ಹೈದರಾಬಾದ್: ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಸುಮಾರು ಆರು ಕೋಟಿ ರೂ ಮೌಲ್ಯದ ತನ್ನ ಮನೆಯನ್ನೇ ಧ್ವಂಸ ಮಾಡಿ ಬಿಜೆಪಿ ಶಾಸಕರೊಬ್ಬರು ಸುದ್ದಿಯಾಗಿದ್ದಾರೆ. ಇಕ್ಕಟ್ಟಾಗಿದ್ದ ರಸ್ತೆ ಅಗಲೀಕರಣಕ್ಕೆ ಸ್ಥಳೀಯಾಡಳಿತ ಸಂಸ್ಥೆ ಕೈಗೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ಮೊದಲು ತನ್ನದೇ ಮನೆಯನ್ನು ಕೆಡವಿ ಹಾಕಿ ಮಾದರಿಯಾದ ತೆಲಂಗಾಣದ ಬಿಜೆಪಿ ಶಾಸಕ ಕಾಟಿಪಲ್ಲಿ ವೆಂಕಟರಮಣ ರೆಡ್ಡಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಾಸಕರಾಗಿ ಆಯ್ಕೆಯಾದ ವೆಂಕಟರಮಣ ರೆಡ್ಡಿ ತಮ್ಮ ಕ್ಷೇತ್ರ ಕಾಮರೆಡ್ಡಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಹೀಗಾಗಿ ಪ್ರಥಮ ಆದ್ಯತೆಯಾಗಿ ಇಕ್ಕಟ್ಟಾಗಿರುವ ನಗರದ ರಸ್ತೆಗಳನ್ನು ಅಗಲೀಕರಣಕ್ಕೆ ಮುಂದಾಗಿದ್ದಾರೆ. ಹೀಗೆ ರಸ್ತೆ ಅಗಲೀಕರಣದ ವೇಳೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ತನ್ನ ಮನೆಯನ್ನೇ ತೆರವುಗೊಳಿಸುವ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದ್ದಾರೆ. ಶಾಸಕರಾಗಿಯೂ ಸ್ವತಃ ತನ್ನ ಮನೆಯನ್ನೇ ಸ್ವಯಂ ತೆರವುಗೊಳಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.