
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ ಮಾತ್ರ ಬಾಕಿ. ಅದೂ ಆದ್ರೆ ತಿದ್ದುಪಡಿ ಮಸೂದೆ ಕಾರ್ಯ ರೂಪಕ್ಕೆ ಬರಲಿದೆ. ಈ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾದ ಮತ್ತೊಂದು ಸಂಕಲ್ಪವನ್ನು ಪೂರೈಸಿದಂತಾಗಿದೆ. ಭಾರತ ಎಂದಿಗೂ ಪ್ರಜಾ ಪ್ರಭುತ್ವ ರಾಷ್ಟ್ರ, ಇದನ್ನು ವಿಭಜನೆ ಬಳಿಕ ‘ಪಾಕಿಸ್ತಾನ’ ಮುಸ್ಲಿಂ ರಾಷ್ಟ್ರ ಎಂದು ಅಳೆದು ತೂಗುವುದು ತಪ್ಪು. ಅಖಂಡ ಭಾರತ ವಿಭಜನೆ ವೇಳೆ ಭಾರತವನ್ನು ಯಾವುದೇ ಒಂದು ಸೀಮಿತ ಧರ್ಮ ಎಂದು ಘೋಷಣೆ ಮಾಡಲಾಗಿಲ್ಲ. ಭಾರತದ ಪ್ರಜೆಗಳಾದ ನಾವು ಭಾರತವನ್ನು ಸರ್ವಧರ್ಮ, ಸಮಾಜವಾದಿ, ಪ್ರಜಾಪ್ರಭುತ್ವ, ಗಣರಾಜ್ಯವನ್ನಾಗಿ ಸ್ವೀಕಾರ ಮಾಡಿದ್ದೇವೆ. ಆದ್ದರಿಂದ ಭಾರತದಲ್ಲಿ ಧರ್ಮದ ಆಧಾರದಲ್ಲಿ ನಾಗರಿಕತ್ವ ನೀಡುವುದು ಮತ್ತು ನಾಗರಿಕತ್ವದಿಂದ ವಂಚಿಸುವುದು ಕ್ರಿಮಿನಲ್ ಅಪರಾಧ.
ಆಶ್ರಯ ಇಲ್ಲದವರು ನಿರಾಶ್ರಿತರು, ಮನುಷ್ಯ ಹುಟ್ಟಿನ ಬಳಿಕ ಈ ಭೂಮಿಯ ಯಾವ ಮೂಲೆಯಲ್ಲಾದರೂ ಅನಿವಾರ್ಯವಾಗಿ ಬದುಕಬೇಕಿದೆ. ಮುನುಷ್ಯ ಹುಟ್ಟಿನಿಂದ ಎರಡೇ ವಿಧ ಗಂಡು- ಹೆಣ್ಣು. ಇವರಲ್ಲಿ ಮುಸ್ಲಿಂ- ಹಿಂದೂ- ಕ್ರಿಶ್ಚನ್ ಎಂದು ಹೇಗೆ ಪತ್ತೆ ಹಚ್ಚಲು ಸಾಧ್ಯ? ನೂತನ ಪೌರತ್ವ ತಿದ್ದಪಡಿ ಮಸೂದೆಯಲ್ಲಿ ಧರ್ಮದ ಆಧಾರದಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ಪೌರತ್ವವನ್ನು ನೀಡಲಾಗುತ್ತದೆ. ಇದು ಜನರನ್ನು ಭೀತಿಗೊಳಿಸಿ ಮತಾಂತರಗೊಳಿಸುವ ಮತ್ತು ಅದಕ್ಕೆ ಒಪ್ಪದಿದ್ದಾಗ ಜೈಲಿನಲ್ಲಿಟ್ಟು ಹಿಂಸಿಸುವ, ಮತ್ತು ದೇಶದಿಂದ ಹೊರದಬ್ಬುವ ಪ್ರಯತ್ನವಾಗಿದೆ. ಧರ್ಮದ ಆಧಾರದಲ್ಲಿ ಆಶ್ರಯ ಇಲ್ಲದವರನ್ನು, ನಿರ್ಗತಿಕರನ್ನು ಕಾಣುವುದು ಅತ್ಯಂತ ಅಪಾಯಕಾರಿ, ನಿರಾಶ್ರಿತರೆಲ್ಲರೂ ಧಾರ್ಮಿಕ ಕಿರುಕುಳದಿಂದ ಮಾತ್ರ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವುದಿಲ್ಲ, ಜನಾಂಗಿಯ ದ್ವೇಷ, ಆಡಳಿತಾತ್ಮಕ ದ್ವೇಷ, ರಾಜಕೀಯ ದ್ವೇಷ, ಹೊಟ್ಟೆಪಾಡಿಗಾಗಿ ಗಡಿದಾಟುತ್ತಾರೆ. ಅವರಲ್ಲಿ ಜಾತಿ ಕನ್ನಡಿ ಇಟ್ಟು ಸ್ಕ್ಯಾನ್ ಮಾಡುವುದು ನಮ್ಮ ದ್ವೇಷ ಮತ್ತು ಬೌದ್ದಿಕ ಅಧಃ ಪತನದ ಸೂಚ್ಯಾಂಕ.
ಜನಪ್ರತಿನಿಧಿಗಳು ಪಾರ್ಲಿಮೆಂಟ್ ನಲ್ಲಿ ಜನರ ಸಮಸ್ಯೆ ಬಗ್ಗೆ ಧ್ವನಿಯಾಗಬೇಕು. ಇಂದು ಜನವಿರೋಧಿ ಬಿಲ್, ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಪಾರ್ಲಿಮೆಂಟ್ ನ ಅಧಿವೇಶನಗಳು ವೇದಿಕೆಯಾಗಿತ್ತಿದೆ, ವಿಪಾರ್ಯಾಸ ಎಂದರೆ ಜನರ ಕಷ್ಟ, ಅಭಿವೃದ್ಧಿ ವಿಚಾರ ಯಾರಿಗೂ ಬೇಕಿಲ್ಲ. ಚರ್ಚೆಯೂ ಆಗುತ್ತಿಲ್ಲ. ನೋಟು ರದ್ಧತಿ, ಜಿಎಸ್ಟಿ, ಬುರ್ಕಾ ನಿಷೇಧ, ತ್ರಿವಳಿ ತಲಾಖ್, ಲವ್ ಜಿಹಾದ್, ಘರ್ ವಾಪಾಸ್ಸಿ, ಜೈ ಶ್ರೀರಾಂ, ಗೋಹತ್ಯೆ, ಬ್ಯಾಂಕ್ ವಿಲೀನ, 370ವಿಧಿ ರದ್ಧತಿ, ಎನ್ ಆರ್ ಸಿ, ಇದೀಗ ಕೊನೆಗೆ ಎನ್ ಆರ್ ಸಿ ಮತ್ತು ಸಿಎಬಿ ಮುಂದಕ್ಕೆ ಇನ್ನೇನೆಲ್ಲ ಭಾರತದಲ್ಲಿ ಜನಸಾಮಾನ್ಯರನ್ನು ದಿಕ್ಕುತಪ್ಪಿಸಲು ಭಾರತವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕೊಂಡೊಯ್ಯಲು ಬಂದ ಘನ ಸರಕಾರ ಮಾಡುತ್ತದೆ ಎಂದು ಕಾದು ನೋಡಬೇಕಿದೆ.