ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕೇಂದ್ರದ ಎನ್‍ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ರಚನೆಗೂ ಮೊದಲೇ ವಿವಿಧ ಮಿತ್ರಪಕ್ಷಗಳ ನಡುವೆ ಅಪಸ್ವರವೆದ್ದಿದೆ. ಈ ನಡುವೆ ಸಮಾಜವಾದಿ ಪಕ್ಷವೂ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿರುವುದರಿಂದ, ಇಂಡಿಯಾ ಒಕ್ಕೂಟ ರಚನೆ ಯಶಸ್ವಿಯಾಗುವುದು ಸಂಶಯಾತ್ಮಕವಾಗಿದೆ.
ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿರುವ 16 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಮೈನ್ಪುರಿಯಿಂದ ಟಿಕೆಟ್ ಘೋಷಿಸಲಾಗಿದೆ. ಪ್ರಸ್ತುತ ಅವರು ಅದೇ ಕ್ಷೇತ್ರದ ಸಂಸದರಾಗಿದ್ದಾರೆ.
ಧಮೇರ್ಂದ್ರ ಯಾದವ್ ಬದೌನ್‍ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಸಂಭಾಲ್‍ನಿಂದ ಸಂಸದ ಶಫೀಕರ್ ರೆಹಮಾನ್ ಬರ್ಕೆ ಅವರಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೇ ರವಿದಾಸ್ ಮೆಹ್ರೋತ್ರಾ ಅವರನ್ನು ರಾಜಧಾನಿ ಲಕ್ನೋದಿಂದ ಕಣಕ್ಕಿಳಿಸಲಿದೆ. ಉಳಿದಂತೆ ಅಕ್ಷಯ್ ಯಾದವ್ (ಫಿರೋಜಾಬಾದ್), ದೇವೇಶ್ ಶಾಕ್ಯಾ (ಇತಾಹ್), ಉತ್ಕರ್ಷ್ ವರ್ಮಾ (ಖೀರಿ), ಆನಂದ್ ಭದೌರಿಯಾ (ಧೌರಾಹ್ರಾ, ಉನ್ನಾವ್). ಡಾ ನವಲ್ ಕಿಶೋರ್ ಶಕ್ಯಾ (ಫರೂಕಾಬಾದ್), ರಾಜರಾಮ್ ಪಾಲ್ (ಅಕ್ಬರ್ಪುರ್), ಶಿವಶಂಕರ್ ಸಿಂಗ್ ಪಟೇಲ್ (ಬಂಡಾ), ಅವಧೇಶ್ ಪ್ರಸಾದ್ (ಫೈಜಾಬಾದ್), ಲಾಲ್ಜಿ ವರ್ಮಾ (ಅಂಬೇಡ್ಕರ್ ನಗರ), ರಾಮಪ್ರಸಾದ್ ಚೌಧರಿ (ಬಸ್ತಿ) ಮತ್ತು ಕಾಜಲ್ ನಿಶಾದ್ ಅವರು (ಗೋರಖ್‍ಪುರ) ಟಿಕೆಟ್ ನೀಡಲಾಗಿದೆ.