Monday, July 26 , 2021
ಮುಂದಿನ ಪ್ರಧಾನಿ ಮಾಯಾವತಿ…! ನಿಜನಾ? ಕರ್ನಾಟಕದಲ್ಲಿ ಗೆದ್ದವರು ಸಚಿವರಾಗುತ್ತಾರಾ?

 ರಂಜಿತ್ ಕುಮಾರ್, ಮಂಗಳೂರು

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಗಳು ವಿವಿಧ ಲೆಕ್ಕಾಚಾರಗಳನ್ನಾಧರಿಸಿ ಸಿದ್ಧತೆಗಳು ಆರಂಭ ಮಾಡಿವೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಮುಂದಿನ ಪ್ರಧಾನಿ ಯಾರಾಗಬಹುದು? ಎಂಬ ಚರ್ಚೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಅದರಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಕುರಿತ ವಿಶ್ಲೇಷಣೆ ನಿಜಕ್ಕೂ ಕುತೂಹಲ ಮೂಡಿಸಿದೆ. ಮುಂದಿನ ಪ್ರಧಾನಿ ಮಾಯಾವತಿ ಎಂಬ ಹ್ಯಾಶ್ ಟ್ಯಾಗ್ ಜೊತೆ ಬಿಎಸ್ ಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರ ಅಭಿಮಾನದ ಮಾತುಗಳು, ಅದಕ್ಕೇನೂ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿಕೊಳ್ಳುವಂತಿಲ್ಲ. ಯಾಕೆಂದರೆ, ಈ ಬಾರಿ ಬಿಎಸ್ ಪಿ ಕಾರ್ಯಕರ್ತರ ಆಶಯ ನಿಜವಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಅಧಿಕ ಸೀಟುಗಳನ್ನು ಗೆದ್ದಿದ್ದ ಎನ್ ಡಿ ಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಈ ಬಾರಿ ಪ್ರಧಾನಿಯಾಗಲ್ಲ. ಒಂದೂ ಸೀಟು ಗೆಲ್ಲದ ಮಾಯಾವತಿ ಪ್ರಧಾನಿ ಆಗ್ತಾರೆ ಎಂದರೆ ಹಾಸ್ಯಾಸ್ಪದ ಎನಿಸುವುದಿಲ್ಲವೇ? ಹೌದು, ಮೇಲ್ನೋಟಕ್ಕೆ ಹಾಗೆ ಅನಿಸುತ್ತಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಮತ್ತು ವಾಸ್ತವಾಂಶಗಳನ್ನು ಗಮನಿಸಿದಾಗ ನಿಮಗೆ ಈ ಲೆಕ್ಕಾಚಾರ ಮನದಟ್ಟಾಗುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ 40ಕ್ಕೂ ಅಧಿಕ ದೊಡ್ಡ ಹಾಗೂ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಎನ್ ಡಿ ಎ ಮೈತ್ರಿಕೂಟ ಇಷ್ಟೊಂದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಈ ಮೈತ್ರಿಕೂಟದಿಂದ ಹಲವು ಪ್ರಮುಖ ಪಕ್ಷಗಳು ಈಗಾಗಲೇ ಹೊರಬಂದಿವೆ. ಇದೇ ವೇಳೆ, ಕಳೆದ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಮಾಯಾವತಿ ನೇತೃತ್ವದ ಬಿಎಸ್ ಪಿ ಕೂಡ ಈ ಬಾರಿ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿಕೂಟ ರಚಿಸಿಕೊಂಡು ಚುನಾವಣೆ ಎದುರಿಸುತ್ತಿದೆ. ಅದರಲ್ಲೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದ ಉತ್ತರ ಪ್ರದೇಶದಲ್ಲಿ ಈ ಬಾರಿ ಎಸ್ ಪಿ – ಬಿಎಸ್ ಪಿ ಮೈತ್ರಿಯಿಂದ ಪ್ರಬಲ ಪೈಪೋಟಿ ಎದುರಾಗಿದೆ. ಕಳೆದ ಬಾರಿ ಎಸ್ ಪಿ – ಬಿಎಸ್ಪಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದುದರಿಂದ ಮತ್ತು ಎಸ್ ಪಿ – ಕಾಂಗ್ರೆಸ್ ಮೈತ್ರಿಯಾಗಿದ್ದುದರಿಂದ ಮುಸ್ಲಿಮ್ ಮತಗಳು ವಿಭಜನೆಯಾಗಿದ್ದವು. ಒಂದಷ್ಟು ಮತಗಳು ಬಿಎಸ್ ಪಿ ಮತ್ತು ಇನ್ನೊಂದಷ್ಟು ಮತಗಳು ಕಾಂಗ್ರೆಸ್ – ಎಸ್ ಪಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಹಂಚಿ ಹೋಗಿದ್ದವು. ಈ ನಡುವೆ 2007-12ರ ನಡುವೆ ಬಿಎಸ್ ಪಿ ಪೂರ್ಣ ಪ್ರಮಾಣದ ಅಧಿಕಾರದಲ್ಲಿದ್ದ ಕಾರಣ, ಅದು ಹೆಚ್ಚಿನ ಗಮನವನ್ನು ಆಡಳಿತದ ಕಡೆ ನೀಡಿತ್ತು. ಪಕ್ಷ ಸಂಘಟನೆ ಕಡೆ ಕಡಿಮೆ ಆದ್ಯತೆ ನೀಡಿತ್ತು. ಇದರಿಂದ ಹೊಸ ತಲೆಮಾರಿನ ಯುವ ಮತದಾರರನ್ನು ಸೆಳೆಯಲು ಕಷ್ಟವಾಗಿತ್ತು. ಇದನ್ನು ಬಿಜೆಪಿ ಸದುಪಯೋಗ ಪಡಿಸಿಕೊಂಡು ಯುವ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿಯಾಗಿರುವುದರಿಂದ ಮುಸ್ಲಿಂ ಮತಗಳ ವಿಭಜನೆಯಾಗುವ ಸಾಧ್ಯತೆಯಿಲ್ಲ. ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದರೂ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಾತ್ರ ನಗಣ್ಯವಾಗಿರುವುದರಿಂದ ಗೆಲ್ಲುವ ಪಕ್ಷಗಳಾದ ಬಿಎಸ್ಪಿ-ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಗಳತ್ತ ಮುಸ್ಲಿಮರ ಮತಗಳು ಹರಿದುಬರಲಿವೆ. ಇಲ್ಲವಾದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದಾದ ಅಪಾಯವನ್ನು ಗಮನಿಸಿ ಮುಸ್ಲಿಮರು ಬಿಎಸ್ಪಿ-ಎಸ್ಪಿ ಮೈತ್ರಿಕೂಟದ ಜೊತೆ ಗಟ್ಟಿಯಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ.

ಇನ್ನೊಂದೆಡೆ, ಈ ಬಾರಿ ಬಿಎಸ್ಪಿಗೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಅವಕಾಶ ಸಿಕ್ಕಿದ್ದು, ಹೊಸ ತಲೆಮಾರಿನ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದೆ. ಈಗಾಗಲೇ ಪಕ್ಷದಲ್ಲಿ ತಳಮಟ್ಟದಿಂದ ಹಿಡಿದು ಮೇಲ್ಮಟ್ಟದ ವರೆಗೂ ಶೇ.50ರಷ್ಟು ನಾಯಕತ್ವವನ್ನು ಯುವ ಸಮುದಾಯಕ್ಕೆ ನೀಡಲಾಗಿದೆ. ಅದಕ್ಕೆ ಉದಾಹರಣೆ, ಕರ್ನಾಟಕದ ರಾಜ್ಯಾಧ್ಯಕ್ಷ ಸ್ಥಾನವನ್ನೇ ಯುವ ನಾಯಕ ಪ್ರೊ. ಹರಿರಾಮ್ ಅವರಿಗೆ ನೀಡಲಾಗಿದೆ. ಇದೇ ರೀತಿ ಉತ್ತರ ಪ್ರದೇಶದಲ್ಲೂ ಪಕ್ಷದ ಪ್ರಮುಖ ಹಂತದ ನಾಯಕತ್ವ ಸ್ಥಾನಗಳಲ್ಲಿ ಯುವಕರನ್ನು ತುಂಬಲಾಗಿದೆ. ಹೀಗಾಗಿ, ಯುವ ಮತದಾರರೂ ಈ ಬಾರಿ ಬಿಎಸ್ಪಿ-ಎಸ್ಪಿ ಅಭ್ಯರ್ಥಿಗಳ ಕೈ ಹಿಡಿಯಲಿದ್ದಾರೆ. ಇನ್ನೊಂದೆಡೆ, ಎಸ್ಪಿ ನಾಯಕ ಅಖಿಲೇಶ್ ಯಾದವ್ ಯುವಕನಾಗಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ಇದು ಉತ್ತರ ಪ್ರದೇಶದಲ್ಲಿ ಎಸ್ ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ 70ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಟ್ಟರೆ ಅಚ್ಚರಿ ಏನಿಲ್ಲ. ಈ ನಡುವೆ ಮಾಧ್ಯಮ ಸಮೀಕ್ಷೆಗಳೇ ಬಿಎಸ್ಪಿ-ಎಸ್ಪಿ ಮೈತ್ರಿಕೂಟ 50-60 ಸ್ಥಾನಗಳನ್ನು ಗೆಲ್ಲುವ ಕುರಿತು ಮಾತನಾಡಿವೆ. ಇನ್ನೊಂದೆಡೆ, ಇತ್ತೀಚೆಗೆ ಉತ್ತರ ಪ್ರದೇಶಗಳಲ್ಲಿ ನಡೆದಿದ್ದ ಉಪ ಚುನಾವಣೆಗಳಲ್ಲಿ ಬಿಎಸ್ಪಿ ಬೆಂಬಲದೊಂದಿಗೆ ಎಸ್ ಪಿ ಅಭ್ಯರ್ಥಿಗಳು ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇನ್ನೊಂದೆಡೆ, ಇತ್ತೀಚೆಗೆ ನಡೆದ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಹಿನ್ನಡೆಯತ್ತ ಸಾಗಿದೆ. ಹೀಗಾಗಿ ಒಂದೊಂದೆ ಪಕ್ಷಗಳು ಈ ಮೈತ್ರಿಕೂಟದಿಂದ ಕಳಚಿಕೊಳ್ಳಲು ಆರಂಭಿಸಿವೆ. ಅಲ್ಲದೆ, ಮಾಧ್ಯಮ ಸಮೀಕ್ಷೆಗಳಲ್ಲೂ ಈ ಬಾರಿ ಬಿಜೆಪಿ 240ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲದು ಎಂದು ಹೇಳಿವೆ. ಕಾಂಗ್ರೆಸ್ 140ರ ಗಡಿ ದಾಟದು ಎಂದಿವೆ.

ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಲು 272 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಗೆ ಸರ್ಕಾರ ನಡೆಸುವುದು ಅಸಾಧ್ಯವಾಗಿದೆ. ಇಂತಹ ಸನ್ನಿವೇಶ ಸೃಷ್ಟಿಯಾದಾಗ, ದೇಶದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಸಾಮರ್ಥ್ಯ ಇರುವುದು ಬಿಎಸ್ಪಿ-ಎಸ್ಪಿ ಮೈತ್ರಿಕೂಟಕ್ಕೆ ಮಾತ್ರ. ಅಖಿಲೇಶ್ ಉತ್ತರ ಪ್ರದೇಶಕ್ಕೆ ಸಿಎಂ, ಮಾಯಾವತಿ ದೇಶಕ್ಕೆ ಪಿಎಂ ಎಂಬ ಘೋಷಣೆ ಈಗಾಗಲೇ ಉತ್ತರ ಪ್ರದೇಶದಲ್ಲಿ ಜೋರಾಗಿ ಕೇಳಿಬರುತ್ತಿದೆ. ಅಲ್ಲದೆ. ಬಿಎಸ್ಪಿ-ಎಸ್ಪಿ ಮೈತ್ರಿ ಉತ್ತರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ವಿಸ್ತರಿಸಲ್ಪಟ್ಟಿದೆ ಮತ್ತು ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರಾಖಂಡಗಳಲ್ಲಿ ಸ್ಥಳೀಯ ಪಕ್ಷಗಳೊಂದಿಗೂ ಹೊಂದಾಣಿಕೆ ನಡೆದಿದೆ. ಹೀಗಾಗಿ ಉತ್ತರ ಭಾರತದ ಇತರ ರಾಜ್ಯಗಳಿಂದಲೂ ಬಿಎಸ್ಪಿ ಒಂದಷ್ಟು ಸ್ಥಾನಗಳನ್ನು ಈ ಬಾರಿ ಗೆಲ್ಲಲಿದೆ.

ಇಂತಹ ಸಂದರ್ಭದಲ್ಲಿ ಇತರ ರಾಜ್ಯಗಳ ಪ್ರಮುಖ ನಾಯಕರುಗಳಲ್ಲಿ 30ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಾದ ಸಾಮರ್ಥ್ಯವಿರುವುದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಗೆ ಮಾತ್ರ. ಆದರೆ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೊಂದಿಗೆ ತೀವ್ರ ಸೆಣಸಾಟ ನಡೆಸುತ್ತಿರುವ ಮಮತಾ ಬ್ಯಾನರ್ಜಿ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಕಷ್ಟವಾಗಲಿದೆ. ತಮಿಳುನಾಡಿನಲ್ಲಿ ಈ ಬಾರಿ ಜಯಲಲಿತಾ ಇಲ್ಲದಿರುವುದರಿಂದ ಎಐಎಡಿಎಂಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಸಂಶಯ. ಹೀಗಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಲ್ಲದೆ, ಇಡೀ ದೇಶದಲ್ಲಿ ಮತಬ್ಯಾಂಕ್ ಹೊಂದಿರುವ, ಮೂರನೇ ಅತಿದೊಡ್ಡ ಮತ ಪ್ರಮಾಣ ಗಳಿಸಬಹುದಾದ ಸಾಮರ್ಥ್ಯ ಮಾಯಾವತಿ ಅವರಿಗೆ ಮಾತ್ರ ಇದೆ. ಅತಂತ್ರ ಲೋಕಸಭಾ ಸ್ಥಿತಿ ನಿರ್ಮಾಣವಾದಾಗ, ಬಹುತೇಕ ಎಲ್ಲ ಪಕ್ಷಗಳಿಗೂ ಮಾಯಾವತಿ ಬೆಂಬಲಿಸುವುದು ಅನಿವಾರ್ಯವಾಗಲಿದೆ. ಅಥವಾ ಮಾಯಾವತಿ ಬೆಂಬಲಿಸುವವರು ಪ್ರಧಾನಿಯಾಗಲಿದ್ದಾರೆ. ಒಟ್ಟಿನಲ್ಲಿ ಮಾಯಾವತಿ ಕಿಂಗ್ ಮೇಕರ್ ಅಥವಾ ಕಿಂಗ್ ಆಗುವುದು ಖಚಿತ.

ಕರ್ನಾಟಕದಲ್ಲಿ ಗೆದ್ದವರು ಸಚಿವರು ಖಚಿತ!

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ತನ್ನ ಖಾತೆ ತೆರೆದು, ಜನಪ್ರಿಯ ನಾಯಕ ಎನ್. ಮಹೇಶ್ ಶಾಸಕರಾಗಿರುವುದು, ಇಲ್ಲಿನ ಬಹುಜನ ಚಳವಳಿಗಾರರಿಗೆ ಹೆಚ್ಚಿನ ನೈತಿಕ ಸ್ಥೈರ್ಯ ತುಂಬಿದಂತಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಠ ಶೇ.10ರಷ್ಟು ಮತಗಳನ್ನು ಬಿಎಸ್ಪಿ ಬಾಚಿಕೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಸುಮಾರು ಐದು ಸೀಟುಗಳಲ್ಲಿ ಪ್ರಬಲ ಪೈಪೋಟಿ ನೀಡಲಿದ್ದು, ಗೆಲ್ಲುವಂತಹ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ. ಹೀಗಾಗಿ ಕರ್ನಾಟಕದಿಂದಲೂ ಲೋಕಸಭೆಗೆ ಬಿಎಸ್ಪಿ ಎಂಟ್ರಿ ಕೊಟ್ಟರೆ ಅಚ್ಚರಿಯಿಲ್ಲ. ಖ್ಯಾತ ನ್ಯಾಯವಾದಿ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರಂತಹ ಪ್ರತಿಷ್ಠಿತರ ಹೆಸರುಗಳು ಬಿಎಸ್ಪಿ ವಲಯದಿಂದ ಕೇಳಿಬರುತ್ತಿದೆ. ಮಾ.15ರ ಹೊತ್ತಿಗೆ ಇನ್ನಷ್ಟು ಪ್ರಬಲ ನಾಯಕರು ಬಿಎಸ್ಪಿ ಸೇರ್ಪಡೆಯಾಗಲಿದ್ದಾರೆ ಎಂಬ ಖಚಿತ ಮಾಹಿತಿಯಿದೆ. ಹೀಗಾಗಿ ಒಂದೇ ಒಂದು ಸೀಟು ಗೆದ್ದರೂ, ಕೇಂದ್ರದಲ್ಲಿ ಮಾಯಾವತಿ ನೇತೃತ್ವದ ಅಥವಾ ಅವರ ಬೆಂಬಲದ ಯಾವುದೇ ಸರ್ಕಾರ ರಚನೆಯಾದರೂ, ಸಚಿವ ಸ್ಥಾನ ಕಟ್ಟಿಟ್ಟಬುತ್ತಿ. ಹೀಗಾಗಿ ಪಕ್ಷದ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿ, ಗೆಲುವು ಸಾಧಿಸಲು ಶತಪ್ರಯತ್ನ ನಡೆಸಬಹುದು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]