ಈ ಕಾಡು ತನ್ನದೆಂದು ದಾವೆ ಹೂಡಿದವನು ಬಿರ್ಸಾ ಮುಂಡಾ. ಈ ಯುವಕ ತನ್ನ ಇಪ್ಪತ್ತನೇ ವಯಸ್ಸಿಗೇ ಈ ಒಂದು ಹಕ್ಕೊತ್ತಾಯವನ್ನು ಬ್ರಿಟಿಷ್ ಆಳರಸರ ಹಾಗೂ ಇಂಡಿಯಾದ ಜಮೀನ್ದಾರ (ದೀಕೂ) ವರ್ಗದ ಎದುರು ಮಂಡಿಸಿ ಅವರ ವಿರುದ್ಧ ದಂಗೆ ಎದ್ದವನ ಜೀವನ ವೃತ್ತಾಂತ. ಕಾಡಿನ ದಾವೇದಾರನಾದ ಈ ಬಿರ್ಸಾ ಮುಂಡಾ ದಿನಾಂಕ 15.11.1875 ರಲ್ಲಿ ರಾಂಚಿ ಜಿಲ್ಲೆಯ ಉಲಿ ಹಾತು ಎಂಬ ಗ್ರಾಮದ ಸುಗಾನ ಮತ್ತು ಕರಮಿ ಎಂಬ ಮುಂಡಾರಿ ಬುಡಕಟ್ಟಿನ ದಂಪತಿಗಳಿಗೆ ಮಗನಾಗಿ ಹುಟ್ಟಿದವನು. ಆ ಕಾಲಕ್ಕೆ ಜಮೀನ್ದಾರರು ಲೇವಾದೇವಿ ಮಹಾಜನರು ಮುಂಡಾಗಳ ಗ್ರಾಮಗಳನ್ನು ವಶಪಡಿಸಿ ಕೊಂಡು ಅಲ್ಲಿಂದ ಅವರನ್ನು ವಕ್ಕಲೆಬ್ಬಿಸುತ್ತಿದ್ದರು. ಹೊಟ್ಟೆ ಪಾಡಿಗಾಗಿ ಈ ಜನ ವನಾಂತರದಲ್ಲಿ ಬೇರೆ ಬೇರೆ ಗ್ರಾಮ ಗಳನ್ನು ಕಟ್ಟಿಕೊಳ್ಳುತ್ತ ಜಮೀನ್ದಾರರ ದನ ಕಾಯುವ, ಕೂಲಿ ಮಾಡುವ ಕಾಯಕದಿಂದ ಅರೆಹೊಟ್ಟೆ ಅರೆ ಬಟ್ಟೆಯಲ್ಲಿ ಬದುಕು ಸವೆಸುತ್ತಿದ್ದರು. ಹೀಗಿರುತ್ತ ಬಿರ್ಸಾನ ತಂದೆ ತಾಯಿಗಳೂ ತಮ್ಮ ಐದಾರು ಮಕ್ಕಳನ್ನು ಕಟ್ಟಿಕೊಂಡು ಗಯಾ, ಛಾಪ್ರಾ, ಅರಾ, ಭಾಗಲ್ಪುರ, ತಿರ್ಹತ್ ಮುಂತಾದ ಹಳ್ಳಿಗಳನ್ನು ಸುತ್ತಿದರು.
ಬಿರ್ಸಾ ಮುಂಡಾ ಕುರಿತ ವೀಡಿಯೋ ನೋಡಿ:
ಹಿಂದೆ ಚೋಟಾ ನಾಗಪುರದ ಪಗರಣ ಜಿಲ್ಲೆಯ ಒಂದು ಒಳ್ಳೆಯ ಕುಟುಂಬದವನಾಗಿದ್ದ ಸುಗಾನ ಈಗ ತನ್ನ ಹೆಂಡತಿ ಮಕ್ಕಳನ್ನು ಸಲಹಲು ಊರೂರು ಸುತ್ತುವ ಗತಿ ಬಂದಿತ್ತು. ಒಂದು ಜೋಳಿಗೆ, ಒಂದು ಮಣ್ಣಿನ ಕಡಾಯಿ, ಒಂದು ಹುಲ್ಲಿನ ಬುಟ್ಟಿ, ಒಂದು ಡಿಬ್ಬಾದಲ್ಲಿ ಚೀನಾ ಹುಲ್ಲಿನ (ಘಾಟೋ) ಬೀಜಗಳು, – ಒಂದಿಷ್ಟು ಉಪ್ಪು – ಇವಿಷ್ಟು ಅವರ ಆಸ್ತಿ (ಪುಟ-೨೮). ಕಡೆಗೆ ಇವರು ಚಾಲ್ಕಾಡ್ ಸೇರಿದರು. ಅಲ್ಲಿ ತಮ್ಮ ಗಂಡು – ಮಕ್ಕಳನ್ನು ಮಿಷನರಿ ಶಾಲೆಗೆ ಭರ್ತಿ ಮಾಡಿದರು. ಕಾರಣ ಅವರ ಅನ್ನ ಬಟ್ಟೆಗಾದರೂ ನೇರ್ಪಾಡಾಗಲಿ ಎಂದು.
ಬಾಲಕ ಬಿರ್ಸಾ ಮುಂಡಾ ತನ್ನ ಶಾಲಾ ದಿನಗಳಲ್ಲಿಯೇ ಕ್ರಿಶ್ಚಿಯನ್ ಮಿಷನರಿಗಳ ಹಾಗೂ ನೆರೆಹೊರೆಯ ಹಿಂದೂ ಗಳ ಮಧ್ಯೆ ತನ್ನ ಬುಡಕಟ್ಟು ಜನರು ಅನುಭವಿಸುತ್ತಿದ್ದ ಕಷ್ಟ ಕಾರ್ಪಣ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದ ತನ್ನವರ ದುಸ್ಥಿತಿಗೆ ಕಾರಣರಾದ ಬ್ರಿಟಿಷ್ ಕ ಸರ್ಕಾರವನ್ನು ಹಾಗೂ ಹಿಂದೂ ದೀಕೂ (ಆದಿವಾಸಿಗಳ – ಶೋಷಕವರ್ಗ)ಗಳನ್ನು ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳುತ್ತಿದ್ದ, ಬುಡಕಟ್ಟು ಜನರ ಮೌಡ್ಯ, ಅಂಧ – ಶ್ರದ್ಧೆ, ಅಶುಚಿತ್ವವನ್ನು ಹೋಗಲಾಡಿಸಿ ಅವರಿಗೆ ಹೊಸ ನಾಯಕತ್ವವನ್ನು ನೀಡಲು ತವಕಿಸಿದ. ಅದಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ತನ್ನವರ ಕಡೆಗೆ ಹಿಂದಿರುಗಿದ. ಈ ಸಂದರ್ಭದಲ್ಲಿ ಅವನ ಮನಸ್ಥಿತಿ ಹೇಗಿತ್ತೆಂದು ಹೇಳುವುದಾದರೆ, ಕಾಡಿನೊಳಕ್ಕೆ ಹೋದರೆ ಅವನಿಗೆ ನೆಮ್ಮದಿ ಸಿಗುತ್ತಿತ್ತು. ಆದರೆ ಆ – ಕಾಡನ್ನೂ ಈಗ ಕಿತ್ತುಕೊಳ್ಳುತ್ತಿದ್ದಾರೆ. ಆದ್ದರಿಂದ ಅದನ್ನು ವಿಮೋಚನೆ ಮಾಡಬೇಕಾಗಿದೆ, ಕಾಡಿನ ವಿಮೋಚನೆಯಲ್ಲಿ ತನ್ನವರ ವಿಮೋಚನೆಯೂ ಇದೆ, ಎಂಬ ಚಿಂತನೆ ಅವನಲ್ಲಿ ಗಾಢವಾಗುತ್ತಾ ಹೋಯಿತು. ಕೊನೆಗೆ ಅವನ ಅಂತರ್ವಾಣಿ, “ಇದೆಲ್ಲ ನನ್ನದು, ಈ ಕಾಡೆಲ್ಲವೂ ನನ್ನದೇ, ನಾನು ಭೂಮಿಯ – ತಂದೆ’ ಎಂದು ಬೋಧನೆ ಮಾಡಿದಂತಾಯಿತು.
ನಾವು ಹೇಗೆ ಚಿರಕಾಲಿಗಳೋ ಹಾಗೆಯೇ ಹೋರಾಟವೂ ಸಹ ಬಿರ್ಸಾನ ಹೋರಾಟವೂ ಚಿರಕಾಲ, ಭೂಮಿಯ ಮೇಲೆ ಏನೊಂದೂ ಮುಗಿದುಹೋಗುವುದಿಲ್ಲ – ಏನೊಂದೂ ಮುಗಿಯದು. ಉಲ್- ಗುಲಾನ್ ಗೆ ಕೊನೆಯಿಲ್ಲ. ಬಿರ್ಸಾನಿಗೆ ಮರಣವಿಲ್ಲ.” ಇದನ್ನು ಕೇಳಿಸಿಕೊಳ್ಳಬೇಕು, ಕೇಳಿಸಿಕೊಳ್ಳುವುದನ್ನು ಕಲಿಯದೇ ಇದ್ದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವುದು ಹೇಗೆ ?
- ಗೌತಮ ಆವರ್ತಿ
VARF – Visual Anthropology Research Foundation,
Mahisha Mandala – ಮಹಿಷ ಮಂಡಲ