Sunday, January 24 , 2021
ಲಾಕ್ ಡೌನ್ | ನ್ಯಾನೋ ಕಥೆ | ಹಿಪ್ಪರಗಿ ಸಿದ್ಧರಾಮ

ಆತ ಹನ್ನೊಂದು ವರ್ಷದವನಿದ್ದಾಗ ಶಾಲೆಯ ಪೀಜು, ಪುಸ್ತಕ, ಯುನಿಪಾರ್ಮ ತಂದು ಕೊಡಲಾಗದಷ್ಟು ತಂದೆ-ತಾಯಿ ಬಡವರಾಗಿದ್ದರಿಂದ ಶಾಲೆಯ ಕಡೆ ಮುಖಮಾಡಲಿಲ್ಲ. ಹಿರಿಯರಿಂದ ಭಾಗವಾಗಿ ಬಂದ ಅರ್ಧ ಏಕರೆ ತುಂಡು ಭೂಮಿಯಲ್ಲಿ ಬೆವರು ಹರಿಸಿದ್ದೆ ಬಂತು. ಹಸಿವು ಹಿಂಗಲಿಲ್ಲ. ಭೂಮ್ತಾಯಿ ಕರುಣೆ ತೋರಿಸಲಿಲ್ಲ. ಪಕ್ಕದ ಹೊಲದವನಿಗೆ ಲಾವಣಿ ಕೊಟ್ಟು ಕುಟುಂಬ ಸಮೇತ ಬೆಂಗಳೂರಿಗೆ ಕೆಲಸ ಹುಡುಕಿ ಹೊರಟನು. ತಂದೆ-ತಾಯಿಯೊಂದಿಗೆ ಬಹು ಅಂತಸ್ತಿನ ಕಟ್ಟಡ ಕಟ್ಟುವಲ್ಲಿ ಗಾರೆ ಕೆಲಸದವರಿಗೆ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡನು. ಎರಡು ಹೊತ್ತು ಊಟ ಕೊಟ್ಟು, ವಾರಕ್ಕೊಮ್ಮೆ ಕೂಲಿ ಕೊಡುವುದಾಗಿ ಕಂಟ್ರಾಕ್ಟರ್ ಹೇಳಿದ್ದಕ್ಕೆ ಒಪ್ಪಿಕೊಂಡು ಕೆಲಸ ಶುರು ಮಾಡಿದರು. ಮೊದಲ ವಾರದ ಕೂಲಿಯನ್ನು ಅದರ ಮುಂದಿನ ವಾರ ಕೊಡುವೆನೆಂದ ಕಂಟ್ರಾಕ್ಟರನ ಮಾತಿನಂತೆ ತಿಂಗಳ ಕಾಲ ಕೆಲಸ ಮುಂದುವರೆಯಿತು.

ನಿರ್ಮಾಣವಾಗುತ್ತಿದ್ದ ಕಟ್ಟದ ಮೂಲೆಯೊಂದರಲ್ಲಿ ಹಾಕಿದ್ದ ತಗಡಿನ ಶೆಡ್ಡಿನಲ್ಲಿ ರೆಸ್ಟ್ ಮಾಡುತ್ತಿದ್ದಾಗ, ಅದೊಂದು ಸಂಜೆ ಚಿಕ್ಕ ಬಾಲಕಿಯಾಗಿದ್ದ ಅವನ ತಂಗಿಯು ‘ಅಣ್ಣಾ, ನಾಳೆಯಿಂದ ಎಲ್ಲಾ ಬಂದ್ ಮಾಡ್ತಾರಂತೆ’ ಎಳೆನೀರು ಮಾರುವ ಎಳನೀರಯ್ಯನ ಮೊಬೈಲಿನಿಂದ ಕೇಳಿಸಿಕೊಂಡಿದ್ದನ್ನು ಬಂದು ಹೇಳಿದಳು. ಹೊರಗೆ ಬಂದು ನೋಡಿದಾಗ ಅದಾಗಲೇ ಪೋಲೀಸ್ ವಾಹನಗಳು ಸೈರನ್ ಕೂಗುತ್ತಾ, ‘ಸಾರ್ವಜನಿಕರಿಗೆ ವಿನಂತಿ, ಚೀನಾ ದೇಶದಿಂದ ಕೊರೋನಾ ಬ ಮಹಾಮಾರಿ ಸಾಂಕ್ರಾಮಿಕ ರೋಗ ಬಂದಿದೆ. ಅದಕ್ಕಾಗಿ ನಾಳೆಯಿಂದ ಎಲ್ಲಾ ಬಂದ್, 144 ಕಲಮ್ ಜಾರಿಗೊಳಿಸಲಾಗಿದೆ. ಯಾರೂ ಹೊರಗೆ ಬರಬಾರದು. ಲಾಕ್ ಡೌನ್ ಮಾಡಲಾಗಿದೆ. ಎಲ್ಲರೂ ಸಹಕರಿಸಬೇಕು’ ಎಂದು ಮೈಕಲ್ಲಿ ಹೇಳುತ್ತಾ ವೇಗವಾಗಿ ಹೋಯಿತು.

ಈ ಹಿಂದೆ ನಡೆದ ಎಲ್ಲಾ ಬಂದ್ ಗಳಂತೆ ಇದೂ ಸಹ ಮಾಮೂಲಿ ಒಂದೆರಡು ದಿನಗಳಲ್ಲಿ ಮುಗಿದು ನಾರ್ಮಲ್ ಆಗಬಹುದೆಂದು ಮತ್ತೆ ಹೋಗಿ ಹೊರಳಿಕೊಂಡ. ಮರುದಿನ ಸಾಯಂಕಾಲ ಪಕ್ಕದ ಕಟ್ಟಡದಲ್ಲಿ ತನ್ನಂತೆ ಕಟ್ಟಡ ಗಾರೆ ಕೆಲಸದ ಕಾರ್ಮಿಕನಾಗಿದ್ದವನು ಬಂದು, ‘ಕೊರೋನಾ ವೈರಸ್ ಹಾವಳಿ ಜಲ್ದಿ ಮುಗಿಯೋದಿಲ್ಲಂತ. ಇದೊಂದ ನಮೂನಿ ಹೊಸ ಜಡ್ಡಂತ, ಇದಕ್ಕ ಯಾವುದು ಔಷಧ ಇಲ್ಲಂತ, ಎಲ್ಲಾರೂ ನಿಮ್ಮೂರಿಗೆ ವಾಪಸ್ ಹೋಗ್ರಿ ಅಂತ ನಮ್ಮ ಕಂಟ್ರಾಕ್ಟರ್ ಕೂಲಿಯೆಲ್ಲಾ ಚುಕ್ತಾ ಮಾಡಿ ಹೇಳಿಹೋದ. ಮತ್ತ ನೀವು ಬರತೀರೇನು? ಎಲ್ಲಾ ಬಸ್, ರೈಲು ಬಂದ್ ಮಾಡ್ಯಾರಂತ. ನಮ್ಮೂರ ಕಡೀ ಹೋಗೂ ಟ್ಯಾಕ್ಟರ್ ಹತ್ತಿ ಹೋಗೂನಂತ. ನಮ್ಮ ಜೊತಿಗೆ ಬರೂದಾದ್ರ ನಾಳೆ ಸಂಜೀಕ ರೆಡಿಯಾಗ್ರಿ. ಹೋಗೂಣಂತ’ ಎಂದು ಹೇಳಿ ಹೋದನು.

ಕೂಲಿ ಕೇಳಿ ಪಡೆಯಲು ತನ್ನ ಕಂಟ್ರಾಕ್ಟರ್ ಇರುವ ಜಾಗ ಗೊತ್ತಿಲ್ಲ. ಏನು ಮಾಡೂದು ? ಎನೊಂದೂ ಗೊತ್ತಾಗದೆ ಪರಿತಪಿಸಿದ. ಸಂಜೆವರೆಗೂ ಕಾದು, ಇನ್ನೇನು ಟ್ರಾಕ್ಟರ್ ಹತ್ತಿ, ಹೊರಡಬೇಕೆನ್ನುವಾಗ ಕಂಟ್ರಾಕ್ಟರ್ ಬಂದುದನ್ನು ನೋಡಿ, ದುಡಿದ ಕೂಲಿ ಕೇಳಲು ತಂದೆ-ತಾಯಿಯೊಂದಿಗೆ ಅವನ ಹತ್ತಿರ ಹೋದನು. ‘ಏನೂ ಮಾಡ್ಲಿಕ್ಕಾಗೋದಿಲ್ಲ. ಈಗ ನೀವು ಊರಿಗೆ ಹೋಗಿ ಬರ್ರಿ. ಬಂದ ನಂತರ ನಿಮ್ದು ಕೂಲಿ ಎಲ್ಲಾ ಚುಕ್ತಾ ಮಾಡ್ತಿನಿ’ ಅಂತ ಹೇಳಿ ಬೈಕನ್ನೇರಿ ಹೊರಟು ಹೋದನು. ಆದದ್ದಾಗಲಿ ಎಂದುಕೊಂಡು ಟ್ರಾಕ್ಟರ್ ಏರಿ ತಂದೆ-ತಾಯಿ, ತಂಗಿಯೊಂದಿಗೆ ಕುಳಿತನು. ರಾತ್ರಿಯೆಲ್ಲ ಟ್ರಾಕ್ಟರ್ ಪ್ರಯಾಣಿಸಿ ಬೆಳಗಾದಾಗ ಆ ದೊಡ್ಡ ನಗರದ ಪೋಲೀಸರು ‘ಮುಂದೆ ಬಿಡಲಾಗುವುದಿಲ್ಲ’ ಎಂದು ಖಡಾಖಂಡಿತ ಹೇಳಿದ್ದಕ್ಕೆ ತಮ್ಮ ಸಾಮಾನು-ಸರಂಜಾಮುಗಳೊಂದಿಗೆ ಎಲ್ಲರೂ ನಡೆದುಕೊಂಡು ಹೊರಟರು. ಯಾವುದೇ ವಾಹನ ಸಂಚಾರವಿಲ್ಲದೇ ಹೆಬ್ಬಾವಿನಂತೆ ಮಲಗಿಕೊಂಡಿದ್ದ ಕರಿ ಡಾಂಬರು ರಸ್ತೆಯಲ್ಲಿ ಪಯಣ ಮುಂದುವರೆಯಿತು. ಆಗಾಗ ದಣಿವಾರಿಸಿಕೊಂಡು ನಡೆಯುತ್ತಿರುವಾಗ ಕಟ್ಟಿಕೊಂಡು ತಂದ ನಿನ್ನೆಯ ಬುತ್ತಿಯು ಮದ್ಯಾಹ್ನದವರೆಗೆ ಸಾಕಾಯಿತು. ಸಂಜೆಯಷ್ಟೋತ್ತಿಗೆ ಊರು ತಲುಪುತ್ತೇವೆಂದು ಖಾತ್ರಿ ಮಾಡಿಕೊಂಡು ಮುಂದೆ ಹೆಜ್ಜೆ ಹಾಕಿ ನಡೆಯತೊಡಗಿದರು. ಹಾಗೆಯೇ ನಡೆಯುತ್ತಿರುವಾಗ, ಮೊದಲೇ ದುಡಿದು ಸುಸ್ತಾಗಿದ್ದ ಆತನ ತಂದೆ-ತಾಯಿಗಳು ನಡೆದು-ನಡೆದು ಮತ್ತೊಂದಿಷ್ಟು ದಣಿದರು ಜೊತೆಗೆ ಹಸಿವು ಬೇರೆ. ರಸ್ತೆ ಬದಿಯ ಮರದ ನೆರಳಲ್ಲಿ ಹೊರಳಿಕೊಂಡಾಗ ಅವರಿಬ್ಬರಿಗೆ ಜ್ವರ, ವಾಂತಿ, ತಲೆನೋವು ಕಾಣಿಸಿಕೊಂಡಿತು. ‘ನಮ್ಮ ಊರಿನ ಸಮೀಪ ಬಂದೀವಿ, ನಮ್ಮೂರು ಮುಟ್ಟಿದ ಮೇಲೆ ಪರಿಚಯದ ಡಾಕ್ಟರಿಗೆ ತೋರಿಸಿದರಾಯ್ತು’ ಎಂದು ಅವರಿಗೆ ಸಮಾಧಾನಿಸಿ ಮುಂದೆ ಕರೆದುಕೊಂಡು ಸಾಗಿದನು. ನಡೆದು ಊರಿನ ಸಮೀಪಕ್ಕೆ ಬಂದಾಗ ಊರಿನ ಹೊರವಲಯದ ಸರಕಾರಿ ಆಸ್ಪತ್ರೆಯ ಡಾಕ್ಟರ್ ಹತ್ತಿರ ಹೋಗಿ ಈತನು ವಿನಂತಿಸಿಕೊಂಡಾಗ, ಅವರಿದ್ದಲ್ಲಿಗೆ ಡಾಕ್ಟರ್ ಬಂದು ತಾಯಿಯನ್ನು ತಪಾಸಣೆ ಮಾಡುವಾಗ ಒಮ್ಮಿಂದೊಮ್ಮೆಲೆ ಉಸಿರು ನಿಂತು, ಜೀವ ಹೋಯಿತು. ಇದನ್ನು ಕೇಳಿದ ಆತನ ತಂದೆ ಎದೆಯೊಡೆದುಕೊಂಡು ಕ್ಷಣಮಾತ್ರದಲ್ಲಿಯೇ ಕೊನೆಯುಸಿರೆಳೆದನು.

ತಂದೆ-ತಾಯಿಯನ್ನು ಕಳೆದುಕೊಂಡು ತಂಗಿಯನ್ನು ಎದೆಗಪ್ಪಿಕೊಂಡು ‘ದುಡಿಯೋರ ಕೂಲಿ ಕಿತ್ಕೊಂಡಿ, ಈಗ ನಮ್ಮಿಬ್ಬರನ್ನ ಅನಾಥರನ್ನಾಗಿ ಮಾಡದಿ. ಯೇ ಕರೋನಾ ಎಲ್ಲೇದಿ ? ನಮ್ಮಿಬ್ಬರನ್ನ ಯಾಕ ಬಿಟ್ಟಿದಿ ? ಬಾ ಕರಕೊಂಡ ಹೋಗ ಬಾ…’ ರೋಧಿಸತೊಡಗಿದನು. ಮುಗಿಲುಮುಟ್ಟಿದ ಆತನ ರೋಧನ ಕಂಡು ಮುಖಕ್ಕೆ ಮಾಸ್ಕ ಹಾಕಿಕೊಂಡ ಅವನ ಊರಿನ ಜನರೆಲ್ಲ ಒಬ್ಬೊಬ್ಬರಾಗಿ ಬಂದು ದೂರದಲ್ಲಿ ನಿಂತು ನೋಡತೊಡಗಿದರು. ಯಾರೊಬ್ಬರ ಗುರುತು ಸಿಗುವಂತಿರಲಿಲ್ಲ. ಅಂಬುಲನ್ಸ ಮತ್ತು ಪೋಲೀಸ್ ವಾಹನಗಳು ಸೈರನ್ ಕೂಗುತ್ತಾ ಅಲ್ಲಿಗೆ ಧಾವಿಸಿ ಬಂದವು. ಪೋಲೀಸರು ಟ್ರಾವೆಲ್ ಹಿಸ್ಟರಿ ಬರೆದುಕೊಳ್ಳತೊಡಗಿದರು.

-ಹಿಪ್ಪರಗಿ ಸಿದ್ಧರಾಮ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]