Friday, January 15 , 2021
ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ: ನಾವು ಮಾಡಬೇಕಾದುದೇನು? -ಡಾ.ಶಿವಕುಮಾರ

ಇಂದು ಬಾಬಾಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್ ಅವೆ ಪರಿನಿಬ್ಬಾಣ ದಿನ. ಈ ಭಾರತ ದೇಶದಲ್ಲಿ ಸಮಾನತೆ, ಸೋದರತೆ, ಸ್ವಾತಂತ್ರ್ಯವನ್ನು ಪ್ರತಿಯೊಬ್ಬರಿಗೂ ತಂದುಕೊಡಲು, ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡಲು ಅವಿರತವಾಗಿ ದುಡಿದ ಈ ಮಹಾನ್ ಚೇತನ ಡಿಸೆಂಬರ್ 6, 1956 ರಂದು ನಮ್ಮನ್ನು ಅಗಲಿದರು.

                   ಬಾಬಾಸಾಹೇಬರು ಬಹಳ ಸಮಾಧಾನದಿಂದ ನಿಧನರಾಗಲಿಲ್ಲ. ತನ್ನ ಅಪಾರ ಕನಸುಗಳು ಇನ್ನೂ ಪೂರ್ತಿಯಾಗಿ ನನಸಾಗಲಿಲ್ಲವಲ್ಲ ಎಂಬ ದುಃಖದಿಂದ ಕೊರಗಿನಿಂದ ನಿಧನರಾದರು. ಅವರು ನಿಧನರಾದಾಗ ಅವರಿಗೆ ಕೇವಲ 66 ವರ್ಷವಾಗಿತ್ತು ಅಷ್ಟೇ. ವಾಸ್ತವವಾಗಿ ಅವರು ಇನ್ನೂ 20 ವರ್ಷಗಳು ಹೆಚ್ಚಿಗೆ ಬದುಕಬೇಕಾಗಿತ್ತು. ಹಾಗೆ ಅವರು ಇನ್ನೂ 20 ವರ್ಷ ಹೆಚ್ಚಾಗಿ ಬದುಕಿದ್ದರೆ ಈ ದೇಶ ನಿಜವಾದ ಅರ್ಥದಲ್ಲಿ ಪ್ರಬುದ್ಧ ಭಾರತವಾಗಿ ರೂಪುಗೊಳ್ಳುತ್ತಿತ್ತು. ಹಾಗೆ ಮಾಡುವ ಸಾಮರ್ಥ್ಯ ಬಾಬಾಸಾಹೇಬರಿಗೆ ಇತ್ತು. ಆದರೆ ಏನು ಮಾಡುವುದು? ಅವರು ತಮ್ಮ ಜೀವಿತದ ಉದ್ದಕ್ಕೂ ದಣಿವರಿಯದೆ ನಿರಂತರವಾಗಿ ದುಡಿದುದರ ಪರಿಣಾಮವಾಗಿ ಆರೋಗ್ಯ ಹದಗೆಟ್ಟಿತ್ತು. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಅವರಿಗೆ ಆಗ ಸಾಧ್ಯವಾಗಲಿಲ್ಲ. ಅವರ ಪತ್ನಿ ಶ್ರೀಮತಿ ಸವಿತಾ ಅವರು ಪ್ರಾಮಾಣಿಕವಾಗಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಲಿಲ್ಲ. ( ಹಾಗೆಂದು ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಅವರು ತಮ್ಮ Last Few Years of Dr.Ambedkar ಕೃತಿಯಲ್ಲಿ ಬರೆದಿದ್ದಾರೆ) ಹಾಗಾಗಿ ಬಾಬಾಸಾಹೇಬರು ಅಕಾಲಿಕವಾಗಿ ನಿಧನರಾಗುವಂತಾಯಿತು.

                   ಅವರು ನಮ್ಮನ್ನು ಬಿಟ್ಟು ಹೋಗುವಾಗ, “ನನ್ನ ನಂತರ ಚಳವಳಿಯನ್ನು ಸಮರ್ಥವಾಗಿ ಮುಂದೆ ಕೊಂಡೊಯ್ಯುವವರು ಯಾರು?” ಎಂಬುದೇ ಅವರಿಗೆ ದೊಡ್ಡ ಚಿಂತೆಯಾಗಿತ್ತು. ತಾನು ಬದುಕಿರುವಾಗಲೇ ಪ್ರತಿ ಭಾರತೀಯನಿಗೆ/ಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಹಕ್ಕು, ಅಧಿಕಾರಗಳನ್ನು ದೊರಕಿಸಿಕೊಡಬೇಕೆಂಬ ಅವರ ಮಹದಾಸೆ ಇನ್ನೂ ಈಡೇರಿರಲಿಲ್ಲ. ಸಂವಿಧಾನದಲ್ಲಿ ಮಾತ್ರ ಅವರಿಗೆ ಅಂತಹ ಕಾನೂನುಗಳನ್ನು ಸೇರಿಸಲು ಅವರಿಗೆ ಸಾಧ್ಯವಾಗಿತ್ತು. ಆದರೆ ಅದು ನಿಜವಾಗಿ ಜಾರಿಗೆ ಬರಬೇಕಾದರೆ ಶೋಷಿತರೆ ಅಧಿಕಾರವನ್ನು ಮುನ್ನಡೆಸುವ ಜಾಗಗಳಲ್ಲಿ ಕುಳಿತುಕೊಳ್ಳಬೇಕು ಎಂಬ ಅವರ ದೊಡ್ಡ ಆಸೆ ಮಾತ್ರ ಇನ್ನೂ ಈಡೇರಿರಲಿಲ್ಲ. ಹಾಗಾಗಿ ನನ್ನ ಈ ಹೋರಾಟವನ್ನು ಮುಂದುವರೆಸುವವರು ಯಾರು? ಅದನ್ನು ಗುರಿ ಮುಟ್ಟಿಸುವವರು ಯಾರು? ಎಂಬ ದೊಡ್ಡ ಚಿಂತೆ ಅವರನ್ನು ಕಾಡುತ್ತಿತ್ತು. ಈ ಚಿಂತೆಯೇ ಅವರ ಆರೋಗ್ಯವನ್ನು ಕೆಡಿಸಿ ಹಣ್ಣು ಮಾಡಿತ್ತು. ಕೊನೆಗೂ ಅವರು ಈ ಚಿಂತೆಯಲ್ಲೇ ಅಪಾರ ನೋವಿನಿಂದ ನಮ್ಮನ್ನು ಅಗಲಿದರು. ಬಹುಸಂಖ್ಯಾತ ಶೋಷಿತ ಭಾರತೀಯರನ್ನು ದುಃಖಿತರನ್ನಾಗಿ ಮಾಡಿದ ಘಟನೆಯಿದು.

                    ಇಂತಹ ದಿನದಲ್ಲಿ ಪ್ರತಿಯೊಬ್ಬ ಭಾರತೀಯನೂ, ಭಾರತೀಯಳೂ ಬಾಬಾಸಾಹೇಬರಂತೆ ಬದುಕುವ, ದುಡಿಯುವ ಧೃಡ ಸಂಕಲ್ಪವನ್ನು ಮಾಡಬೇಕು. ನಮ್ಮ ಜೀವಿತದ ಉದ್ದಕ್ಕೂ ಬಾಬಾಸಾಹೇಬರಂತೆಯೇ ಸನ್ಮಾನಕ್ಕೆ ಆಸೆಪಡದೆ, ಅಪಮಾನಗಳಿಗೆ ಅಂಜದೆ ಭಾರತ ದೇಶವನ್ನು ಸಮಾನತೆಯೆಡೆಗೆ ತರಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ಶೋಷಿತ ಭಾರತೀಯರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಬಲರನ್ನಾಗಿ ಮಾಡಲು ದುಡಿಯುತ್ತೇವೆ. ನಮ್ಮ ಸಮಯ, ಹಣ, ಬುದ್ಧಿಗಳ ಒಂದು ಭಾಗವನ್ನು ಈ ಉದಾತ್ತ ಧ್ಯೇಯಕ್ಕಾಗಿ ನಾವು ತೊಡಗಿಸುತ್ತೇವೆ ಎಂದು ಈವತ್ತು ಪ್ರತಿಜ್ಞೆ ಮಾಡಬೇಕು. ಅದರಂತೆ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ಹಾಗೆಯೇ ಭಾರತ ಪ್ರಬುದ್ಧ ಭಾರತವಾಗಬೇಕಾದರೆ ಇಲ್ಲಿ ಬುದ್ಧರ ಧಮ್ಮ ಇಲ್ಲಿ ಮತ್ತೆ ಬೆಳೆಯಬೇಕೆಂಬುದು ಬಾಬಾಸಾಹೇಬರ ಧೃಡವಾದ ನಂಬಿಕೆಯಾಗಿತ್ತು. ಹಾಗೂ ಪ್ರತಿ ಶೋಷಿತ ಭಾರತೀಯನೂ/ಳೂ ಬುದ್ದರ ಧಮ್ಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ದೇಶವನ್ನು ಉನ್ನತ ಸ್ಥಿತಿಗೆ ಕೊಂಡೊಯ್ಯಬೇಕು. ಇಂತಹ ಧೃಢ ಸಂಕಲ್ಪಗಳನ್ನು ನಾವೆಲ್ಲರೂ ಮಾಡೋಣ, ಹಾಗೆಯೇ ದುಡಿಯೋಣ.
ಜೈ ಭೀಮ್, ಜೈ ಭಾರತ್.,

-ಡಾ.ಶಿವಕುಮಾರ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]