
ಸಿನಿ ಡೆಸ್ಕ್(08-02-2021): ಕನ್ನಡ ಚಿತ್ರರಂಗದ ಜೂನಿಯರ್ ಕುಚಿಕು ಜೋಡಿಯೆಂದೇ ಜನಪ್ರಿಯವಾಗಿದ್ದ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಾರು ವರ್ಷಗಳಿಂದ ದೂರವಾಗಿದ್ದರು. ಇವರಿಬ್ಬರ ಗೆಳೆತನದ ನಡುವೆ ಬಿರುಕು ಮೂಡಲು ಏನು ಕಾರಣ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ. ಆದರೆ ಇಡೀ ಚಿತ್ರರಂಗವೇ ಇವರಿಬ್ಬರೂ ಮತ್ತೆ ಒಂದಾಗಲಿ ಎಂದು ಬಯಸಿತ್ತು.
ಇದೀಗ ಈ ಕುಚಿಕು ಜೋಡಿ ಮತ್ತೆ ಒಂದಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ದರ್ಶನ್ ಇಬ್ಬರೂ ಒಟ್ಟಿಗೆ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಈ ಬಗ್ಗೆ ಫೇಸ್ಬುಕ್ ಲೈವ್ ನಲ್ಲಿ ನಾಯಕ ನಟ ಧ್ರುವ ಸರ್ಜಾ ಮಾತನಾಡುತ್ತಾ ಇದೇ ಫೆಬ್ರವರಿ 14 ರಂದು ದಾವಣಗೆರೆಯಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಹಳಷ್ಟು ದೊಡ್ಡ ದೊಡ್ಡ ಕಲಾವಿದರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಬಹಳ ದಿನಗಳ ನಂತರ ಇಬ್ಬರೂ ಸ್ಟಾರ್ ಗಳು ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಇದೀಗ ಆ ಇಬ್ಬರೂ ನಟರು ಸುದೀಪ್ ಮತ್ತು ದರ್ಶನ್ ಅವರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಫೆಬ್ರವರಿ 14 ಪೊಗರು ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಕಿಚ್ಚ-ದಚ್ಚು ಈ ಇಬ್ಬರೂ ದಿಗ್ಗಜರು ಮತ್ತೆ ಒಂದಾಗ್ತಾರ ಎಂಬುದನ್ನು ನೋಡಲು ಇಡೀ ಚಿತ್ರರಂಗವೆ ಕಾತುರದಿಂದ ಸಜ್ಜಾಗಿದೆ.