Friday, October 16 , 2020
ನಿರ್ಲಜ್ಜ ದೇಶ ಮತ್ತು ಲಜ್ಜೆಗೆಟ್ಟ ರಾಜಕಾರಣ -ನಾ ದಿವಾಕರ

            ಉತ್ತರಪ್ರದೇಶದ ಹಥ್ರಾಸ್ ಎಂಬ ಕುಗ್ರಾಮ ದೇಶದ ರಾಜಧಾನಿಯಿಂದ 200 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ 19 ವರ್ಷದ ಯುವತಿ ಮನೀಷಾ ವಾಲ್ಮೀಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಾಳೆ. ಪೊಲೀಸರ ಅಸಡ್ಡೆ ಮತ್ತು ವೈದ್ಯಲೋಕದ ನಿರ್ಲಕ್ಷ್ಯ ಆಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸುತ್ತದೆ. ಮುರಿದ ಕಾಲು, ಗಾಯಗೊಂಡ ನಾಲಿಗೆ ಮತ್ತು ಭಗ್ನವಾದ ಕನಸುಗಳ ನಡುವೆಯೇ ಬದುಕಲು ತವಕಿಸುವ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿ ಸಾಯುತ್ತಾಳೆ. ಅವಳ ಸಾವಿಗೆ ನಾಲ್ವರು ಕಾರಣರಾಗಿರುತ್ತಾರೆ. ಈ ಘಟನೆಯ ನಂತರ ಒಂದೆರಡು ದಿನಗಳಲ್ಲಿ ಇದೇ ರಾಜ್ಯದಲ್ಲಿ, ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆಯುತ್ತದೆ. ಇದು ಸಾರ್ವಜನಿಕ ಚರ್ಚೆಗೊಳಪಟ್ಟಿರುವ ವಿಚಾರ.

           ನಾವು, ಅಂದರೆ ಭವ್ಯ ಪರಂಪರೆಯನ್ನು ತಲೆಯ ಮೇಲೆ ಹೊತ್ತುಕೊಂಡು, ಚಾರಿತ್ರಿಕ ಶ್ರೇಷ್ಠತೆಯನ್ನು ಹೃದಯದಲ್ಲಿ ಹುದುಗಿಸಿಕೊಂಡು, ಪಾವಿತ್ರ್ಯತೆಯ ಕಣಜವನ್ನು ಮನದಾಳದಲ್ಲಿ ಅವಿಸಿಟ್ಟುಕೊಂಡು ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿರುವ ಭಾರತ ಎಂಬ ದೇಶದ ಪ್ರಜೆಗಳು ಈ ಘಟನೆಗಳಲ್ಲಿ ಏನೇನು ಕಾಣಬಹುದು.  ದುರ್ಬಲ-ಶೋಷಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಮೇಲ್ಜಾತಿಯ ಬಲಾಢ್ಯರಿಂದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಸಾವು. ಜಾತಿ ಸಮೀಕರಣಗಳನ್ನು ಬದಿಗಿಟ್ಟು ನೋಡಲೇಬೇಕೆಂದರೆ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಸಾವು.

ಅತ್ಯಾಚಾರ ಮಾಡಿದವರ ಸಾಮಾಜಿಕ-ರಾಜಕೀಯ ಪ್ರಾಬಲ್ಯ ಮತ್ತು ಜಾತಿ ಶ್ರೇಷ್ಠತೆ.
ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಭುತ್ವದ ಹರಸಾಹಸ – ಪೊಲೀಸ್, ಆಸ್ಪತ್ರೆ, ತನಿಖಾ ಏಜೆನ್ಸಿ, ಅಧಿಕಾರಶಾಹಿ ಮತ್ತು ರಾಜಕೀಯ ನಾಯಕತ್ವ ಇವಿಷ್ಟೂ ಸೇರಿದರೆ ಪ್ರಭುತ್ವ ಅಲ್ಲವೇ?ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಮಹಿಳೆಯ ಶವವನ್ನು ಕುಟುಂಬದವರಿಗೂ ನೀಡದೆ ಮಧ್ಯರಾತ್ರಿಯಲ್ಲಿ ಪೊಲೀಸರಿಂದಲೇ ಅಂತ್ಯಸಂಸ್ಕಾರ. ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೊರಟವರ ಬಂಧನ ಮತ್ತು ಅವರ ಮೇಲೆ ಪೊಲೀಸರ ಲಾಠಿ ಪ್ರಹಾರ. ಎಫ್ಐಆರ್ ದಾಖಲು. ಅತ್ಯಾಚಾರಿಗಳನ್ನು ಖುಲ್ಲಂಖುಲ್ಲಾ ಸಮರ್ಥಿಸುವ ಮೇಲ್ಜಾತಿ ಸಮುದಾಯದ ಸಂಘಟನೆಗಳು. ಈಗ ಸಂತ್ರಸ್ತೆಗೆ ಮತ್ತು ಅವರ ಕುಟುಂಬದವರಿಗೆ ನ್ಯಾಯ ದೊರಕಿಸಲು ಹೋರಾಡುತ್ತಿರುವವರ ವಿರುದ್ಧ “ ಅಂತರರಾಷ್ಟ್ರೀಯ ಪಿತೂರಿ”ಯ ಆರೋಪ. (ನಗರ ನಕ್ಸಲರ ಪ್ರವೇಶಕ್ಕೆ ಇನ್ನೂ ಸಮಯ ಇದೆ ಎಂದು ಭಾವಿಸೋಣ).
ಕೊನೆಯದಾಗಿ ಬಿಸಿರಕ್ತದ ಠಾಕೂರರ ಅಟ್ಟಹಾಸ ಮತ್ತು ಸಂಸ್ಕಾರವಿಲ್ಲದ(?) ಹೆಣ್ಣುಮಕ್ಕಳ ಬವಣೆಯ ಬಗ್ಗೆ ಅಧಿಕಾರಸ್ಥರ ವ್ಯಾಖ್ಯಾನ. ಬಹಳ ಮುಖ್ಯ ಅಂಶವೆಂದರೆ ಇಂತಹ ಅಮಾನುಷ ಘಟನೆಗಳನ್ನು ಕುರಿತ ಪ್ರತಿಕ್ರಿಯೆಯಲ್ಲೂ ಕಾಣಬಹುದಾದ ರಾಜಕಾರಣದ ಛಾಯೆ ಮತ್ತು ಪಕ್ಷನಿಷ್ಟೆಗೆ ಬಲಿಯಾದ ಸಂವೇದನೆ.

              ಇವಿಷ್ಟನ್ನೂ ಗಮನಿಸಿದಾಗ ನಾವು ಲಜ್ಜೆಗೆಟ್ಟ ರಾಜಕಾರಣದ ನಡುವೆ ಬದುಕುತ್ತಿದ್ದೇವೆ ಎನಿಸುವುದು ಸಹಜವಲ್ಲವೇ ? ಓರ್ವ ಸಾಧಾರಣ ಸಿನಿಮಾ ನಟನ ಆತ್ಮಹತ್ಯೆ ನಮ್ಮ ದೇಶದ ಬೌದ್ಧಿಕ ವಲಯದಲ್ಲಿ, ಮಾಧ್ಯಮ ಲೋಕದಲ್ಲಿ, ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸುತ್ತದೆ. ಓರ್ವ ಮಹಿಳೆಯ ಕಗ್ಗೊಲೆ ಮತ್ತು ಆಕೆಯ ಮೇಲಿನ ಅತ್ಯಾಚಾರ ಅಸ್ಮಿತೆಗಳ ಅಂಗಳದಲ್ಲಿ ಕಳೆದುಹೋಗುತ್ತದೆ. ಅತ್ಯಾಚಾರಿಗಳು ಕೊಲೆಗಾರರು ರಾಜಕೀಯ ಪ್ರಾಬಲ್ಯ ಹೊಂದಿದ್ದರೆ ಸಂತ್ರಸ್ತೆಯನ್ನೇ ಸುಟ್ಟುಹಾಕಲಾಗುತ್ತದೆ, ಮನೀಷಾ ಘಟನೆಯಲ್ಲಾದಂತೆ. ಒಂದು ವೇಳೆ ಅತ್ಯಾಚಾರಿಗಳು ರಾಜಕೀಯ ಪ್ರಭಾವವಿಲ್ಲದೆ ಕೊಟ್ಟ ಕಾಸಿಗೆ ನ್ಯಾಯ ಒದಗಿಸುವವರಾಗಿದ್ದರೆ ಎನ್ಕೌಂಟರ್ ನಲ್ಲಿ ಕೊಲ್ಲಲ್ಪಡುತ್ತಾರೆ, ಪ್ರಿಯಾಂಕ ರೆಡ್ಡಿ ಘಟನೆಯಲ್ಲಾದಂತೆ. ಎರಡೂ ಸಂದರ್ಭಗಳಲ್ಲಿ ಸಾಕ್ಷಿಗಳು ನಾಶವಾಗುತ್ತವೆ.

               ಜೀವಕ್ಕೆ ಬೆಲೆಯಿಲ್ಲದ ದೇಶದಲ್ಲಿ ಪ್ರಿಯಾಂಕ, ಮನೀಷಾ, ನಿರ್ಭಯ, ಧಾನಮ್ಮ, ಸೌಜನ್ಯ ಇವರೆಲ್ಲರೂ ಅಸ್ತಿತ್ವವೇ ಇಲ್ಲದಂತಾಗಿಬಿಡುತ್ತಾರೆ. ಮೂಲತಃ ಮಹಿಳೆಯರಲ್ಲವೇ ,
“ ಹೇಗಿರಬೇಕೋ ಹಾಗಿದ್ದರೆ ಸರಿ ಇಲ್ಲವಾದರೆ ,,,,,,,,,,????” ಈ ಧೋರಣೆ. ದಲಿತ ಮಹಿಳೆಯಾದರೆ ಈ ಧೋರಣೆಯ ಜೊತೆಗೆ “ ತಮ್ಮ ಸ್ಥಾನಮಾನವನ್ನು ಅರಿತು ನಡೆಯಬೇಕಲ್ಲವೇ,,,,,,????” ಎನ್ನುವ ದಾರ್ಷ್ಟ್ಯ. ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಶಾಸನ ಜಾರಿಯಾಗಿದೆ. ಆದರೆ ನೇಣು ಕುಣಿಕೆಯೂ ಅಸ್ಮಿತೆಯನ್ನಾಧರಿಸಿ ಬಿಗಿದುಕೊಳ್ಳುವ ದೇಶ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗುವಿಗೆ ಸಾಂತ್ವನವನ್ನೂ ಹೇಳದೆ, ತನ್ನ ಸಮುದಾಯದ ನರನಾಡಿಗಳಲ್ಲಿ ಹರಿಯುವ ಬಿಸಿರಕ್ತದ ಬಗ್ಗೆ ಹೆಮ್ಮೆ ಪಡುವುದನ್ನು , ಮತ್ತೋರ್ವ ಬಿಜೆಪಿ ಸಂಸದ ಹೆಣ್ಣುಮಕ್ಕಳಿಗೆ ಸಂಸ್ಕಾರವೇ ಮುಖ್ಯ ಎಂದು ಹೇಳುವುದನ್ನು ಹೇಗೆ ಬಣ್ಣಿಸುವುದು ?

            ದೇಶದ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಮನೀಷಾ ಕುಟುಂಬದ ಸದಸ್ಯರನ್ನು ಅಪ್ಪಿಕೊಂಡು ಸಾಂತ್ವನ ಹೇಳುವುದು ನಾಟಕೀಯ ಪ್ರಹಸನ ಎಂದು ಹೀಗಳೆಯುವವರಿಗೆ, ಕುಟುಂಬದವರಿಗೆ ಆ ಯುವತಿಯ ಶವವನ್ನು ನೋಡಲೂ ಅವಕಾಶ ನೀಡದೆ ಸುಟ್ಟುಹಾಕಿದ ಪೊಲೀಸರ ಧೋರಣೆ ಹೇಗೆ ಕಾಣಬೇಕು. ಅದು ಮೃದು ನಾಟಕ ಇದು ಕ್ರೂರ ನಾಟಕ ಎನ್ನಬಹುದೇ ? ಶವದಿಂದ ಸಾಕ್ಷಿ ನುಡಿಸಲು ಸಾಧ್ಯವಿಲ್ಲ ಆದರೆ ಶವವನ್ನು ಕೊಯ್ದರೆ ಸಾಕಷ್ಟು ಸತ್ಯ ಹೊರಬರುತ್ತವೆ ಅಲ್ಲವೇ ? ಇತ್ತ ಅನಾಥಳಂತೆ ಸುಟ್ಟುಹೋದ ಮನೀಷಾ ಅತ್ತ ಅಪರಾಧಿಗಳಂತೆ ಬಂಧಿತರಾದ ಆಕೆಯ ಕುಟುಂಬದ ಸದಸ್ಯರು, ಈ ಅಮಾಯಕರಿಗೆ ಬೆದರಿಕೆ ಹಾಕುವ ಠಾಕೂರರು. ಠಾಕೂರರ ವಿರುದ್ಧ ಎಫ್‍ಐಆರ್ ಸಹ ಸಲ್ಲಿಸದೆ, ನೊಂದ ಜೀವಗಳ ಮೇಲೆ ಎಫ್‍ಐಆರ್ ದಾಖಲಿಸುವ ಸರಕಾರ. ಇಲ್ಲಿ ಯಾರನ್ನು ಕ್ರೂರಿ ಎನ್ನಬೇಕು ?           ವಿವೇಕ, ವಿವೇಚನೆ ಮತ್ತು ಸೌಜನ್ಯ ಇರುವವರಿಗೆ ಹೇಳಬೇಕಿಲ್ಲ. ಇವೆಲ್ಲವನ್ನೂ ಕಳೆದುಕೊಂಡಿರುವ ಅಸ್ಮಿತೆಯ ರಾಜಕಾರಣದ ರೂವಾರಿಗಳಿಗೆ ಹೇಳಲೇಬೇಕಲ್ಲವೇ ? ಕ್ರೂರ ವ್ಯವಸ್ಥೆಯಲ್ಲಿ ನಡೆಯುವ ಎಲ್ಲ ಅಮಾನುಷ ಘಟನೆಗಳ ಹಿಂದೆಯೂ ಆ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯಗಳು, ಶೋಷಣೆಯ ಆಯಾಮಗಳು ಇದ್ದೇ ಇರುತ್ತವೆ. ನಮ್ಮ ಸುತ್ತಲಿನ ಜಾತಿ, ಮತಧರ್ಮಗಳ ರಾಜಕಾರಣದಲ್ಲಿ ಇದನ್ನು ಕಾಣುತ್ತಲೇ ಇದ್ದೇವೆ. ಒಂದು ಸಮಾಜದಲ್ಲಿ ಸಂವೇದನೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆ ಇದ್ದರೆ ಪ್ರತಿಯೊಂದು ಅತ್ಯಾಚಾರ, ದೌರ್ಜನ್ಯ ಪ್ರಕರಣವೂ ಮಾನಸಿಕ ಕ್ಷೋಭೆ ಉಂಟುಮಾಡುತ್ತದೆ. ಬಹುಶಃ ನವ ಭಾರತ ಈ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ.  ಆಸೀಫಾ ಮತ್ತು ಮನೀಷಾ ಪ್ರಕರಣದಲ್ಲಿ ಇದು ಸ್ಪಷ್ಟವಾಗಿದೆ.

            ಈ ಎರಡೂ ಪ್ರಕರಣಗಳಲ್ಲಿ ಭವ್ಯ ಭಾರತದ ಕನಸನ್ನು ಹೊತ್ತು ಸಂಸ್ಕೃತಿಯನ್ನು ಆರಾಧಿಸುವವರ ಧೋರಣೆಯನ್ನು ಗಮನಿಸಿದಾಗ ಭಾರತದ ಮಣ್ಣಲ್ಲೇ ತಾರತಮ್ಯದ ಕಣಗಳು ಬೆರೆತುಹೋಗಿವೆಯೇನೋ ಎನಿಸುತ್ತದೆ. “ ಆಕೆ ಅವಳಲ್ಲವೇ ನಾವೇಕೆ ಪ್ರತಿಭಟಿಸಬೇಕು,,,, ” ಎನ್ನುವ ಧೋರಣೆ ಜಾತಿ ಅಸ್ಮಿತೆಯ ನೆಲೆಯಲ್ಲಿ ಕಂಡುಬಂದರೆ, “ ಹೆಣ್ಣು ಹೆಣ್ಣಾಗಿರಬೇಕಲ್ಲವೇ,,,,” ಎನ್ನುವ ಧೋರಣೆ ಪುರುಷಾಧಿಪತ್ಯದ ನೆಲೆಯಲ್ಲಿ ಕಂಡುಬರುತ್ತದೆ. ಎರಡೂ ಸಂದರ್ಭಗಳಲ್ಲಿ ಮೇಲ್ಜಾತಿಯ ಮನಸುಗಳು ಬಹುಮಟ್ಟಿಗೆ ಒಂದೇ ಆಗಿರುವುದನ್ನು ಗಮನಿಸಬೇಕು. ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಹೋರಾಡುವ ಮನಸುಗಳು ಅಂತರರಾಷ್ಟ್ರೀಯ ಪಿತೂರಿಯ ಛಾಯೆಯಲ್ಲಿ ಕಾಣುತ್ತದೆ ಎಂದರೆ ನಮ್ಮ ಪ್ರಭುತ್ವದ ದೃಷ್ಟಿ ಎಷ್ಟು ಮಸುಕಾಗಿರಬೇಕು. ಆ ಕಣ್ಣುಗಳಲ್ಲಿ ಎಷ್ಟೊಂದು ಕೊಳಕು ತುಂಬಿರಬೇಕು. ಆ ಹೃದಯದಲ್ಲಿ ಅದೆಷ್ಟು ಕಲ್ಮಷ ಸಂಗ್ರಹವಾಗಿರಬೇಕು.

             ಭಾರತ ಹೀಗಿರಲಿಲ್ಲ ಎಂದು ಹೇಳುವಷ್ಟು ಆತ್ಮಸ್ಥೈರ್ಯ ಬಹುಶಃ ಯಾರಲ್ಲೂ ಇರಲಾರದು. ಏಕೆಂದರೆ ಭಾರತ ಹೀಗೆಯೇ ನಡೆದುಬಂದಿದೆ. ಮಹಾಭಾರತದಿಂದ ನವ ಭಾರತದವರೆಗೆ, ಮಥುರಾದಿಂದ ಹಥ್ರಾಸಿನವರೆಗೆ ಒಂದೆಡೆ ಪುರುಷ ಸಮಾಜದ ಅಟ್ಟಹಾಸ ಮತ್ತೊಂದೆಡೆ ಜಾತಿ ವ್ಯವಸ್ಥೆಯ ಕ್ರೌರ್ಯ ಎರಡು ಅಲಗಿನ ಕತ್ತಿಯ ಮೇಲೆ ನಡೆಯುತ್ತಲೇ ಈ ದೇಶದ ಮಹಿಳೆಯರು, ಅದರಲ್ಲೂ ಶೋಷಿತ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ, ಅತ್ಯಾಚಾರ, ಅಟ್ಟಹಾಸ ಮತ್ತು ಅಧಿಪತ್ಯವನ್ನು ಎದುರಿಸುತ್ತಾ ಬಂದಿದ್ದಾರೆ. ಆದರೆ ಅಸ್ಮಿತೆಯ ರಾಜಕಾರಣ, ಜಾತಿ ವ್ಯವಸ್ಥೆಯ ಚೌಕಟ್ಟುಗಳು, ಸಾಮಾಜಿಕ ಧೋರಣೆ ಮತ್ತು ಶ್ರೇಷ್ಠತೆಯ ವ್ಯಸನ ಇವೆಲ್ಲವೂ ನಮ್ಮೊಳಗಿನ ಸಂವೇದನೆ ಹಾಗೂ ಸೂಕ್ಷ್ಮತೆಯನ್ನೂ ಅಡ್ಡಡ್ಡಲಾಗಿ ಸೀಳುತ್ತಲೇ ಬಂದಿದೆ. ಹಾಗಾಗಿಯೇ ಮನೀಷಾ ನೂರರಲ್ಲಿ ಒಬ್ಬಳಾಗುತ್ತಾಳೆ, ಆಸಿಫಾ ನಿರ್ಲಕ್ಷಿತಳಾಗುತ್ತಾಳೆ.

            ಓರ್ವ ಅಸಹಾಯಕ ಯುವತಿಯನ್ನು ನಾಲ್ಕು ಜನ ಏಕಾಂತ ಸ್ಥಳಕ್ಕೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಸಾವಿನಂಚಿಗೆ ತಂದು ಬಿಸಾಡಿದಾಗ, ಈ ಘಟನೆಯ ಸಾಕ್ಷಿ ಅತ್ಯಾಚಾರಕ್ಕೊಳಗಾದ ಮಹಿಳೆಯಲ್ಲದೆ ಮತ್ತಾರಿರಲು ಸಾಧ್ಯ ? ಮನೀಷಾ ವಾಲ್ಮೀಕಿ ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಸ್ಪಷ್ಟವಾಗಿ ಹೇಳಿದ ಮೇಲೂ ಸಂಭೋಗವೇ ನಡೆದಿಲ್ಲ, ವೀರ್ಯಾಣು ಪತ್ತೆಯಾಗಿಲ್ಲ ಎಂದು ಹೇಳುವುದು ಬೌದ್ಧಿಕ ಕ್ರೌರ್ಯ ಎನಿಸುವುದಿಲ್ಲವೇ ? ಸಂಭೋಗ ನಡೆದಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಳುವುದು ಕಾನೂನುಬದ್ಧವೇ ? ಮನೀಷಾ ಪ್ರಕರಣದಲ್ಲಿ ಒಂದು ಅಸಹಜ ಸಾವು ಸಂಭವಿಸಿದೆ ಈ ಸಾವಿಗೆ ಕಾರಣರಾದವರು ಅತ್ಯಾಚಾರ ನಡೆಸದಿದ್ದರೂ ಶಿಕ್ಷಾರ್ಹರೇ ಅಲ್ಲವೇ ? ಇಂತಹ ಕ್ರೂರಿಗಳನ್ನು ಜಾತಿ ಶ್ರೇಷ್ಠತೆಯ ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ಒಂದು ಸಮುದಾಯ ನಮ್ಮ ನಡುವೆ ಇದೆ ಎಂದರೆ ನಾವು ತಲೆ ಎತ್ತಿ ತಿರುಗುವುದರಲ್ಲಿ ಅರ್ಥವಿಲ್ಲ.

           ದುರಂತ ಎಂದರೆ ಪ್ರಭುತ್ವದ ದೃಷ್ಟಿಯಲ್ಲಿ ಬಿಸಿರಕ್ತದ ಠಾಕೂರರು ಅಮಾಯಕರಾಗಿ ಕಾಣುತ್ತಾರೆ. ರಕ್ತ ಚೆಲ್ಲಿದ ಮನೀಷಾಳ ಪರ ನಿಲ್ಲುವವರು ಅಂತರ ರಾಷ್ಟ್ರೀಯ ಪಿತೂರಿ ನಡೆಸುವ ದುಷ್ಟರಂತೆ ಕಾಣುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ನಗರ ನಕ್ಸಲರು ನುಸುಳುತ್ತಾರೆ, ಪಾಕಿಸ್ತಾನದ ಏಜೆಂಟರೂ ಕಾಣುತ್ತಾರೆ, ಭಯೋತ್ಪಾದನೆಯ ಸುಳಿವೂ ದೊರಕಿಬಿಡುತ್ತದೆ. ಬಿಸಿರಕ್ತದ ಠಾಕೂರ ಕುಡಿಗಳು ಶುದ್ಧಹಸ್ತರಾಗಿಬಿಡುತ್ತಾರೆ. ಕಾರಣ ಸ್ಪಷ್ಟ, ಇವರು ರಾಜಕೀಯ ಅಧಿಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ, ಅಧಿಪತ್ಯ ರಾಜಕಾರಣಕ್ಕೆ ನವಿರಾದ ನೆಲಹಾಸುಗಳನ್ನು ಒದಗಿಸುತ್ತಾರೆ. ರಕ್ತ ಹೀನತೆಯಿಂದ ಬಳಲುವ ಶೋಷಿತ ಸಮುದಾಯಗಳಲ್ಲೂ ನೆತ್ತರು ಬಿಸಿಯಾಗಿಯೇ ಇರುತ್ತದೆ. ಈ ಸಮುದಾಯಗಳೂ ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಈ ಸಮುದಾಯವನ್ನು ಪ್ರತಿನಿಧಿಸುವ ನಾಯಕರು ಹರಿದು ಹಂಚಿಹೋಗಿದ್ದಾರೆ, ಕೆಲವರು ತಮ್ಮ ಸ್ವಾಭಿಮಾನವನ್ನೂ , ಅಸ್ಮಿತೆಯನ್ನೂ ಮಾರಿಕೊಂಡವರಾಗಿದ್ದಾರೆ.

        ಪಕ್ಷ ರಾಜಕಾರಣ ಅಸ್ಮಿತೆಗಳನ್ನು ನುಂಗಿಹಾಕುತ್ತಿರುವಂತೆ ಕಂಡುಬಂದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅಸ್ಮಿತೆಯ ರಾಜಕಾರಣ ಅಧಿಕಾರ ರಾಜಕಾರಣಕ್ಕೆ ಬಲಿಯಾಗುತ್ತಿರುವುದೂ ಗೋಚರಿಸುತ್ತದೆ. ಅಸ್ಮಿತೆಯ ರಾಜಕಾರಣದ ಫಲಾನುಭವಿಗಳು ತಮ್ಮ ಮೂಲ ನೆಲೆಯನ್ನೇ ಮರೆತು ಅಧಿಕಾರ ರಾಜಕಾರಣಕ್ಕೆ ಜೋತುಬಿದ್ದಾಗ ಶೋಷಿತ ಸಮುದಾಯಗಳು ಆಳವಾದ ಕಮರಿಗೆ ಬಿದ್ದುಹೋಗುತ್ತವೆ. ಉತ್ತರ ಪ್ರದೇಶದಲ್ಲಿ ಮತ್ತು ಭಾರತದಾದ್ಯಂತ ಈ ವಿದ್ಯಮಾನವನ್ನು ಗಮನಿಸುತ್ತಲೇ ಇದ್ದೇವೆ. ಹಾಗಾಗಿ ಪುರುಷ ಸಮಾಜಕ್ಕೆ ಮನೀಷಾ ಅಥವಾ ಆಸಿಫಾ ಅಥವಾ ಧಾನಮ್ಮ ಕೇವಲ ಮಹಿಳೆಯಾಗಿ ಕಂಡುಬರುತ್ತಾಳೆ. ಮೇಲ್ಜಾತಿಗಳಿಗೆ ಈ ಜೀವಗಳು ‘ ಅನ್ಯರ ’ ಗುಂಪಿಗೆ ಸೇರಿಬಿಡುತ್ತವೆ. ರಾಜಕಾರಣಿಗಳಿಗೆ ಲಾಭನಷ್ಟದ ಪಗಡೆಕಾಯಿಗಳಂತೆ ಕಂಡುಬರುತ್ತಾರೆ. ಊನ ಗ್ರಾಮದಲ್ಲಿ ಚರ್ಮ ಸುಲಿಸಿಕೊಂಡವರಿಗೂ, ಪೊಲೀಸರಿಂದ ಮಧ್ಯರಾತ್ರಿ ಸುಡಲ್ಪಟ್ಟ ಮನೀಷಾಳಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಸ್ತ್ರೀ-ಪುರುಷದ ಚೌಕಟ್ಟಿಗೆ ಸೀಮಿತವಾಗುತ್ತದೆ.

         ಮಾಯಾವತಿ ಏಕೆ ಸ್ಪಂದಿಸಲಿಲ್ಲ ಎಂದು ಕೇಳುವ ಮುನ್ನ, ರಾಹುಲ್ ಏಕೆ ಸ್ಪಂದಿಸುತ್ತಿದ್ದಾರೆ ಎಂದು ಯೋಚಿಸುವ ಮುನ್ನ ನಾಗರಿಕ ಸಮಾಜದ ಒಂದು ಭಾಗವಾಗಿ ನಾವು ಎಷ್ಟರ ಮಟ್ಟಿಗೆ ಸ್ಪಂದಿಸಿದ್ದೇವೆ ಎಂದು ಯೋಚಿಸುವ ಮನಸುಗಳು ಕಡಿಮೆಯಾಗುತ್ತಿವೆ. ಏಕೆಂದರೆ ದೇಶದ ಅಭಿವೃದ್ಧಿಯ ಮುಂದೆ ಇವೆಲ್ಲವೂ ಗೌಣ ಎನಿಸುವಂತಹ ಸಮೂಹ ಸನ್ನಿಗೆ ನಾಗರಿಕ ಸಮಾಜದ ಬಹುದೊಡ್ಡ ಸಮೂಹ ಬಲಿಯಾಗಿದೆ. ಈ ಸಮೂಹದಲ್ಲಿ ಶೋಷಿತರೂ ಇದ್ದಾರೆ ಎನ್ನುವುದು ದುರಂತವಾದರೂ ಸತ್ಯ. ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯನ್ನೇ ದೋಷಿಯಂತೆ ಕಾಣುವ, ದೂಷಿತಳನ್ನಾಗಿ ಮಾಡುವ ಶತಮಾನಗಳ ಪರಂಪರೆಗೆ ನಮ್ಮ ಸಮಾಜ ಒಗ್ಗಿಹೋಗಿದೆ. ಶಿಕ್ಷಣ ಮತ್ತು ಪ್ರಗತಿ ಈ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗಿಲ್ಲ.

         ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ನೆಲೆಯಲ್ಲಿ “ ಭಾರತ ಹೀಗಿರಲಿಲ್ಲ ” ಎಂದು ಹೇಳಬಹುದು. ಮೂರು ನಾಲ್ಕು ದಶಕಗಳ ಹಿಂದೆ ಭಾರತ ಈ ರೀತಿಯ ನಿಷ್ಕ್ರಿಯತೆಗೆ ಬಲಿಯಾಗಿರಲಿಲ್ಲ. ಈ ಮಟ್ಟಿಗೆ ನಿರ್ಲಜ್ಜವಾಗಿರಲಿಲ್ಲ. ಒಂದು ಬೆಲ್ಚಿ, ಒಂದು ಕರಂಚೇಡು, ಒಂದು ಬತಾನಿತೊಲ, ಒಂದು ಲಕ್ಷ್ಮಣಪುರಬಾಥೆ, ಒಂದು ತ್ಸೆಂಡೂರು ನೂರಾರು ಬೀದಿ ನಾಟಕಗಳಿಗೆ, ಹಾಡುಗಳಿಗೆ, ಹೋರಾಟಗಳಿಗೆ ಪ್ರೇರಣೆ ನೀಡಿದ್ದವು. ಆ ಒಂದು ಭಾರತ ಇಂದು ಇಲ್ಲವಾಗಿದೆ. ಏಕೆ ಹೀಗಾಯಿತು ಎಂದು ಕೆದಕುತ್ತಾ ಹೋದರೆ ಮತ್ತೊಮ್ಮೆ 1980-90ರ ದಶಕದ ಸಾಂಸ್ಕೃತಿಕ ರಾಜಕಾರಣ ಮತ್ತು ಮಂಡಲ-ಕಮಂಡಲದ ವಿಷವರ್ತುಲದಲ್ಲಿ ಬಂದು ನಿಲ್ಲುತ್ತೇವೆ. ಶೋಷಿತರ ದನಿಗೆ ದನಿಯಾಗಬೇಕಾದವರು ಶೋಷಿತ ಸಮುದಾಯದವರೇ ಆಗಬೇಕಿಲ್ಲ ಹಾಗೆಯೇ ಶೋಷಿತ ಸಮುದಾಯದ ಜನಪ್ರತಿನಿಧಿಗಳು ಈ ಆಕ್ರಂದನದ ದನಿಗೆ ದನಿಯಾಗದೆ ಅನ್ಯ ಮಾರ್ಗವೂ ಇಲ್ಲ. ಈ ಎರಡು ವಾಸ್ತವಗಳ ನಡುವೆ ನಾವು ಇಂದು ನಿರ್ಲಜ್ಜ ಭಾರತದಲ್ಲಿ ಬದುಕುತ್ತಿದ್ದೇವೆ.

-ನಾ‌.ದಿವಾಕರ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]