Monday, July 26 , 2021
ಮೀಸಲಾತಿಯಿಲ್ಲದ ವ್ಯವಸ್ಥೆಯಲ್ಲಿನ ಮೀಸಲಾತಿಯನ್ನು ಎಲ್ಲಿಯವರೆಗೂ ಮುಂದುವರೆಸುತ್ತೀರಿ ಮೈ ಲಾರ್ಡ್? -ಪ್ರೊಫೆಸರ್ ಹರಿರಾಮ್

ಗಾಜಿನ ಮನೆಯಲ್ಲಿ ಕೂತು ಕಲ್ಲೊಡೆದರೆ ಏನಾಗುತ್ತದೆ ಎಂಬ ಅರಿವು ಇಲ್ಲದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ನ್ಯಾಯಾಲಯ ಮತ್ತು ನ್ಯಾಯಾಧೀಶರ ಮೇಲೆ ಗೌರವವನ್ನು ಇಟ್ಟುಕೊಂಡೆ ನಾನು ಇಲ್ಲಿ ಒಂದಿಷ್ಟು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೇನೆ. ಕಳೆದ ವಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು “ಎಷ್ಟು ತಲೆಮಾರಿನವರೆಗೆ ಮೀಸಲಾತಿ ಮುಂದುವರಿಸುತ್ತೀರಿ?” ಎಂದು ಕೇಳಿದ್ದಾರೆ. ಇಲ್ಲಿಯವರೆಗೂ ಈ  ರೀತಿಯ ಪ್ರೆಶ್ನೆಗಳನ್ನು ಮೀಸಲಾತಿಯ ಉದ್ದೇಶ ಹಾಗು ಸಂವಿಧಾನ ಅರಿವಿಲ್ಲದ ಜನ ಮಾತನಾಡುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ನನ್ನಂತಹ ಅನೇಕ ಜನ ಆ ರೀತಿ ಹೇಳಿಕೆಯನ್ನು ನೀಡುತ್ತಿದ್ದವರ ಬಗ್ಗೆ ಮರುಕ ಪಡುತ್ತಿದ್ದೆವು ಹಾಗು ಕೆಲವೊಮ್ಮೆ ಬೇಸರಪಟ್ಟುಕೊಂಡು ಸುಮ್ಮನಾಗುತ್ತಿದ್ದೆವು. ಆದರೆ ಈಗ ಹಾಗೆ ಮಾಡಿ ನಾವು ಸುಮ್ಮನಿರಲು ಆಗುವುದಿಲ್ಲ, ಏಕೆಂದರೆ ಈ ಹೇಳಿಕೆ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಕಾನೂನು ಹಾಗು ಸಂವಿಧಾನದ ಅರಿವಿದ್ದು ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರುವ ವ್ಯಕ್ತಿಗಳು!  ಅರಿವಿಲ್ಲದ ಜನರಿಗೆ ಅರಿವನ್ನು ಮೂಡಿಸಬೇಕಾದ ವ್ಯಕ್ತಿಗಳು ಮತ್ತಷ್ಟು ಗೊಂದಲ ಸೃಷ್ಟಿಸುವುದು ಎಷ್ಟರ ಮಟ್ಟಿಗೆ ಸರಿ? ಮೆರಿಟ್ ಮತ್ತು ಪಾರದರ್ಶಕತೆ ಎನ್ನುವುದು ಕೇವಲ ಶೋಷಿತ ಸಮುದಾಯಗಳ ಅವಕಾಶಗಳ ಪ್ರಶ್ನೆ ಬಂದಾಗ ಮಾತ್ರ ಉದ್ಬವಿಸುತ್ತವೆ. ಆದರೆ ಸಾವಿರಾರು ವರ್ಷಗಳಿಂದ ಯಾವುದೇ ಮೆರಿಟ್ ಮತ್ತು ಪಾರದರ್ಶಕತೆ ಇಲ್ಲದೆ ಈ ದೇಶದ ಎಲ್ಲಾ ಸಂಪತ್ತು ಮತ್ತು ಅವಕಾಶಗಳನ್ನು ಅನುಭವಿಸುತ್ತಾ ಬರುತ್ತಿರುವ ಸಮುದಾಯಗಳ ವಿಷಯದಲ್ಲಲ್ಲಾ!

ಜುಲೈ 2020 ರಲ್ಲಿ ರಾಷ್ಟ್ರೀಯ ವಕೀಲರ ಅಭಿಯಾನದ ಅಧ್ಯಕ್ಷರಾದ  ಶ್ರೀ ಮ್ಯಾಥೀವ್ಸ್ J ನೆಡುಮ್ಪುರ ಅವರು ಮಾನ್ಯ ಪ್ರಧಾನಿ ನರೇಂದ್ರ ಮೋದಿ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಶ್ರೀ S.A ಬೋಬ್ಡೆಯವರಿಗೆ ಹಾಗು ರಾಜಸ್ಥಾನದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗು ಆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಾಜಸ್ಥಾನದ ಉಚ್ಚ ನ್ಯಾಯಾಲಯಕ್ಕೆ  ಅಲ್ಕಾ ಭಟ್ನಾಗರ್ ರವರನ್ನು ನ್ಯಾಯಾಧೀಶರಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸುತ್ತಾ “ಆಕೆಯು ನ್ಯಾಯಾಧೀಶರಾಗಲು ಯೋಗ್ಯರಿಲ್ಲದಿದ್ದರೂ ಆಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೋರ್ವರ ಮಗನ ಅತ್ತೆ ಆಗಿರುವ ಕಾರಣಕ್ಕಾಗಿ ಆಕೆಯನ್ನು ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿದೆ” ಎಂದು ಆರೋಪಿಸುತ್ತಾರೆ.
ಸುಮಾರು 34 ವರ್ಷಗಳ ಅನುಭವ ಉಳ್ಳ ಅಲಹಾಬಾದ್ ನ ನ್ಯಾಯಮೂರ್ತಿಗಳಾದ ಜಸ್ಟೀಸ್ ರಂಗನಾಥ್ ಪಾಂಡೆಯವರು 1.07.2019 ರಂದು  ನ್ಯಾಯಾಧೀಶರ ಆಯ್ಕೆಯ ಕುರಿತು ಹೀಗೆ ಬರೆಯುತ್ತಾರೆ “ಪ್ರಸ್ತುತ ಕೊಲೇಜಿಯಮ್ ವ್ಯವಸ್ಥೆಯಲ್ಲಿ ನ್ಯಾಯಾಧೀಶರ ಆಯ್ಕೆಯ ಪ್ರಕ್ರಿಯೆಯು ಸ್ವಜನ ಪಕ್ಷಪಾತ, ಪಕ್ಷಪಾತ ಮತ್ತು ಜಾತೀಯತೆಯಿಂದ ಕೂಡಿದೆ ಮತ್ತು ನ್ಯಾಯಾಂಗ ಅಧಿಕಾರಿಯಾಗಿ ನನ್ನ 34 ವರ್ಷಗಳ ಅನುಭವದಲ್ಲಿ  ಅಲ್ಪ ಕಾನೂನಿನ ಜ್ಞಾನ ಅಥವಾ ಕಾನೂನಿನ ಜ್ಞಾನವೇ ಇಲ್ಲದ ವ್ಯಕ್ತಿಗಳನ್ನು ನ್ಯಾಯಾಧೀಶರಾಗಿ ಆಯ್ಕೆ ಮಾಡಿರುವುದನ್ನು ನೋಡಿದ್ದೇನೆ” ಎಂದು ಅಭಿಪ್ರಾಯ ಪಡುತ್ತಾರೆ. ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿದರೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಕೊಲೆಜಿಯೆಮ್ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಂದರೆ ಅವರು ಯಾವುದೇ ಪರೀಕ್ಷೆ ಬರೆಯದೆ ಮೇಲೆ ಹೇಳಲಾಗಿರುವ ರೀತಿಯಲ್ಲಿಯೇ ಬಹುತೇಕ ನ್ಯಾಯಾಧೀಶರನ್ನು ನೇಮಕ ಮಾಡಲಾಗುತ್ತದೆ.

2015 ರಲ್ಲಿ ವಕೀಲರಾದ  ಶ್ರೀ ಮ್ಯಾಥೀವ್ಸ್ J ನೆಡುಮ್ಪುರ ರವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಪಡೆದಿರುವ ಮಾಹಿತಿಯ ಪ್ರಕಾರ ಉಚ್ಚ ನ್ಯಾಯಾಲಯಗಳಲ್ಲಿ ಶೇಕಡಾ 50% ಹಾಗು ಸರ್ವೋಚ್ಚ ನ್ಯಾಯಾಲಯದಲ್ಲಿ ಶೇಕಡಾ 33% ನ್ಯಾಯಾಧೀಶರು ಅಧಿಕಾರದಲ್ಲಿರುವ ಅಥವಾ ಇದ್ದಿರುವ ನ್ಯಾಯಾಧೀಶರ ಸಂಬಂಧಿಕರಾಗಿದ್ದಾರೆ ಎಂದು ದೃಢಪಡಿಸಿದೆ. ಹೀಗೆ ಯಾವುದೇ ಮೆರಿಟ್ ಇಲ್ಲದೆ ಯಾವುದೇ ಪರೀಕ್ಷೆಯನ್ನು ಎದುರಿಸದೆ ಜಾತಿ ಮತ್ತು ಸ್ವಜನ ಪಕ್ಷಪಾತದ ಕೃಪೆಯಿಂದ ಆಯ್ಕೆಯಾಗಿ ಸಂವಿಧಾನದ ಆಶಯಗಳಿಗೆ ಬೆಂಕಿಯಿಡುತ್ತಿರುವ ವ್ಯವಸ್ಥೆಯ ಬಗ್ಗೆ ಚಕಾರವೆತ್ತದೆ, ಸಾವಿರಾರು ವರ್ಷಗಳಿಂದ ಅವಕಾಶಗಳಿಂದ ವಂಚಿತರಾಗಿ ಶಿಕ್ಷಣ, ಉದ್ಯೋಗ ಮತ್ತು ಅಧಿಕಾರದಿಂದ ವಂಚಿತರಾದ ಸಮುದಾಯದ ವ್ಯಕ್ತಿಗಳು ಮೆರಿಟ್ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ತಮ್ಮ ಪ್ರಾತಿನಿಧ್ಯವನ್ನು  ಗಳಿಸಿದವರ ಬಗ್ಗೆ ಈ ರೀತಿಯ ಹೇಳಿಕೆಗಳು ಎಷ್ಟರ ಮಟ್ಟಿಗೆ ಸರಿ ? ಜೊತೆಗೆ ಮೀಸಲಾತಿಯ ಅನುಷ್ಠಾನದ ವಾಸ್ತವ ಸ್ಥಿತಿಯ ಬಗ್ಗೆ ಎಲ್ಲರಿಗಿಂತ ಹೆಚ್ಚು ಅರಿವಿರುವ ವ್ಯಕ್ತಿಗಳು ಏಕೆ ಮೀಸಲಾತಿಯು ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲಾ? ಹಾಗು ಈ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕ ಅಭಿವೃದ್ಧಿಯಾಗಿಲ್ಲಾ? ಇನ್ನೂ ಈ ಸಮುದಾಯಗಳು ಮೀಸಲಾತಿಯ ಮೇಲೆ ಏಕೆ ಅವಲಂಬಿಸಿದ್ದಾರೆ? ಎಂದು ಸರ್ಕಾರಗಳನ್ನು  ಪ್ರಶ್ನಿಸುವುದನ್ನು ಬಿಟ್ಟು  ಮೀಸಲಾತಿಯನ್ನು ಇನ್ನೂ ಎಷ್ಟು ವರ್ಷ ಮುಂದುವರೆಸುತ್ತೀರಿ ಎಂಬ ಅಭಿಪ್ರಾಯ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ?

ನ್ಯಾಯಾಧೀಶರ ನೇಮಕಾತಿಯಲ್ಲಿ ಬದಲಾವಣೆಯನ್ನು ಬಯಸುವ National Judicial Appointments Commission (NJAC) ಅನ್ನು ವಿರೋಧಿಸಿ ಯಥಾಸ್ಥಿತಿಯನ್ನು ಕಾಪಾಡಲು ಇಚ್ಚಿಸುವವರು , ಶೋಷಿತರ ವಿಷಯ ಬಂದಾಗ ಮಾತ್ರ ವ್ಯವಸ್ಥೆಯಲ್ಲಿ ಉಳುಕುಗಳನ್ನು ಹುಡುಕಿ ವ್ಯವಸ್ಥೆಯನ್ನೇ ಬದಲಾಯಿಸುವ ಮಾತುಗಳನ್ನಾಡುವುದು ಸೋಜಿಗವೆ ಸರಿ! ಸಾಂವಿಧಾನಿಕವಾಗಿ ಮೀಸಲಾತಿ ಬಂದು 71 ವರ್ಷಗಳು ಕಳೆದರೂ, ಕೇಂದ್ರ ಶಿಕ್ಷಣ ಮಂತ್ರಿಗಳಾದ ಶ್ರೀ ರಮೇಶ್ ಪೊಕ್ರಿಯಾಲ್ ನಿಶಾಂತ್ ರ ಪ್ರಕಾರ ಕೇಂದ್ರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ  ಹಿಂದುಳಿದ ಜಾತಿಗಳಿಗೆ ಸಿಗಬೇಕಿದ್ದ ಹುದ್ದೆಗಳ ಪೈಕಿ 50% ಗಿಂತ ಹೆಚ್ಚು ಭರ್ತಿಯಾಗದೆ ಉಳಿದಿವೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಿಗಬೇಕಿದ್ದ  40% ಗಿಂತ ಹೆಚ್ಚು ಹುದ್ದೆಗಳು ಇನ್ನೀ ಬಾಕಿ ಉಳಿದಿದ್ದಾವೆ! ಪ್ರತಿಷ್ಠಿತ IIM ಗಳಲ್ಲಿ SC ಮತ್ತು OBC ಗಳಿಗೆ ಮೀಸಲಿಟ್ಟ ಹುದ್ದೆಗಳ ಪೈಕಿ 60% ಹಾಗು 80% ST ಗಳ ಹುದ್ದೆಗಳು ಇನ್ನೂ ಸಹ ತುಂಬಿಲ್ಲಾ! ಜೊತೆಗೆ ಇಂದಿಗೂ ದೇಶದಲ್ಲಿ ಅಸ್ಪೃಶ್ಯತೆಯು ತಾಂಡವವಾಡುತ್ತಿದೆ, ಜಾತಿಯ ಕಾರಣಕ್ಕೆ ಲೆಕ್ಕವಿಲ್ಲದಷ್ಟು  ಕೊಲೆ, ಅತ್ಯಾಚಾರ ಮತ್ತು ಆಸ್ತಿಧ್ವಂಸದ  ಪ್ರಕರಣಗಳು ದಾಖಲಾಗುತ್ತಿವೆ. ರಾಷ್ಟ್ರಪತಿ, ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಸಹ ಅಸ್ಪೃಶ್ಯತೆಯನ್ನು ಅನುಭವಿಸಿರುವ ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಯಾವುದರ ಬಗ್ಗೆಯು ತಲೆ ಕೆಡಸಿಕೊಳ್ಳದೆ, ಇದ್ಯಾವುದರ ನಿಷೇಧದ ಬಗ್ಗೆಯೂ ಮಾತನಾಡದೆ, ಮೀಸಲಾತಿಯ ಅಂತ್ಯದ ಬಗ್ಗೆ ಮಾತನಾಡುವುದು ವಿಚಿತ್ರವೆನಿಸುತ್ತದೆ!

ಈ ದೇಶದಲ್ಲಿ ಇಂದಿಗೂ ಅನೇಕ ಅಮಾನವೀಯ ಹಾಗು ಅಸಂವಿಧಾನಿಕ ಕೃತ್ಯಗಳು ನಡೆಯುತ್ತಿರುವುದು ಜವಾಬ್ದಾರಿಯುತ ವ್ಯಕ್ತಿಗಳು ಹಾಗು ಸಂಸ್ಥೆಗಳು ಸಂವೇದನಾಶೀಲತೆಯನ್ನು ಕಳೆದು ಕೊಂಡಿರುವುದರಿಂದ! ಜಾತಿ ಮತ್ತು ಸ್ವಜನ ಹಿತಕ್ಕಿಂತ ದೇಶದ ಹಿತವು ಮುಖ್ಯವಾದಾಗ ಮಾತ್ರ ಎಲ್ಲರ ಹಿತದ ಬಗ್ಗೆ ಯೋಚಿಸಲು ಸಾಧ್ಯ ಹಾಗು ವ್ಯವಸ್ಥೆಯ ಪರಿವರ್ತನೆಯ ಅಭಿಪ್ರಾಯಗಳು ಮೂಡಲು ಸಾಧ್ಯ. ಇಲ್ಲವಾದರೆ ಯಥಾಸ್ಥಿತಿಯನ್ನು ಕಾಪಾಡುವಂತಹ ಮನಸ್ಥಿತಿ ಮತ್ತು ಪರಿಸ್ಥಿತಿಗಳು ಮಾತ್ರ ಸೃಷ್ಟಿಯಾಗುತ್ತವೆ. ಹಾಗಾಗಿ ಮೀಸಲಾತಿಯಿಲ್ಲದ  ವ್ಯವಸ್ಥೆಯಲ್ಲಿನ ಮೀಸಲಾತಿಯನ್ನು ಎಲ್ಲಿಯವರೆಗೂ ಮುಂದುವರಿಸುತ್ತೀರಿ?
ಉತ್ತರಿಸಿ ಮೈ ಲಾರ್ಡ್!
-ಪ್ರೊಫೆಸರ್ ಹರಿರಾಮ್.ಎ

ಇದನ್ನೂ ಓದಿ

ಜನ ಪ್ರತಿನಿಧಿಗಳಿಗೆ ನಮ್ಮ ಹಣವನ್ನು ಪೋಲು ಮಾಡುವ ಅಧಿಕಾರ ಕೊಟ್ಟವರು ಯಾರು? -ಪ್ರೊಫೆಸರ್ ಹರಿರಾಮ್.ಎ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]