Sunday, September 19 , 2021
ಯಾವ ಪಕ್ಷ ಜಾತ್ಯಾತೀತ ಮತ್ತು ಯಾವ ಪಕ್ಷ  ಕೋಮುವಾದಿ? ಎಂದು ತೋರ್ಪಡಿಸುವುದರ ಹಿಂದಿನ ಮರ್ಮವೇನು?

ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆಗೆ ಕಾರಣವಾದ ಭಾರತ ದೇಶದಲ್ಲಿ ರಾಜಕಾರಣವನ್ನು ಪವಿತ್ರ ಮತ್ತು ಅಪವಿತ್ರ ರಾಜಕೀಯ ಹೊಂದಾಣಿಕೆ ಎಂಬ ಪದಬಳಕೆಗಳ ಮೂಲಕ ಹೇಗೆ ದಲಿತರು ಮತ್ತು ಮುಸಲ್ಮಾನರ ದಿಕ್ಕು ತಪ್ಪಿಸುತ್ತಿದ್ದಾರೆ  ಎಂಬುದನ್ನು ಅರಿಯುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. ಅದರಲ್ಲೂ ಅತೀ ಮುಖ್ಯವಾಗಿ ಇವರು ಜಾತ್ಯಾತೀತರು ,ಇವರು ಕೋಮುವಾದಿಗಳು ಎಂದು ತೋರಿಸುವ ರಾಜಕಾರಣ ಇದೆಯಲ್ಲವೇ ಇದು ಇನ್ನೂ ದೊಡ್ಡ ಮೋಸ. ಇಂತಹಾ ಮೋಸಕ್ಕೆ ಬಲಿಯಾಗುವುದರಲ್ಲಿ ದಲಿತರೇ ಮೊದಲು. ಏಕೆಂದರೆ ಕಾಂಗ್ರೆಸ್ ತಾನು ಜಾತ್ಯಾತೀತ ಎಂದು ಬಿಂಬಿಸಿಕೊಳ್ಳುತ್ತದೆ, ಬಿಜೆಪಿಯನ್ನು ಕೋಮುವಾದಿ ಎಂದು ಹೇಳುತ್ತದೆ.

ಅಲ್ಲದೇ ಅಂತರಾಳದಿಂದಲೇ  ಜಾತ್ಯಾತೀತರಾಗಿ ಹುಟ್ಟುವವರು ದಲಿತರು ಮಾತ್ರ.  ಏಕೆಂದರೆ ಎಲ್ಲಾ ಜಾತಿ, ಧರ್ಮಗಳಿಂದಲೂ ತುಳಿತಕ್ಕೆ ಒಳಗಾಗಿರುವುದರಿಂದ ದಲಿತರು ಜಾತ್ಯಾತೀತತೆಯನ್ನೇ ಜೀವಾಳವಾಗಿ ತುಂಬಿಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಮೋಹಕ್ಕೆ ಬಲಿಯಾಗುತ್ತಾರೆ. ಜೊತೆಗೆ ಈ ಮೂಲಕ ಕಾಂಗ್ರೆಸಿನ ಒಳಗಡೆಯೇ ಇರುವ ಮನುವಾದಿಗಳು ಬಿಜೆಪಿಗೆ ಹಿಂದೂ ಮತಗಳನ್ನು ಒಗ್ಗೂಡಿಸುವಲ್ಲಿ ಸಹಾಯ ಮಾಡುತ್ತಾರೆ. ಇಲ್ಲ ಇದು ಸುಳ್ಳು ಕಾಂಗ್ರೆಸ್ ಜಾತ್ಯಾತೀತ ಸಿದ್ದಾಂತವನ್ನಷ್ಟೆ ಪಾಲಿಸುತ್ತದೆ ಮತ್ತು ಇದರಲ್ಲಿ ರಾಜಿಯೇ ಆಗುವುದಿಲ್ಲ ಎಂದು ಹೇಳುವುದಾದರೆ ಇದರಲ್ಲಿ ಎಷ್ಟು ಸತ್ಯವಿದೆಯೆಂದು ತಿಳಿಯಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಚಾಮರಾಜನಗರ ಜಿಲ್ಲೆಯ ವಿವಿದ ತಾಲ್ಲೂಕುಗಳಲ್ಲಿ ನಡೆದ ನಗರಸಭೆಯ ಅಧ್ಯಕ್ಷ  ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆ ಗಮನಿಸಿ.

ಕೊಳ್ಳೇಗಾಲ ನಗರಸಭೆ: ಎನ್. ಮಹೇಶ್ ಬೆಂಬಲಿಗರಿಗೆ ಅಧ್ಯಕ್ಷ ಪಟ್ಟ!

ಕೆಲವು ದಿನಗಳ ಹಿಂದೆ ಕೊಳ್ಳೆಗಾಲ ತಾಲ್ಲೂಕು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಕೊಳ್ಳೆಗಾಲದ ಶಾಸಕರಾದ ಎನ್. ಮಹೇಶ್ ರವರು ಬಿಜೆಪಿ ಜೊತೆಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡು ತಮ್ಮ ಅಭ್ಯರ್ಥಿಗೆ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಗಳಿಸಿಕೊಡುವುದರಲ್ಲಿ ಯಶಸ್ವಿಯಾಗುತ್ತಾರೆ. ಎನ್.ಮಹೇಶ್ ರವರ ಬೆಂಬಲಿತ 7 ಸದಸ್ಯರು + ಬಿಜೆಪಿಯ 7 ಸದಸ್ಯರು + MLA+ MP + ಸ್ವತಂತ್ರ ಅಭ್ಯರ್ಥಿ ಒಟ್ಟು 17 ಸಂಖ್ಯಾಬಲದಿಂದ ನಗರಸಭೆಯನ್ನು ಗೆದ್ದು ತಮ್ಮ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಗಳಿಸಿಕೊಡುತ್ತಾರೆ ಮತ್ತು ಇಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸುತ್ತದೆ. ಈ ಕಾರಣಕ್ಕಾಗಿ ದಿನಾಂಕ 5-11-2020 ರಂದು ಮಾನ್ಯ ಕಾಂಗ್ರೆಸ್ ಪಕ್ಷದ ಮಾಜಿ  ಸಂಸದರಾದ  ಆರ್. ಧ್ರುವನಾರಾಯಣ್ ರವರು ಪತ್ರಿಕಾ  ಗೋಷ್ಠಿಯಲ್ಲಿ‌ ಮಾತನಾಡುತ್ತಾ ಎನ್‌. ಮಹೇಶ್ ರವರನ್ನು ಕುರಿತು ” ಕೃಷಿ ಸಚಿವರಾದ ರಮೇಶ್ ಜಾರಕಿಹೊಳಿಯವರು  ಕೊಳ್ಳೇಗಾಲಕ್ಕೆ ಭೇಟಿ ನೀಡಿದಾಗ ಬಿಜೆಪಿ ಸರ್ಕಾರ ರಚಿಸಲು ನಾನು ಎಷ್ಟು ಕಾರಣಾನೋ ಅಷ್ಟೇ ಕಾರಣ ಎನ್. ಮಹೇಶ್ ರವರು ಕೂಡಾ ಎಂದು ಹೇಳಿದ್ದರು. ಹಾಗಾಗಿ ಎನ್. ಮಹೇಶ್ ರವರು ಬಿಜೆಪಿಯ ಜೊತೆಗೆ ಇದ್ದಾರೆ. ಬಹುಶಃ ಮಹೇಶ್ ರವರಿಗೆ ಜಾತ್ಯಾತೀತೆಯಲ್ಲಿ ನಂಬಿಕೆಯಿಲ್ಲ. ಅವರು ಕೋಮುವಾದಿಗಳ ಜೊತೆಗೇ ಇರಲಿ” ಎಂದು ಹೇಳುವ ಮೂಲಕ ಒಂದು ರಾಜಕೀಯ ಹೊಂದಾಣಿಕೆಯನ್ನು ಕೋಮುವಾದ ಮತ್ತು ಜಾತ್ಯಾತೀತತೆಯ ದೃಷ್ಟಿಯಲ್ಲಿ ನೋಡುವಂತೆ ಮಾತನಾಡಿದರು.

ಕೋಮುವಾದಿಯಾಗಿದ್ದ  ಆರ್.ಧ್ರುವನಾರಾಯಣ್:

ಆದರೆ ಇದೇ ಆರ್.ಧ್ರುವನಾರಾಯಣ್ ರವರು 1999 ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಅಂದು ಕೋಮುವಾದಿ ಇಂದು ಜಾತ್ಯಾತೀತ ಆಗಿಬಿಟ್ಟರು. ತದನಂತರ ಕಾಂಗ್ರೆಸಿನ ಐ.ಟಿ ಸೆಲ್ ನವರು ವೀರಾವೇಶದಿಂದ ಎನ್. ಮಹೇಶ್ ಕೋಮುವಾದಿ ಬಿಜೆಪಿಯ ಪರ ಇದ್ದಾರೆ ಎಂದು ಟೀಕಿಸಲು ಶುರು ಮಾಡುತ್ತಾರೆ. ಮೊದಲೇ ಜಾತ್ಯಾತೀತರಾದ ದಲಿತರು ಎನ್. ಮಹೇಶ್ ರವರ ನಡೆಯನ್ನು ಅನುಮಾನದಿಂದಲೇ ನೋಡಿದರು. ಅಲ್ಲದೇ  ಜಾತ್ಯಾತೀತ ಸಿದ್ದಾಂತದ ಕಾಂಗ್ರೆಸಿಗೆ ಬೆಂಬಲ ನೀಡಬೇಕಿತ್ತು ಎಂಬ ತಮ್ಮ ವಾದವನ್ನು ಮುಂದಿಡುತ್ತಾ ಸಮರ್ಥಿಸಿದವರೂ ಇದ್ದಾರೆ.

ಅಧಿಕಾರದಾಸೆಯಿಂದ ಕೋಮುವಾದಿ ಬಿಜೆಪಿ ಜೊತೆ ಒಂದಾದ ಜಾತ್ಯಾತೀತ(!) ಕಾಂಗ್ರೆಸ್:

ಆದರೆ ದಿನಾಂಕ 7 ನವೆಂಬರ್ ನಲ್ಲಿ ಇದೇ ಚಾಮರಾಜನಗರದ ಹನೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ , ಉಪಾಧ್ಯಕ್ಷ ಕುರ್ಚಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆಯನ್ನು ಮಾಡಿಕೊಳ್ಳತ್ತದೆ. ಜೊತೆಗೆ ಬಿಜೆಪಿಯ ಅಭ್ಯರ್ಥಿಯನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುತ್ತದೆ. ಹನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 13 ಸದಸ್ಯರಲ್ಲಿ ಜೆಡಿಎಸ್ ಪಕ್ಷ 6 ಸದಸ್ಯರನ್ನು ಹೊಂದಿದ್ದರೂ ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ವೈರಿ  ಎಂದು ಹೇಳುವ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು. ಇದಕ್ಕೆ ಕಾಂಗ್ರೆಸಿಗರು ಕೊಡುವ ಉತ್ತರ ಆಡಳಿತದ ಹಿತದೃಷ್ಟಿಯಿಂದ ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಾರೆ. ಇದು ಎಂತಹಾ ದಿಕ್ಕುತಪ್ಪಿಸುವ ತಂತ್ರ ಎಂದು ಅರ್ಥ ಮಾಡಿಕೊಳ್ಳಬೇಕಿದೆ.  ಮಾನ್ಯ ಧ್ರುವನಾರಾಯಣ್ ರವರೇ ” ಕೊಳ್ಳೆಗಾಲದಲ್ಲಿ ಎನ್. ಮಹೇಶ್ ರವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡರೆ ಕೋಮುವಾದಿಯಾಗುತ್ತಾರೆ. ಅದೇ ಹನೂರು ಪ.ಪಂಚಾಯತಿಯಲ್ಲಿ ಸ್ವತಃ ಕಾಂಗ್ರೆಸ್ ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡರೆ ಆಡಳಿತದ ಹಿತದೃಷ್ಟಿ ಹೇಗೆ ಆಗಿಬಿಡುತ್ತದೆ. ಕಾಂಗ್ರೆಸ್ ಮಾಡುವುದು ಹಿತದೃಷ್ಟಿಯಾದರೆ ಇತರರು ಮಾಡುವುದು ಮಾತ್ರ ಕೋಮುವಾದ ಹೇಗಾಗುತ್ತದೆ?. ಎನ್. ಮಹೇಶ್ ರವರು ಮಾಡಿದ್ದು ತಪ್ಪೆಂದು ತಾವು ಹೇಳುವುದಾದರೆ ಕಾಂಗ್ರೆಸ್ ಮಾಡಿದ್ದು ಕೂಡಾ ತಪ್ಪೆಂದು ಹೇಳಬಹುದಾಗಿತ್ತಲ್ಲವೇ?”.

ಆದರೆ ಒಂದು ರಾಜಕೀಯ ಹೊಂದಾಣಿಕೆಯನ್ನು ಪವಿತ್ರ, ಅಪವಿತ್ರ ಅಥವಾ ಜಾತ್ಯಾತೀತ ಪರ, ಕೋಮುವಾದದ ಪರ ಎಂದು ನೋಡುವುದೇ ನಮ್ಮ ರಾಜಕೀಯ ಅಜ್ಞಾನಕ್ಕೆ ಹಿಡಿದ ಕನ್ನಡಿಯಾಗುತ್ತದೆ. ಏಕೆಂದರೆ ಸಿದ್ದಾಂತವೇ ಬೇರೆ ರಾಜಕೀಯ ಹೊಂದಾಣಿಕೆಯೇ ಬೇರೆ. ಅಧಿಕಾರ ರಾಜಕಾರಣದಲ್ಲಿ ಇವೆಲ್ಲವೂ ಸಹಜವಾಗಿ ನಡೆಯುತ್ತವೆ ಎಂದು ತಿಳಿದುಕೊಳ್ಳಬೇಕಿದೆ.  ಇದು ತಪ್ಪಂತೂ ಅಲ್ಲ. ಏಕೆಂದರೆ ನಿಮಗೆ ಒಪ್ಪಿಗೆ ಇದ್ದರೂ ಇಲ್ಲದಿದ್ದರೂ ಎಲ್ಲಾ ರಾಜಕೀಯ ಪಕ್ಷಗಳು ಇಂತಹಾ ಹೊಂದಾಣಿಕೆಗಳನ್ನು ಮುಂದೆಯೂ ಮಾಡಿಕೊಳ್ಳುತ್ತದೆ. ಇದು ಕೇವಲ ಅನಿವಾರ್ಯ ಮಾತ್ರವಲ್ಲ ಅಗತ್ಯವೂ ಕೂಡಾ.

ಜನಹಿತಕ್ಕಾಗಿ ಅಧಿಕಾರ: ಬಿಜೆಪಿಯನ್ನು ಏಣಿಯಂತೆ ಬಳಸಿಕೊಂಡ ರಾಜಕೀಯ ದಾರ್ಶನಿಕ ದಾದಾಸಾಹೇಬ್ ಕಾನ್ಷಿರಾಂಜೀ:

ಇಂತಹಾ ರಾಜಕೀಯ ಹೊಂದಾಣಿಕೆಯನ್ನು ಬಿಎಸ್ಪಿ ಪಕ್ಷದ ಸಂಸ್ಥಾಪಕರಾದ ದಾದಾಸಾಹೇಬ್ ಕಾನ್ಶಿರಾಂ ಸಾಹೇಬರು ಮೂರು ಬಾರಿ ಮಾಡಿದ್ದಾರೆ. ಮೊಟ್ಟಮೊದಲಿಗೆ 1995 ರಲ್ಲಿ 33 ಶಾಸಕರ ಬಲವನ್ನು ಹೊಂದಿರುವ ಬಿಎಸ್ಪಿ ಜೊತೆಗೆ ಬಿಜೆಪಿ ರಾಜಕೀಯ ಹೊಂದಾಣಿಕೆಯ ಮುಖಾಂತರ ಅಕ್ಕ ಮಾಯಾವತಿಯವರನ್ನು ಮೊಟ್ಟಮೊದಲ ದಲಿತ ಮಹಿಳಾ ಮುಖ್ಯಮಂತ್ರಿಯಾದರು. ಇದೇ ಸಂದರ್ಭದಲ್ಲಿ ದ್ರಾವಿಡ ಚಳುವಳಿಯ ರುವಾರಿಯಾದ ಪೆರಿಯಾರ್ ರಾಮಸ್ವಾಮಿ ನಾಯಕರ್ ರವರ ಹೆಸರಿನಲ್ಲಿ “ಪೆರಿಯಾರ್  ಮೇಳವನ್ನು” ಮಾಡಲು ಕಾನ್ಶಿರಾಂ ಸಾಹೇಬರು ನಿರ್ಧರಿಸಿದರು. ಆಗ ಬಿಜೆಪಿಯು ನೀವು ಯಾರ ಮೇಳವನ್ನಾದರೂ ಮಾಡಿ ಆದರೆ ಪೆರಿಯಾರ್ ಮೇಳ ಮಾತ್ರ ಮಾಡಬಾರದು. ಒಂದು ವೇಳೆ ನೀವು ಪೆರಿಯಾರ್ ಮೇಳ ಮಾಡಿದರೆ ಸರ್ಕಾರವನ್ನೇ ಬೀಳಿಸುತ್ತೇವೆ ಎಂಬ ಶರತ್ತು ಮತ್ತು ಬೆದರಿಕೆ ಹಾಕುತ್ತಾರೆ. ಏಕೆಂದರೆ ಪೆರಿಯಾರ್ ಹಿಂದುತ್ವದ ಕಡು ವಿರೋಧಿ. ಆದರೆ ಬಿಜೆಪಿ ಹಿಂದುತ್ವದ ಪ್ರತಿಪಾದಕರು. ಆದರೂ ಲೆಕ್ಕಿಸದೆ ಪೆರಿಯಾರ್ ಮೇಳವನ್ನು ಮಾಡುತ್ತಾರೆ. ಆಗ ಬಿಜೆಪಿ ತನ್ನ ಬೆಂಬಲವನ್ನು ವಾಪಸ್ಸು ಪಡೆದು ಸರ್ಕಾರ ಬೀಳಿಸುತ್ತದೆ.

ಸರ್ಕಾರ ಬಿದ್ದರೂ ಅಂದು ಕಾನ್ಶಿರಾಂ ಸಾಹೇಬರು ಅವರ ಸಿದ್ದಾಂತ ಬಿಡುವುದಿಲ್ಲ ಎಂಬುದನ್ನು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟರು. ನಂತರ 1997 ರ ಚುನಾವಣೆಯಲ್ಲಿ 67 ಶಾಸಕರ ಬಲದಿಂದ ಬಿಎಸ್ಪಿಯು ಬಿಜೆಪಿಯೊಂದಿಗೆ ಪುನಃ ಹೊಂದಾಣಿಕೆ ಮಾಡಿಕೊಂಡು ಮತ್ತೇ ಅಕ್ಕ ಮಾಯಾವತಿಯವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ನಂತರ 2002 ರ ಚುನಾವಣೆಯಲ್ಲೂ ಪುನಃ ಬಿಜೆಪಿಯ ಜೊತೆಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡು ಅಕ್ಕ ಮಾಯಾವತಿಯವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಏಕೆಂದರೆ ಅಂದು ಮುಲಾಯಂ ಸಿಂಗ್ ಯಾದವ್ ರವರ ಸಮಾಜವಾದಿ ಪಕ್ಷವು ಅಪಾಯಕಾರಿಯಾಗಿ ವರ್ತಿಸುತ್ತಿತ್ತು. ಹಾಗಾಗಿ ಎಸ್ಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿಗೆ ಬಿಎಸ್ಪಿ ಬಿಟ್ಟರೆ ಇನ್ನೊಂದು ಮಾರ್ಗವಿರಲಿಲ್ಲ.  ಇಲ್ಲಿ ಒಂದು ಅಂಶವನ್ನು ಗಮನಿಸಿ ಬಿಎಸ್ಪಿ ತನ್ನ ಸಿದ್ದಾಂತದಿಂದ ಹಿಂಜರಿಯುವುದಿಲ್ಲ ಎಂದು ಗೊತ್ತಿದ್ದರೂ ಬಿಜೆಪಿ ಮೂರು ಬಾರಿ ಹೊಂದಾಣಿಕೆ ಮಾಡಿಕೊಂಡು ಮಾಯಾವತಿಯವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ.

ಬಿಜೆಪಿ ಪರ ಪ್ರಚಾರ ನಡೆಸಿದ್ದ ಮಾಯಾವತಿ:

ಅಷ್ಟೇ ಅಲ್ಲದೆ 2002 ರಲ್ಲಿ ಗೋದ್ರಾ ಹತ್ಯಾಕಾಂಡವಾದ ನಂತರ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಉ‌.ಪ್ರದೇಶದಲ್ಲಿ  ಬಿಜೆಪಿ-ಬಿಎಸ್ಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ಮಾಯಾವತಿಯವರನ್ನು ಸ್ವತಃ ಕಾನ್ಶಿರಾಂ ಸಾಹೇಬರು  ಗುಜರಾತಿನ ಚುನಾವಣೆಯಲ್ಲಿ ಬಿಜೆಪಿಯ ಪರ ಚುನಾವಣಾ ಪ್ರಚಾರಕ್ಕೂ ಕಳಿಸಿಕೊಡುತ್ತಾರೆ. ಇದರಲ್ಲಿ ನಾವು ಸರಿ ತಪ್ಪು ಎಂದು ನೋಡುವ ಅಗತ್ಯವೇ ಇಲ್ಲ. ಏಕೆಂದರೆ ಹೊಂದಾಣಿಕೆ ಸರ್ಕಾರಗಳು ತಾತ್ಕಾಲಿಕವೇ ಹೊರೆತೂ ಶಾಶ್ವತವೂ ಅಲ್ಲ, ಇದು ಸೈದ್ದಾಂತಿಕ ಹೊಂದಾಣಿಕೆಯೂ ಅಲ್ಲ. ಆಯಾ ಸಂಧರ್ಭಕ್ಕೆ ಅಗತ್ಯ ಮತ್ತು ಅನಿವಾರ್ಯ. ಇದನ್ನು ಅರ್ಥ ಮಾಡಿಕೊಳ್ಳದವರು ಅವಕಾಶವಾದಿತನ , ಅಪವಿತ್ರ, ಸಿದ್ದಾಂತಕ್ಕೆ ದ್ರೋಹ ಎಂದೆಲ್ಲಾ ಮಾತನಾಡುತ್ತಾರೆ. ಆದರೆ ಇದೇ ಸಂಧರ್ಭ ಕಾಂಗ್ರೆಸಿಗೆ, ಕಮ್ಯುನಿಸ್ಟರಿಗೆ, ಸಮಾಜವಾದಿಗಳಿಗೆ ಎಲ್ಲರಿಗೂ ಎದುರಾಗಿದೆ.‌

ರಾಜಕೀಯದಲ್ಲಿ ಜಾತ್ಯಾತೀತತೆ ಎಂಬುದು ಸಂದರ್ಭೋಚಿತ:

ಎಲ್ಲಾ ಪಕ್ಷಗಳು ಸಿದ್ದಾಂತದಂತೆಯೇ ರಾಜಕಾರಣ ಮಾಡಲಾಗಿದೆಯೇ? ಎಂದು ಗಮನಿಸಿ.
1977 ರ ಚುನಾವಣೆಯ ನಂತರ ಮೊಟ್ಟಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರವಾಗಿ ಜನತಾ ಪಾರ್ಟಿಯು ಅಧಿಕಾರಕ್ಕೆ ಬಂತು.ಆಗ ತಾನೇ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಪರಿಸ್ಥಿತಿಯ ಪರಿಣಾಮ ಕಾಂಗ್ರೆಸ್ ಸರ್ವಾಧಿಕಾರಿ ಪಕ್ಷವಾಗಿ  ಬದಲಾಗಿತ್ತು. ಹಾಗಾಗಿ ಕಾಂಗ್ರೆಸನ್ನು ಅಧಿಕಾರದಿಂದ ದೂರವಿಡಲು ಸಮಾಜವಾದಿ ಸಿದ್ದಾಂತದ ಜನತಾ ಪಾರ್ಟಿಯ ಜೊತೆಗೆ ಹಿಂದುತ್ವವಾದಿ ಭಾರತೀಯ ಜನಸಂಘ( ಇಂದಿನ BJP), ಕಮ್ಯುನಿಸಂ ಸಿದ್ದಾಂತದ  ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(CPIM), ದ್ರಾವಿಡ ಸಿದ್ದಾಂತದ DMK  ಹೀಗೆ ಒಂದಕ್ಕೊಂದು ತದ್ವಿರುದ್ದವಾದ ಸಿದ್ದಾಂತಗಳನ್ನು ಹೊಂದಿರುವ ಪಕ್ಷಗಳು ಒಂದಾಗಿ ಸರ್ವಾಧಿಕಾರಿ ದೋರಣೆಯ ಇಂದಿರಾ ಗಾಂಧಿಯವರನ್ನು ಅಧಿಕಾರದಿಂದ ದೂರ ಉಳಿಸಿದರು.

ನಂತರದ ದಿನಗಳಲ್ಲಿ ಹೊಂದಾಣಿಕೆಯ ಸರ್ಕಾರಗಳದೇ ಅಧಿಕಾರವಾಯಿತು. ಕಾಂಗ್ರೆಸ್ , ಬಿಜೆಪಿ ಅಂತ ಹೋಗಿ UPA,NDA ಗಳಾದವು. ಇದರಲ್ಲಿ ಇನ್ನೂ ಮುಖ್ಯವಾಗಿ ಕಾಂಗ್ರೆಸನ್ನು ಬದ್ದವೈರಿಯಂತೆ ನೋಡುವ ಕಮ್ಯುನಿಸ್ಟ್ ಪಕ್ಷ ಒಂದಾಗಿತ್ತು. ಹಿಂದುತ್ವವಾದಿ ಆಸ್ತಿಕರ ಪಕ್ಷವಾದ ಬಿಜೆಪಿಯು ಪಕ್ಕ ನಾಸ್ತಿಕವಾದಿ ಪೆರಿಯಾರ್ ಚಿಂತನೆಗಳ DMK, AIADMk ಜೊತೆಗೆ ಒಂದಾದವು. ಪೆರಿಯಾರ್ ಮೇಳ ಮಾಡಿದ್ದಕ್ಕೇ ಬಿಜೆಪಿಯು ಬಿಎಸ್ಪಿಯ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದು ಸರ್ಕಾರ ಬೀಳಿಸಿತು. ಆದರೆ ಅದೇ ಪೆರಿಯಾರ್ ಚಿಂತನೆಗಳ DMK ಪಕ್ಷದೊಂದಿಗೆ ಸರ್ಕಾರ ರಚಿಸಿದ್ದು ಏಕೆಂದು ಮುಖ್ಯವಾಗಿ ದಲಿತರು ಯೋಚಿಸಬೇಕಿದೆ. ಏಕೆಂದರೆ ಇಷ್ಟಾದರೂ ಅವರು ತಮ್ಮ ಸಿದ್ದಾಂತಗಳನ್ನು ಉಳಿಸಿಕೊಂಡು ಹೊಂದಾಣಿಕೆಗಳನ್ನು ಮಾಡುವುದು ಅನಿವಾರ್ಯವಾಗಿತ್ತು.‌

ಕರ್ನಾಟಕದಲ್ಲೂ ಕೋಮುವಾದಿಗಳ ಜೊತೆ ಒಂದಾಗಿದ್ದ ಜಾತ್ಯಾತೀತರು!!!:

ಕರ್ನಾಟಕದಲ್ಲಿ ಮೊಟ್ಟಮೊದಲ ಕಾಂಗ್ರೆಸೇತರ ಸರ್ಕಾರ ರಚಿಸಿದ ಜನತಾ ಪಕ್ಷದ ರಾಮಕೃಷ್ಣ ಹೆಗಡೆಯವರು 1983 ರಲ್ಲಿ ಸರ್ಕಾರ ರಚಿಸಲು ಬಿಜೆಪಿಯ 12 ಶಾಸಕರ ಬೆಂಬಲ ಪಡೆದರು. ಇಲ್ಲಿ ಸಮಾಜವಾದಿಗಳು ಮತ್ತು ಕೋಮುವಾದಿಗಳು ಒಂದಾದರು ಎಂದು ಕರ್ನಾಟಕದ ಯಾವ ದಲಿತ ಸಂಘಟನೆಗಳೂ ಇದನ್ನು ವಿರೋಧಿಸಲಿಲ್ಲ. ಆದರೆ ಬಿಎಸ್ಪಿ ಬಿಜೆಪಿ ಒಂದಾಗಿ ಸರ್ಕಾರ ರಚನೆ ಮಾಡಿದಾಗ ಇದೇ ದಲಿತ ಸಂಘಟನೆಗಳು ವಿರೋಧಿಸಿದವು. ಇದು ದಲಿತರ ರಾಜಕೀಯ ಅಪ್ರಬುದ್ದತೆ ಅಲ್ಲವೇ? ಅವರು ಮಾಡಿದರೆ ಸರಿ ನಾವು ಮಾಡಿದರೆ ತಪ್ಪು ಹೇಗಾಗುತ್ತದೆಂದು ಯೋಚಿಸಬಹುದಾಗಿತ್ತು.

ಮಾನ್ಯ ಕುಮಾರಸ್ವಾಮಿಯವರು ಜಾತ್ಯಾತೀತ ಎಂತಲೇ ಹೆಸರಿರುವ ಜೆಡಿಎಸ್ ಪಕ್ಷ ಮತ್ತು ಕೋಮುವಾದಿ ಎಂದು ಹೇಳುವ ಬಿಜೆಪಿ ಜೊತೆಗೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು.
ಹೀಗೆ ಆಯಾ ಪರಿಸ್ಥಿತಿಗೆ ತಕ್ಕಂತೆ ಮತ್ತು ಕೆಲವೊಂದು ದೊಡ್ಡ ಪಕ್ಷಗಳ ನಡುವೆ ಅಧಿಕಾರ ಪಡೆಯಲು ಹೊಂದಾಣಿಕೆಗಳು ಅಗತ್ಯವಾಗುತ್ತದೆ. ಆದರೆ ಅದನ್ನು secular ಮತ್ತು communal ಎನ್ನುವ ರೀತಿ ಬಿಂಬಿಸುವುದು ದಲಿತ ಮತ್ತು ಮುಸಲ್ಮಾನರನ್ನು ಯಾಮಾರಿಸುವ ತಂತ್ರವಲ್ಲದೇ ಮತ್ತೇನಿಲ್ಲ. ಸಮಯಕ್ಕೆ ತಕ್ಕಂತೆ ಎಲ್ಲರೂ ಕೋಮುವಾದಿಗಳೂ ಆಗಿದ್ದಾರೆ, ಜಾತ್ಯಾತೀತರೂ ಆಗಿದ್ದಾರೆ.

ಇನ್ನು ವ್ಯಕ್ತಿಗತ ಬದ್ದತೆಯ ವಿಷಯವಾಗಿ ನೋಡಿದರೆ RPI ಪಕ್ಷದ ಸಂಸದರಾದ ರಾಮದಾಸ್ ಅಥವಾಲೆಯವರು ಕೇಂದ್ರ ಬಿಜೆಪಿಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಆದರೆ ದಲಿತರು ಮತ್ತು ಸಂವಿಧಾನದ ವಿಷಯ ಬಂದಾಗ ಅದರ ಪರವೇ ನಿಲ್ಲುತ್ತಾರೆ. ಹಾಗೇ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್ ರವರು ಬಿಜೆಪಿಯ ಸಂಸದರಾದರೂ ಸಂವಿಧಾನ ಬದಲಿಸುತ್ತೇವೆಂದು ಅನಂತ್ ಕುಮಾರ್ ಹೆಗಡೆ ಮಾತನಾಡಿದಾಗ ಅದನ್ನು ವಿರೋಧಿಸುತ್ತಾರೆ, ದಲಿತರ ಪರ ನಿಲ್ಲುತ್ತಾರೆ. ಹಾಗೇ ಬಿಎಸ್ಪಿಯಲ್ಲಿದ್ದು ಉಚ್ಛಾಟನೆಗೊಳಗಾಗಿ ಈಗ ಸ್ವತಂತ್ರ ಅಭ್ಯರ್ಥಿ ಶಾಸಕ ಎನ್. ಮಹೇಶ್ ರವರು ದಲಿತರು, ಅಲ್ಪಸಂಖ್ಯಾತರು ಮತ್ತು ಸಂವಿಧಾನದ ಪರವಾಗಿ ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತಾರೆ. ಹೀಗೆ ಕೆಲವರು ಯಾವ ಪಕ್ಷದಲ್ಲಿದ್ದರೂ ,ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ತಮ್ಮ ಬದ್ದತೆಯನ್ನು ಕಾಪಾಡಿಕೊಂಡಿದ್ದಾರೆ. ಆದರೆ ನಾವು ಮಾತ್ರ ಜಾತ್ಯಾತೀತ ಪಕ್ಷಗಳು ಎನ್ನುವ ಮುಸುಗುನಲ್ಲಿರುವವರು ಮಾಡಿರುವ ಕೋಮುವಾದಿ ಕೆಲಸಗಳ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ ನೋಡಿ.

ಬಾಬರಿ ಮಸೀದಿ ಧ್ವಂಸ ಪ್ರಕರಣ ಆದಾಗ ಎಲ್ಲರೂ 1992 ರಿಂದ ಮುಂದುವರೆದ ಘಟನೆಯನ್ನಷ್ಟೇ ಮಾತನಾಡುತ್ತಾರೆ. ಆದರೆ ಹಿಂದೂಗಳನ್ನು ಓಲೈಸಲು ಬಾಬರಿ ಮಸೀದಿ ಬಾಗಿಲು ತೆರೆದು ಕರಸೇವೆ ಮಾಡಲು 1986 ರಲ್ಲಿ ಅವಕಾಶ ನೀಡಿದ್ದು ಅಂದಿನ ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ರಾಜೀವ್ ಗಾಂಧಿ. ನಂತರ 1992  ಬಾಬರಿ ಮಸೀದಿ ಧ್ವಂಸ ನಡೆದಾಗ ಕಾಂಗ್ರೆಸಿನ ಪಿ.ವಿ. ನರಸಿಂಹರಾವ್ ರವರು ಪ್ರಧಾನಿಯಾಗಿದ್ದರು.

ಬಿಜೆಪಿ ತಾನು ಹಿಂದುತ್ವದ ಪಕ್ಷ ಎಂದು ಹೇಳುತ್ತದೆ. ಆದರೆ ಹಿಂದೂಗಳ ಜೀವನವನ್ನು ಸುಧಾರಿಸುವಲ್ಲಿ ಮಾಡಿದ್ದೆಲ್ಲಾ ಮೋಸ. ಹಿಂದುತ್ವ ಪಕ್ಷದ ಅಧಿಕಾರದಲ್ಲಿ ನೋವು ಅನುಭವಿಸಿದವರೂ ಹಿಂದೂಗಳೇ ಆಗಿದ್ದಾರೆ. ಗೋವನ್ನು ಪವಿತ್ರ ಎಂದು ಪೂಜಿಸುವ ಪಕ್ಷ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ. ಹೀಗೆ ಹೆಸರಿಗೆ ಮಾತ್ರ ಹಿಂದುತ್ವ ಸಿದ್ದಾಂತ. ಆದರೆ ಮಾಡಿದ್ದು ಮಾತ್ರ ಬಂಡವಾಳಶಾಹಿ ರಾಜಕಾರಣ.  ಕಾಂಗ್ರೆಸ್ ಪಕ್ಷ ತಾನು ಮಾತ್ರ ಜಾತ್ಯಾತೀತ ಎಂದು ಹೇಳುತ್ತದೆ. ಗೋದ್ರಾದಲ್ಲಿ ಮುಸಲ್ಮಾನರ ಹತ್ಯಾಕಾಂಡ ಮಾಡಿದ ಬಿಜೆಪಿಯನ್ನು ಕೋಮುವಾದಿ ಎಂದು ಹೇಳುತ್ತದೆ. ಖಂಡಿತಾ ಇದು ಸರಿ. ಆದರೆ ಸಿಖ್ಖರ ಹತ್ಯಾಕಾಂಡ ಮಾಡಿದ ಕಾಂಗ್ರೆಸ್ ಜಾತ್ಯಾತೀತವಾದಿಯೇ? ಹಾಗೇ ಪ.ಬಂಗಾಳದಲ್ಲಿ ಜ್ಯೋತಿ ಬಸು ರವರ ಕಮ್ಯುನಿಸ್ಟ್ ಸರ್ಕಾರ ಮಾರಿಜ್ಹಪಿ ದ್ವೀಪದಲ್ಲಿ ಸಾವಿರಾರು ಅಸ್ಪೃಶ್ಯ ಸಮುದಾಯದ ನಮೋ ಶೂದ್ರರರ ಹತ್ಯಾಕಾಂಡ ಮಾಡಿಸಿದ್ದು ಜಾತ್ಯಾತೀತವಾದವೇ?

ಹೀಗೆ ನೋಡಿದರೆ ಜಾತ್ಯಾತೀತರು ಎಂದು ಎದೆ ಉಬ್ಬಿಸುವವರ ಇತಿಹಾಸವೇ ಕೋಮುವಾದಿತನದ್ದಾಗಿದೆ. ನಾವು ಅದರಲ್ಲಿಯೂ ಮುಖ್ಯವಾಗಿ ದಲಿತರು ಮತ್ತು ಮುಸಲ್ಮಾನರು ಈ ಪಕ್ಷಗಳು ಹೇಳುವ ಜಾತ್ಯತೀತತೆ ಕೋಮುವಾದ ಎಂದು ವಿಭಜಿಸುವ ನಡೆಯೇ ದಿಕ್ಕುತಪ್ಪಿಸುವ ತಂತ್ರ ಎಂದು ಅರಿಯಲೇ ಇಲ್ಲ. ಹೀಗೆ ಮಾಡುವ ಮೂಲಕ ಕಾಂಗ್ರೆಸಿಗೆ ದಲಿತ ಮುಸಲ್ಮಾನ ಮತಗಳು, ಬಿಜೆಪಿಗೆ ಹಿಂದೂಗಳ ಮತಗಳು ಗಟ್ಟಿ ಮಾಡಿಕೊಳ್ಳುವ ತಂತ್ರವಲ್ಲದೇ ಮತ್ತೇನಿಲ್ಲ.

ಜಾತ್ಯಾತೀತತೆ ವ್ಯಕ್ತಿಗತವೇ ಹೊರತು ರಾಜಕೀಯ ವಿಷಯವಲ್ಲ:

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಬಲಿಷ್ಠವಾಗಿದ್ದ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಲು ರಾಜಕೀಯ ವೈರಿಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್ – ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತು. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಕ್ಕಿಂತಲೂ ಪ್ರಬಲವಾದ ಇನ್ನೊಂದು ಪಕ್ಷ ಬೆಳೆದರೆ ಅಲ್ಲಿಯೂ ಕಾಂಗ್ರೆಸ್- ಬಿಜೆಪಿ ಒಂದಾಗುವುದರಲ್ಲಿ ಅನುಮಾನವೇ ಇಲ್ಲ.
ಸಮಯ ಸಂಧರ್ಭಕ್ಕೆ ತಕ್ಕಂತೆ ಈ ಜಾತ್ಯಾತೀತ ಮುಸುಗಿನ ಪಕ್ಷಗಳು ಕೋಮುವಾದಿಯಾಗಿ ವರ್ತಿಸುತ್ತಾರೆ , ಕೋಮುವಾದಿಯೂ ಜಾತ್ಯಾತೀತನಂತೆ ವರ್ತಿಸುತ್ತವೆ. ಹಾಗಾಗಿ ದಲಿತರು ಮತ್ತು ಮುಸಲ್ಮಾನರು  ಹೊಂದಾಣಿಕೆಗಳಾದಾಗ ಅದನ್ನು ಜಾತ್ಯಾತೀತ ಮತ್ತು ಕೋಮುವಾದದ ಪರಿದಿಯಲ್ಲಿ ನೋಡುವುದೇ ತಪ್ಪು.  ಹೊಂದಾಣಿಕೆಗಳು ಅಧಿಕಾರ ರಾಜಕಾರಣದಲ್ಲಿ ಅನಿವಾರ್ಯ ಮತ್ತು ಮುಂದೆಯೂ ನಡೆಯುತ್ತದೆ ಎಂಬ ಸತ್ಯವನ್ನು ಅರಿಯಬೇಕು.‌ ಇದನ್ನು ಅರಿಯದೆ ನಾವು ಒಬ್ಬ ವ್ಯಕ್ತಿಯನ್ನು ಅಥವಾ ಹೊಂದಾಣಿಕೆಯನ್ನು ನಿಂದಿಸುವುದು ಮೂರ್ಖತನವಾಗುತ್ತದೆ ಅಷ್ಟೆ.

ಈ ಎಲ್ಲಾ ವಿಷಯಗಳನ್ನು ಹೇಳುತ್ತಿರುವುದು ಯಾರನ್ನೂ ಸಮರ್ಥಿಸಲೂ ಅಲ್ಲ, ತೆಗಳಲೂ ಅಲ್ಲ. ಏಕೆಂದರೆ ದಲಿತರು, ಮುಸಲ್ಮಾನರು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇದನ್ನೇ‌. ರಾಜಕೀಯ ಪಕ್ಷಗಳಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇರುವುದಿಲ್ಲ. ರಾಜಕೀಯ ನಡೆಗಳಲ್ಲಿ ಪವಿತ್ರ, ಅಪವಿತ್ರ ಹೊಂದಾಣಿಕೆ ಎಂಬ ಪೂರ್ವಗ್ರಹವನ್ನು ಬಿಡಬೇಕಿದೆ. ಏಕೆಂದರೆ ರಾಜಕೀಯ ನಡೆಯುತ್ತಿರುವುದು, ಮುಂದೆ ನಡೆಯುವುದು ಕೂಡಾ ಇದೇ ರೀತಿಯೇ. ಇದು ಅನಿವಾರ್ಯ ಮತ್ತು ಅಗತ್ಯವೂ ಕೂಡಾ. ಆಗ ಮಾತ್ರ ವಂಚಿತ ಸಮುದಾಯಗಳ ರಾಜಕಾರಣವೂ ಅವಕಾಶಗಳನ್ನು ಸೃಷ್ಟಿಸುತ್ತದೆ.
ಮುಖ್ಯವಾಗಿ ಇಂದು ಅಧಿಕಾರ ವಂಚಿತರಾದ ದಲಿತರು ಈ ಅಧಿಕಾರ ರಾಜಕಾರಣ ಅರಿತು ರಾಜಕೀಯ ಮಾಡದಿದ್ದರೆ ನಮಗೆ ಭವಿಷ್ಯವೂ ಇರುವುದಿಲ್ಲ. ಸಿದ್ದಾಂತ ನಮ್ಮ ಅಂತಿಮ ಗುರಿಯಾಗುತ್ತದೆಯೇ ಹೊರೆತೂ ರಾಜಕಾರಣ ಮಾಡುವ ವಿಧಾನದಲ್ಲಿ ಸಿದ್ದಾಂತ ಹುಡುಕಿದರೆ ನಾವು ಶಾಶ್ವತವಾಗಿ ಅಧಿಕಾರಹೀನರಾಗಿ ಉಳಿಯಬೇಕಾಗುತ್ತದೆ.

ಜನಾ ನಾಗಪ್ಪ. ಚಿಂತಾಮಣಿ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]