Sunday, September 19 , 2021
ಭಾರತವನ್ನು ವಿದೇಶಗಳು ಗುರುತಿಸುವುದು ಬುದ್ಧರ ಹೆಸರಿನಿಂದಲೇ ಹೊರತು ರಾಮನ ಹೆಸರಿನಿಂದಲ್ಲ!

ಭಾರತವನ್ನು ವಿಶ್ವದ ರಾಷ್ಟ್ರಗಳು ಬುದ್ಧನ ಆಧಾರದಲ್ಲಿ ಗುರುತಿಸುತ್ತವೆ. ಈ ಮಾತುಗಳು ಇಂದು ನಿನ್ನೆಯದ್ದಲ್ಲವಾಗಿದ್ದರೂ ಶುಕ್ರವಾರ ನ್ಯೂಯಾರ್ಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ಈ ವಿಚಾರವನ್ನು ದೇಶದಲ್ಲಿ ಮತ್ತೆ ಕೆದಕುವಂತೆ ಮಾಡಿದೆ. ಬುದ್ಧ ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವದಲ್ಲೇ ಶ್ರೇಷ್ಟರಾಗಿದ್ದಾರೆ. ಭಾರತದಲ್ಲಿ ಬುದ್ಧರನ್ನು ಮರೆತರೂ ವಿಶ್ವದಾದ್ಯಂತ ಬುದ್ಧರ ಆಧಾರದಲ್ಲಿ ದೇಶವನ್ನು ಅಳೆಯುತ್ತಾರೆ ಎನ್ನುವುದು ಹಲವಾರ ಬಾರಿ ಸಾಬೀತಾಗಿದೆ.

ನ್ಯೂಯಾರ್ಕ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ ನಾನು ಬುದ್ಧರ ನಾಡಿನಿಂದ ಬಂದಿದ್ದೇನೆ, ಯುದ್ಧದ ನಾಡಿನಿಂದ ಬಂದಿಲ್ಲ” ಎಂದು ಹೇಳಿಕೆ ನೀಡಿದ್ದರು. ಭಾರತದಲ್ಲಿ ಶ್ರೀರಾಮನ ಹೆಸರಿನಲ್ಲಿಯೇ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಬುದ್ಧನನ್ನು ಸ್ಮರಿಸಿಕೊಂಡದ್ದೇಕೆ? ವಿದೇಶದಲ್ಲಿ ರಾಮನ ಹೆಸರು ಹೇಳಿದ್ದರೆ, ಹಿಂದೂ ಧರ್ಮದ ಬಗ್ಗೆ ಅವರೂ ತಿಳಿದುಕೊಳ್ಳಬಹುದಿತ್ತಲ್ಲವೇ? ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ ವಾಸ್ತವವಾಗಿ ವಿದೇಶದಲ್ಲಿ ಭಾರತ ಎಂದರೆ ಬುದ್ಧ ಎನ್ನುವುದು ಮಾತ್ರ ತಿಳಿದಿದೆ. ಇಲ್ಲಿನ ಪುರಾಣಗಳು, ದೇವರು, ನಂಬಿಕೆ ಇವ್ಯಾವುದೂ ವಿದೇಶದಲ್ಲಿ ಗುರುತಿಸಲ್ಪಡುವುದಿಲ್ಲ ಎನ್ನುವುದು ಅಷ್ಟೇ ಸತ್ಯ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಭಾರತ ಬುದ್ಧರ ನಾಡಾಗಿತ್ತು. ಇಡೀ ವಿಶ್ವಕ್ಕೆ ಶಾಂತಿಯನ್ನು ಹೇಳಿಕೊಟ್ಟ ಬುದ್ಧರನ್ನು ಇಡೀ ವಿಶ್ವವೇ ಗುರುತಿಸುತ್ತಿದೆ. ಸ್ವತಃ ಸ್ವಾಮಿ ವಿವೇಕಾನಂದರು ಶಿಕಾಗೋ ಸಮ್ಮೇಳನದಲ್ಲಿ ನಾನು ಒಬ್ಬ ಬುದ್ದಿಸ್ಟ್ ಅಂತ 1893ರಲ್ಲಿ ಹೇಳಿದ್ದಾರೆ. ಪ್ರಪಂಚದ ಇತಿಹಾಸದಲ್ಲಿ ಬುದ್ಧರಂತ ಮಹಾನುಭವ ಹುಟ್ಟಿಲ್ಲ, ಇಡೀ ಮಾನವ ಜನಾಂಗ ಬುದ್ಧನಂತಹ ಒಂದು ವ್ಯಕ್ತಿತ್ವವನ್ನು ಮಾತ್ರ ರೂಪಿಸಿದೆ ಎಂದು ವಿವೇಕಾನಂದರು ಹೇಳುತ್ತಾರೆ. ಆದರೆ ಇಂದು ಬುದ್ಧರ ನಾಡಿನಲ್ಲಿ ಕೋಮು ಗಲಭೆ, ತಿನ್ನುವ ಆಹಾರ ಇವೇ ಮೊದಲಾದ ವಿಚಾರಗಳನ್ನೆತ್ತಿಕೊಂಡು ಹಲ್ಲೆ, ಕೊಲೆಗಳು ನಡೆಯುತ್ತಿವೆ. ಹೀಗಾಗಿಯೇ ಹಲವಾರು ಲೇಖಕರು “ಬುದ್ಧನಿಲ್ಲದ ನಾಡಿನಲ್ಲಿ” ಎಂಬಂತೆ ವಿಷಾದ ವ್ಯಕ್ತಪಡಿಸಿ ಹಲವು ಬರಹಗಳನ್ನು ಬರೆದದ್ದೂ ಇದೆ.

ಜಮ್ಮು-ಕಾಶ್ಮೀರದ 370 ಆರ್ಟಿಕಲ್ ನ್ನು ಮೋದಿ ಸರಕಾರ ರದ್ದು ಮಾಡಿದಾಗ ಸಾಹಿತಿ ಕೆ.ಎಸ್.ಭಗವಾನ್ ಅದನ್ನು ಬೆಂಬಲಿಸಿದ್ದರು. ಪ್ರಧಾನಿ ಮೋದಿ ಅವರು ನಾನು ಬುದ್ಧನ ನಾಡಿನಿಂದ ಬಂದಿದ್ದೇನೆ ಎನ್ನುವ ಹೇಳಿಕೆಯನ್ನು ನೀಡುವಾಗಲೂ ಪತ್ರಿಕಾಗೋಷ್ಠಿ ಕರೆದು ಅವರು, ಭೇಷ್ ಅಂದಿದ್ದಾರೆ. ಜೊತೆಗೆ ಕೆಲವು ಸವಾಲುಗಳನ್ನೂ ಹಾಕಿದ್ದು, ವಿದೇಶದಲ್ಲಿ ನಾನು ಬುದ್ಧನ ನಾಡಿನವ ಎಂದು ಹೇಳಿದಂತೆ, ಭಾರತದಲ್ಲೂ ಇದು ಬುದ್ಧರ ನಾಡು ಎಂದು ಹೇಳಿ. ನೀವು ವಿದೇಶದಲ್ಲಿ ರಾಮನ ನಾಡು ಎಂದು ಹೇಳಿಲ್ಲ ಯಾಕೆ ? ಅಂತಲೂ ಪ್ರಶ್ನಿಸಿದ್ದಾರೆ. ಭಾರತ ಬುದ್ಧನ ನಾಡು ಆಗಿದ್ದರೆ, ಭಾರತದಲ್ಲಿ ರಾಮ ಮಂದಿರ ಯಾಕೆ ಕಟ್ಟುತ್ತೀರಿ? ಬುದ್ಧನ ದೇವಸ್ಥಾನ ಕಟ್ಟಿ ಎಂದು ಅವರು ಸವಾಲು ಹಾಕಿದ್ದಾರೆ.

ಬುದ್ಧರನ್ನು ಇಡೀ ವಿಶ್ವವೇ ಗೌರವಿಸುತ್ತಿದ್ದರೆ, ಭಾರತದಲ್ಲಿ ಬುದ್ದರನ್ನು ಅಗೌರವ ಹಾಗೂ ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ. ಇದಕ್ಕೆ ಭಾರತದೊಳಗೆ ಅಂತಹದ್ದೇ ತೀವ್ರ ಪ್ರತಿರೋಧವೂ ಇದೆ. ಬುದ್ಧನ ನಾಡಿನ ಬಗ್ಗೆ ವಿದೇಶದಲ್ಲಿ ಪ್ರಧಾನಿ ಮೋದಿ ಕೇವಲ ರಕ್ಷಣೆಗಾಗಿ ಮಾತನಾಡಿದರೋ ಅಥವಾ ಮನಪೂರ್ವಕವಾಗಿ ಮಾತನಾಡಿದರೋ ಗೊತ್ತಿಲ್ಲ. ಭಾರತದೊಳಗೆ ದುರ್ಬಲದ ಮೇಲೆ ನಡೆಯುತ್ತಿರುವ ದಾಳಿ, ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಮನುಷ್ಯರ ನಡುವೆ ದ್ವೇಷ ಮಿತಿ ಮೀರಿದ ಕಾಲದಲ್ಲಿ, ಅಸಮಾನತೆಯನ್ನು ಸಾರುವ ಆರೆಸ್ಸೆಸ್ ಸಿದ್ಧಾಂತವನ್ನು ಮೈಗೂಡಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಾಯಿಯಲ್ಲಿ ಬುದ್ಧನ ಹೆಸರು ಕೇಳಿ ಬಂದಿದೆ. ಬುದ್ಧರ ಹೆಸರಿನ ಶಕ್ತಿಯಾದರೂ ದೇಶದಲ್ಲಿ ಮಾನವೀಯತೆಯ ಗಾಳಿಯನ್ನು ಪಸರಿಸಲಿ ಎನ್ನುವುದೇ ಸದ್ಯದ ಆಶಯ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]