
ಮೈಸೂರು (13.01.2021) : ತಮಗೆ ಸ್ಥಾನ ಸಿಗದಿರುವ ಬಗ್ಗೆ ಶಾಸಕ ಎಸ್.ಎ ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಚಾಮರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್, ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ ಎಂದಿದ್ದಾರೆ. ನಾನು ರಾಜ್ಯದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ ಸತತ 2 ಬಾರಿ ಕೆಲಸ ಮಾಡಿದವನು. ಸತತ 28 ವರ್ಷಗಳಿಂದ ಸಾಕಷ್ಟು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಮೈಸೂರು ವಿಭಾಗದಲ್ಲಿ ಗೆದ್ದ 11 ಜನ ಬಿಜೆಪಿ ಶಾಸಕರಲ್ಲಿ 10 ಜನ ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ ತೆರಳಿದರು. ಆದರೆ ನಾನು ಪಕ್ಷದ ಶಾಸಕನಾಗಿ, ಪಕ್ಷ ನನ್ನ ತಾಯಿ, ಅದರ ಘನತೆ ನನ್ನ ಕರ್ತವ್ಯ ಎಂದು ಅರಿತವನು. ನಾನೊಬ್ಬ ನಿಜವಾದ ಸ್ವಯಂ ಸೇವಕ, ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು ಎಂದು ನೋವು ತೋಡಿಕೊಂಡಿದ್ದಾರೆ.
ಹಳೆಯ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ. ಜಿಲ್ಲೆಯ ಬೇರೆ ಯಾರನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದು ಇದೇ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.