
ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ವಾಯಾವರಣ ಹೇಗೆ ಸೃಷ್ಟಿಯಾಯಿತೋ ಅದೇ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆಯೂ ಇಂತಹದ್ದೇ ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಯತ್ನಿಸಿದರೆ, ಕಾಂಗ್ರೆಸ್ ಬಿಜೆಪಿಗೆ ಕೇಳಬೇಕಾದ ನಿಜವಾದ ಪ್ರಶ್ನೆಗಳನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡುವುದರಲ್ಲೇ ಕಾಲಕಳೆಯಿತು. ಇಂತಹ ಸಂದರ್ಭದಲ್ಲಿ ದೇಶದ ಪರವಾಗಿ, ಜನರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಕೇಳಬೇಕಾದ ಪ್ರಶ್ನೆಗಳನ್ನು ಯಾರು ಕೇಳುತ್ತಾರೆ ಎನ್ನುವ ಪ್ರಶ್ನೆಗಳು ಏಳಲು ಆರಂಭವಾಯಿತು. ಬಿಜೆಪಿಯ ನಿರ್ಲಕ್ಷ್ಯವನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಪಾಕಿಸ್ತಾನದ ಪರವಾಗಿ ಮಾತನಾಡಲು ಆರಂಭಿಸಿತು ಎನ್ನುವ ಮಟ್ಟಿಗೆ ದೇಶದ ರಾಜಕೀಯ ಸ್ಥಿತಿ ಬದಲಾಯಿತು. ಈ ವೇಳೆ ನಿಜವಾಗಿಯೂ ಆಡಳಿತ ಪಕ್ಷವನ್ನು ಯಾವ ಪ್ರಶ್ನೆಗಳನ್ನು ಕೇಳ ಬೇಕೋ ಆ ಪ್ರಬುದ್ಧ ಪ್ರಶ್ನೆಗಳನ್ನು ಕೇಳಿದ್ದು ಮೂರನೇಯ ಅತೀ ದೊಡ್ಡ ರಾಷ್ಟ್ರೀಯ ಪಾರ್ಟಿ ಬಿಎಸ್ ಪಿ. ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ.
ಮಾಯಾವತಿ ಅವರು ಕೇಳಿದ ಪ್ರಬುದ್ಧ ಪ್ರಶ್ನೆಗಳಿವು
ಪುಲ್ವಾಮಾ ದಾಳಿಯಿಂದ 41 ಯೋಧರು ಹುತಾತ್ಮರಾದಾಗ ಮಾಯಾವತಿ ನೀಡಿದ ಮೊದಲ ಹೇಳಿಕೆ
►“ಪುಲ್ವಾಮಾ ದಾಳಿಯಂತಹ ದಾಳಿಗಳು ಮತ್ತೆ ನಡೆಯದಂತೆ ಇದಕ್ಕೊಂದು ಶಾಶ್ವತ ಪರಿಹಾರವನ್ನು ಹುಡುಕಬೇಕು.
►“ಪ್ರಧಾನಿ ಅವರ ಆಕ್ರೋಶದ ಮಾತುಗಳು ನಿಜವಾಗಿಯೂ ಕಾರ್ಯರೂಪಕ್ಕೆ ಬರಲಿ.”
►”ಯೋಧರ ಮೇಲಿನ ದಾಳಿಗೆ ಪ್ರತ್ಯುತ್ತರ ನೀಡುವವರೆಗೂ ದೇಶದ ಎಲ್ಲ ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸಬೇಕು”
ಭಾರತೀಯ ವಾಯುಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದಾಗ ಮಾಯಾವತಿ ನೀಡಿದ ಹೇಳಿಕೆಗಳು
►“ಭಾರತೀಯ ಯೋಧರ ಕೆಚ್ಚೆದೆಯ ಧೈರ್ಯಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ, ಯೋಧರ ಧೈರ್ಯವನ್ನು ಗೌರವಿಸುತ್ತೇನೆ.”
►“ಪ್ರಧಾನಿ ನರೇಂದ್ರ ಮೋದಿ ಅವರು, ಸೈನ್ಯವನ್ನು ಮುಕ್ತವಾಗಿ ಕಾರ್ಯಾಚರಣೆ ಮಾಡಲು ಅವಕಾಶವನ್ನು ನೀಡಿದ್ದಾರೆ. ಇಂತಹದ್ದೇ ಕ್ರಮವನ್ನು ಪಠಾಣ್ ಕೋಟ್ ಹಾಗೂ ಉರಿ ಉಗ್ರರ ದಾಳಿಯ ಸಂದರ್ಭದಲ್ಲಿ ಮಾಡಿದ್ದರೆ, ದೇಶದ ಇನ್ನುಷ್ಟು ಯೋಧರ ಅಮೂಲ್ಯವಾದ ಜೀವವನ್ನು ಉಳಿಸಬಹುದಿತ್ತು”.
ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದ ವಶದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಕಾರ್ಯಕ್ರಮವಾದ ಬಿಜೆಪಿ ಕಾರ್ಯಕರ್ತರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದ ಸಂದರ್ಭ ಮಾಯಾವತಿ ನೀಡಿದ ಹೇಳಿಕೆಗಳಿವು
►“ಬಿಜೆಪಿ, ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ”.
►“ದೇಶ ಯುದ್ಧದ ಸಂದರ್ಭವನ್ನು ಎದುರಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯಕರ್ತರಲ್ಲಿ ರಾಜಕೀಯ ಆಸಕ್ತಿಯನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ರಾಪೇಲ್ ಇರುತ್ತಿದ್ದರೆ ಇವತ್ತು ಫಲಿತಾಂಶವೇ ಬೇರೆ ಆಗಿರುತ್ತಿತ್ತು ಎಂದು ಪಾಕಿಸ್ತಾನದ ವಿರುದ್ಧ ಚುನಾವಣಾ ಭಾಷಣದಲ್ಲಿ ಗುಡುಗಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮಾಯಾವತಿ ಕೇಳಿದ ಪ್ರಶ್ನೆಗಳಿವು.
►“ಮೋದಿಯ ಐದು ವರ್ಷದ ಆಡಳಿತದಲ್ಲಿ ಒಂದೇ ಒಂದು ರಾಪೇಲ್ ವಿಮಾನ ಭಾರತಕ್ಕೆ ಯಾಕೆ ಬಂದಿಲ್ಲ?”
►“ಬಿಜೆಪಿ ದೇಶದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಯಾಕೆ ಇಷ್ಟೊಂದು ಲೋಪ ಮತ್ತು ಅಸಡ್ಡೆಯಿಂದ ನಡೆದುಕೊಳ್ಳುತ್ತಿದೆ?
ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ರಾಜಕೀಯ ಕಾಳಗದ ಸಂದರ್ಭದಲ್ಲಿ ದೇಶದ ಪರವಾಗಿ ನಿಂತು ಪ್ರಶ್ನೆ ಕೇಳಿರುವ ಏಕೈಕ ಪಕ್ಷ ಮಾಯಾವತಿ ಅವರ ನೇತೃತ್ವದ ಬಿಎಸ್ ಪಿ ಹಾಗಾಗಿಯೇ ಇದು ಮೂರನೇಯ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಮತ್ತು ದೇಶಾದ್ಯಂತ ಪ್ರತಿ ಊರುಗಳಲ್ಲೂ ಬೇರೂರಿರುವುದು ಎನ್ನುವ ಅಭಿಪ್ರಾಯಗಳಿವೆ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಝಿಯಾಗಿತ್ತು. ಆದರೆ ಬಿಎಸ್ ಪಿ ಇವುಗಳನ್ನೆಲ್ಲ ಮೀರಿ ದೇಶದ ಜನರ ಜೊತೆ ಸೈನ್ಯದ ಜೊತೆ ನಿಂತಿದೆ ಎನ್ನುವ ಅಭಿಪ್ರಾಯಗಳು ಮೂಡಿವೆ.