾಷಿಕ ಆದಿದ್ರಾವಿಡ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ನಿರ್ದಿಷ್ಟ ಉಪಜಾತಿಯ ಹೆಸರಿಲ್ಲ. ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ಆದಿದ್ರಾವಿಡ ಜಾತಿ ಪ್ರಮಾಣ ಪತ್ರದ ಮೂಲಕವೇ ಈ ಸಮುದಾಯ ಮೀಸಲಾತಿ ಹಾಗೂ ಸರಕಾರಿ ಸೌಲಭ್ಯ ಹೊಂದಿದೆ. ಸಮುದಾಯದ ಬಹುಸಂಖ್ಯಾತರು ಆದಿದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ, ಸಮುದಾಯದ ಉಳಿದವರು ಸುಮಾರು 14 ಹೆಸರುಗಳಲ್ಲಿ ತಪ್ಪು ಹೆಸರುಗಳ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಇದು ಇತ್ತೀಚಿಗೆ ಒಳಮೀಸಲಾತಿ ಜಾರಿ ಸಂಧರ್ಭದಲ್ಲಿ ಈ ಸಮುದಾಯಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ಕೆಲವು ಸರ್ಕಾರಿ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವಾಗ ಜಾತಿ ಕಲಂನಲ್ಲಿ ಆದಿದ್ರಾವಿಡ ಸಮುದಾಯದ ಆಯ್ಕೆಯನ್ನು ಅರ್ಜಿಯಲ್ಲಿ ಕೈ ಬಿಡಲಾಗಿದೆ. ಇದು ಸಮುದಾಯವನ್ನು ದೊಡ್ಡ ಗೊಂದಲಕ್ಕೀಡು ಮಾಡಿದೆ. ಆದಿದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದ ಸಾಕಷ್ಟು ವಿದ್ಯಾವಂತ ಯುವಕರು ಸರಕಾರಿ ಹುದ್ದೆಗಳಿಗೆ ಅರ್ಜಿ ಹಾಕಲಾಗದೆ ಪರಿತಪಿಸಿದ್ದಾರೆ. ಇದನ್ನು ಸರಿಪಡಿಸುವಂತೆಯೂ ಮಂಗಳೂರು ಕ್ಯಾಬಿನೆಟ್ ಸಭೆಗೂ ಮುನ್ನ ಆದಿದ್ರಾವಿಡ ಸಂಘದ ಪ್ರಮುಖರು ಸರ್ಕಾರದ ಗಮನ ಸೆಳೆದಿದ್ದರು. ಆದರೆ ಸರ್ಕಾರ ಇವರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಈಗ ಇದಕ್ಕೂ ಅನುದಾನ ಘೋಷಣೆಯ ಭರವಸೆ ನೀಡಲಾಗಿದೆಯಾದರೂ, ಯಾವುದೇ ಅಧಿಕೃತ ಆದೇಶ ಹೊರಬಿದ್ದ ಬಗ್ಗೆ ಮಾಹಿತಿಯಿಲ್ಲ.
ಮುಂಬರುವ ನೇಮಕಾತಿಗಳಲ್ಲೂ ಆದಿದ್ರಾವಿಡ ಜಾತಿ ಸೂಚಕ ಪದವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಲ್ಲಿ ಇಲ್ಲಿನ ತುಳು ಭಾಷಿಕ ಆದಿದ್ರಾವಿಡ ಸಮುದಾಯ ಅಕ್ಷರಶಃ ತಬ್ಬಲಿಯಾಗಲಿದೆ. ಮುಂದಿನ ದಿನಗಳಲ್ಲಿ ಸಮುದಾಯ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಪಡೆಯಬೇಕಾದರೆ ಸಮುದಾಯದ ಹೆಸರು ಪ್ರತ್ಯೇಕವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರುವ ಅನಿವಾರ್ಯತೆಯಿದೆ. ಸಮಾಜದ ಕಟ್ಟಕಡೆಯಲ್ಲಿರುವ, ಇಂದಿಗೂ ಸಮಾಜದ ಎಲ್ಲಾ ರಂಗಗಳಲ್ಲಿ ಅತ್ಯಂತ ಹಿಂದುಳಿದಿರುವ ನೈಜ ಪರಿಶಿಷ್ಟಜಾತಿ ಸಮುದಾಯವಾಗಿರುವ ಇಲ್ಲಿನ ಆದಿದ್ರಾವಿಡ ಸಮುದಾಯವು ತನ್ನ ಜಾತಿಯನ್ನು ತಮ್ಮ ಕುಲದೈವಗಳಾದ ಶ್ರೀ ಸತ್ಯ ಸಾರಮಾನಿ ಕಾನದ ಕಟದರ ಹೆಗ್ಗುರುತಾಗಿ ‘ಸಾರಮಾನಿ’ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿಕೊಂಡು ಬಂದಿದೆ. ಇದರ ಭಾಗವಾಗಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವಿದ್ದು, ಈ ಅಧ್ಯಯನಕ್ಕೆ ಸುಮಾರು 25 ಲಕ್ಷ ಅನುದಾನ ಮಂಜೂರಾತಿಗೆ ಮತ್ತು ಸಮುದಾಯದ ಹೆಸರನ್ನು ‘ಸಾರಮಾನಿ’ ಎಂದು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಕೋರಿಕೆ ಸಲ್ಲಿಸಿದೆ. ಮೊನ್ನೆ ಮಂಗಳೂರು ಕ್ಯಾಬಿನೆಟ್ ಸಭೆಗೂ ಮುನ್ನ ಮತ್ತೆ ಆದಿದ್ರಾವಿಡ ಮುಖಂಡರು ಸ್ಥಳೀಯ ಕಾಂಗ್ರೆಸ್ ನಾಯಕರು, ಸಚಿವರುಗಳ ಹಿಂದೆ ಅಲೆದಾಡಿ ಅಲೆದಾಡಿ ವಿಷಯ ಮನವರಿಕೆ ಮಾಡಿದ್ದರು. ಆದರೆ ಈ ಬಗ್ಗೆಯೂ ಸರ್ಕಾರ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.
ಮೂಡುಬಿದಿರೆಯ ಪರಿಶಿಷ್ಟಜಾತಿ ಸಮುದಾಯಗಳಲ್ಲಿನ ಇತರ ಸಮುದಾಯಗಳಾದ ಮುಗೇರ, ನಲಿಕೆ, ಪಾಣಾರ, ಪರವ, ಪಂಬದ ಸಮುದಾಯಗಳೂ ಸಮಸ್ಯೆಗಳಿಂದ ಹೊರತಾಗಿಲ್ಲ. ಪರಿಶಿಷ್ಟ ಪಂಗಡಗಳಾದ ಕೊರಗ, ನಾಯ್ಕ್ ಸಮುದಾಯಗಳೂ ಸಮಸ್ಯೆಗಳ ಆಗರವಾಗಿವೆ. ಈ ಸಮುದಾಯಗಳಲ್ಲೂ ತಮ್ಮದೇ ಆದ ಸಾಕಷ್ಟು ದೈವಸ್ಥಾನ, ಆರಾಧನಾ ಕೇಂದ್ರಗಳಿವೆ. ಆ ದೈವಸ್ಥಾನಗಳ, ಆರಾಧನಾ ಕೇಂದ್ರಗಳ ಜಮೀನುಗಳಿಗೂ ಸೂಕ್ತ ದಾಖಲೆಗಳಿಲ್ಲ. ದಶಕಗಳಿಂದ ಈ ಕ್ಷೇತ್ರಗಳಲ್ಲಿ ದೈವಾರಾಧನೆ ನಡೆಯುತ್ತಿದ್ದರೂ ಸರ್ಕಾರ ಈ ಜಮೀನುಗಳನ್ನು ದೈವಸ್ಥಾನಗಳ ಸ್ಥಳೀಯ ಆಡಳಿತ ಸಮಿತಿಗಳ ಹೆಸರಿಗೆ ಮಾಡಿಕೊಟ್ಟಿಲ್ಲವೆಂಬ ದೂರುಗಳಿವೆ. ಇಲ್ಲಿನ ಪರಿಶಿಷ್ಟ ಸಮುದಾಯಗಳ ಸಾಕಷ್ಟು ದೈವಸ್ಥಾನಗಳೂ ಸರಕಾರಿ ಜಮೀನಿನಲ್ಲಿದ್ದು, ಅವುಗಳು ಅವುಗಳ ಸ್ಥಳೀಯ ಆಡಳಿತ ಸಮಿತಿಗಳ ಹೆಸರಿಗೆ ಮಂಜೂರಾಗಿಲ್ಲ. ಅಧಿಕಾರಿಗಳು ನೆಪಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಕ್ಷೇತ್ರಗಳ ಸಮಿತಿಯವರೂ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ. ಇನ್ನು ಇದು ಆಗುವುದಿಲ್ಲ ಎಂದು ಕೈಚೆಲ್ಲಿ ಕೂತಿದ್ದಾರೆ. ತಮ್ಮ ಆರಾಧನಾ ಕೇಂದ್ರಗಳಿಗೆ ಸೂಕ್ತ ದಾಖಲೆಗಳಿಲ್ಲದಿರುವುದರಿಂದ, ಸರಕಾರದ ಅನುದಾನ ಕೇಳುವಾಗ, ದಾಖಲೆಗಳಿಲ್ಲದ ನೆಪ ಹೇಳಿ ಜಾರಿಕೊಳ್ಳಲು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅನುಕೂಲವಾಗಿದೆ.
ಮೂಡುಬಿದಿರೆ ಭಾಗದಲ್ಲೂ ಪರಿಶಿಷ್ಟರಿಗೆ ಮೀಸಲಿಡಲಾದ ಸಾಕಷ್ಟು ಡಿ.ಸಿ. ಮನ್ನಾ ಭೂಮಿಯಿದೆ. ಈ ಭೂಮಿ ಹಂಚಿಕೆಗೆ ಸಂಬಂಧಿಸಿ ಸುಮಾರು 15 ವರ್ಷಗಳ ಹಿಂದೆ ಸಂಸ್ಥೆಯೊಂದು ದೊಡ್ಡ ಮಟ್ಟದ ಅಭಿಯಾನ ನಡೆಸಿ ಹೋರಾಡಿತ್ತು. ಆದರೆ ಇಲ್ಲಿವರೆಗೂ ಯಾವುದೇ ಒಬ್ಬ ವ್ಯಕ್ತಿಗೆ ಇದರಿಂದಾಗಿ ಒಂದು ಸೆಂಟ್ಸ್ ಭೂಮಿ ಮಂಜೂರಾದ ಬಗ್ಗೆ ಸುದ್ದಿಯಿಲ್ಲ. ಯಾವುದೇ ಪರಿಶಿಷ್ಟ ವ್ಯಕ್ತಿಗೆ ಸರಕಾರಿ ಭೂಮಿ ಹಂಚಿಕೆಯಾಗದೆ ದಶಕಗಳೇ ಕಳೆದಿವೆ. ಕೇಳಿದರೆ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ನೀಡಿ ಜಾರಿಕೊಳ್ಳುತ್ತಾರೆ. ಹೀಗಾಗಿ ಇಡೀ ತಾಲೂಕಿನಲ್ಲಿ ಭೂ ರಹಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ.
ಹಲವು ದಶಕಗಳ ಹಿಂದೆ ತಮ್ಮ ತಾತ-ಮುತ್ತಾತಂದಿರ ಕಾಲದಲ್ಲಿ ಈ ಭಾಗದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳ ವ್ಯಕ್ತಿಗಳಿಗೆ ಒಂದಷ್ಟು ಜಮೀನು ಹಂಚಿಕೆಯಾಗಿದೆ. ಬೇರೆ ತಾಲೂಕುಗಳಿಗೆ ಹೋಲಿಸಿದರೆ ಈ ಭಾಗದಲ್ಲಿ ಪ್ರತಿಯೊಂದು ಕುಟುಂಬಕ್ಕೆ ನೀರಾವರಿ ರಹಿತ ಒಣ ಭೂಮಿ ಕೊಂಚಮಟ್ಟಿಗೆ ಹಂಚಿಕೆಯಾಗಿದೆ. ಅದು ಈಗ ಅವರ ಮಕ್ಕಳು-ಮೊಮ್ಮಕ್ಕಳ ಕಾಲದಲ್ಲಿ ವಿಭಜನೆಯಾಗಿ ಒಬ್ಬರಿಗೆ ಹತ್ತರಿಂದ ಹದಿನೈದು ಸೆಂಟ್ಸ್ ನಷ್ಟು ಪಾಲು ಮಾತ್ರ ದಕ್ಕುತ್ತದೆ. ಆದರೆ, ಅದನ್ನು ಪಾಲು ಮಾಡಿಕೊಂಡು ಅದಕ್ಕೊಂದು ಸೂಕ್ತ ದಾಖಲೆಗಳನ್ನು ಹೊಂದುವಷ್ಟು ಸಾಮರ್ಥ್ಯವಿಲ್ಲದ ಅದೆಷ್ಟೋ ಕುಟುಂಬಗಳು ಈಗಲೂ ಭೂಮಿಯ ಸೂಕ್ತ ದಾಖಲೆಗಳಿಲ್ಲದೆ ಸರಕಾರಿ ಸವಲತ್ತುಗಳಿಂದ ವಂಚಿತವಾಗುತ್ತಿವೆ. ತಮ್ಮ ತಾತ-ಮುತ್ತಾತಂದಿರ ಭೂಮಿಯಲ್ಲಿ ಮನೆಯೊಂದನ್ನು ಕಟ್ಟಿಕೊಂಡು ಬಾಳಿಕೊಂಡು ಬರುತ್ತಿದ್ದಾರೆಯೇ ವಿನಃ ಅದನ್ನು ಅಭಿವೃದ್ಧಿಪಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಈ ಬಗ್ಗೆ ವಿಶೇಷ ಅಭಿಯಾನ ನಡೆಸಿ, ಪರಿಶಿಷ್ಟ ಸಮುದಾಯಗಳ ಹಿರಿಯರ ಹೆಸರಲ್ಲಿ ಭೂಮಿ ಹೊಂದಿರುವ ಕುಟುಂಬಗಳಿಗೆ ಆಸ್ತಿ ವಿಭಜಿಸಿ ಸೂಕ್ತ ದಾಖಲೆಗಳನ್ನು ಒದಗಿಸುವ ಕಾರ್ಯ ನಡೆಸಬೇಕಾಗಿದೆ. ಅಲ್ಲದೆ, ವಿಶೇಷವಾಗಿ ಭೂ ರಹಿತ ಪರಿಶಿಷ್ಟ ಸಮುದಾಯಗಳ ಕುಟುಂಬಗಳಿಗೆ ಡಿ.ಸಿ. ಮನ್ನಾ ಭೂಮಿ ಹಂಚಿಕೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಯಾವುದೇ ತಾಂತ್ರಿಕ ಕಾರಣಗಳಿದ್ದರೂ ಅದನ್ನು ನಿವಾರಿಸಬೇಕಾಗಿದೆ. ಡಿ.ಸಿ. ಮನ್ನಾ ಭೂಮಿ ಅಥವಾ ಸರಕಾರಿ ಜಮೀನು ಇಲ್ಲದ ಗ್ರಾಮಗಳಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಿಯಾದರೂ ಭೂಮಿ ಹಂಚಿಕೆ ಮಾಡುವ ಅನಿವಾರ್ಯತೆ ಇದೆ.
ಪರಿಶಿಷ್ಟ ಸಮುದಾಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾವಂತ ಯುವಕ-ಯುವತಿಯರು ಹೆಚ್ಚುತ್ತಿದ್ದಾರೆ. ಆದರೆ ಅವರಿಗೆ ಉದ್ಯೋಗಗಳು ಸಿಗುತ್ತಲೇ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಸರಕಾರಿ ಉದ್ಯೋಗಗಳಲ್ಲಿ ಹೋಗುವಷ್ಟು ಸಾಮರ್ಥ್ಯ ಇವರಲ್ಲಿಲ್ಲ. ಜಾತಿಯ ಕಾರಣಕ್ಕಾಗಿ ಖಾಸಗಿ ಕಂಪನಿ, ಸಂಸ್ಥೆಗಳಲ್ಲೂ ಒಳ್ಳೆಯ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಯುವಕ-ಯುವತಿಯರು ವಿದ್ಯಾವಂತರಾದರೂ ಮತ್ತೆ ಕೂಲಿ ಕಾರ್ಮಿಕರಾಗಿಯೇ ದುಡಿಯುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಅವರು ಅನಿವಾರ್ಯವಾಗಿ ಇನ್ನೊಬ್ಬರ ಆಳುಗಳಾಗಿ, ಅಡಿಯಾಳಾಗಿ ದುಡಿಯಬೇಕಾದ ಪರಿಸ್ಥಿತಿ. ದೌರ್ಜನ್ಯ-ಶೋಷಣೆಯನ್ನು ಮೌನವಾಗಿಯೇ ಅನುಭವಿಸುವ ಸ್ಥಿತಿಯಿದೆ. ಜಾತಿ ತಾರತಮ್ಯದ ನೀತಿಗಳು ಇಂದು ರೂಪಾಂತರಗೊಂಡಿವೆಯೇ ವಿನಃ ಅದು ಸಂಪೂರ್ಣ ಬದಲಾಗಿಲ್ಲ. ಹೀಗಾಗಿ ಈ ಸಮುದಾಯಗಳ ಜನರಿಗೆ ಕೊಂಚ ಭೂ ಒಡೆತನ ಸಿಕ್ಕಿದರೆ ತಮ್ಮ ಭೂಮಿಯಲ್ಲಿ ದುಡಿದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಆಡಳಿತಗಾರರಿಗೆ, ಜನಪ್ರತಿನಿಧಿಗಳಿಗೆ ಇದು ಬೇಕಾಗಿಲ್ಲ.
ಇನ್ನು ಮೂಡುಬಿದಿರೆ ತಾಲೂಕಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಸಮುದಾಯಗಳಲ್ಲಿ ಬಹುತೇಕರು ಬಡತನ ರೇಖೆಗಿಂತ ಕೆಳಗಿನವರೇ ಇದ್ದಾರೆ. ಮೂಡುಬಿದಿರೆಯಲ್ಲಿ ಸಾಕಷ್ಟು ಖಾಸಗಿ ಕಾಲೇಜುಗಳಿವೆ. ಅವುಗಳಲ್ಲಿ ಪ್ರತಿಷ್ಠಿತ ವೃತ್ತಿಪರ ಕೋರ್ಸುಗಳೂ ಇವೆ. ಆದರೆ ಅಲ್ಲಿ ಓದುವಷ್ಟು ಸಾಮರ್ಥ್ಯ ಇಲ್ಲಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಬಹುತೇಕ ಜನರಲ್ಲಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಲ್ಲಿನ ತಾಲೂಕು ಕೇಂದ್ರ ಸ್ಥಾನದಲ್ಲಿ ಒಂದೇ ಒಂದು ಸರ್ಕಾರಿ ಕಾಲೇಜು ಸ್ಥಾಪನೆಯಾಗಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರಕ್ಕೆ ಬಂದು ಓದಲು ಉಳಿದುಕೊಳ್ಳಲು ಯಾವುದೇ ಕಾಲೇಜು ಹಂತದ ಸರ್ಕಾರಿ ಹಾಸ್ಟೆಲ್ ಗಳಿಲ್ಲ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಘಟಕ ಕಾಲೇಜೊಂದನ್ನು ಬನ್ನಡ್ಕದಲ್ಲಿ ಆರಂಭಿಸಲಾಗಿದೆಯಾದರೂ, ಅದು ತಾಲೂಕು ಕೇಂದ್ರದಲ್ಲಿ ಇಲ್ಲವಾದುದರಿಂದ ವಿದ್ಯಾರ್ಥಿಗಳು ಅಲ್ಲಿಗೆ ದಾಖಲಾಗದೆ, ಅಲ್ಲೂ ವಿದ್ಯಾರ್ಥಿಗಳ ಕೊರತೆಯಿಂದಾಗಿ ಕಾಲೇಜು ಮುಚ್ಚುವ ಸ್ಥಿತಿಯಲ್ಲಿದೆ. ಹೀಗಾಗಿ ತಾಲೂಕು ಕೇಂದ್ರದಲ್ಲಿ ಒಂದು ಒಳ್ಳೆಯ ಸರಕಾರಿ ಪಿಯುಸಿ ಹಾಗೂ ಪದವಿ ಕಾಲೇಜು ಮತ್ತು ಅದಕ್ಕೆ ಸಂಬಂಧಿಸಿ ಸರಕಾರಿ ಹಾಸ್ಟೆಲ್ ಕೂಡ ತೆರೆಯುವ ಅಗತ್ಯವಿದೆ. ಇಲ್ಲವಾದಲ್ಲಿ ಕನಿಷ್ಠ ಪಕ್ಷ ಬನ್ನಡ್ಕದಲ್ಲಿರುವ ಮಂಗಳೂರು ವಿವಿ ಕಾಲೇಜನ್ನು ಮೂಡುಬಿದಿರೆ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸುವ ತುರ್ತು ಇದೆ.
ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಮೂಡುಬಿದಿರೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಮುದಾಯಗಳು ಎದುರಿಸುತ್ತಿವೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ತಲೆಮಾರು ನೂರಾರು ಸಮಸ್ಯೆಗಳನ್ನು ಬೇರೆಯದ್ದೇ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ಹೀಗಾಗಿ ಸಮುದಾಯದೊಳಗೆ ಒಗ್ಗಟ್ಟು ಸಾಧಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ 80ರ ದಶಕದ ಟ್ರೆಂಡಿಂಗ್ ವೈರಲ್ ಆಗಿತ್ತು. ಅದೇ ರೀತಿ ತಾಲೂಕಿನ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯಗಳು ತಾಲೂಕಿನಲ್ಲಿದ್ದ 80ರ ದಶಕದಲ್ಲಿದ್ದ ದಲಿತ ಚಳವಳಿಯ ಟ್ರೆಂಡ್ ಅನ್ನು ಮರುಸೃಷ್ಟಿಸಬೇಕಾಗಿದೆ. ಒಗ್ಗಟ್ಟಿನ ಹೋರಾಟದ ಮೂಲಕ ತಮ್ಮ ಸಂಘಟನೆಗಳಿಗೆ ಈ ಹಿಂದೆ ಶಕ್ತಿಯನ್ನು ಮರಳಿ ಗಳಿಸಬೇಕಿದೆ. ಆಡಳಿತಗಾರರು, ಜನಪ್ರತಿನಿಧಿಗಳು ತಮ್ಮಮ್ಮ ಕಣ್ಣು ಹಾಯಿಸಿ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸುವಂತಾಗಬೇಕು. ಅದಕ್ಕೆ ಒಗ್ಗಟ್ಟೇ ಮಂತ್ರ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸೂತ್ರದಡಿಯಲ್ಲಿ ಸಮುದಾಯಗಳು ತಮ್ಮೊಳಗಿನ ಭಿನ್ನತೆಯನ್ನು ಬದಿಗಿಟ್ಟು ಒಂದು ಸಮುದಾಯವಾಗಿ ಒಗ್ಗೂಡಿ ತಮ್ಮ ಹಕ್ಕು-ಸವಲತ್ತುಗಳಿಗಾಗಿ ಹೋರಾಟ ರೂಪಿಸುವ ದಿನಗಳು ಮರುಕಳಿಸಬೇಕಾಗಿದೆ.

