Monday, July 26 , 2021
ಬಿಎಸ್ ಪಿಯಿಂದ ಯೂತ್ ಐಕಾನ್ ಡಾ.ಶಿವಕುಮಾರ್ ಸ್ಪರ್ಧೆ | ಚಾಮರಾಜನಗರದಲ್ಲಿ ತ್ರಿಕೋನ ಸ್ಪರ್ಧೆ

ಚಾಮರಾಜನಗರ(20.03.2019): ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಒಂದೆಡೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಲೋಕಸಭಾ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಯೋಧರ ಅನುಕಂಪದ ಮತವನ್ನು ಮಾತ್ರ ಅವಲಂಬಿಸಿದೆ. ಈ ನಡುವೆ ರಾಜ್ಯದಲ್ಲಿ ಬಿಎಸ್ ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೇ ಒಂಟಿ ಸಲಗದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಗಳಿಗೆ ನುಗ್ಗುತ್ತಿದೆ.

ರಾಜ್ಯದಲ್ಲಿ ಬಹು ನಿರೀಕ್ಷಿತ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಯೂತ್ ಐಕಾನ್, ಐಎಎಸ್ ತರಬೇತುದಾರ, ಬಿಎಸ್ ಪಿ ಪಕ್ಷ ಸಂಘಟನೆಯ ಮುಂದಾಳು ಡಾ.ಶಿವಕುಮಾರ್ ಅವರ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅವರ ಗೆಲುವಿನ ಮಾರ್ಗ ಇನ್ನುಷ್ಟು ಕಠಿಣವಾಗಿದೆ. ಯೂತ್ ಐಕಾನ್ ಎಂದೇ ಕರೆಯಲ್ಪಡುವ ಡಾ.ಶಿವಕುಮಾರ್ ಅವರ ಗೆಲುವಿಗೆ ದುಡಿಯಲು ಸಾವಿರಾರು ಯುವಕರು ಪ್ರಚಾರ ಕಣಕ್ಕೆ ಧುಮುಕುವ ಸಾಧ್ಯತೆಗಳು ಕಂಡು ಬಂದಿವೆ. ಡಾ.ಶಿವಕುಮಾರ್ ಅವರು  26ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.

ಚಾಮರಾಜನಗರದಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಈ ಹಿಂದೆಯೂ ಆನೆ ದಾಳಿಯಿಂದ ತತ್ತರಿಸಿದ್ದವು. ಈ ಕ್ಷೇತ್ರದಲ್ಲಿ ಬಿಎಸ್ ಪಿ ಪಡೆದಿದ್ದ ಮತಗಳು ಗಮನಾರ್ಹವಾಗಿತ್ತು.  2004ರಲ್ಲಿ ಬಿಎಸ್ ಪಿ ಈ ಕ್ಷೇತ್ರದಲ್ಲಿ 78,855 ಮತಗಳನ್ನು ಪಡೆದಿತ್ತು. 2009ರಲ್ಲಿ ಬಿಎಸ್ ಪಿ 68,447 ಮತಗಳನ್ನು ಪಡೆದಿತ್ತು. 2014ರಲ್ಲಿ 34,846 ಮತಗಳನ್ನು ಬಿಎಸ್ ಪಿ ಪಡೆದಿತ್ತು. ಈ ಕ್ಷೇತ್ರದಲ್ಲಿ ಈ ಹಿಂದಿನ ಚುನಾವಣೆಗಳಲ್ಲೂ ಬಿ ಎಸ್ ಪಿ ಗಮನಾರ್ಹವಾದ ದಾಖಲೆಯನ್ನು ಬರೆದಿತ್ತು. ಈ ಬಾರಿ ಪ್ರಬಲ ಅಭ್ಯರ್ಥಿಯನ್ನು ಬಿಎಸ್ ಪಿ ಕಣಕ್ಕಿಳಿಸಿರುವುದರಿಂದಾಗಿ  ಡಾ.ಶಿವಕುಮಾರ್ ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಮಾಧ್ಯಮ ವಿಶ್ಲೇಷಣೆಗಳು ತಿಳಿಸಿವೆ.

ಕಾಂಗ್ರೆಸ್-ಬಿಜೆಪಿಗೆ ಹೆಚ್ಚಾದ ತೊಡಕುಗಳು

ಕಾಂಗ್ರೆಸ್-ಜೆಡಿಎಸ್ ಮೈತ್ರಿ  ಅಭ್ಯರ್ಥಿ ಧ್ರುವನಾರಾಯಣ್ ಅವರಿಗೆ ಜೆಡಿಎಸ್ ಮತಗಳು ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಯಾಕೆಂದರೆ, ಚಾಮರಾಜನಗರದಲ್ಲಿ ಬಿಎಸ್ ಪಿಗೆ ಇರುವ ಕಾರ್ಯಕರ್ತರ ಬಲ ಜೆಡಿಎಸ್ ಗೆ ಇಲ್ಲ. ಒಂದು ವೇಳೆ ಇದ್ದರೂ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎನ್ನುವ ವಿಶ್ವಾಸ ಬಹಳಷ್ಟು ಕಡಿಮೆಯಿದೆ. ಇನ್ನೊಂದೆಡೆ ಧ್ರುವ ನಾರಾಯಣ್ ಅವರಿಗಿಂತಲೂ ಹೆಚ್ಚಿನ ಪ್ರಭಾವ ಬಿಎಸ್ ಪಿ-ಬಿಜೆಪಿ ಅಭ್ಯರ್ಥಿಗಳಿಗಿವೆ. ಜೊತೆಗೆ ಸ್ಥಳೀಯ ನಾಯಕರ ಮುನಿಸುಗಳೂ ಧ್ರುವನಾರಾಯಣ್ ಅವರಿಗೆ ತೊಡಕುಂಟು ಮಾಡಲಿದೆ ಎನ್ನುವ ವಿಚಾರಗಳು ಚರ್ಚೆಯಲ್ಲಿವೆ.

ಇನ್ನೊಂದೆಡೆ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ವಿಧಾನಸಭಾ ಉಪ ಚುನಾವಣೆಯಲ್ಲಿ  ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಿಜೆಪಿಗೆ ದಲಿತ ಮತ್ತು ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಮತಗಳು ಬೀಳಲು ಸಾಧ್ಯವಿಲ್ಲ ಎನ್ನುವುದು ನಿಶ್ಚಿತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ಥಳೀಯವಾಗಿ ಶ್ರೀನಿವಾಸ್ ಪ್ರಸಾದ್ ಅವರು ಜನಪ್ರಿಯರಾಗಿದ್ದರೂ, ಅವರು ಬಿಜೆಪಿಯಿಂದ ಅವರು ಸ್ಪರ್ಧಿಸುತ್ತಿರುವುದರಿಂದಾಗಿ ಬಿಜೆಪಿಗೆ ಪ್ರಬಲ ವಿರೋಧಿಯಾಗಿರುವ ಈ ಕ್ಷೇತ್ರದಲ್ಲಿ ಅವರು ಗೆಲ್ಲಲು ಸಾಧ್ಯವೇ? ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ. ಶ್ರೀನಿವಾಸ್ ಪ್ರಸಾದ್ ಗೆ ಓಟು ಹಾಕಿದರೆ, ಮೋದಿಗೆ ಓಟು ಹಾಕಿದಂತಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಿಎಸ್ ಪಿ ಮತಬ್ಯಾಂಕ್ ವೃದ್ಧಿಸಲಿದೆ

ಡಾ.ಶಿವಕುಮಾರ್ ಅವರ ಸ್ಪರ್ಧೆಯಿಂದಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ ಪಿ ಮತಗಳು ಹಿಗ್ಗಲಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಜೊತೆಗೆ ಬಿಎಸ್ ಪಿ ಸಂಘಟಕರಾಗಿರುವ ಶಿವಕುಮಾರ್ ಅವರು ಚಾಮರಾಜನಗರಕ್ಕೆ ಸುಪರಿಚಿತರು. ಇಬ್ಬರು ಪ್ರಭಾವಿ ನಾಯಕರ ಮುಂದೆ ಈ ಬಾರಿ ಡಾ.ಶಿವಕುಮಾರ್ ಅವರು ಗೆಲುವು ಸಾಧಿಸಲು ಪೂರಕವಾದ ವಾತಾವರಣವೂ ಇದೆ ಎನ್ನುವ ರಾಜಕೀಯ ವಿಶ್ಲೇಷಣೆಗಳು ಆರಂಭವಾಗಿದೆ. ಇನ್ನೊಂದೆಡೆಯಲ್ಲಿ ಡಾ.ಶಿವಕುಮಾರ್ ಅವರನ್ನು ಗೆಲ್ಲಿಸಲು ಬಿಎಸ್ ಪಿ ಪಣತೊಟ್ಟಿದೆ. ಜೊತೆಗೆ ಈ ಬಾರಿ ಮಾಯಾವತಿ ಅವರನ್ನು ಪ್ರಧಾನಿ ಮಾಡಲು ರಾಜ್ಯದಿಂದ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಬಿಎಸ್ ಪಿ ಪಣತೊಟ್ಟಿದ್ದು, ರಾಜ್ಯಾಧ್ಯಂತ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಚಾಮರಾಜನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು. ಇಲ್ಲಿ ಗೆಲುವು ಯಾರಿಗೂ ಸುಲಭವಲ್ಲ. ಆದರೆ, ಡಾ.ಶಿವಕುಮಾರ್ ಅವರ ಸ್ಪರ್ಧೆಯಿಂದಾಗಿ ಬಿಎಸ್ ಪಿಗೆ ಹೆಚ್ಚಿನ ಅವಕಾಶಗಳಿವೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ. ಸದ್ಯದಲ್ಲೇ ಈ ಕ್ಷೇತ್ರದಲ್ಲಿ ಭಾರೀ ಪ್ರಚಾರ ಸಂಗ್ರಾಮ ನಡೆಯಲಿದೆ. ಗೆಲುವು-ಸೋಲುಗಳ ಲೆಕ್ಕಾಚಾರಗಳು ಈಗಾಗಲೇ ಆರಂಭವಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]