
ಒಂದು ಜವಾಬ್ದಾರಿಯುತ ಸರ್ಕಾರವು ರೈತರ ಮೇಲಿನ ಪ್ರಕರಣಗಳನ್ನು, ಬಡಪಾಯಿ ಕಾರ್ಮಿಕರ ಮೇಲಿನ ಪ್ರಕರಣಗಳನ್ನು, ಅಮಾಯಕರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆದರೆ, ಅದಕ್ಕೊಂದು ಅರ್ಥ ಇದೆ. ಆದರೆ, ಪುಂಡಾಟಿಕೆ ಮಾಡಿ ಕೇಸ್ ಹಾಕಿಸಿಕೊಂಡವರ ಪ್ರಕರಣಗಳನ್ನು ವಾಪಸ್ ಪಡೆದು, ನ್ಯಾಯದೇವತೆಯ ಕಣ್ಣಿಗೆ ಮಣ್ಣೆರೆಚಲು ಪ್ರಯತ್ನಿಸುತ್ತಿದೆ ಎನ್ನುವ ಆಕ್ರೋಶ ಇದೀಗ ರಾಜ್ಯಾದ್ಯಂತ ಕೇಳಿ ಬಂದಿದೆ.
ಪೊಲೀಸರನ್ನು ಕ್ಯಾರೆ ಅನ್ನದೇ ಬ್ಯಾರಿಕೇಡ್ ಗಳ ಮೇಲೆಯೇ ಕಾರು ಹರಿಸಿ ಪುಂಡಾಟ ತೋರಿಸಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಒಂದೆಡೆ ಸಂಸದರು ಪೊಲೀಸರನ್ನು ಲೆಕ್ಕಿಸದೇ, ಅಥವಾ ಅವರ ಯೂನಿಫಾರ್ಮ್ ನ್ನು ಗೌರವಿಸದೇ ನಡೆದುಕೊಂಡಿದ್ದಾರೆ. ಇವರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯುವುದೇ ಆಗಿದ್ದಲ್ಲಿ. ಕೆ.ಜೆ. ಹಳ್ಳಿ ಹಾಗೂ ಡಿ.ಜಿ. ಹಳ್ಳಿ ಗಲಾಟೆಯಲ್ಲಿ ಬಂಧಿತರಾಗಿರುವವರ ಕೇಸ್ ಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಜನರು ಸರ್ಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಂಬಣೆ ಮಾಡುತ್ತಿದ್ದಾರೆ.
ವಿವಾದಿತ ಶಾಸಕ ರೇಣುಕಾಚಾರ್ಯ ಅವರ ಬೆಂಬಲಿಗರು ವಿಜಯೋತ್ಸವ ಸಂದರ್ಭದಲ್ಲಿ ಇಬ್ಬರು ಅಮಾಯಕರಿಗೆ ಇರಿದು ಗಾಯಗೊಳಿಸಿದ್ದಾರೆ. ಇರಿಯುವುದು ಕೊಲೆ ಮಾಡುವ ಉದ್ದೇಶದಿಂದಲೇ ಎನ್ನುವುದು ಎಲ್ಲರಿಗೂ ತಿಳಿದಿರುವಂತಹದ್ದೇ, ಅಂತಹದ್ದರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಇಂತಹವರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆಯುವ ಮೂಲಕ ರಾಜ್ಯದಲ್ಲಿ ಅಪರಾಧಿ ಪ್ರಕರಣಗಳಿಗೆ ಉತ್ತೇಜನ ನೀಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.
ಪೊಲೀಸರು ಕೇಸು ದಾಖಲಿಸುವುದು. ಯಡಿಯೂರಪ್ಪನವರು ಸಂಪುಟದಲ್ಲಿ ಪ್ರಕರಣಗಳನ್ನು ವಾಪಸ್ ಪಡೆಯುವುದು. ಇವೆಲ್ಲ ನಾಟಕಗಳು ಯಾಕೆ? ಎಲ್ಲ, ಕೈದಿಗಳು, ಆರೋಪಿಗಳಿಗೂ ಸಮಾನತೆ ನೀಡಿ, ಎಲ್ಲರನ್ನು ಕೇಸುಗಳಿಂದ ಮುಕ್ತಿ ಕೊಡುವುದು ಉತ್ತಮವಲ್ಲವೇ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.