
ಬೆಂಗಳೂರು (11-01-2021): ಸ್ಟೇಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ), ಬಾಹ್ಯಾಕಾಶ ಶಿಕ್ಷಣ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂಬಂಧಿತ ಅನುಶೋಧನಾ ಕ್ಷೇತ್ರದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಉತ್ತೇಜಿಸಲು ದೇಶಾದ್ಯಂತ 100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದತ್ತು ಪಡೆಯುವುದಾಗಿ ಇಸ್ರೋ ತಿಳಿಸಿದೆ.
ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ನಡೆಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಯಿತು.
ವರ್ಚುವಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, “ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಸಮನ್ವಯದೊಂದಿಗೆ‘ಆತ್ಮನಿರ್ಭರ ಭಾರತ್’ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ನೀತಿ ಆಯೋಗ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡುವಿನ ಸಹಯೋಗವು ಅಂತಹ ಪ್ರಯತ್ನದ ಒಂದು ಪ್ರಮುಖ ಉದಾಹರಣೆಯಾಗಿದೆ” ಎಂದರು.
ನಮ್ಮ ಯುವ ಉದಯೋನ್ಮುಖ ಬಾಹ್ಯಾಕಾಶ ಸಂಶೋಧಕರು ಮತ್ತು ಗಗನಯಾತ್ರಿಗಳು ದೇಶದ ಪ್ರಖ್ಯಾತ ಅನುಭವಿಗಳಿಂದ ಕಲಿಯಲು ಮತ್ತು ಅವರ ಶಾಲೆ, ಕುಟುಂಬ ಮತ್ತು ಸ್ಥಳೀಯ ಸಮುದಾಯಗಳಿಗೆ ಸ್ಫೂರ್ತಿಯಾಗಲು ಇದೊಂದು ಉತ್ತಮ ಅವಕಾಶವಾಗಿದೆ” ಎಂದು ಅವರು ಹೇಳಿದರು.
ಸಾಂಪ್ರದಾಯಿಕ ಕಲಿಕೆಗೆ ಹೋಲಿಸಿದರೆ ಶಾಲಾ ಮಕ್ಕಳಲ್ಲಿ ಅನುಶೋಧನೆ ಮತ್ತು ಅನುಭವಿ ಕಲಿಕೆಯ ಮನೋಭಾವವನ್ನು ಉತ್ತೇಜಿಸಲು ಈ ಕ್ರಮ ನೆರವಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಭರವಸೆ ವ್ಯಕ್ತಪಡಿಸಿದರು. ಈ ಯೋಜನೆ ಆಧಾರಿತ ಕಲಿಕೆಯು ಶಾಲಾ ದಿನಗಳಿಂದಲೇ ಸಂಶೋಧನೆಯ ಬಗೆಗಿನ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
100 ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ದತ್ತು ಸ್ವೀಕರಿಸುವ ಇಂದಿನ ನಿರ್ಧಾರದ ಮೂಲಕ, ಇಸ್ರೊ ಭೌಗೋಳಿಕವಾಗಿ ಎಲ್ಲೆಡೆ ಉಪಸ್ಥಿತವಿರುತ್ತದೆ. ‘ಆತ್ಮ ನಿರ್ಭರ ಭಾರತ’ ದ ಭಾಗವಾಗಿ ವಿದ್ಯಾರ್ಥಿಗಳು ತಮ್ಮ ಬಾಹ್ಯಾಕಾಶ ಕನಸುಗಳನ್ನು ಈಡೇರಿಸಿಕೊಳ್ಳಲು ನಿರ್ದೇಶನ ನೀಡಲು ಸಂಸ್ಥೆಯು ಒಂದು ಸಣ್ಣ ಹೆಜ್ಜೆ ಇಟ್ಟಿದೆ. ಇಸ್ರೋ ಕೇಂದ್ರಗಳ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು, ಇಸ್ರೋ ಪ್ರಧಾನ ಕೇಂದ್ರದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಕಚೇರಿಯ ನಿಕಟ ಸಮನ್ವಯದೊಂದಿಗೆ, ಮಕ್ಕಳಿಗೆ ಸಕ್ರಿಯವಾಗಿ ಮಾರ್ಗದರ್ಶನ ಮಾಡುವುದರ ಜೊತೆಗೆ ಪ್ರಯೋಗಗಳನ್ನು ಉತ್ತೇಜಿಸಲು, ಆಲೋಚನೆಗಳನ್ನು ಚುರುಕುಗೊಳಿಸಲು ಮತ್ತು ಬಾಹ್ಯಾಕಾಶ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಎಟಿಎಲ್ಗಳಲ್ಲಿನ ಶಿಕ್ಷಕರೊಂದಿಗೆ ಸಂವಹನ ನಡೆಸುತ್ತಾರೆ. ಈ ಅಟಲ್ ಟಿಂಕರಿಂಗ್ ಲ್ಯಾಬ್ಗಳ ವಿದ್ಯಾರ್ಥಿಗಳು, ಶ್ರೀಹರಿಕೋಟಾದಿಂದ ನಡೆಯುವ ಉಡಾವಣೆಯೊಂದರಲ್ಲಿ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ ಎಂದು ಡಾ. ಶಿವನ್ ಘೋಷಿಸಿದರು.