
ಬೆಂಗಳೂರು (05-02-2021): ರಾಜ್ಯ ಸರ್ಕಾರವು ಕಳೆದ 13 ತಿಂಗಳಿನಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಯಾವುದೇ ಶಿಷ್ಯವೇತನವನ್ನು ನೀಡಿರುವುದಿಲ್ಲ. ಶಿಷ್ಯವೇತನ ಸಿಗದೆ ಅತ್ಯಂತ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿದ್ದಾರೆ. ಶಿಷ್ಯವೇತನ ಸಿಗದೆ ಬೇಸರಗೊಂಡಿರುವ ಸಂಶೋಧನಾರ್ಥಿಗಳು ಇದೀಗ ಪತ್ರ ಚಳುವಳಿಗೆ ಮುಂದಾಗಿದ್ದಾರೆ.
2015-16 ನೇ ಸಾಲಿನಲ್ಲಿ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಇತರೆ ಹಿಂದುಳಿದ ವರ್ಗಗಳ ಸಂಶೋಧನಾರ್ಥಿಗಳಿಗೆ ಪ್ರತಿ ತಿಂಗಳು 5000₹ ರೂಪಾಯಿಗಳಂತೆ ಮೂರು ವರ್ಷಗಳವರೆಗೆ ಶಿಷ್ಯವೇತನವನ್ನು ನೀಡಲು ಪ್ರಾರಂಭಿಸಲಾಯಿತು. 2018ರಲ್ಲಿ ಈ ಮೊತ್ತವನ್ನು 10000₹ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಆದರೆ 2019ರ ಡಿಸೆಂಬರ್ ತಿಂಗಳಿನಿಂದಲೂ ಸರ್ಕಾರ ಶಿಷ್ಯವೇತನ ನೀಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಊಟದ ವೆಚ್ಚ, ಕೊಠಡಿ ಬಾಡಿಗೆ, ಕ್ಷೇತ್ರಕಾರ್ಯ ಕೈಗೊಳ್ಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ ಜೊತೆಗೆ ಸಂಶೋಧನೆ ಕಾರ್ಯ ಸಹ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಸಂಶೋಧನಾರ್ಥಿಗಳು ಸಿಎಂ ಯಡಿಯೂರಪ್ಪನವರಿಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನವರಿಗೆ, ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿಯನ್ಮು ಹಮ್ಮಿಕೊಂಡಿದ್ದರು. ಒಂದುವೇಳೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಎಚ್ಚರಿಕೆ ಸಹ ನೀಡಿದ್ದಾರೆ.