
ಚಾಮರಾಜನಗರ (23.1.2021): ಮುಖ್ಯಮಂತ್ರಿಯವರು ನನಗೆ ಅರಣ್ಯ ಇಲಾಖೆಯ ಖಾತೆ ಕೊಟ್ಟಿದ್ದರು. ಕಾಡು ಪ್ರಾಣಿಗಳ ಜೊತೆಗೆ ಇರುವುದು ಬೇಡ, ರೈತರೊಂದಿಗೆ ಇರುವ ಎಂದು ಕೃಷಿ ಖಾತೆ ಕೇಳಿ ಪಡೆದಿದ್ದೆ. ಆದರೆ, ಕೃಷಿ ಖಾತೆಯಲ್ಲಿ ಬರೀ ಧಿಕ್ಕಾರ ಜಾಸ್ತಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ನೋವು ತೋಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಧಿಕ್ಕಾರದ ಘೋಷಣೆ ಕೇಳಿದ್ದೆ. ಹೀಗಾಗಿ ಧಿಕ್ಕಾರ ನನಗೆ ಹೊಸದೇನಲ್ಲ. ರೈತರ ಸಮಸ್ಯೆಯನ್ನು ನೇರವಾಗಿ ಅರಿತು ಅವರಿಗೆ ಸೌಲಭ್ಯ ಕಲ್ಪಿಸಲು ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಚಾರಕ್ಕಾಗಿ ಇದನ್ನು ನಾನು ಕೈಗೊಂಡಿಲ್ಲ. ನನಗೆ ಪ್ರಚಾರ ಬೇಕಿಲ್ಲ. ರೈತರ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವ ಈ ಉದ್ದೇಶಕ್ಕೋಸ್ಕರ ಈ ಕೆಲಸ ಮಾಡುತ್ತಿದ್ದೇನೆ ಎಂದರು.