Monday, July 26 , 2021
ಬೀದಿಗೆ ಬೀಳುವ ಮುನ್ನ ‘ಭಾರತ’ ರಸ್ತೆಗಿಳಿಯ ಬೇಕಿದೆ

ದೇಶದಲ್ಲಿ ಆರ್ಥಿಕ ಹಿಂಜರಿತವಾಗಿರುವುದು ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ. ಕೇಂದ್ರ ಸರಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಸಾಮಾಜಿಕ ಜಾಲತಾಣಗಳಲ್ಲಿ ಎಡಿಟ್ ಮಾಡಲಾಗಿರುವ ಚಿತ್ರಗಳು ಸುಳ್ಳು ತಲೆ ಬರಹದೊಂದಿಗೆ ಹರಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕ ಮುಗ್ಗಟ್ಟನ್ನು ನಿಯಂತ್ರಿಸಲು ಯಾವುದೇ ಪ್ರಯತ್ನಪಡದೇ ಸುಮ್ಮನೆ ಕುಳಿತಿರುವುದು ಸದ್ಯದ ವಿದ್ಯಮಾನಗಳನ್ನು ಕಂಡಾಗ ಸ್ಪಷ್ಟಗೊಳ್ಳುತ್ತಿದೆ. ಆದರೂ ಜವಾಬ್ದಾರಿ ಮರೆದ ಮಾಧ್ಯಮಗಳು ಪ್ರಧಾನಿ ಗುಣಗಾನದಲ್ಲೇ ಕಾಲ ಕಳೆಯುತ್ತಿವೆ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವ್ಯಕ್ತವಾಗಿವೆ.

ದೇಶದಲ್ಲಿ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎನ್ನುವುದು ಇತ್ತೀಚಿನ ಹಲವು ವರದಿಗಳು, ಅಧ್ಯಯನಗಳಿಂದ ಬಯಲಾಗಿದೆ. ಇಷ್ಟಾದರೂ, ಇದರ ಬಗ್ಗೆ ಕ್ರಮಕೈಗೊಳ್ಳಲು ಸರಕಾರ ಏನು ಮಾಡಿದೆ ಎಂದು ನೋಡಲು ಹೋದರೆ, ಕೇವಲ ತಮ್ಮ ಸಾಮಾಜಿಕ ತಾಣಗಳಲ್ಲಿ ಸುಳ್ಳುಗಳನ್ನು ಹರಡಿ ದೇಶ ಪ್ರಗತಿಯಲ್ಲಿದೆ ಎಂದು ನಂಬಿಸಲು ಸರಕಾರ ಹೊರಟಿರುವುದು ಕಂಡು ಬರುತ್ತಿದೆ. ನೋಟ್ ಬ್ಯಾನ್ ನ ಪರಿಣಾಮ ಇದೀಗ ದೇಶವನ್ನು ಕಾಡಲು ಆರಂಭಿಸಿದೆ. ವಿವಿಧ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಈ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಇಷ್ಟಾದರೂ ದೇಶದಲ್ಲಿ ಈ ಸಮಸ್ಯೆಗಳ ವಿರುದ್ಧ ಹೋರಾಡುವ ಕೈಗಳೇ ಇಲ್ಲವಾಗಿವೆ.

ಕೆಫೆ ಕಾಫಿ ಡೇ ಮಾಲಕ ಸಿದ್ಧಾರ್ಥ್ ಅವರೂ ಇದೇ ಸಂಕಷ್ಟದಿಂದ ತಮ್ಮ ಪ್ರಾಣವನ್ನೇ ತ್ಯಜಿಸಿ ಹೋದರು. ಇವರ ಆತ್ಮಹತ್ಯೆಯು ಕೊಲೆ ಎಂದು ಬಿಂಬಿಸುವ ಮೂಲಕ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿವೆಯೇ? ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿವೆ. ರೈತರು, ಕೂಲಿಕಾರರು, ಶ್ರಮಜೀವಿಗಳು ದೇಶದಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದು ವಾಸ್ತವಾದರೂ, ಸಾಮಾಜಿಕ ಜಾಲತಾಣಗಳ ಮೂಲಕ ಅವರ ಗಮನವನ್ನು ಬೇರೆ ಕಡೆಗೆ ಸೆಳೆದು ಸರಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ವ್ಯವಸ್ಥಿತ ಯೋಜನೆಯನ್ನೂ ಸರಕಾರ ಮಾಡಿಕೊಂಡಿದೆ ಎನ್ನುವ ಆರೋಪಗಳು ಸದ್ಯ ಕೇಳಿ ಬರುತ್ತಿವೆ.

ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ ಎನ್ನುವುದು ಹಲವಾರು ಘಟನೆಗಳಿಂದ ಜನರ ಗಮನಕ್ಕೆ ಬಂದಿದೆ. ಭಾರತ ಈಗ ಮುಂದುವರಿದ ರಾಷ್ಟ್ರವಲ್ಲ ಎಂದು ಅಮೆರಿಕವೇ ಘೋಷಿಸಿದೆ. ಇದಕ್ಕೆ ಕಾರಣಗಳೇನು ಎನ್ನುವ ವಿಚಾರಗಳನ್ನು ಜನ ವಿಮರ್ಷೆ ಮಾಡಬೇಕಿರುವ ಕಾಲ ಇದಾಗಿದೆ. ಇನ್ನೊಂದೆಡೆ, ದೇಶದ ಆರ್ಥಿಕ ಹಿಂಜರಿತವನ್ನು ಮುಚ್ಚಿ ಹಾಕಲು ಧರ್ಮ ದ್ವೇಷಗಳಂತಹ ಘಟನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ದಲಿತರ ಬಾಯಿ ಮುಚ್ಚಿಸಲು ಅಂಬೇಡ್ಕರ್ ಪ್ರತಿಮೆಗಳ ಮೇಲೆ ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಈ ಚರ್ಚೆಯಲ್ಲೇ ಕಾಲ ಕಳೆಯುತ್ತಿರುವ ಜನರು ಸರಕಾರ ವೈಫಲ್ಯದ ವಿರುದ್ಧ ಮಾತನಾಡಲೂ ಸಮಯವಿಲ್ಲದೇ ತಮಗರಿವಿಲ್ಲದೇ ಬೀದಿಗೆ ಬೀಳುತ್ತಿದ್ದಾರೆ. ಆರ್ಥಿಕ ಹಿಂಜರಿತದ ಬಗ್ಗೆ ಸ್ಪಷ್ಟ ಮಾಹಿತಿಗಳೂ ಇಲ್ಲದ ಜನರು, ವಾಟ್ಸಾಪ್ ಸಂದೇಶಗಳನ್ನು ನೋಡಿಕೊಂಡು ನಮ್ಮ ದೇಶದ ದೊಡ್ಡ ಸಮಸ್ಯೆ ಧರ್ಮ ಮತ್ತು ಜಾತಿ ಎನ್ನುವ ಭ್ರಮೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಭಾರತ(ಜನರು) ಬೀದಿಗೆ ಬಿದ್ದಾಗಿದೆ. ಆದರೂ ಭಾರತ ಇಂದು ರಸ್ತೆಗಿಳಿದಿಲ್ಲ. ರಸ್ತೆಗಿಳಿಯುವವರನ್ನು ಬಿಜೆಪಿ ಕಾರ್ಯಕರ್ತರು ಹೀನಾಮಾನವಾಗಿ ನೋಡುತ್ತಿದ್ದಾರೆ. ಫೇಸ್ ಬುಕ್, ವಾಟ್ಸಾಪ್ ನ (ಅ)ಜ್ಞಾನಿಗಳು ತಮ್ಮ ಪರವಾಗಿ ಧ್ವನಿಯೆತ್ತುವವರನ್ನೇ ಶತ್ರುಗಳಂತೆ ನೋಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಯಾರು ಸತ್ಯ, ಯಾರು ಮಿಥ್ಯ ಎನ್ನುವುದನ್ನು ಜನರೇ ಅರಿಯದಂತಹ ಸ್ಥಿತಿಗೆ ತಲುಪಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಆದರೂ ಭಾರತ ಬೀದಿಗೆ ಬೀಳುವ ಮುನ್ನ ಜನರು ರಸ್ತೆಗಿಳಿಯುವ ಅಗತ್ಯತೆ ಹೆಚ್ಚಿದೆ. ಇಲ್ಲವಾದರೆ, ಭಾರತ ಖಂಡಿತ ಬೀದಿಗೆ ಬೀಳಲಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]