Monday, July 26 , 2021
ಬಿಜೆಪಿ – ಕಾಂಗ್ರೆಸ್ ನಾಯಕರ ಪುರುಷತ್ವ ಪರೀಕ್ಷೆ ನಡೆದೇ ಬಿಡಲಿ..!

ಸುದ್ದಿ ವಿಮರ್ಶೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಸ್ಲಿಂ ಓಟುಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರಲ್ಲಿ ಹಿಜಿಡಾ ತನ ಅಡಗಿದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಇವರ ಹೇಳಿಕೆಗೆ ರಾಜ್ಯಾದ್ಯಂತ ಭಾರೀ ವಿರೋಧಗಳೂ ವ್ಯಕ್ತವಾಗಿದೆ. ಈ ನಡುವೆ ಈಶ್ವರಪ್ಪ ಅವರ ಹೇಳಿಕೆಯನ್ನು ವಿಮರ್ಷೆಗೊಳಪಡಿಸಿದರೆ, ಹಲವು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತದೆ.

ಓರ್ವ ಬಿಜೆಪಿ ನಾಯಕರಾಗಿ ಕೆ.ಎಸ್.ಈಶ್ವರಪ್ಪನವರು ವಿರೋಧ ಪಕ್ಷಗಳನ್ನು ವಿರೋಧಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಹಿಂದೆಯೂ ಹಲವು ಬಾರಿ ತಲೆ ಬುಡವಿಲ್ಲದ ಹೇಳಿಕೆಗಳಿಂದಾಗಿ ಈಶ್ವರಪ್ಪನವರು ಭಾರೀ ವಿರೋಧಗಳನ್ನು ಎದುರಿಸಿದ್ದಾರೆ. ಆದರೂ ಯಾರನ್ನೋ ವಿರೋಧಿಸಲು ತೃತೀಯ ಲಿಂಗಿಗಳನ್ನು ಅವಮಾನ ಮಾಡಿರುವುದು ಎಷ್ಟು ಸರಿ? ಭಾರತ ಪ್ರಜಾಪ್ರಭುತ್ವ ರಾಷ್ಟ್ರ  ಇಲ್ಲಿ ಪುರುಷರಿಗೆ ಎಷ್ಟು ಮಹತ್ವವನ್ನು ನೀಡಲಾಗುತ್ತದೆಯೋ ಅಷ್ಟೇ ಮಹತ್ವವನ್ನು ಮಹಿಳೆಯರಿಗೂ ನೀಡಬೇಕಿದೆ ಮತ್ತು ತೃತೀಯ ಲಿಂಗಿಗಳಿಗೂ ಸಮಾನ ಸ್ಥಾನಮಾನ ನೀಡಬೇಕಿದೆ. ಆದರೆ ಕಳೆದ ಚುನಾವಣೆಯ ಸಂದರ್ಭದಲ್ಲೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪುರುಷತ್ವದ ಆಧಾರದ ಮೇಲೆ ಹಲವು ಹೇಳಿಕೆಗಳನ್ನು ನೀಡಿ ಸಂಬಂಧವೇ ಪಡದವರಿಗೆ ಸಂಬಂಧವೇ ಇಲ್ಲದ ಅವಮಾನಗಳನ್ನು ಮಾಡಿರುವುದನ್ನೂ ಜನರು ಕಂಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಈಶ್ವರಪ್ಪನವರು ತಮಗೆ ಯಾವ ಅರ್ಹತೆ ಇದೆ ಎಂದು ತಮ್ಮ ಪುರುಷತ್ವವನ್ನು ಇಷ್ಟೊಂದು ಹೊಗಲಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ರಾಜ್ಯದಲ್ಲಿ ಪ್ರವಾಹ ಬಂದು ಭಾರೀ ಸಂಖ್ಯೆಯ ಜನರು ನಿರಾಶ್ರಿತರಾಗಿದ್ದಾರೆ. ಸರಕಾರದ ಮಿತಿಯನ್ನೂ ಮೀರಿದ ನಷ್ಟಗಳು ಸಂಭವಿಸಿದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರು ಪರಿಹಾರ ಕೇಳಿದಾಗ “ನಿಮಗೆ ಹತ್ತು ಸಾವಿರ ರೂಪಾಯಿ ಕೊಟ್ಟಿರುವುದೇ ಹೆಚ್ಚು” ಎನ್ನುವ ಹೇಳಿಕೆ ನೀಡಿದ ಈಶ್ವರಪ್ಪನವರು ಯಾವ ಧರ್ಮದವರ ಓಟಿನಿಂದ ಗೆದ್ದಿದ್ದಾರೆ ಎನ್ನುವುದನ್ನು ಹೇಳಬೇಕಲ್ಲವೇ? ಬಿಜೆಪಿಯಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಗೆದ್ದಿರುವ ಸಂಸದರು ಕೇಂದ್ರ ಸರಕಾರದಿಂದ ಪರಿಹಾರ ತರಲು ಸೋತು ಬಾಯಿಗೆ ಬಂದ ಹೇಳಿಕೆಗಳನ್ನು ನೀಡುತ್ತಿದ್ದಾರಲ್ಲವೇ ಇವರು ಯಾವ ಧರ್ಮದವರ ಓಟಿನಿಂದ ಗೆದ್ದವರು. ಇವರೂ ಗಂಡಸರು ಹೌದೋ ಅಲ್ಲವೋ ಎನ್ನುವುದನ್ನು ಈಶ್ವರಪ್ಪನವರು ಪರೀಕ್ಷಿಸಿ ಹೇಳಬಹುದೇ?

ಈಶ್ವರಪ್ಪನವರು ಅಭಿವೃದ್ಧಿಯಲ್ಲಿ ನಿಮ್ಮ ಪುರುಷತ್ವವನ್ನು ಸಾಬೀತು ಪಡಿಸಿದ್ದೀರಾ? ಪ್ರವಾಹ ಸಂತ್ರಸ್ಥರ ಬಳಿಯಲ್ಲಿ ನಿಮಗೆ ಇಷ್ಟು ಕೊಟ್ಟದ್ದೇ ಹೆಚ್ಚು ಎನ್ನುವ ಅಸಹಾಯಕತೆಯ ಪ್ರದರ್ಶನ ಮಾಡಿದ್ದೀರಿ. ಈಗ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಹೇಳಿಕೆ ನೀಡುತ್ತಿದ್ದೀರಿ. ಇದರಿಂದ ಜನರಿಗೇನು ಲಾಭ? ಗ್ರಾಮೀಣಾಭಿವೃದ್ಧಿ ಸಚಿವರಾಗಿ  ನೆರೆಯಿಂದ ತತ್ತರಿಸಿರುವ ಗ್ರಾಮಗಳಿಗೆ ನಿಮ್ಮ ಕೊಡುಗೆ ಏನು ಎಂಬ ಬಗ್ಗೆ ನೀವು ಜನರಿಗೆ ಮಾಹಿತಿ ಕೊಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಚೇರಿಯಲ್ಲಿ ಬಿಟ್ಟು ಹೋಗುವ ನಿಮ್ಮ ಪುರುಷತ್ವ ಚುನಾವಣೆ ನಂತರ ಮತ್ತೆ ಧರಿಸಿಕೊಂಡರೆ ಅದನ್ನು ಪುರುಷತ್ವ ಎಂದು ಕರೆಯುತ್ತಾರೆಯೇ? ಎನ್ನುವ ಪ್ರಶ್ನೆಗಳಿಗೆ ಈಶ್ವರಪ್ಪನವರು ಉತ್ತರಿಸಬೇಕು.

ಕಾಂಗ್ರೆಸ್ ನಾಯಕರು ಏನು ಮಾಡಿದ್ದೀರಿ?

ರಾಜ್ಯವಿಡೀ ನೆರೆಯಿಂದ ತತ್ತರಿಸಿದ್ದರೆ, ಆಡಳಿತಪಕ್ಷ ತೀವ್ರವಾಗಿ ನಿರ್ಲಕ್ಷ್ಯ ಮಾಡುತ್ತಿದ್ದರೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಸಮರ್ಥವಾಗಿ ಧ್ವನಿಯೆತ್ತಿಲ್ಲ. ಅನರ್ಹ ಶಾಸಕರಿಂದ ತೆರವಾದ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯ ಮೇಲೆ  ಕಾಂಗ್ರೆಸ್ ತನ್ನ ಸಂಪೂರ್ಣ ಲಕ್ಷ್ಯವನ್ನಿಟ್ಟಿದೆ. ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿ ಹೇಳಿಕೆ ಕೊಡುವುದೇ ವಿರೋಧ ಪಕ್ಷದ ಕೆಲಸವಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ವಿರೋಧ ಪಕ್ಷ ಮಾಡಬೇಕಿರುವ ಮೊದಲ ಕೆಲಸ.  ಕೆ.ಎಸ್.ಈಶ್ವರಪ್ಪನವರ ಪುರುಷತ್ವದ ಹೇಳಿಕೆಗೆ ಇಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಪ್ರತಿಕ್ರಿಯಿಸಿ, ಈಶ್ವರಪ್ಪಗೆ ಪುರುಷತ್ವ ಇದ್ದರೆ ಗೋಮಾಂಸ ರಫ್ತು ನಿಲ್ಲಿಸಲಿ ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಹೇಳಿಕೆಗಳಿಂದ ಜನರಿಗೇನಾದರೂ ಪ್ರಯೋಜನವಿದೆಯೇ? ಕಾಂಗ್ರೆಸ್ ನಾಯಕರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಲು ಏನೂ ಇಲ್ಲವೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಮಾಜಿ ಸಿಎಂ ಸಿದ್ದರಾಮಯ್ಯನವರು ಪದೇ ಪದೇ ಈಶ್ವರಪ್ಪಗೆ ಬುದ್ಧಿ ಇಲ್ಲ ಎನ್ನುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬುದ್ಧಿ ಇದ್ದಿದ್ದರೆ, ರಾಜ್ಯದಲ್ಲಿ ಈ ಬಾರಿ ಪ್ರವಾಹದಿಂದ ಆಗಿರುವ ಜನರ ನಡುವೆ ನಿಂತು ಪ್ರಬಲ ಪ್ರತಿಭಟನೆ ನಡೆಯುತ್ತಿತ್ತು. ಆದರೆ, ಜನರ ಬಗ್ಗೆ ಧ್ವನಿಯೆತ್ತುವ ಬುದ್ಧಿ ಕಾಂಗ್ರೆಸ್ ಗೂ ಇಲ್ಲವಾಗಿರುವುದು ನಿಜಕ್ಕೂ ದುರಂತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜನಪ್ರತಿನಿಧಿಗಳು ಮೊದಲು ಪುರುಷತ್ವಗಳ ಬಗ್ಗೆ ಕೊಚ್ಚಿಕೊಳ್ಳುವುದನ್ನು ಬಿಟ್ಟು, ರಾಜ್ಯದ ಜನರ ಹಿತವನ್ನು ನೋಡಬೇಕಿದೆ. ರಾಜ್ಯದ ಅಭಿವೃದ್ಧಿಯಲ್ಲಿ ನಿಮ್ಮ ಘನತೆಯನ್ನು ತೋರಿಸಬೇಕಿದೆ. ಇಲ್ಲಿ ಪುರುಷತ್ವಕ್ಕಿಂತಲೂ ಮಾನವೀಯತೆ, ಮನುಷ್ಯರ ನಡುವಿನ ಬಾಂಧವ್ಯ ಬೆಸೆಯುವ ಕೆಲಸ ಮೊದಲು ಆಗಬೇಕಿದೆ. ಬಿಜೆಪಿ ನಾಯಕರು ಮುಸ್ಲಿಮರನ್ನು ಬೈದು ಹಿಂದೂಗಳ ಓಟು ತೆಗೆದುಕೊಳ್ಳಲು ನೋಡುವುದು, ಕಾಂಗ್ರೆಸ್ ನಾಯಕರು ಮುಸ್ಲಿಮರ ರಕ್ಷಕರಂತೆ ಪೋಸು ಕೊಟ್ಟು ಮುಸ್ಲಿಮರ ಓಟು ಪಡೆದುಕೊಳ್ಳುವುದು ಇದಷ್ಟೇ ಅಭಿವೃದ್ಧಿ ಎಂದು ಕೊಂಡು ಜನರು ಇವರಿಗೆ ಜಯಕಾರ ಹಾಕುವುದು ಇದ್ಯಾವುದರಿಂದಲೂ ರಾಜ್ಯದ ಅಭಿವೃದ್ಧಿಯಾಗುವುದಿಲ್ಲ ಎನ್ನುವುದು ಸತ್ಯ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]