Monday, July 26 , 2021
‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗುವವರು ಮತ್ತು ‘ಭಾರತೀಯರನ್ನೇ ಪಾಕಿಸ್ತಾನಿಯರು’ ಎನ್ನುವವರು | ಯಾರು ದೇಶದ್ರೋಹಿಗಳು?

ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಲಿಯೋನ್ ಎನ್ನು ವಿದ್ಯಾರ್ಥಿನಿ “ಪಾಕಿಸ್ತಾನಕ್ಕೆ ಜಿಂದಾಬಾದ್” ಘೋಷಣೆ ಕೂಗಿರುವ ವಿಚಾರ ಬಹಳ ದೊಡ್ಡಮಟ್ಟದಲ್ಲಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ಅಮೂಲ್ಯ ನೀಡುತ್ತಿರುವ ಸ್ಪಷ್ಟನೆಗಳು ಏನೇ ಇರಲಿ, ಆದರೂ, ಭಾರತದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆಯನ್ನು ಯಾರೂ ಬೆಂಬಲಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕೇವಲ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗುವವರು ಮಾತ್ರ ದೇಶದ್ರೋಹಿಗಳಲ್ಲ, ಭಾರತೀಯರನ್ನು ಪಾಕಿಸ್ತಾನಿಯರು ಎನ್ನುವವರೂ ದೇಶದ್ರೋಹಿಗಳು ಎನ್ನುವುದು ಮುಖ್ಯವಾಗಬೇಕಿದೆ.

ನಿನ್ನೆ ಈ ವಿಚಾರಕ್ಕೆ ಸಂಬಂಧಿಸಿದಂತೆ, ಕನ್ನಡ ಸುದ್ದಿವಾಹಿನಿಯ ನಿರೂಪರೋರ್ವರು ಅಮೂಲ್ಯ ಲಿಯೋನ್ ಎಂದು ಹೇಳುವ ಬದಲು “ಸನ್ನಿ ಲಿಯೋನ್” ಎಂದು ಉಚ್ಛರಿಸಿ, ಬಳಿಕ ತೋರಿಕೆಯ ಕ್ಷಮೆಯನ್ನು ಕೇಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿವೆ. “ಪಾಕಿಸ್ತಾನ ಜಿಂದಾಬಾದ್” ನಂತಹ ಗಂಭೀರವಾದ ಘೋಷಣೆಯನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಘಟನೆಗೂ ಓರ್ವ ಮಾಜಿ ನೀಲಿ ಚಿತ್ರ ನಟಿ, ಬಾಲಿವುಡ್ ನ ಬಹಳ ಬೇಡಿಕೆಯ ನಟಿ ಹಾಗೂ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿರುವ ನಟಿಯ ಹೆಸರನ್ನು ಥಳಕು ಹಾಕುವ ಹಕ್ಕನ್ನು ಮಾಧ್ಯಮದ ನಿರೂಪಕಗೆ ಕೊಟ್ಟವರು ಯಾರು? ಎನ್ನುವ ಪ್ರಶ್ನೆಗೆ ಅಜಿತ್ ಹನುಮಕ್ಕನವರ್ ಎನ್ನುವ ಪತ್ರಕರ್ತ ಉತ್ತರಿಸಬಹುದೇ? ಅಮೂಲ್ಯ ಪಾಕ್ ಪರ ಘೋಷಣೆ ಕೂಗಿರುವುದನ್ನು ಸ್ವತಃ ಆಕೆಯ ತಂದೆಯೇ ವಿರೋಧಿಸಿದ್ದಾರೆ. ಕಾರ್ಯಕ್ರಮದ ಸಂಘಟಕರು, ಆಕೆ ಘೋಷಣೆ ಕೂಗಿದ ತಕ್ಷಣವೇ ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ. ಈ ಎಲ್ಲಾ ಘಟನಾವಳಿಗಳು ಯಾವುದೇ ಮಾಧ್ಯಮಗಳ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಇಂತಹ ಪ್ರಕರಣಗಳಲ್ಲಿ ಇನ್ನೊಬ್ಬರ ಹೆಸರನ್ನು ಥಳಕು ಹಾಕುವ ಲೋಕಲ್ ಮನಸ್ಥಿತಿಯನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ಮಾಡುತ್ತಿರುವುದು ತೀರಾ ಅಸಹಜ ಎಂದೇ ಹೇಳಬಹುದು.

ಕೇವಲ ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ, “ನೀವು ಪಾಕಿಸ್ತಾನದವರು” ಎಂದು ಮೂದಲಿಸುವುದು ಆಗಾಗ ವರದಿಯಾಗಿದೆ. ಇದು ದೇಶ ಪ್ರೇಮದ ಸಂಕೇತವೇ? ಎನ್ನುವ ಪ್ರಶ್ನೆಗಳಿಗೆ ಮಾಧ್ಯಮಗಳು ಉತ್ತರಿಸಬಲ್ಲವೇ? ನಿನ್ನೆಯಷ್ಟೆ ಶಿವಮೊಗ್ಗದ ಕೋರ್ಟ್ ನಲ್ಲಿ ನಡೆದ ಘಟನೆಯೊಂದು ವರದಿಯಾಗಿದೆ. ನ್ಯಾಯಾಲಯದ ಕಲಾಪ ನಡೆಯುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಮುಸ್ಲಿಮ್ ವಕೀಲರನ್ನು “ನೀವು ಪಾಕಿಸ್ತಾನದವರು” ಎಂದು ಮೂದಲಿಸಿ ಅವಮಾನಿಸಿದ್ದಾನೆ. ಆತನಿಗೆ ನ್ಯಾಯಾಲಯವು ಒಂದು ದಿನದ ಜೈಲು ಶಿಕ್ಷೆಯನ್ನು ವಿಧಿಸಿದೆ. ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜೈಕಾರ ಹಾಕುವುದು ತಪ್ಪು ಎನ್ನುವುದಾದರೆ, ಭಾರತೀಯರ ರಾಷ್ಟ್ರೀಯ ಭಾವನೆಗೆ ಘಾಸಿಗೊಳಿಸಿ, ನೀವು ಪಾಕಿಸ್ತಾನಿಯರು ಎಂದು ಬಹಿರಂಗವಾಗಿ ಅವಮಾನಿಸುವುದು ದೇಶ ಪ್ರೇಮ ಹೇಗಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ಮಾಧ್ಯಮಗಳ ಉತ್ತರಿಸಬಲ್ಲವೇ? ಭಾರತೀಯರನ್ನು ಪಾಕಿಸ್ತಾನಿಯರು ಎಂದು ಅವಮಾನಿಸುವವರ ಬಗ್ಗೆ ಯಾವ ಮಾಧ್ಯಮ ಎಷ್ಟು ಚರ್ಚೆಗಳನ್ನು ನಡೆಸಿದೆ ಎನ್ನುವುದನ್ನು ಬಹಿರಂಗಪಡಿಸಬಹುದೇ?

ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜೈಕಾರ ಹಾಕುವವರು ಮತ್ತು ಭಾರತೀಯ ಪ್ರಜೆಗಳನ್ನು “ನೀವು ಪಾಕಿಸ್ತಾನಿಯರು” ಎಂದು ಹೇಳುವವರು ಇಬ್ಬರೂ ದೇಶದ್ರೋಹಿಗಳು ಎಂದು ಹೇಳುವ ಧೈರ್ಯ ಸುದ್ದಿವಾಹಿನಿಗಳಿಗೆ ಇದೆಯೇ? ಹಾಗಿದ್ದೂ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಾಶ್ಮೀರದ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿದರು. ಬಳಿಕ ಅವರನ್ನು ಸ್ಟೇಷನ್ ಬೇಲ್ ಮೂಲಕ ಬಿಡುಗಡೆಗೊಳಿಸಲಾಯಿತು. ಆ ಬಳಿಕ ಮತ್ತೆ ಅವರನ್ನು ಬಂಧಿಸಲಾಯಿತು. ರಾಜ್ಯ ಗೃಹ ಇಲಾಖೆಯ ಈ ದ್ವಂದ್ವ ನಿಲುವಿನ ಬಗ್ಗೆ ಮಾಧ್ಯಮಗಳು ಎಷ್ಟು ಪ್ರಶ್ನೆಗಳ ಎತ್ತಿದವು? ಅಮೂಲ್ಯ ಪ್ರಕರಣಕ್ಕಿಂತಲೂ ಈ ಪ್ರಕರಣ ಯಾಕೆ ಭಿನ್ನ ಎಂದು ನಿಮಗೆ ಅನ್ನಿಸಿತು? ಇವೇ ಮೊದಲಾದ ಪ್ರಶ್ನೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಮೂಲ್ಯ ದೇಶದ್ರೋಹಿ ಘೋಷಣೆಯನ್ನು ಕೂಗಿರುವುದನ್ನು ಎಲ್ಲರೂ ಒಕ್ಕೊರಳಿನಿಂದ ವಿರೋಧಿಸಿದ್ದಾರೆ. ಆಕೆಯನ್ನು ಬೆಂಬಲಿಸಿ ಯಾರೂ ಹೇಳಿಕೆಗಳನ್ನೂ ನೀಡಿಲ್ಲ. ಯಾರೂ ನೀಡಬಾರದು ಕೂಡ. ಆದರೆ ಭಾರತೀಯರನ್ನು ಪಾಕಿಸ್ತಾನಿಯರು ಎಂದು ಹೇಳುವವರ ಬಗ್ಗೆ ಮಾಧ್ಯಮಗಳಿಗೆ ಯಾಕೆ ಮೃಧು ಧೋರಣೆ? ಇಂತಹ ಪ್ರಕರಣಗಳು ನಡೆದಾಗ ನಿಮಗೆ ಇದೊಂದು ಗಂಭೀರವಾದ ವಿಚಾರ ಎಂದು ಯಾಕೆ ಅನ್ನಿಸುವುದಿಲ್ಲ. ನೀವು ಮುಸ್ಲಿಮ್ ವಿರೋಧಿಗಳೇ? ಅಥವಾ ಒಂದು ಸಿದ್ಧಾಂತದ ಪರವಾಗಿ ಮಾತ್ರ ನಿಲುವು ಹೊತ್ತ ಮಾಧ್ಯಮಗಳೇ? ಎನ್ನುವ ಹಲವು ಪ್ರಶ್ನೆಗಳಿಗೆ ಮಾಧ್ಯಮಗಳು ಉತ್ತರಿಸಬಲ್ಲವೇ?

ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಯನ್ನು ಅಮೂಲ್ಯ ಕೂಗಿದ್ದೇಕೆ ಎನ್ನುವ ವಿಚಾರವಾಗಿ ಸಮಗ್ರವಾದ ತನಿಖೆ ನಡೆಯಲೇ ಬೇಕು. ಆಕೆ ಹಿಂದೆ ಯಾರಿದ್ದಾರೆ ಎನ್ನುವ ವಿಚಾರವೂ ತನಿಖೆಯಾಗಲೇ ಬೇಕು. ಆದರೆ, ಇದರ ಜೊತೆಗೆ ಕೇವಲ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗುವವರು ಮಾತ್ರ ದೇಶದ್ರೋಹಿಗಳು ಎಂದು ಸಾರುವುದು, ಭಾರತೀಯರನ್ನು ಪಾಕಿಸ್ತಾನಿಯರು ಎಂದು ಅವಮಾನಿಸಿದಾಗ ಮೌನವಾಗಿದ್ದು ಬಿಡುವುದು ಮಾಧ್ಯಮಗಳಿಗೆ ಶೋಭೆ ತರುವ ಕೆಲಸವಲ್ಲ ಎನ್ನುವುದು ವಾಸ್ತವವಾಗಿದೆ. ಇದು ಎಲ್ಲರ ಭಾರತ, ಯಾರೇ ತಪ್ಪು ಮಾಡಿದರೂ ಅದನ್ನು ಪ್ರಶ್ನಿಸುವ ಹಕ್ಕು, ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೇ. ಇಂತಹ ಜವಾಬ್ದಾರಿಯಲ್ಲಿ ಒಂದು ಹೆಜ್ಜೆ ಹೆಚ್ಚು ಎನ್ನುವಷ್ಟು ಮಾಧ್ಯಮಗಳ ಪಾಲಿದೆ. ಆದರೆ ಮಾಧ್ಯಮಗಳು ಇಂತಹ ವಿಚಾರಗಳನ್ನು ಮಾತ್ರ ನಾವು ಪ್ರಶ್ನಿಸುತ್ತೇವೆ, ಇಂತಹ ವಿಚಾರಗಳಿಗೂ ನಮಗೂ ಸಂಬಂಧವಿಲ್ಲ ಎಂದು ಮೌನವಾಗಿದ್ದು ಬಿಡುವುದು ಸತ್ಯ, ನ್ಯಾಯಕ್ಕೆ ಮೋಸ ಮಾಡಿದಂತೆಯೇ ಅಲ್ಲವೇ? ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ ವ್ಯಕ್ತಿಯನ್ನು ಕೆಲವು ಮಾಧ್ಯಮಗಳು “ಮಾನಸಿಕ ಅಸ್ವಸ್ಥ” ಎಂದು ಬಿಂಬಿಸಿದ್ದವು. ಇಂತಹ ಸಂದರ್ಭದಲ್ಲಿ ನಿಮ್ಮ ದೇಶ ಪ್ರೇಮ ಎಲ್ಲಿ ಹೋಗಿತ್ತು? ಆತನನ್ನು ಸಮರ್ಥಿಸಿರುವುದು ದೇಶ ಪ್ರೇಮ ಎಂದು ನಿಮಗೆ ಅನ್ನಿಸಿರಬಹುದು, ಆದರೆ, ಅದನ್ನು ನೋಡಿದವರಿಗೆ ಅದೊಂದು ದೇಶದ್ರೋಹ ಎಂದು ಅನ್ನಿಸಿದೆ. ಮಾಧ್ಯಮಗಳು ಪಾರದರ್ಶಕವಾಗಿ ನಡೆಯಲಿ, ತಪ್ಪು ಯಾರೇ ಮಾಡಿರಲಿ, ಅವರನ್ನು ಪ್ರಾಮಾಣಿಕವಾಗಿ ಪ್ರಶ್ನಿಸುವ ಪದ್ಧತಿ ಬೆಳೆಯಲಿ, ಭಾರತವನ್ನು, ಭಾರತೀಯತೆನ್ನು, ಭಾರತೀಯರನ್ನು ಗೌರವಿಸುವ ಕೆಲಸ ನಡೆಯಲಿ. ತಪ್ಪು ಯಾರೇ ಮಾಡಿದ್ದರೂ, ಯಾವುದೋ ಸಂಘಟನೆಗಳ, ಪಕ್ಷಗಳ ಮುಲಾಜಿಗೆ ಒಳಗಾಗಿ ವರದಿಗಳು ಮಾಧ್ಯಮಗಳಲ್ಲಿ ಬಾರದಿರಲಿ ಎನ್ನುವುದೇ ಈ ವಿಮರ್ಷೆಯ ಆಶಯ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]