
ಬೆಂಗಳೂರು (23-03-2021): ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದ ಭಾರತ ದೇಶವು ಬಂಧನದಲ್ಲಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ರೈತರ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಟಿಕಾಯತ್ ದೇಶದಲ್ಲಿರುವುದು ಎನ್ಡಿಎ ಸರ್ಕಾರವಲ್ಲ ಬದಲಾಗಿ ಮೋದಿ ಸರ್ಕಾರ. ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವು ಬಂಧನದಲ್ಲಿದೆ. ಎಲ್ಲಾ ಸರ್ಕಾರಿ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ದೇಶದ ರೈತರು ಕಳೆದ ನಾಲ್ಕು ತಿಂಗಳಿನಿಂದ ಚಳಿ, ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೇ ಹೋರಾಟ ಮಾಡುತ್ತಿದ್ದಾರೆ. ಈ ದೇಶದ ಪ್ರಧಾನಿಗೆ ರೈತರನ್ನು ಭೇಟಿ ಮಾಡುವಷ್ಟು ಮನಸ್ಥಿತಿಯಿಲ್ಲ ಎಂದು ಹೇಳಿದರು.
ಸ್ಯಾಂಡಲ್ ವುಡ್ ನ ನಾಯಕ ನಟ ಚೇತನ್ ಮಾತನಾಡಿ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿದೆ. ಕೊರೋನಾದಿಂದಾಗಿ ದೇಶದ ರೈತ ಸಮುದಾಯ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲಿ ರೈತರ ಪರವಾಗಿರಬೇಕಾದ ಸರ್ಕಾರಗಳು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು. ರೈತರ ಪರವಾದ ಹೋರಾಟದಲ್ಲಿ ಭಾಗಿಯಾದವರನ್ನು ಭಯೋತ್ಪಾದಕರೆಂದು ಬಣ್ಣಿಸುತ್ತಾರೆ. ಆದರೆ ನಿಜವಾದ ಭಯೋತ್ಪಾದಕರು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವವರು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸಾವಿರಾರು ರೈತರು ಪ್ರತಿಭಟನಾ ರ್ಯಾಲಿ ಪ್ರಾರಂಭಿಸಿ ವಿಧಾನಸೌಧವನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಪೋಲೀಸರು ಅವರನ್ನು ತಡೆದು ಪ್ರೀಡಂ ಪಾರ್ಕ್ ಕಡೆಗೆ ಕಳುಹಿಸಿದರು. ನಂತರ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ರಾಷ್ಟ್ರ ಮಟ್ಟದ ರೈತ ನಾಯಕರಾದ ಡಾ.ದರ್ಶನ್ ಪಾಲ್, ಯದುವೀರ್ ಸಿಂಗ್, ರಾಜ್ಯ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಚುಕ್ಕಿ ನಂಜುಂಡಸ್ವಾಮಿ, ಬಡಗಲಪುರ ನಾಗೇಂದ್ರ ಮುಂತಾದವರು ಭಾಗವಹಿಸಿದ್ದರು.