
ಮಂಗಳೂರು(24.01.2018): ಪರಿವರ್ತನಾ ಯಾತ್ರೆಯ ಬೆನ್ನಲ್ಲೇ ಬಿಜೆಪಿಯ ವಿರುದ್ಧ ಬಿಲ್ಲವರು ಅಸಮಾಧಾನಗೊಂಡಿದ್ದು, ಬಿಲ್ಲವ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬಂಟ್ವಾಳದಲ್ಲಿ ಕಾಂಗ್ರೆಸ್ ಎದುರು 17 ಸಾವಿರಕ್ಕಿಂತಲೂ ಹೆಚ್ಚು ಮತಗಳಿಂದ ಸೋಲುಂಡವರಿಗೆ ಟಿಕೆಟ್ ಪರಿವರ್ತನಾ ಯಾತ್ರೆಯಲ್ಲೆ ಘೋಷಣೆಯಾಗುತ್ತದೆ. ಆದರೆ ಮೂಡಬಿದ್ರೆಯಲ್ಲಿ ಕಾಂಗ್ರೇಸ್ ಎದುರು 4,500ಸಾವಿರ ಮತಗಳ ಅಂತರದಿಂದ ಸೋತವರ ಹೆಸರನ್ನು ಪರಿವರ್ತನಾ ಯಾತ್ರೆಯಲ್ಲಿ ಪ್ರಸ್ತಾಪಿಸುತ್ತಿಲ್ಲ ಎಂದು ‘ನಮ್ಮ ಬಿಲ್ಲವೆರ್’ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಬಂಟ್ವಾಳದಂತಹ ಕ್ಷೇತ್ರದಲ್ಲಿ ಬಿಲ್ಲವರಿಗೆ ಟಿಕೆಟ್ ಸಿಗುತ್ತಿಲ್ಲ. ಪಕ್ಷ, ಸಂಘಟನೆ ಕೆಲಸಗಳಿಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಬಿಲ್ಲವ ಯುವಕರನ್ನು ಬಳಸಿಕೊಳ್ಳುವ ಬಿಜೆಪಿ, ಸ್ಥಾನಮಾನದ ವಿಚಾರ ಬಂದಾಗ ಬಿಲ್ಲವರ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿವೆ.
ಬಂಟ್ವಾಳದ ಪ್ರಭಾವಿ ರಾಜಕಾರಣಿ ಎಂದೇ ಹೇಳಲಾಗುತ್ತಿರುವ ರಮಾನಾಥ ರೈಗೆ ರಾಜಕೀಯವಾಗಿ ತಿರುಗೇಟು ನೀಡಲೂ ಸಾಧ್ಯವಾಗದವರಿಗೆ ಟಿಕೆಟ್ ನೀಡಲಾಗುತ್ತದೆ. ಆದರೆ ಮೂಡಬಿದ್ರೆಯಲ್ಲಿ ಅಭಯಚಂದ್ರ ಜೈನ್ ರನ್ನು ರಾಜಕೀಯವಾಗಿ ಸಮರ್ಥವಾಗಿ ಎದುರಿಸಿದ ಉಮಾನಾಥ್ ಕೊಟ್ಯಾನ್ ಗೆ ಪರಿವರ್ತನೆ ಯಾತ್ರೆಯಲ್ಲಿ ಟಿಕೆಟ್ ಘೋಷಣೆಯಾಗಲಿಲ್ಲ. ಅಲ್ಲದೆ ಕಳೆದ ತಾಲೂಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ಸಂದರ್ಭ ಉಮಾನಾಥ್ ಕೋಟ್ಯಾನ್ ಅವರಿಗೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಉಸ್ತುವಾರಿ ನೀಡದೆ ದೂರ ಇಡಲಾಗಿದೆ ಎಂಬ ವಿಚಾರಗಳು ಇದೀಗ ಚರ್ಚೆಯಲ್ಲಿದೆ.
ಬಿಲ್ಲವರಿಗೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯಗಳು ಒಂದೆಡೆಯಿಂದ ಕೇಳಿ ಬರುತ್ತಿರುವ ಜೊತೆಗೆ, ಬಿಲ್ಲವರನ್ನು ಕಡೆಗಣಿಸಿದಲ್ಲಿ ಅದಕ್ಕೆ ಬಿಜೆಪಿ ಸರಿಯಾದ ಬೆಲೆ ತೆರಬೇಕಾಗುತ್ತದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.