Monday, July 26 , 2021
ಮಹಿಷ ದಸರದ ಬಗ್ಗೆ ಎನ್.ಮಹೇಶ್ ನಿಲುವೇನು?

ಮೈಸೂರು(30.09.2019): ಸಂಸದ ಪ್ರತಾಪ್ ಸಿಂಹ ಅವರು ಮಹಿಷ ದಸರಕ್ಕೆ ಅಡ್ಡಿಯುಂಟು ಮಾಡಿರುವ ವಿಚಾರವಾಗಿ ಮೈಸೂರಿನ ಸಾಂಸ್ಕೃತಿಕ ಪರಿಸರವನ್ನು ಎರಡು ದಶಕಗಳ ಕಾಲದಿಂದ‌ ತನ್ನದೇ ಆದ ರೀತಿಯಲ್ಲಿ ವಿದ್ಯಾರ್ಥಿ ಚಳುವಳಿಯ ಮೂಲಕ ಪ್ರಭಾವಿಸಿಕೊಂಡು ಬಂದಿರುವ ಮಾಜಿ ಸಚಿವ, ಶಾಸಕ ಎನ್.ಮಹೇಶ್ ಅವರು ಪ್ರತಿಕ್ರಿಯಿಸಿದ್ದು, ಮೈಸೂರು ದಸರವನ್ನು ಆಚರಿಸಲು ಯಾರಿಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಮತ್ತು ಸ್ವಾತಂತ್ರ್ಯ ಮಹಿಷ ದಸರ ಆಚರಣೆ ಮಾಡುವವರಿಗೂ ಇದೆ. ಈ ಹಕ್ಕುಗಳಿಗೆ ಧಕ್ಕೆಯುಂಟು ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಿಷ ದಸರಕ್ಕೆ ಅಡ್ಡಿಯುಂಟು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ವಿವಿಧ ಭಾಗಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದು, ಈ ಸಂಬಂಧ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ರಾಷ್ಟ್ರಧ್ವನಿ ಜೊತೆ ಮಾತನಾಡಿದರು.

ಮಹಿಷಾ ದಸರ ಎಂಬ ಆಚರಣೆಯನ್ನು ಒಂದು ವರ್ಗದ ಜನರು ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈ ವರ್ಗದವರು ಎಲ್ಲೂ ಮೈಸೂರು ದಸರಾ ವಿರುದ್ಧವಾಗಿ ನಡೆದುಕೊಂಡಿಲ್ಲ. ಈ ದೇಶದ ಸಂವಿಧಾನ ಸಾಂಸ್ಕೃತಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿಯೊಬ್ಬರಿಗೂ ನೀಡಿದೆ. ಮಹಿಷ ದಸರಾ ಎನ್ನುವುದೂ ಸಾಂಸ್ಕೃತಿಕ ಸ್ವಾತಂತ್ರ್ಯಕ್ಕೊಳಪಟ್ಟಿದೆ. ಅದಕ್ಕೆ ಧಕ್ಕೆ ತರುವುದು ಅವರ ಹಕ್ಕನ್ನು ಉಲ್ಲಂಘಿಸಿದಂತೆ. ಮೈಸೂರು ದಸರದಲ್ಲಿ ಯಾರಿಗೆ ಚಾಮುಂಡೇಶ್ವರಿಯನ್ನು ಪೂಜೆ ಮಾಡಲು ಎಷ್ಟು ಹಕ್ಕು ಇದೆಯೋ, ಅಷ್ಟೇ ಹಕ್ಕು ಮಹಿಷಾಸುರನನ್ನು ಆರಾಧನೆ ಮಾಡುವವರಿಗೂ ಇದೆ. ಆ ಹಕ್ಕುಗಳಿಗೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ ಎಂದು ಅವರು ಹೇಳಿದರು.

ಸನ್ಮಾನ್ಯ ಪ್ರತಾಪ್ ಸಿಂಹ ಅವರು ಮೈಸೂರಿನಿಂದ ಎರಡನೇ ಬಾರಿಗೆ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ನಡೆದುಕೊಂಡ ರೀತಿ, ಅವರ ಸ್ಥಾನಕ್ಕೆ ಘನತೆ ತರುವಂತಹದ್ದಲ್ಲ. ಪೊಲೀಸ್ ವ್ಯವಸ್ಥೆಯನ್ನು ಹೀಗಳೆಯುವುದು ಪೊಲೀಸರ ಕರ್ತವ್ಯಕ್ಕೆ ಧಕ್ಕೆಯನ್ನುಂಟು ಮಾಡುವುದು ಇಡೀ ಪೊಲೀಸ್ ವ್ಯವಸ್ಥೆಯನ್ನೇ ಡೀಮಾರಲೈಸ್ ಮಾಡಿದಂತಾಗುತ್ತದೆ. ಅದನ್ನು ನಾನು ಒಪ್ಪುವುದಿಲ್ಲ, ಅದು ಸರಿಯಾದ ನಡೆಯಲ್ಲ. ಪ್ರತಾಪ್ ಸಿಂಹ ಅವರು, ಒಂದು ಶಿಸ್ತಿನ ಸಂಘಟನೆಯಿಂದ ಬೆಳೆದು ಬಂದವರು ಎಂದು ನಾನು ಭಾವಿಸುತ್ತೇನೆ. ಆ ಶಿಸ್ತು ಅವರ ನಡವಳಿಕೆಯಲ್ಲಿ ಕಾಣುತ್ತಿಲ್ಲ ಎಂದು ಅವರು ಹೇಳಿದರು.

ಮಹಿಷಾಸುರನನ್ನು ಆರಾಧನೆ ಮಾಡುವವರ ಬಗ್ಗೆ ಬಹಳ ನೆಗೆಟಿವ್ ಆಗಿ ಮಾತನಾಡುವುದು ಸರಿಯಲ್ಲ. ಮಹಿಷ ದಸರಾಕ್ಕೆ ಹಾಕಿದ್ದ ಸ್ಟೇಜ್ ಗೆ 15 ದಿನಗಳ ಹಿಂದೆಯೇ ಅನುಮತಿ ಪಡೆದುಕೊಂಡಿದ್ದರು. ಈ ಕಾರ್ಯಕ್ರಮ ಹಿಂದಿನಿಂದಲೂ ಅದು ನಡೆದುಕೊಂಡು ಬಂದಿದೆ. ಡಿಸಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದಾರೆ. ಆ ಅನುಮತಿಯನ್ನೇ ರದ್ದು ಮಾಡಿರುವುದು ಅಸಂವಿಧಾನಿಕ ಕ್ರಮವಾಗಿದೆ. ಈ ಘಟನೆಗಳು ನಡೆಯಬಾರದಾಗಿತ್ತು ಆದರೆ ನಡೆದಿದೆ. ಇದು ಮುಂದೆ ನಡೆಯಬಾರದು, ಇಂತಹ ಘಟನೆ ಸರಿಯಲ್ಲ. ನಾನು ಇದನ್ನು ಒಪ್ಪುವುದಿಲ್ಲ. ಇದರ ಬಗ್ಗೆ ನನಗೆ ವಿರೋಧವಿದೆ ಎಂದು ಅವರು ಹೇಳಿದರು.

ಇನ್ನು ಮೈಸೂರಿನ ಇತಿಹಾಸ ಗಮನಿಸುವುದಾದರೆ ಮೈಸೂರನ್ನು ಪ್ರಾಚೀನ ಭಾರತದಲ್ಲಿ ಮೂರು ಹೆಸರುಗಳಿಂದ ಕರೆದಿದ್ದಾರೆ. ಕೇರಳದಿಂದ ಹಿಡಿದು ಮೈಸೂರು, ಮಂಡ್ಯ, ಚಾಮರಾಜನಗರ ಒಳಗೊಂಡು ಕೊಯಮತ್ತೂರುವರೆಗೆ ಅಂದರೆ ಕಾವೇರಿ ಬೆಲ್ಟ್ ನ್ನು ‘ನಾಗಮಂಡಲ’ ಎಂದು ಕರೆಯುತ್ತಿದ್ದರು. ಆ ನಂತರ ಮಹಿಷಮಂಡಲ ಅಂತ ಕರೆದರು. ಮಹಿಷಾಸುರ ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದರಿಂದಾಗಿ ಇಲ್ಲಿಗೆ ಮಹಿಷಮಂಡಲ ಎಂದು ಹೆಸರು ಬಂತು. ಬೌದ್ಧ ಸಾಹಿತ್ಯದ ಐತಿಹಾಸಿಕ ದಾಖಲೆಗಳಾದ ದೀಪವಂಶ, ಮಹಾವಂಶಗಳಲ್ಲಿ ಮಹಿಷಮಂಡಲದ ಉಲ್ಲೇಖಗಳಿವೆ. ದೀಪವಂಶ (8.1,2) ರಲ್ಲಿ ಉಲ್ಲೇಖವಿರುವಂತೆ ಸಾಮ್ರಾಟ್ ಅಶೋಕ ಬುದ್ಧ ಧಮ್ಮ ಪ್ರಸಾರಕ್ಕಾಗಿ ‘ತೇರಾ ಮಹಾದೇವ’ ಎಂಬ ಬಿಕ್ಕುವನ್ನು ಮಹಿಷರತ್ತಕ್ಕೆ (ಮಹಿಷರಾಷ್ಟ್ರ) ಕಳುಹಿಸಿದ್ದ ಉಲ್ಲೇಖವಿದೆ. ಮಹಾವಂಶ (12.3,29) ರಲ್ಲಿ ಮಹಿಷರಾಷ್ಟ್ರವನ್ನು ‘ಮಹಿಷಮಂಡಲ’ ಎಂದೇ ಉಲ್ಲೇಖಿಸಲಾಗಿದೆ.‌ ಕಾಲಾನಂತರದಲ್ಲಿ ‘ಮಹಿಶೂರು’ ಆಗಿ ಮೈಸೂರು ಆಯಿತು. ಹಾಗಾಗಿ ಮೈಸೂರು ಪೂರ್ವದ ‘ಮಹಿಷ ಮಂಡಲ’ ಎನ್ನುವುದು ಐತಿಹಾಸಿಕ ದಾಖಲೆಗಳ ಪ್ರಕಾರ ಸತ್ಯ. ಇದು ಇತಿಹಾಸದಲ್ಲಿಯೇ ದಾಖಲಾಗಿದೆ ಎಂದು ಅವರು ತಿಳಿಸಿದರು.

ಪ್ರೊ.ತಾಳ್ತಜೆ ವಸಂತ್ ಕುಮಾರ್ ಅವರು “ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ” ಎನ್ನುವ ವಿಚಾರದಲ್ಲಿ ಸಂಶೋಧನಾ ಗ್ರಂಥ(ಪಿಎಚ್ ಡಿ) ಬರೆದಿದ್ದಾರೆ. ಈ ಗ್ರಂಥ ಈಗ ಬುದ್ಧಾಯಣ ಎನ್ನುವ ಹೆಸರಿನಲ್ಲಿ ಮುದ್ರಣವಾಗಿದೆ. ಈ ಪುಸ್ತಕದಲ್ಲಿ ಮಹಿಷ ಮಂಡಲ, ಮಹಿಷಾಸುರ ಈ ಭಾಗದಲ್ಲಿ ರಾಜನಾಗಿದ್ದ ಎನ್ನುವುದಕ್ಕೆಲ್ಲ ದಾಖಲೆಗಳು ಸಿಗುತ್ತಾ ಹೋಗುತ್ತದೆ. ಇದು ಕೇವಲ ಮೈಸೂರು ಮಾತ್ರವಲ್ಲ, ಕರ್ನಾಟಕದ ಯಾವ್ಯಾವ ಭಾಗದಲ್ಲೆಲ್ಲ ಬೌದ್ಧ ಸಂಸ್ಕೃತಿ ಇತ್ತೋ, ಅವೆಲ್ಲವನ್ನು ಈ ಪುಸ್ತಕದಲ್ಲಿ ದಾಖಲೆ ಸಹಿತವಾಗಿ ಪ್ರಕಟಿಸಲಾಗಿದೆ. ಈ ದಾಖಲೆಗಳನ್ನು ನೋಡಿದಾಗ ನಮಗೆ ಮಹಿಷಾಸುರನ ಇತಿಹಾಸ ಸಿಗುತ್ತದೆ ಎಂದು ಅವರು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತು ಹೇಳುತ್ತಾರೆ. “ ಪ್ರಾಚೀನ ಭಾರತದ ಇತಿಹಾಸ, ಇತಿಹಾಸವೇ ಅಲ್ಲ. ಹಾಗಂತ ಪ್ರಾಚೀನ ಭಾರತಕ್ಕೆ ಇತಿಹಾಸ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮನುವಾದಿ ಬರಹಗಾರರು ಪ್ರಾಚೀನ ಭಾರತದ ಇತಿಹಾಸವನ್ನು ಮಹಿಳೆಯರು ಮತ್ತು ಮಕ್ಕಳನ್ನು ರಂಜಿಸುವಂತಹ ಪುರಾಣ ಕಥೆಗಳನ್ನಾಗಿ ಮಾಡಿದ್ದಾರೆ. ಪುರಾಣವನ್ನು ಐತಿಹಾಸಿಕವಾಗಿ ಅಧ್ಯಯನ ಮಾಡಿದಾಗ ಈ ಸತ್ಯ ಘಟನೆಗಳು ನಮ್ಮ ಗಮನಕ್ಕೆ ಬರುತ್ತವೆ”(3 ನೇ ಸಂಪುಟ) ಎಂದು ಎನ್.ಮಹೇಶ್ ಹೇಳಿದರು.

ಮಹಾನವಮಿಯ ಆಚರಣೆ ಯಾರ್ಯಾರು ಹೇಗೆ ಮಾಡುತ್ತಾರೆ?

ಮಹಾನವಮಿಯನ್ನು ಗ್ರಾಮಾಂತರ ಪ್ರದೇಶದಲ್ಲಿರುವ ಎಲ್ಲ ಸಮುದಾಯಗಳು ಮಾರ್ಲಪಕ್ಷ, ಮಾರ್ಲಮಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಶಿಷ್ಟ ಭಾಷೆಯಲ್ಲಿ ಇದನ್ನು ಮಹಾನವಮಿ ಎಂದು ಕರೆಯುತ್ತಾರೆ. 9 ದಿನದಲ್ಲಿ 10 ಜನ ರಾಕ್ಷಸರನ್ನು ಕೊಂದ ದಿನ. ಈ ದಿನವನ್ನು ಯಾರ್ಯಾರು ಹೇಗೆ ಆಚರಿಸುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಳ್ಳಿಗಳಲ್ಲಿ ಒಕ್ಕಲಿಗರಿಂದ ಹಿಡಿದು, ದಲಿತರವರೆಗಿನ ಎಲ್ಲ ಸಮುದಾಯಗಳು ಅಂದರೆ, ಶೂದ್ರರು ಮತ್ತು ಅತೀ ಶೂದ್ರರು, ಈ ದಿನ ಸತ್ತವರಿಗೆ ಎಡೆ ಇಡುವ ಕಾರ್ಯಕ್ರಮವನ್ನು ಮಾಡುತ್ತಾರೆ. ಹಳ್ಳಿಯಲ್ಲಿ ರೂಢಿಯಲ್ಲಿರುವ ಭಾಷೆಯಲ್ಲಿ ಹೇಳಬೇಕಾದರೆ, ‘ಸತ್ಕೆಟ್ಟವರಿಗೆ ಎಡೆಯಿಡುವುದು’ (ಊಟ, ವಸ್ತ್ರ ಇಡುವುದು) ಅಂತ ಹೇಳಬಹುದು. ಒಂದು ಬಾರಿ ನಾನು ನನ್ನ ತಾಯಿಯ ಬಳಿಯಲ್ಲಿ ಈ ಆಚರಣೆಯ ಬಗ್ಗೆ ಪ್ರಶ್ನಿಸಿದೆ. ಮಾರ್ಲಮಿ ಹಬ್ಬದಲ್ಲಿ ಎಡೆ ಇಡುತ್ತೀರಲ್ಲ, ಏನದು? ಎಂದು ಕೇಳಿದೆ. “ಈ ಸತ್ಕೆಟ್ಟವರು ಇದ್ದಾರಲ್ಲಾ, ತಾತಾ, ಮುತ್ತಾತ ಅವರಿಗೆ ಎಡೆ ಇಡುವುದು” ಎಂದು ತಾಯಿ ಉತ್ತರಿಸಿದರು. ಹಾಗಾದರೆ ಇಡೀ ಊರಲ್ಲೇ ಈ ಆಚರಣೆ ಮಾಡುತ್ತಾರಲ್ಲಾ, ಹಾಗಿದ್ದರೆ ಎಲ್ಲರ ಮನೆಯ ಪೂರ್ವಜನರು ಒಂದೇ ದಿನ ಸತ್ತು ಹೋಗಿದ್ದಾರಾ? ಎಂದು ಕೇಳಿದೆ. “ಅಯ್ಯೋ ಅದೇನೋ ನನ್ಗೆ ಗೊತ್ತಿಲ್ಲಪ್ಪ ಮೊದಲಿಂದಲೂ ಹೀಗೆ ಆಚರಣೆ ಮಾಡಿಕೊಂಡು ಬರ್ತಿದ್ರು, ಈಗಲೂ ಮಾಡುತ್ತಿದ್ದೇವೆ” ಅಂತ ಅವರು ಹೇಳಿದರು. ಇದು ಎಷ್ಟು ಕಾಕತಾಳಿಯ ಎಂದರೆ, ಎಲ್ಲ ಸಮುದಾಯಗಳೂ ಹಳ್ಳಿಗಳಲ್ಲಿ ಸತ್ಕೆಟ್ಟವರಿಗೆ ಎಡೆ ಇಟ್ರೆ, ಅದು ಮಹಾನವಮಿಯ ಕಾಲದಲ್ಲಿ ಮಾತ್ರ. ಅಂದ್ರೆ, ಸತ್ಕೆಟ್ಟವರು ಯಾರೋ ನಮ್ಮ ತಾತ ಮುತ್ತಾತರು ಅಲ್ಲ. ಈ ಸಮಯದಲ್ಲಿ ಸತ್ತಿರುವ 10 ಜನ ಅಸುರರಿಗೆ ಎಡೆ ಇಡಲಾಗುತ್ತಿದೆ. ಅಂದರೆ ಮಹಾನವಮಿಯ ಸಂದರ್ಭದಲ್ಲಿ ಶೂದ್ರರು ಮತ್ತು ಅತೀ ಶೂದ್ರರು ಇದನ್ನು ಹಬ್ಬ ಎಂದು ಸಂಭ್ರಮಿಸುತ್ತಿಲ್ಲ. ಸತ್ತವರಿಗೆ ಎಡೆ ಇಡುವ ಮೂಲಕ ಶೋಕಾಚರಣೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಶೂದ್ರ, ಅತಿ ಶೂದ್ರರಲ್ಲದವರು ವಿಜಯೋತ್ಸವ ಮಹಾನವಮಿಯನ್ನು ಆಚರಿಸುತ್ತಾರೆ. ಒಂದು ಕಡೆ ಕೆಲವು ವರ್ಗಗಳು ಶೋಕಾಚರಣೆ ಮಾಡುತ್ತಿದ್ದರೆ ಅದೇ ಸಂದರ್ಭದಲ್ಲಿ ಮತ್ತೆ ಕೆಲವು ವರ್ಗಗಳು ವಿಜಯೋತ್ಸವ ಆಚರಣೆ ಮಾಡುತ್ತವೆ. ಇದೊಂಥರ ವೈರುಧ್ಯವನ್ನು ತೋರಿಸುತ್ತದೆ. ಇದರ‌ ಹಿನ್ನೆಲೆಯಲ್ಲಿ ಮಹಾನವಮಿ ಎಂಬುದು ಅಸುರರು ಮತ್ತು ಸುರರ ನಡುವೆ ನಡೆದ ಸಂಘರ್ಷದ ನಂತರ ರೂಢಿಗೆ ಬಂದಿರುವ ಆಚರಣೆಯಾಗಿದೆ ಎಂದು ಗ್ರಹಿಸಬಹುದು. ಮಹಾನವಮಿ ಈ ರೂಪದಲ್ಲಿ ಇಂದು ಇತಿಹಾಸ ಸಂಸ್ಕೃತಿ, ಧಾರ್ಮಿಕ ಪರಂಪರೆಯಾಗಿ ಉಳಿದುಕೊಂಡು ಬಂದಿದೆ. ಇದರ ಒಂದು ಭಾಗ ಮಹಿಷಾಸುರ ಎಂದು ಅವರು ವಿವರಿಸಿದರು.

ಸುರರು ಯಾರು? ಅಸುರರು ಯಾರು?

ಅಸುರರು ರಾಕ್ಷಸರು ಅಥವಾ ದಾನವರು. ಸುರರು ಎಂದರೆ ದೇವತೆಗಳು. ಪ್ರಾಚೀನ ಭಾರತದಲ್ಲಿ ಅಧಿಕಾರ ಮತ್ತು ಅಂತಸ್ತಿಗೋಸ್ಕರ ಸುರರು ಮತ್ತು ಅಸುರರ ನಡುವೆ ಸಾಕಷ್ಟು ಯುದ್ಧಗಳು ನಡೆದಿವೆ. ಮತ್ತು ಅಸುರರನ್ನು ಬಹಳ ಮೋಸದಿಂದ ಕೊಲ್ಲಲಾಗಿದೆ. ಇದಕ್ಕೆ ಬಹಳಷ್ಟು ದಾಖಲೆಗಳೂ ಇವೆ ಎಂದ ಎನ್.ಮಹೇಶ್ ಈ ಕೆಳಗಿನಂತೆ ವಿವರಿಸಿದರು.

ಯಾಕೆ ಸುರರು ಮತ್ತು ಅಸುರರ ನಡುವೆ ಯುದ್ಧಗಳು ನಡೆಯುತ್ತಿತ್ತು ಎಂದು ನೋಡಿದಾಗ, ಸುರರು ಮೂರು ಕಾರಣಗಳಿಗಾಗಿ ಅಸುರರನ್ನು ವಿರೋಧಿಸುತ್ತಿದ್ದರು.

ಅವುಗಳೆಂದರೆ,

1. ಅಸುರರು ಯಜ್ಞ, ಯಾಗಗಳನ್ನು ನಾಶ ಮಾಡುತ್ತಿದ್ದರು

2. ತಪಸ್ಸು ಮಾಡುತ್ತಿದ್ದರು.

3. ಇಂದ್ರನ ಆಸ್ಥಾನಕ್ಕೆ ಅವರು ಲಗ್ಗೆ ಇಡುತ್ತಿದ್ದರು.

ಈ ಮೂರೇ ಕಾರಣಗಳಿಗೆ ದೇವತೆಗಳು ಮತ್ತು ಅಸುರರಿಗೆ ಯುದ್ಧ ನಡೆಯುತ್ತಿದ್ದವು. ಉಳಿದ ಸ್ಟೋರಿಗಳೆಲ್ಲವೂ ಕಾಗಕ್ಕ, ಗುಬ್ಬಕ್ಕನ ಸ್ಟೋರಿ.

ಅಸುರರು ಯಜ್ಞ, ಯಾಗಗಳನ್ನು ಯಾಕೆ ನಾಶ ಮಾಡುತ್ತಿದ್ದರು?

ದೇವತೆಗಳು ಯಜ್ಞ, ಯಾಗಗಳಿಗೆ ಪ್ರಾಣಿ ಪಕ್ಷಿ, ಜೀವಿಗಳನ್ನು ಬಲಿ ಕೊಡುತ್ತಿದ್ದರು. ಅಸುರರು ರಾಜರಾಗಿದ್ದ ಕಾರಣದಿಂದ ಸಕಲಜೀವರಾಶಿಗಳನ್ನು ರಕ್ಷಣೆ ಮಾಡುತ್ತಿದ್ದ ಕಾರಣ, ಯಜ್ಞ ಯಾಗದ ಹೆಸರಿನಲ್ಲಿ ಪ್ರಾಣಿ ಪಕ್ಷಿ, ಜೀವಿಗಳನ್ನು ಬಲಿಕೊಡುವುದನ್ನು ತಡೆಯುವ ಉದ್ದೇಶದಿಂದ ಅಸುರರು ಯಜ್ಞ, ಯಾಗಗಳನ್ನು ನಾಶ ಮಾಡುತ್ತಿದ್ದರು. ಇದಕ್ಕೆ ಸಾಕಷ್ಟು ದಾಖಲೆಗಳಿವೆ.

ಅಸುರರು ತಪಸ್ಸು ಯಾಕೆ ಮಾಡುತ್ತಿದ್ದರು?

ಅಸುರರು ಅತೀಂದ್ರಿಯ ಜ್ಞಾನವನ್ನು ಪಡೆದುಕೊಳ್ಳಲು ಧ್ಯಾನ, ತಪಸ್ಸು ಮಾಡುತ್ತಿದ್ದರು. ಆ ತಪಸ್ಸಿನಿಂದ ಪ್ರಭಾವಶಾಲಿಯಾಗಿ ದೇವತೆಗಳಿಗೆ ಅಪಾಯ ತಂದೊಡ್ಡುವರೆಂಬ ಭಯದಿಂದ ಆ ತಪಸ್ಸನ್ನು ದೇವತೆಗಳು ಭಂಗಪಡಿಸುತ್ತಿದ್ದರು.

ಇಂದ್ರನ ಆಸ್ಥಾನಕ್ಕೆ ಯಾಕೆ ಲಗ್ಗೆ ಇಡುತ್ತಿದ್ದರು?

ಇಂದ್ರನ ಆಸ್ಥಾನ ಅಂದರೆ, ಡೆಲ್ಲಿ ಸಿಂಹಾಸನ ಅಂತನೇ ತಿಳಿದುಕೊಳ್ಳಿ. ಅಂದರೆ, ಅದು ಅಧಿಕಾರಕ್ಕೋಸ್ಕರ ನಡೆದಿರುವಂತಹದ್ದು. ಈ ಮೇಲಿನ ಮೂರೂ ಅಂಶಗಳಲ್ಲಿ ನಕಾರಾತ್ಮಕ ಅಂಶಗಳೆಲ್ಲಿದೆ?

ಈ ಎಲ್ಲ ಅಂಶಗಳನ್ನು ಗಮನಿಸಿದರೂ, ಪ್ರಾಚೀನ ಭಾರತದಲ್ಲಿ ನಡೆದಿರುವ ಘಟನಾವಳಿಗಳನ್ನು ಇಟ್ಟುಕೊಂಡು, ಈ ಕಾಲಘಟ್ಟದಲ್ಲಿ ಆ ಘಟನೆಗಳನ್ನು ವಿಶ್ಲೇಷಣೆ ಮಾಡಲು ನಾವೂ ತಯಾರಿಲ್ಲ. ಅವರೂ ತಯರಾಗಬಾರದು. ಒಂದು ವೇಳೆ ಇದನ್ನು ವಿಶ್ಲೇಷಣೆ ಮಾಡಲು ನಾವು ನಿಂತುಕೊಂಡರೆ, ನಮ್ಮೊಳಗಡೆ ಒಂದು ಅಶಾಂತಿ ಸೃಷ್ಟಿಯಾಗುತ್ತದೆ. ಅದಕ್ಕೆ ಇರುವಂತಹ ಒಂದು ಮಾರ್ಗ ಏನಂದರೆ, ಅವರವರ ಆರಾಧನೆಗಳನ್ನು ಮಾಡಲು ಅವರವರಿಗೆ ಹಕ್ಕಿದೆ. ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ ಮತ್ತು ಯಾರೂ ಕೂಡ ಇನ್ನೊಬ್ಬರ ಆರಾಧನೆಗಳನ್ನು ನೆಗೆಟಿವ್ ಆಗಿ ನೋಡುವ ಅಗತ್ಯವಿಲ್ಲ. ಯಾಕೆಂದರೆ, ಒಬ್ಬರ ಆರಾಧನಾ ಕ್ರಮವನ್ನು ಇನ್ನೊಬ್ಬರು ವಿರೋಧ ಮಾಡುವುದು ಸಂವಿಧಾನ ಬಾಹಿರವಾಗಿದೆ. ಹಾಗಾಗಿ ಮಹಿಷಾಸುರನ ಇತಿಹಾಸವನ್ನು ಅರ್ಥ ಮಾಡಿಕೊಂಡವರು ಮಹಿಷಾಸುರನನ್ನು ಆರಾಧನೆ ಮಾಡುತ್ತಾರೆ. ಚಾಮುಂಡಿಯನ್ನು ಆರಾಧನೆ ಮಾಡುವವರು, ಚಾಮುಂಡಿಯನ್ನು ಆರಾಧನೆ ಮಾಡುತ್ತಾರೆ. ಚಾಮುಂಡಿಯನ್ನು ಆರಾಧನೆ ಮಾಡುವವರನ್ನೂ ನಾವು ವಿರೋಧ ಮಾಡುವುದಿಲ್ಲ. ಮಹಿಷಾಸುರನನ್ನು ಆರಾಧನೆ ಮಾಡುವುದನ್ನೂ ನೀವು ವಿರೋಧಿಸಬೇಡಿ. ಅದು ಅವರವರ ಧಾರ್ಮಿಕ, ಸಾಂಸ್ಕೃತಿಕ ಹಕ್ಕು. ಈ ಹಕ್ಕಿಗೆ ಯಾರೇ ಧಕ್ಕೆಯನ್ನುಂಟು ಮಾಡಿದರೆ, ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಅಶಾಂತಿಯ ಸ್ಥಿತಿಯನ್ನು ಸೃಷ್ಟಿಸುವುದು ಆರೋಗ್ಯಕರ ಸಮಾಜದ ಲಕ್ಷಣ ಅಲ್ಲ ಎಂದು ಎನ್.ಮಹೇಶ್ ಹೇಳಿದರು.

ಸಂಸದ ಪ್ರತಾಪ್ ಸಿಂಹ ಅವರನ್ನು ನಾನು ಬಹಳಷ್ಟು ಬಾರಿ ಗಮನಿಸಿದ್ದೇನೆ. ಅವರು ಬುದ್ಧಿಯನ್ನು ಭಾವನೆಗಳ ಕೈಗೆ ಕೊಟ್ಟು ಬಿಡುತ್ತಾರೆ. ಬುದ್ಧಿಯನ್ನು ಭಾವನೆಗಳ ಕೈಗೆ ಕೊಟ್ಟಾಗ ಮನುಷ್ಯ ಅಸಂವಿಧಾನಿಕ ಪದಗಳನ್ನು ಬಳಸುವಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಮೊನ್ನೆ ಚಾಮುಂಡಿಬೆಟ್ಟದಲ್ಲೂ ಇಂತಹದ್ದೇ ಘಟನೆ ಸಂಭವಿಸಿದೆ. ಹಾಗಾಗಿ ನಿಮ್ಮ ಬುದ್ಧಿಯನ್ನು ಭಾವನೆಗಳ ಕೈಗೆ ಕೊಡಬೇಡಿ. ಅದು ಅನಗತ್ಯ ಘಟನೆಗಳಿಗೆ, ಅಶಾಂತಿಗೆ ಕಾರಣವಾಗಿದೆ ಎಂದು ನಾನು ಪ್ರತಾಪ್ ಸಿಂಹ ಅವರಿಗೆ ಮನವಿ ಮಾಡುತ್ತೇನೆ ಎಂದು ಎನ್.ಮಹೇಶ್ ಹೇಳಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]