
ಹಾಸನ (04-04-2021): ಬಿಗ್ ಸ್ಪರ್ಧಿ ಚಂದ್ರಕಲಾ ಮೋಹನ್ ಸಂದರ್ಶನವೊಂದರಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಸಂಬಂಧ ಮಾಜಿ ಶಿಕ್ಷಣ ಸಚಿವ, ಶಾಸಕ ಎನ್.ಮಹೇಶ್ ಇಂದು ಹಾಸನದಲ್ಲಿ ದಲಿತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಸ್ಫರ್ಧಿಯ ಪದ ಬಳಕೆ ಬಗ್ಗೆ ಬೇಸರ ಹೊರಹಾಕಿದರು.
ಕಳೆದ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದ ಚಂದ್ರಕಲಾ ಮೋಹನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ಊರು ಅಂದಮೇಲೆ ಅಲ್ಲಿ ಹೊಲಗೇರಿ” ಇರುತ್ತೆ ಎಂದು ಹೇಳಿದ್ದರು. ಫೇಸ್ಬುಕ್ ನಲ್ಲಿ ನೆಟ್ಟಿಗರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಪುನಃ ವಿಡಿಯೋ ಮಾಡಿ ತನ್ನ ಹೇಳಿಕೆಯ ಅರ್ಥ ಅದಲ್ಲ, ‘ಹೊಲಸು’ ಅಂತ ಹೇಳುವ ಬದಲು ಹೊಲೆಗೇರಿ ಎಂದಿದ್ದೆ ಎಂದು ಕ್ಷಮಾಪಣೆ ಕೋರಿದ್ದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಚಂದ್ರಕಲಾ ಅವರು ನೀಡಿದ ಹೇಳಿಕೆಯಲ್ಲಿ ತಪ್ಪೇನೂ ಇಲ್ಲ, ಊರು ಇದ್ದ ಕಡೆ ಬಹುತೇಕ ಕಡೆಗಳಲ್ಲಿ ಹೊಲಗೇರಿ, ಒಕ್ಕಲಿಗರಗೇರಿ, ಕುರಬಗೇರಿ ಇವೆ. ಆದರೆ ಆಕೆ ತನ್ನ ಹೇಳಿಕೆ ಸಮರ್ಥನೆಗೆ ಬಳಸಿದ ‘ಹೊಲಸು‘ ಪದದ ಬಗ್ಗೆ ನನ್ನ ಆಕ್ಷೇಪವಿದೆ, ನೋವಿದೆ ಎಂದು ಹೇಳಿದರು. ಹೊಲಗೇರಿ ಎಂಬುದರ ಅರ್ಥ ಏನು ಎಂಬುದನ್ನು ಈ ವೇದಿಕೆ ಮೂಲಕ ಅವರಿಗೆ ತಿಳಿಸಲು ಇಚ್ಚಿಸುತ್ತೇನೆ ಎಂದು ಆ ಪದದ ಬಗೆಗಿನ ಅರ್ಥವನ್ನು ಬಿಡಿಸಿ ಹೇಳಿದರು. ವೊಲ (ಹೊಲ) ಅಂದರೆ ಭೂಮಿ, ಅಯ್ಯ ಅಂದರೆ ದ್ರಾವಿಡ ಭಾಷಾರ್ಥ ಒಡೆಯ, ಯಜಮಾನ ಅಂತ ಅರ್ಥ. ಅಂದರೆ ಹೊಲೆಯ ಅಂದರೆ ಭೂಮಿಯ ಒಡೆಯ ಎಂದು ತಿಳಿಸಿದರು.
ಮುಂದುವರೆದು ಮಾತನಾಡುತ್ತಾ ಚಂದ್ರಕಲಾ ಅವರ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ತೀರಾ ಕೆಳಮಟ್ಟದ ಭಾಷೆ ಉಪಯೋಗಿಸಿ ಟೀಕಿಸುತ್ತಿರುವುದನ್ನು ಖಂಡಿಸಿ, ಈ ರೀತಿಯ ವರ್ತನೆ ನಮ್ಮ ಸಂಸ್ಕೃತಿ ಅಲ್ಲ! ಈ ಕೂಡಲೇ ಅಂತಹ ಟೀಕೆಗಳನ್ನು ನಿಲ್ಲಿಸಿ, ಅದರ ಬದಲು ಅವರಿಗೆ ವಿಷಯ ಮನವರಿಕೆ ಮಾಡಿಕೊಡಿ ಎಂದರು.
ಇದನ್ನೂ ಓದಿ
ದಲಿತ, ಜನಪರ ಸಾಹಿತ್ಯ ಧನಾತ್ಮಕವಾಗಿ ರೂಪುಗೊಳ್ಳಲಿ| ಶಾಸಕ ಎನ್.ಮಹೇಶ್