
ಬೆಂಗಳೂರು (23-01-2021): 2019 ರಿಂದ ಬಾಕಿ ಇದ್ದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಕೆಪಿಎಸ್ಸಿ ನಾಳೆ ನಡೆಸುತ್ತಿದ್ದ ಪರೀಕ್ಷೆಯನ್ನು ದಿಢೀರನೆ ಮುಂದೂಡಲಾಗಿದೆ.
1114 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಬರೋಬ್ಬರಿ 3.74 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ನಾಳೆ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸತ್ಯವತಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಈ ನಡುವೆ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಪರೀಕ್ಷಾ ಪ್ರಶ್ನೆ ಪತ್ರಿಕೆ ಪೆರೀಕ್ಷೆಗೂ ಮುನ್ನವೇ ಸೋರಿಕೆಯಾಗಿದೆ ಎಂದು ಹಲವು ಅಭ್ಯರ್ಥಿಗಳು ಆತಂಕಕ್ಕೀಡಾಗಿದ್ದರು. ಈಗ ಪರೀಕ್ಷೆ ಮುಂದೂಡಿರುವುದನ್ನು ನೋಡಿದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಖಚಿತವಾಗುತ್ತಿದೆ. ಇದರಿಂದಾಗಿ ಕಷ್ಟಪಟ್ಟು ಸಿದ್ದತೆ ಮಾಡಿಕೊಂಡಿದ್ದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ. ವಯೋಮಿತಿ ಮೀರಿದವರಿಗೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ
ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಆರೋಪಿಗಳನ್ನು ಬಂಧಿಸಿದ ಸಿಸಿಬಿ