
ಲಾಕ್ ಡೌನ್ ಸಂದರ್ಭದಲ್ಲಿ ಇಡೀ ದೇಶದ ಗ್ರಾಮೀಣ ಪ್ರದೇಶ ಮತ್ತು ಕೂಲಿ ಕಾರ್ಮಿಕರ ಹೆಂಡತಿ, ಮಕ್ಕಳ ಮುಖದಲ್ಲಿ ಸಂತಸ ಮನೆ ಮಾಡಿತ್ತು. ಎಲ್ಲವೂ ಬಂದ್ ಆಗಿತ್ತು. ಮನೆಯಲ್ಲಿ ಇದ್ದ ಸ್ವಲ್ಪ ಅನ್ನದಲ್ಲಿ ಹೊಟ್ಟೆ ತುಂಬಿಸಿಕೊಂಡಿದ್ದರೂ, ನೆಮ್ಮದಿ ಅನ್ನೋದು ಎಲ್ಲರ ಮುಖದಲ್ಲಿತ್ತು. ಸ್ಥಳೀಯ ಜನರ ಸಹಾಯಗಳು. ಪರಸ್ಪರ ಪ್ರೀತಿ, ಕರುಣೆ, ಮಮತೆ ಪ್ರತಿಯೊಂದನ್ನು ಮೊದಲ ಬಾರಿಗೆ ಕೂಲಿ ಕಾರ್ಮಿಕರ ಪತ್ನಿಯರು ಕಂಡಿದ್ದರು. ಕೊರೊನಾ ಬಂದು ಹೋದ ಮೇಲೆ ಯಾರು ಬದುಕಿರುತ್ತಾರೆ, ಯಾರು ಬದುಕಿರುವುದಿಲ್ಲ ಎನ್ನುವ ನಂಬಿಕೆ ಇಲ್ಲದ ಕಾರಣ, ಜನರು ಸ್ವಾರ್ಥವನ್ನೂ ಬಿಟ್ಟು ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದರು. ಆದರೆ, ದೇಶದಲ್ಲಿ ಕೊರೊನಾ ಅಷ್ಟೊಂದು ಪರಿಣಾಮಕಾರಿಯಾಗಿ ಹರಡುತ್ತಿಲ್ಲ ಎನ್ನುವ ಭಾವನೆಗಳು ಬಂದಾಗ ದೇಶದ ಚಿತ್ರಣಗಳೇ ಬದಲಾದವು, ಕಾರ್ಮಿಕರ ಪತ್ನಿ, ಮಕ್ಕಳ ಮುಖದಲ್ಲಿದ್ದ ಸಂತಸ ಮತ್ತೆ ಮಾಯವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರ ಪತ್ನಿಯರು ಸಾಸಿವೆ ಡಬ್ಬದಲ್ಲಿ ಅಡಗಿಸಿಟ್ಟಿದ ಐವತ್ತೋ, ನೂರು ರೂಪಾಯಿಯೋ ಹಾಗೆಯೇ ಉಳಿದಿತ್ತು. ಆದರೆ ಸುರಪಾನದ ಕಾರ್ಖಾನೆ(ಮದ್ಯದಂಗಡಿ) ಯಾವಾಗ ತೆರೆಯಿತೋ ಅಲ್ಲಿಂದ ದೇಶದ ಮಹಿಳೆಯರ ಕಣ್ಣಿನಲ್ಲಿದ್ದ ಹೊಳಪು ಮತ್ತೆ ಮಾಯವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಮಹಿಳೆಯರು ಕೇಳುತ್ತಿರುವ ಪ್ರಶ್ನೆ ನಿಜಕ್ಕೂ ಹೃದಯ ಕರಗಿಸುತ್ತಿದೆ. ಮದ್ಯದಂಗಡಿ ತೆರೆದಿದ್ದರಿಂದಾಗಿ ದೇಶದ, ರಾಜ್ಯಗಳ ಬೊಕ್ಕಸಕ್ಕೆ ಮತ್ತೆ ಹಣ ಹರಿದು ಬಂತು. ಮಾಧ್ಯಮಗಳಲ್ಲಿ ಇಷ್ಟು ಕೋಟಿ ಕಲೆಕ್ಷನ್ ಆಗಿದೆ ಅಂತ ವರದಿಗಳೂ ಬಂದವು. ಆದರೆ, ಆ ಕೋಟಿ ಲೆಕ್ಕದ ಹಣದಲ್ಲಿ ಸಾಸಿವೆ ಡಬ್ಬದಲ್ಲಿ ಅಡಗಿಸಿಟ್ಟಿದ್ದ ಹಣ, ಗಂಡನಿಗೆ ಸಿಗಬಾರದು ಎಂದು ಮಣ್ಣಲ್ಲಿ ಹೂತಿಟ್ಟಿದ್ದ ಹಣ, ಮಗಳ ಚಿನ್ನ ಮಾರಿದ ಹಣ, ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟಿದ್ದ ಹಣ. ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ಕಟ್ಟಲು ಕೂಡಿಟ್ಟಿದ್ದ ಹಣ ಇವೆಲ್ಲವೂ ಇದ್ದವು. ಆ ಹಣದ ಹಿಂದಿನ ಆರ್ತನಾದ ಸರ್ಕಾರಕ್ಕೆ ಕೇಳಿಸಲಿಲ್ಲ. ಬಹುಶಃ ಭಾರತದಲ್ಲಿ ಕೊರೊನಾ ಯಾಕೆ ಅಷ್ಟು ಹರಡಲಿಲ್ಲ ಎಂದರೆ, ಇಲ್ಲಿ ಕೊರೊನಾಕ್ಕಿಂತಲೂ ಬೀಬತ್ಸ ವೈರಸ್ ಗಳಿವೆ. ಅವುಗಳನ್ನು ಕಂಡು ಕೊರೊನಾ ವೈರಸ್ ಭಯಪಟ್ಟಿತು ಅನ್ನಿಸುತ್ತಿದೆ. ಕೊರೊನಾ ರೋಗಿ ಉಸಿರಾಟಕ್ಕೆ ಹೇಗೆ ಕಷ್ಟಪಡುತ್ತಾನೋ ಹಾಗೆಯೇ, ಭಾರತದ ಒಬ್ಬ ಕುಡುಕನ ಕುಟುಂಬ ನೆಮ್ಮದಿ, ಶಾಂತಿ, ಪ್ರೀತಿಗಾಗಿ ಕಷ್ಟಪಡುತ್ತಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಗಂಡ ಕೆಲಸಕ್ಕೆ ಹೋಗದಿದ್ದರೂ ಅವರ ಮನೆಯಲ್ಲಿ ನೆಮ್ಮದಿ ಇತ್ತು. ಗಂಡನ ಆರ್ಭಟ ಇರಲಿಲ್ಲ, ಸುರಪಾನದ ಮತ್ತಿನ ಅಮಾನವೀಯ ಏಟುಗಳಿರಲಿಲ್ಲ, ತೊಟ್ಟಿಲಲ್ಲಿದ್ದ ಪುಟ್ಟ ಮಗು ಕೂಡ ನೆಮ್ಮದಿಯಲ್ಲಿ ನಿದ್ದೆ ಮಾಡಿತ್ತು. ಇದ್ದಕ್ಕಿದ್ದಂತೆ ಬಾರ್ ಓಪನ್ ಆಗಿತ್ತು. ಅಂದು ಬಡವನ ಮನೆಯ ನೆಮ್ಮದಿ, ಶಾಂತಿ ಎಲ್ಲವೂ ಬೀದಿಗೆ ಬಂದಿತ್ತು. ನೆಮ್ಮದಿಯಿಂದ ಉಸಿರಾಡುತ್ತಿದ್ದ ಪತ್ನಿಯ ಗೋಳಾಟ ಆರಂಭವಾಯಿತು. ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಈ ಕುಡುಕ ಪತಿ ಎಳೆದಾಡಿ ನಿದ್ರಾ ಭಂಗ ಮಾಡಲು ಆರಂಭಿಸಿದ. ಈ ಮಕ್ಕಳ, ಮಹಿಳೆಯರು ಗೋಳಾಟ, ಸರ್ಕಾರಕ್ಕೂ ಕೇಳಿಸಿಲ್ಲ, ದೇವರಿಗಂತೂ ಇಲ್ಲಿಯವರೆಗೆ ಕೇಳಿಸಿಯೇ ಇಲ್ಲ.
ಸರ್ಕಾರ ಬೊಕ್ಕಸ ತುಂಬಲು, ಕೂಲಿ ಕಾರ್ಮಿಕರ ಗುಡಿಸಲು ಬರಿದಾಗಲೇ ಬೇಕಾಯಿತು. ಜನಧನ ಖಾತೆಗೆ ಬಿದ್ದ 500 ರೂಪಾಯಿ ಮತ್ತೆ ಮದ್ಯದಂಗಡಿಗೆ ಸೇರಿತ್ತು. ಜನಧನ್ ಖಾತೆಯೇ ಇಲ್ಲದವರ ಮನೆಯ ಸಾಸಿವೆ ಡಬ್ಬದಲ್ಲಿದ್ದ ಹಣವೂ ಸರ್ಕಾರದ ಬೊಕ್ಕಸಕ್ಕೆ ಸೇರಿತ್ತು. ಬಡವರ ಪತ್ನಿ, ಮಕ್ಕಳ ಹೊಟ್ಟೆ ಮತ್ತೆ ಹಸಿವಿನಿಂದ ಚುರ್ ಎಂದಿತ್ತು. ಸುರಪಾನದ ಮತ್ತಿನಲ್ಲಿದ್ದ ಪತಿಗೆ ಈ ಗೋಳಾಟಗಳು, ಚೀರಾಟಗಳು ಯಾವುದೂ ಕೇಳಿಸಲೇ ಇಲ್ಲ. ಮೊನ್ನೆಯವರೆಗೆ ಗುಡಿಸಲಿನಲ್ಲಿ ನೆಲೆಸಿದ್ದ ನೆಮ್ಮದಿ, ಬಂಧನದಲ್ಲಿದ್ದ ಸುರಪಾನ ಬಿಡುಗಡೆಯಾದಾಗ ಬಡವನ ಗುಡಿಸಲಿನಿಂದ ಮೆಲ್ಲಗೆ ಕಾಲು ಹೊರಗಿಟ್ಟಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದ ಯೋಜನೆ ಎಷ್ಟು ಗುಡಿಸಲಿಗೆ ತಲುಪಿದ್ದವೋ ಗೊತ್ತಿಲ್ಲ. ಆದರೆ ಸುರಪಾನವನ್ನು ಬಂಧನದಿಂದ ಬಿಡಿಸಿದಾಗ, ಸರ್ಕಾರದ ನಿರ್ಧಾರ ಪ್ರತಿ ಗುಡಿಸಲಿನಲ್ಲೂ ಆರ್ಭಟಿಸಿತ್ತು. ಅಮಾನವೀಯ ಮೆರೆದಿತ್ತು. ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುವವರನ್ನು ಬಂಧಿಸಿ, ಸರ್ಕಾರಕ್ಕೆ ಅನ್ಯಾಯ ಮಾಡಿದ್ದರೆಂದು ಶಿಕ್ಷೆಗೊಳಪಡಿಸಲಾಗುತ್ತಿದೆ. ಆದರೆ, ಸರ್ಕಾರವೇ ಮದ್ಯ ಹಂಚಿ ಬಡವರ ಹೆಂಡತಿ ಮಕ್ಕಳಿಗೆ ಶಿಕ್ಷೆ ನೀಡುತ್ತಿದೆ. ಇವರಿಗೆ ಯಾವ ಶಿಕ್ಷೆ ಇದೆ? ಎಂದು ಬರಿ ಹೊಟ್ಟೆಯಲ್ಲಿ ಕುಳಿತಿರುವವರ ಮೂಕ ಪ್ರಶ್ನೆಗೆ ಎಲ್ಲೂ ಉತ್ತರವಿಲ್ಲ…
ಜಾತಿ ವ್ಯವಸ್ಥೆಯ ಬಗ್ಗೆ ಬಸವಣ್ಣ ಏನು ಹೇಳಿದ್ದಾರೆ? ವಿಡಿಯೋ ನೋಡಿ: https://youtu.be/MGVJnJ5m0v8