ಡೆಹ್ರಾಡೂನ್: ವಿವಾದಿತ ಏಕರೂಪ ನಾಗರಿಕ ಸಂಹಿತೆ ಮಸೂದೆ ಉತ್ತರಾಖಂಡ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರವಾಗಿದೆ. ಇದು ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಪ್ರೇರಣೆಯಾಗಲಿದೆ ಎನ್ನಲಾಗಿದೆ.
ಬಿಜೆಪಿ ಬಹುಮತ ಹೊಂದಿರುವ ವಿಧಾನಸಭೆಯಲ್ಲಿ ಮಂಗಳವಾರ ಮಸೂದೆ ಮಂಡಿಸಲಾಗಿತ್ತು. ಬುಧವಾರ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ರಾಜ್ಯಪಾಲರ ಅನುಮತಿ ಸಿಕ್ಕಿದರೆ ಸ್ವಾತಂತ್ರö್ಯ ನಂತರ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ವಾರಸುದಾರಿಕೆ ಕಾನೂನು ಯಾವುದೇ ಧರ್ಮಬೇಧವಿಲ್ಲದೆ, ಏಕರೂಪತೆಯನ್ನು ಪಡೆದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.
“ಇದು ಸಾಮಾನ್ಯ ಕಾನೂನು ಅಲ್ಲ. ಏಕರೂಪ ನಾಗರಿಕ ಸಂಹಿತೆ ಎಲ್ಲಾ ಧರ್ಮಗಳ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕಾನೂನು ಅವಕಾಶ ಸೃಷ್ಟಿಸಲಿದೆ ಮತ್ತು ಬೇಧವಿಲ್ಲದ, ತಾರತಮ್ಯವಿಲ್ಲದ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ” ಎಂದು ಸೀಎಂ ಪುಷ್ಕರ್ ಸಿಂಗ್ ಧಾಮಿ ಅಭಿಪ್ರಾಯಪಟ್ಟಿದ್ದಾರೆ.