Friday, April 16 , 2021
ನೈಜ ಭಾರತೀಯನಿಗೆ ಕೋಟಿ ನಮನ|ಡಾ.ಶ್ರೀನಿವಾಸ್. ಜಿ

ನಮ್ಮ ದೇಶದ ಸಾಮಾಜಿಕ ಹಾಗು ರಾಜಕೀಯ ಕ್ರಾಂತಿಯ ರೂವಾರಿಯಾದ ದಾದಾ ಸಾಹೇಬ್ ಕಾನ್ಷಿರಾಮ್ ಅವರನ್ನು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರರ ರಾಜಕೀಯ ಪರಂಪರೆಯನ್ನು ಮುನ್ನಡೆಸಿದ ಧೀಮಂತ ನಾಯಕನೆಂದು ಬಹಳಷ್ಟು ಮಂದಿ ಭಾವಿಸಿದ್ದಾರೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗು ಹಿಂದುಳಿದ ವರ್ಗಗಳನ್ನು ಸಂಘಟಿಸಿದ ಕಾನ್ಷಿರಾಮ್ ರು , ದೇಶದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಈ ಸಮುದಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸುವುದರಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸುತ್ತಾರೆಂದು ನಂಬಿದ್ದರು. ಭಾರತದ ರಾಜಕೀಯ ಚಿತ್ರಣವನ್ನು ಬದಲಾಯಿಸಿ, ಬಹುಜನ ಸಿದ್ದಾಂತವನ್ನು ಸಂಶೋಧನೆಗೆ ಒಳಪಡಿಸಿದ ಧೀಮಂತ ನಾಯಕ  ಮಾನ್ಯವಾರ್ ಕಾನ್ಷಿರಾಮ್. ಸಾವಿರಾರು ಸಮುದಾಯಗಳು ಇವರ ಅವಿರತ ಹೋರಾಟದಿಂದ ಸಾಮಾಜಿಕ, ಆರ್ಥಿಕ ಹಾಗು ಮಾನಸಿಕ ಗುಲಾಮಗಿರಿಯಿಂದ ಹೊರಬರಲು ಸಾಧ್ಯವಾಗಿದೆ.  ರಾಜಕೀಯೇತರ ಬೇರುಗಳನ್ನು ಗಟ್ಟಿಗೊಳಿಸದೆ, ರಾಜಕೀಯ ಫಲಗಳನ್ನು ನಿರೀಕ್ಷಿಸಲಾಗುವುದಿಲ್ಲವೆಂದು ಕಾನ್ಷಿರಾಮ್ ಬಲವಾಗಿ ನಂಬಿದ್ದರು. ಇವರ ಸಾಮಾಜಿಕ ಸಾಂಸ್ಕೃತಿಕ ಹೋರಾಟ ಹಾಗೂ ಬಹುಜನರ ಆರ್ಥಿಕ ಸ್ವಾವಲಂಬನೆಯ ಹೋರಾಟ 1964 ರಲ್ಲಿ ಪ್ರಾರಂಭವಾಯಿತು.
ಸೆಪ್ಟೆಂಬರ್‌ 24, 1944 ರಂದು ಮದ್ರಾಸ್ ನಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನೇಕ ಅನುಯಾಯಿಗಳನ್ನು ಉದ್ದೇಶಿಸಿ, “ನಮ್ಮ ಅಂತಿಮ ಗುರಿಯನ್ನು ಅರಿತುಕೊಳ್ಳಿ. ನಮ್ಮ ಅಂತಿಮ ಗುರಿ ಈ ದೇಶದ ಆಳುವ ವರ್ಗವಾಗಬೇಕು. ಈ ಅಂತಿಮ ಗುರಿಯನ್ನು ನೀವು ಮರೆಯಬಾರದು, ಆದ್ದರಿಂದ ನಿಮ್ಮ ಮನೆ ಗೋಡೆಗಳ ಮೇಲೆ ಬರೆದಿಟ್ಟುಕೊಳ್ಳಿ. ನಮ್ಮ ಹೋರಾಟ ಕೇವಲ ಕೆಲವು ಸರ್ಕಾರಿ ನೌಕರಿಗಳನ್ನು ಪಡೆಯುವುದು ಮಾತ್ರವಲ್ಲ. ನಾವು ಅತ್ಯಂತ ದೊಡ್ಡ ಗುರಿಯನ್ನು ಸಾಧಿಸಬೇಕಿದೆ.  “ಈ ನೆಲದ ದೊರೆಗಳಾಗಬೇಕೆನ್ನುವುದೇ ನಮ್ಮ ಗುರಿ”. ಮುಂದುವರೆದು, ದಿನಾಂಕ 24, 25 ಏಪ್ರಿಲ್ 1948 ರಲ್ಲಿ ಲಕ್ನೋದಲ್ಲಿ ಉತ್ತರ ಪ್ರದೇಶ ‘ಷೆಡ್ಯೂಲ್ಡ್ ಕಾಸ್ಟ್ ಫೆಡರೇಷನ್’ ನ 5 ನೇ ಅಧಿವೇಶನದಲ್ಲಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಹೇಳುತ್ತಾರೆ, “ಪರಿಶಿಷ್ಟ ಜಾತಿ ಹಾಗು ಹಿಂದುಳಿದ ವರ್ಗಗಳು ಈ ದೇಶದ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿದ್ದಾರೆ. ಈ ಬಹುಸಂಖ್ಯಾತರೆಲ್ಲಾ ಒಂದಾಗಿ ಈ ದೇಶವನ್ನು ಆಳಬಾರದೇಕೆ? ವಯಸ್ಕ ಪದ್ಧತಿಯ ಅವಕಾಶವಿರುವುದರಿಂದ ಈ ಸಮುದಾಯಗಳು ಒಂದಾಗಿ ರಾಜ್ಯಾಧಿಕಾರವನ್ನು ಪಡೆಯಲು ಸಂಘಟನೆಯಾಗಬೇಕಿದೆ. ಆದರೆ ಈಗಿನ ಜನರು ಆ ಧೈರ್ಯವನ್ನು ಮಾಡುತ್ತಿಲ್ಲ, ಕಾರಣ ಕಾಂಗ್ರೆಸ್‌ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿರುತ್ತದೆ ಎಂದು ಅವರು ಭಾವಿಸಿದ್ದಾರೆ. ಇದು ಅವರ ತಪ್ಪು ಕಲ್ಪನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಸರ್ಕಾರವೂ ಶಾಶ್ವತವಲ್ಲ. ನೆಹರು ಹಾಗು ಪಟೇಲರ ಸರ್ಕಾರವು ಶಾಶ್ವತವಾಗಿರುವುದಿಲ್ಲ.  ನೀವು ಸಂಘಟಿತರಾದರೆ ಸರ್ಕಾರವನ್ನು ರಚನೆ ಮಾಡಬಹುದು”. ಇದೇ ಭಾಷಣದಲ್ಲಿ ಹಿಂದುಳಿದ ವರ್ಗಗಳಿಗೆ ಎಚ್ಚರಿಕೆ ನೀಡುತ್ತಾ ಹೇಳುತ್ತಾರೆ, “ರಾಜಕೀಯವಾಗಿ ಜಾಗೃತರಾಗದಿರುವುದರಿಂದಲೇ ಹಿಂದುಳಿದ ವರ್ಗದವರು ಸಂಘಟಿತರಾಗಲು ಸಾಧ್ಯವಾಗುತ್ತಿಲ್ಲ.  ಸಾಮಾಜಿಕ ಪ್ರಗತಿಗೆ ರಾಜಕೀಯ ಅಧಿಕಾರವೇ ಕೀಲಿಕೈಯಾಗಿರುವುದರಿಂದ, ಮೇಲ್ವರ್ಗಗಳಿಂದ ಅಧಿಕಾರ ಕಸಿದುಕೊಳ್ಳಲು ಹಿಂದುಳಿದ ವರ್ಗಗಳು ಸಂಘಟಿತರಾಗಬೇಕಿದೆ”. ಹಾಗೆಯೇ, ಮುಂದುವರೆದು ಪರಿಶಿಷ್ಟ ಜಾತಿಗಳಿಗೆ ಎಚ್ಚರಿಕೆ ನೀಡುತ್ತಾ, “ಪರಿಶಿಷ್ಟ ಜಾತಿಗಳು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಳ್ಳುವುದರಿಂದ ರಾಜ್ಯಾಧಿಕಾರವನ್ನು ಪಡೆಯಲು ಸಾಧ್ಯವಿಲ್ಲ. ಬದಲಾಗಿ ಶತ್ರುಗಳ ಕೈಯನ್ನು ಬಲಪಡಿಸುತ್ತಾರಷ್ಟೆ”.

ಡಿಸೆಂಬರ್‌ 6, 1956 ರಂದು ಬಾಬಾ ಸಾಹೇಬರು ಪರಿನಿರ್ವಾಣ ಹೊಂದಿದರು.  ಬಾಬಾ ಸಾಹೇಬರು ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಅವರ ಅನುಯಾಯಿಗಳು ವಿಮೋಚನಾ ರಥವನ್ನು ಮುನ್ನಡೆಸುವ ಬದಲು ಹಿಂದಕ್ಕೆ ತಳ್ಳಿದರು. ಅಕ್ಟೋಬರ್ 3, 1957 ರಂದು ಬಾಬಾ ಸಾಹೇಬರ ಅನುಯಾಯಿಗಳು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI) ವನ್ನು ಸ್ಥಾಪಿಸಿದರು. ಆದರೆ ಅದು 1958 ರಿಂದ RPI ಅನೇಕ ಭಾಗಗಳಾಗಿ ಹೊಡೆದು ಹಂಚಿ ಹೋಯಿತು. RPI ಗೆ ಇದ್ದಂತಹ ದೊಡ್ಡ ತೊಡಕೆಂದರೆ, ಅದು ಮಹಾರಾಷ್ಟ್ರ ರಾಜ್ಯ ಹಾಗು ಮಹಾರ್ ಸಮುದಾಯಕ್ಕೆ ಸೀಮಿತವಾಯಿತು.  ನಾಯಕತ್ವಕ್ಕಾಗಿ ಹಾಗು ವೈಯಕ್ತಿಕ ಹಿತಾಸಕ್ತಿಗಳಿಗೋಸ್ಕರ ಸ್ವಾರ್ಥಪರರಾದರು. ಆದ್ದರಿಂದಾಗಿ ವಿಮೋಚನ ರಥ ಹಿಂದಕ್ಕೆ ಹೋಯಿತು.

ಕಾನ್ಷಿರಾಮ್ ರು RPI ಪಕ್ಷದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಎಂಟು ವರ್ಷಗಳ ಕಾಲ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ ಬಳಿಕ, ಬಾಬಾ ಸಾಹೇಬರ ಕನಸು ನನಸು ಮಾಡುವ ಕಾರ್ಯ RPI ನಿಂದ ಸಾಧ್ಯವಾಗದು ಎಂದು ಅವರಿಗೆ ಮನವರಿಕೆಯಾಯಿತು. RPI ನಾಯಕರು ಪಂಢರಪುರ ಲೋಕಸಭಾ ಸ್ಥಾನಕ್ಕಾಗಿ ಕಾಂಗ್ರೆಸ್‌ ಪಕ್ಷದೊಂದಿಗೆ ಕೈ ಜೋಡಿಸಿದ್ದರಿಂದಾಗಿ ಅವರು ಎಲ್ಲಾ ಭರವಸೆಗಳನ್ನು ಕಳೆದುಕೊಂಡರು.  ಬಳಿಕ ಸ್ವತಂತ್ರವಾಗಿ ಹಿಂದುಳಿದ ವರ್ಗಗಳ ನೌಕರರನ್ನು ಸಂಘಟಿಸಲು ಪುಣೆ, ಮುಂಬೈ, ನಾಸಿಕ್, ನಾಗಪುರ ಹಾಗೂ ದೆಹಲಿಗಳಲ್ಲಿ ಸಭೆಗಳನ್ನು ಆರಂಭಿಸಿದರು. 1973 ರಲ್ಲಿ ದೆಹಲಿಯಲ್ಲಿ ಸಭೆ ಸೇರಿ ಹಿಂದುಳಿದ ವರ್ಗ ಹಾಗು ಧಾರ್ಮಿಕ ಅಲ್ಪಸಂಖ್ಯಾತರನ್ನು ಸುಮಾರು ಐದು ವರ್ಷಗಳ ಕಾಲ ಸಂಘಟಿಸಿ, ರೂಪುರೇಷೆಗಳನ್ನು  ಹಾಕಿಕೊಂಡರು. ಪರಿಣಾಮವಾಗಿ ಕಾನ್ಷಿರಾಮ್ ರು ಡಿಸೆಂಬರ್‌ 6, 1978 ರಂದು, ದೆಹಲಿಯಲ್ಲಿ Backward and Minority Communities Employees Federation (BAMCEF) ಎಂಬ ನೌಕರರ ಸಂಘವನ್ನು ಪ್ರಾರಂಭಿಸಿದರು.

ಮಾರ್ಚ್ 18, 1956 ರಂದು ಆಗ್ರಾದಲ್ಲಿ ಹೀಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ಮಾತುಗಳನ್ನು ಹೇಳಿದ್ದರು, “ಉನ್ನತ ಶಿಕ್ಷಣವನ್ನು ಪಡೆದವರು ಬಹುಸಂಖ್ಯಾತ ಹಿಂದುಳಿದವರನ್ನು ಕಾಪಾಡುತ್ತಾರೆ ಎಂದು ಭಾವಿಸಿದ್ದೆ, ಆದರೆ, ಇವರೆಲ್ಲಾ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಮಾತ್ರ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆಲೋಚಿಸಿದ ಕಾನ್ಷಿರಾಮ್ ರು ಬಾಬಾ ಸಾಹೇಬರು ನೀಡಿದಂತೆ ಜವಾಬ್ದಾರಿಯನ್ನು ನಿರ್ವಹಿಸಲು ಪಣತೊಟ್ಟರು. ನೌಕರರನ್ನು ಸಂಘಟಿಸಿ ಬಾಬಾ ಸಾಹೇಬರ ಕನಸನ್ನು ಈಡೇರಿಸಲು ಸಮಾಜಕ್ಕೆ ಮರಳಿ ಸಮಯ, ಬುದ್ಧಿ ಹಾಗು ಹಣವನ್ನು ನೀಡಬೇಕೆಂದು Pay Back to Society ಎಂಬ ವೇದಿಕೆಯೊಂದನ್ನು ಸ್ಥಾಪಿಸಿದರು. ಡಿಸೆ೦ಬರ್ 6, 1973 ರಲ್ಲಿ ಆಲೋಚನೆಗೆ ಬಂದ BAMCEF ಪೂರ್ವ ತಯಾರಿಯೊಂದಿಗೆ ಡಿಸೆಂಬರ್ 6, 1978 ರಂದು ದೆಹಲಿಯ ಬೋಟ್ ಕ್ಲಬ್ ನಲ್ಲಿ ಪ್ರಾರಂಭವಾಯಿತು.

BAMCEF ನ್ನು RBI ಅಂತಲೂ ಕಾನ್ಷಿರಾಮ್ ರು ಕರೆಯುತ್ತಿದ್ದರು. ನಿಸ್ವಾರ್ಥ ನಾಯಕರನ್ನು ಸೃಷ್ಟಿಸಲು BAMCEF ಕಾರ್ಯ ಆರಂಭಿಸಿತು. ಬಾಬಾ ಸಾಹೇಬರ ಕನಸನ್ನು ನನಸು ಮಾಡಲು, ರಾಜಕೀಯೇತರ ಸಂಘಟನೆಗಾಗಿ BAMCEF ಕೆಲಸ ಪ್ರಾರಂಭಿಸಿತು. ರಾಜಕೀಯೇತರ ಬೇರುಗಳಿಲ್ಲದಿರುವುದೇ, ಮಹಾರಾಷ್ಟ್ರದಲ್ಲಿ ಪಕ್ಷ ಸಂಘಟನೆ ಯಶಸ್ವಿಯಾಗಿಲ್ಲವೆಂಬುದು ಕಾನ್ಷಿರಾಮ್ ರಿಗೆ ಮನವರಿಕೆಯಾಗಿತ್ತು. ಆದಕಾರಣ, ಅವರು ಸುಮಾರು ಹತ್ತು ವರ್ಷಗಳ ಕಾಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗು ಧಾರ್ಮಿಕ ಅಲ್ಪಸಂಖ್ಯಾತ ನೌಕರರನ್ನು ಸಂಘಟಿಸಿದರು.  BAMCEF ಸಂಘವು ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಜಾಗೃತಿ ಮೂಡಿಸಿ, ವಿದ್ಯಾವಂತ ನೌಕರರ ನೇತೃತ್ವದಲ್ಲಿ ಕಾನ್ಷಿರಾಮ್ ರ ಚಳುವಳಿ ಪ್ರಾರಂಭವಾಯಿತು.
ಕ್ರಮೇಣ ಕಾನ್ಷಿರಾಮ್ ರಿಗೆ ಮನವರಿಕೆಯಾದ ಮತ್ತೊಂದು ವಿಚಾರವೆಂದರೆ, ಕೇವಲ ನೌಕರಸ್ಥರನ್ನು ಸಂಘಟಿಸಿದರೆ ಸಾಲದು, “ಹೋರಾಟದ ಫಲವೇ ಅಧಿಕಾರ”. ಹಾಗಾಗಿ ಚಳುವಳಿಗೆ ಪೂರಕವಾಗಿ ಇನ್ನಿತರ ಮಾದರಿಗಳಲ್ಲಿ ಸಂಘಟನೆಗೆ ಮುಂದಾದರು.

ವಿದ್ಯಾರ್ಥಿಗಳು, ಯುವಕರು ಹಾಗು ಮಹಿಳೆಯರನ್ನು ಸಂಘಟಿಸಲು ದಲಿತ್ ಸೋಷಿತ್ ಸಮಾಜ್ ಸಂಘರ್ಷ್ ಸಮಿತಿ (DS4) ಯನ್ನು ಡಿಸೆಂಬರ್ 6, 1981 ರಲ್ಲಿ ದೆಹಲಿಯಲ್ಲಿ ಸಾಂಸ್ಕೃತಿಕ ಘಟಕವಾಗಿ ಪ್ರಾರಂಭಿಸಿದ ಅವರು ಪಂಜಾಬ್, ಹರ್ಯಾಣ, ಹಿಮಾಚಲ್ ಪ್ರದೇಶ ಹಾಗು ಉತ್ತರ ಪ್ರದೇಶಗಳಲ್ಲಿ ಸಂಘಟಿಸಿದರು. ಅಹಿಂಸಾತ್ಮಕ ಮಾರ್ಗದಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿದರು. DS-4 ಮುಖೇನ ಆಯೋಜಿಸಿದಂತಹ ಕಾರ್ಯಕ್ರಮಗಳೆಂದರೆ, ಅಂಬೇಡ್ಕರ್ ಮೇಳಗಳು, ಪೂನಾ ಒಪ್ಪಂದವನ್ನು ಧಿಕ್ಕರಿಸುವ ಕಾರ್ಯಕ್ರಮಗಳು, ಜನ ಸಂಸತ್ತು, ಬರೇಲಿ ಮೋರ್ಚಾ. ಹಾಗೆಯೇ,  ಒಪ್ರೆಸ್ಡ್ ಇಂಡಿಯನ್‌, ಬಹುಜನ್ ಟೈಮ್ಸ್, ಬಹುಜನ್ ನಾಯಕ್ ಹಾಗು ಬಹುಜನ್ ಸಂಘಟಕ್” ಎಂಬ ಪತ್ರಿಕೆಗಳನ್ನೂ ಹೊರತಂದರು.

ಹಿಂದುಳಿದಿದ ವರ್ಗಗಳ ವಾಸಸ್ಥಳಗಳಲ್ಲಿ ಮದ್ಯಪಾನ ನಿಷೇಧ ಮಾಡುವುದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕಾರ್ಯಕ್ರಮಗಳನ್ನು DS4 ಆಯೋಜಿಸಿತು. ಏಪ್ರಿಲ್ 14, 1984 ರಲ್ಲಿ ಬಹುಜನ ಸಮಾಜ ಪಕ್ಷ ಸ್ಥಾಪಿಸುವವರೆಗೂ DS4 ಒಂದು ಹೋರಾಟ ಹಾಗು ಜಾಗೃತಿ ಘಟಕವಾಗಿ ಕಾರ್ಯನಿರ್ವಹಿಸುತ್ತದೆ. ಕಾನ್ಷಿರಾಮ್ ರು ದೇಶಾದ್ಯಂತ ಸಂಚರಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿದರು. ಈ ಕಾರ್ಯಕ್ರಮಗಳು ಬಹುಜನ ಸಮಾಜವನ್ನು ರಾಜಕೀಯ, ಆರ್ಥಿಕ ಹಾಗು ಸಾಂಸ್ಕತಿಕ ಸ್ಥಾನಮಾನಗಳ ಬಗ್ಗೆ ಜಾಗೃತರಾಗುವಂತೆ ಮಾಡಿತು.  DS4 ರಾಜಕೀಯ ಅಧಿಕಾರ, ಸಾಮಾಜಿಕ ಪರಿವರ್ತನೆ ಹಾಗು ಆರ್ಥಿಕ ಸ್ವಾವಲಂಬನೆಗಾಗಿ ಅಡಿಪಾಯ ಹಾಕಿತು.

ಹಿಂದುಳಿದ ವರ್ಗಗಳು ಪ್ರಸ್ತುತವಾಗಿ, ಈಗಿನ ಕೇಂದ್ರ ಸರ್ಕಾರದಲ್ಲಿ ಎಲ್ಲಾ ರೀತಿಯ ಭರವಸೆಗಳನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರವು ಜಾರಿ ತಂದಿರುವ ನೀತಿ-ನಿಯಮಗಳು ಅನೇಕ ಗೊಂದಲಗಳನ್ನು ಸೃಷ್ಟಿಸಿದೆ. ದೇಶದಲ್ಲಿ ಯಾವುದೇ ರೀತಿಯ ರಚನಾತ್ಮಕ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ವಿಫಲವಾಗಿದೆ. ಆದ್ದರಿಂದ ಕಾನ್ಷಿರಾಮ್ ರ ಪರಂಪರೆಯನ್ನು ಮರುಸ್ಥಾಪಿಸಬೇಕಿದೆ. 2001 ರಿಂದ ಕರ್ನಾಟಕ ರಾಜ್ಯದಲ್ಲಿ ಕಾನ್ಷಿರಾಮ್ ರ ಪರಂಪರೆಯನ್ನು ಸ್ಥಾಪಿಸುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ವಿದ್ಯಾರ್ಥಿ ಸಂಘಟನೆಗಳಿಂದ ಪ್ರಾರಂಭವಾಗಿದೆ.  ಈ ಪ್ರಯತ್ನ ಯಶಸ್ವಿಯಾಗಿ  ದೇಶದ ಮೂಲೆಮೂಲೆಗೂ ತಲುಪಿ, ಭಾರತದ ಸಂವಿಧಾನದ ಆಧಾರದ ಮೇಲೆ ಸಮ ಸಮಾಜವನ್ನು ನಿರ್ಮಾಣ ಮಾಡಬೇಕಿದೆ.
– ಡಾ.ಶ್ರೀನಿವಾಸ್.ಜಿ
MA., M.Phil., Ph.D (JNU, New Delhi)

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]