
ಬೆಂಗಳೂರು (10.01.2021) : ಚಿತ್ರಮಂದಿರಗಳನ್ನು ತೆರೆಯದಿದ್ದಕ್ಕೆ ಅಸಮಾಧಾನ ಹೊರಹಾಕಿ, ಓಟಿಟಿ ಒಂದು ಸ್ಕ್ಯಾಮ್ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಡಿಕಾರಿದ್ದಾರೆ.
ಫೆಸ್ಬುಕ್ನಲ್ಲಿ ಲೈವ್ ಆರಂಭಿಸಿದ ದರ್ಶನ್, ಅಭಿಮಾನಿಯೊಬ್ಬ ಓಟಿಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ನಿರ್ಮಾಪಕರು ಎಲ್ಲಿಂದನೋ ದುಡ್ಡು ತರುತ್ತಾರೆ. ಜನರಿಗೆ ಮನರಂಜನೆ ಮಾಡುವ ಉದ್ದೇಶದಿಂದ ನಾವೆಲ್ಲ ಜೀವನವನ್ನು ಪಣಕ್ಕಿಟ್ಟು ಸಿನಿಮಾ ಮಾಡುತ್ತೇವೆ. ಹೀಗಾಗಿ ಸಿನಿಮಾವನ್ನು ಮೊಬೈಲ್ನಲ್ಲೋ ಅಥವಾ ಟಿವಿಯಲ್ಲೋ ನೋಡಿದರೆ ಮಜಾ ಇರಲ್ಲ ಎಂದರು.
ಶಾಲಾ-ಕಾಲೇಜುಗಳು ತೆರೆದಿವೆ. ಮದುವೆ ಮಂಟಪದಲ್ಲಿ ಸಾವಿರಾರು ಮಂದಿ ಸೇರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಜನ ಓಡಾಡಿಕೊಂಡು ಇದ್ದಾರೆ. ಎಲ್ಲ ಕಡೆ ಜನರಿದ್ದಾರೆ. ಆದರೆ, ಚಿತ್ರಮಂದಿಗಳನ್ನು ಮಾತ್ರ ತೆರೆಯುತ್ತಿಲ್ಲ. ಏಕೆಂದರೆ, ಇದರ ಹಿಂದೆ 5ಜಿ ಉದ್ದೇಶವಿದೆ ಎಂದು ಹೇಳಿದರು.
ಮುಖೇಶ್ ಅಂಬಾನಿ ಅವರು 5ಜಿ ಆರಂಭಿಸಿದ್ದಾರೆ. ಇದೊಂದು ದೊಡ್ಡ ಹಗರಣವೆಂದು ನನಗನಿಸುತ್ತಿದೆ ಎಂದು ಆರೋಪಿಸಿದ ಅವರು, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದರೆ 5ಜಿ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಮೊಬೈಲ್ಗಳಲ್ಲಿ 5ಜಿ ರನ್ ಆಗಲು ಈ ರೀತಿ ಮಾಡುತ್ತಿರಬಹುದು. ಇದು ನನ್ನ ಅನಿಸಿಕೆಯಾಗಿದೆ. ಆದರೆ, ಯಾವುದೇ ಕಾರಣಕ್ಕೂ ನಾವು ಓಟಿಟಿಗೆ ಕೊಡುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ರಾಬರ್ಟ್ ಚಿತ್ರ ಬಿಡುಗಡೆ ಬಗ್ಗೆ ಮಾತನಾಡಿದ ದರ್ಶನ್ ಖಂಡಿತವಾಗಿ ಮಾರ್ಚ್ 11ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಾರ್ಚ್ನಲ್ಲೇ ಬಿಡುಗಡೆಯಾಗಲಿದೆ ಎಂದರು.