Monday, March 8 , 2021
SC/ST ಸಮುದಾಯಗಳ ಭೂಮಿ ಉಳಿಸಲು ಶತಪ್ರಯತ್ನ| ಕಂದಾಯ ಸಚಿವ, ಮುಖ್ಯ ಕಾರ್ಯದರ್ಶಿಗಳ ಭೇಟಿ ಮಾಡಿದ ಎನ್. ಮಹೇಶ್

ಬೆಂಗಳೂರು (14-01-2021): ಕರ್ನಾಟಕ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ವಿರುದ್ಧ ಸದನದಲ್ಲಿ ಮಾತನಾಡಿದ್ದ ಏಕೈಕ  ಶಾಸಕ ಎನ್. ಮಹೇಶ್.  ಪರಿಶಿಷ್ಟ ಜಾತಿ,‌ ಪರಿಶಿಷ್ಟ ವರ್ಗದ ಸಮುದಾಯಗಳ  ಜೀವನಾಧಾರವಾಗಿರುವ ಕೃಷಿ ಭೂಮಿಯನ್ನು ಉಳಿಸಲೇಬೇಕೆಂದು ಸಂಕಲ್ಪ ತೊಟ್ಟಂತಿರುವ  ಎನ್. ಮಹೇಶ್ ಸದನದ ಆಚೆಗೂ ನಿರಂತರ ಪ್ರಯತ್ನ ನಡೆಸಿದ್ದಾರೆ.

            ಸದನದಲ್ಲಿ ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರೂ ಸಹ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಿರುವುದನ್ನು ನಿಷ್ಠುರವಾಗಿ ವಿರೋಧಿಸಿದ್ದ ಎನ್.ಮಹೇಶ್ ಎಸ್ಸಿ ಎಸ್ಟಿ ಸಮುದಾಯಗಳ ಭೂಮಿಯನ್ನು ಉಳಿಸುವಂತೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಕೋರಿದ್ದರು. ಈ ಇಬ್ಬರೂ ಸಹ ಎನ್. ಮಹೇಶ್ ಮನವಿಗೆ ಸ್ಥಳದಲ್ಲೇ ಸ್ಪಂದಿಸಿ ಈ ತಿದ್ದುಪಡಿಯಿಂದಾಗಿ ಎಸ್ಸಿ‌ ಎಸ್ಟಿಗಳ ಒಂದಿಂಚು ಭೂಮಿ ಧನಿಕರ ಪಾಲಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು.

ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ವರ್ಗದವರ ಕೆಲವು ಭೂಮಿಗಳ ಪರಭಾರೆ ನಿಷೇಧ ಕಾಯ್ದೆ-1978 ಕಾಯ್ದೆ ಜಾರಿಗೆ ಬಂದ ನಂತರ ಪರಿಶಿಷ್ಟರಿಗೆ ಮಂಜೂರಾದ ಭೂಮಿಯನ್ನು ಇತರರು ಖರೀದಿಸಲು ನಿಯಂತ್ರಣ ಹೇರಲಾಗಿತ್ತು. ಸರ್ಕಾರದ ಪೂರ್ವಾನುಮತಿ ಅಗತ್ಯವಿತ್ತಾದರೂ ಸಹ ಬಹುತೇಕ ಪ್ರಕರಣಗಳಲ್ಲಿ ಸರ್ಕಾರದ ಅನುಮತಿ ಇಲ್ಲದೇ ಕ್ರಯ ಮಾಡಲಾಗಿದೆ. ಈ ನಿಯಮದ ಅರಿವಿದ್ದೂ ಸಹ ಉಪನೊಂದಣಾಧಿಕಾರಿಗಳು ಭೂಮಿಯನ್ನು ನೊಂದಣಿ ಮಾಡಿ ಲೋಪ ಎಸಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಮಾಡುವ ಅಧಿಕಾರವಿದ್ದರೂ ಸಹ ಕಂದಾಯ ಇಲಾಖೆಯ ಅಧಿಕಾರಿಗಳು ಇತ್ತ ಕಣ್ಣೆತ್ತಿಯೂ ಸಹ ನೋಡಿಲ್ಲ. ಇವೆಲ್ಲದರ ನಡುವೆ ನೆಕ್ಕುಂಟೆ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನಿಗದಿತ ಕಾಲಮಿತಿ’ ಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ತೀರ್ಪು ನೀಡಿದೆಯಾದರೂ ನಿಗದಿತ ಕಾಲಮಿತಿ ಎಷ್ಟು ಎಂಬುದನ್ನು ಮಾತ್ರ ವಿವರಿಸಿಲ್ಲ. ಈ ತೀರ್ಪು ಭೂಮಿ ಕಳೆದುಕೊಂಡ ಪರಿಶಿಷ್ಟರ ಪಾಲಿನ‌ ಕರಾಳ ತೀರ್ಪಾಗುವುದರಲ್ಲಿ ಸಂದೇಹವಿಲ್ಲ.  ಏಕೆಂದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಇದನ್ನೇ ನೆಪವಾಗಿಸಿಕೊಂಡು  ‘ನಿಗದಿತ ಕಾಲಮಿತಿ’ ಯೊಳಗೆ ಅರ್ಜಿ ಸಲ್ಲಿಸಿಲ್ಲ ಎಂದು ಕೃಷಿ ಭೂಮಿಯ ಮರು ಮಂಜೂರಾತಿಗಾಗಿ ಪರಿಶಿಷ್ಟ ಭೂ ವಂಚಿತರ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಲು ಮುಂದಾಗಿದ್ದರು. ಅದರಂತೆ ಬಾಕಿ ಇದ್ದ ಸುಮಾರು 13000 ಕ್ಕೂ ಹೆಚ್ಚು ಪ್ರಕರಣಗಳ ಪೈಕಿ ಸುಮಾರು 4000 ಗಳಷ್ಟು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ.

ಈ ಕಾರಣಗಳಿಂದಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕೆಲವು ಭೂಮಿ ಪರಭಾರೆ ನಿಷೇಧ ಕಾಯ್ದೆ-1978 ನ್ನು ಬಲಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ವಿಧಾನ ಮಂಡಲದ ನಿಯಮ 69 ರನ್ವಯ ಅಲ್ಪ ಕಾಲಾವಧಿಯ ಚರ್ಚೆಗೆ ಅವಕಾಶ ಕೇಳಿದ್ದರು. ಸದನದ ಹಿರಿಯ ನಾಯಕರು ತೆಗೆದುಕೊಂಡ ಹೆಚ್ಚಿನ ಅವಕಾಶ ಹಾಗೂ ಅಧಿವೇಶನ ಮೊಟಕುಗೊಂಡ ಕಾರಣ ಈ ವಿಷಯ ಚರ್ಚೆಗೆ ಬರಲೇ ಇಲ್ಲ.

ಪರಿಶಿಷ್ಟರ ಭೂಮಿ‌ ಉಳಿಸುವ ಪಟ್ಟು ಬಿಡದ ಶಾಸಕ ಎನ್. ಮಹೇಶ್ ಪೀಪಲ್ಸ್ ಅಡ್ವೋಕೇಟ್ ಫೋರಂ ನ ಹರಿರಾಂ ಮತ್ತು ಸ್ನೇಹಿತರನ್ನು ಜೊತೆ ಸೇರಿಸಿಕೊಂಡು ಕಂದಾಯ ಸಚಿವ ಆರ್. ಅಶೋಕ್ ರನ್ನು ಭೇಟಿ ಮಾಡಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕೆಲವೊಂದು ಭೂಮಿಗಳ ಪರಭಾರೆ ನಿಷೇಧ ಕಾಯ್ದೆ (PTCL) – 1978 ಕ್ಕೆ ತಿದ್ದುಪಡಿ ತಂದು ಪರಿಶಿಷ್ಟರ ಹಿತ ಕಾಪಾಡುವಂತೆ ಕೋರಲಾಯಿತು. ಸಚಿವರು ಆಪ್ತ ಕಾರ್ಯದರ್ಶಿಯವರನ್ನು ಕರೆದು ತಿದ್ದುಪಡಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆಂದು ಪೀಪಲ್ಸ್ ಅಡ್ವೋಕೇಟ್ ಫೋರಂ ನ ಹರಿರಾಂ ತಿಳಿಸಿದ್ದಾರೆ.

ಅಷ್ಟಕ್ಕೇ ಸುಮ್ಮನಾಗದ ಎನ್. ಮಹೇಶ್ ಮತ್ತು ಹರಿರಾಮ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್ ರನ್ನು ಭೇಟಿ ಮಾಡಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕೆಲವೊಂದು ಭೂಮಿಗಳ ಪರಭಾರೆ ನಿಷೇಧ ಕಾಯ್ದೆ (PTCL) – 1978 ಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಯವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರಿಗೆ ಕರೆ ಮಾಡಿ ಸುಪ್ರೀಮ್ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಒಟ್ಟಾರೆ ಪರಿಶಿಷ್ಟರಿಗೆ ಮಂಜೂರಾದ ಭೂಮಿಯನ್ನು ಮತ್ಯಾರೂ ಖರೀದಿ ಮಾಡದಂತೆ ಹಾಗೂ ಈಗಾಗಲೇ ನಿಯಮ ಬಾಹಿರವಾಗಿ ಖರೀದಿ ಮಾಡಿರುವ ಭೂಮಿಯನ್ನು ಮೂಲ ಮಂಜೂರಾತಿದಾರರಾದ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ವಾಪಸ್ ಕೊಡಿಸುವ ತನಕ ವಿಶ್ರಮಿಸುವುದಿಲ್ಲ ಎಂದು ಶಾಸಕ ಎನ್. ಮಹೇಶ್ ಪಣ ತೊಟ್ಟಿರುವುದು ಎದ್ದು ಕಾಣುತ್ತಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]