
ಮೈಸೂರು(12-01-2021): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜೆಡಿಎಸ್ ಶಾಸಕ ಸಾರಾ ಮಹೇಶ್ ನಡುವಿನ ಭಿನ್ನಾಭಿಪ್ರಾಯ ಸಾರ್ವಜನಿಕವಾಗಿ ಹೊರಬಿದ್ದು, ಇಬ್ಬರೂ ಮುಜುಗರಕ್ಕೆ ಒಳಗಾದ ಪ್ರಸಂಗ ಸಂಭವಿಸಿದೆ.
ಶಾಸಕರು ಅಧ್ಯಕ್ಷರಾಗಿರುವ ಕಾಗದ ಪತ್ರ ಸಮಿತಿ ಸಭೆಯನ್ನು ಇಂದು ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ರೋಹಿಣಿ ಅವರು ಒಳ ಬಂದಿದ್ದಾರೆ. ವೇದಿಕೆಯ ಮೇಲೆ ಡಿಸಿಗೆ ಆಸನದ ವ್ಯವಸ್ಥೆ ಇಲ್ಲದ ಕಾರಣ, ವೇದಿಕೆ ಮುಂಭಾಗದ ಆಸನದಲ್ಲಿ ಕುಳಿತರು.
ಕೆಲ ಹೊತ್ತಿನ ಬಳಿಕ ರೋಹಿಣಿ ಅವರು ಮಾಸ್ಕ್ ಧರಿಸಿ ತಮ್ಮ ಮಾತುಗಳನ್ನು ಶುರು ಮಾಡಿದರು. ಇದನ್ನು ಕಂಡ ಶಾಸಕರು, ‘ನಿಮ್ಮ ಮಾತುಗಳು ಕೇಳಿಸುತ್ತಿಲ್ಲ, ಮಾಸ್ಕ್ ತೆಗೆದು ಮಾತನಾಡಿ’ ಎಂದರು. ಅದಕ್ಕೆ ಡಿಸಿ, ‘ಮಾರ್ಗಸೂಚಿಯಂತೆ ಮಾಸ್ಕ್ ತೆಗೆಯಬಾರದು. ಮಾಸ್ಕ್ ತೆಗೆದು ನಾನು ಮಾತನಾಡುವುದಿಲ್ಲ. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೊರಡುತ್ತೇನೆ’ ಎಂದರು.
ಡಿಸಿ ಅವರ ಮಾತಿಗೆ ತಿರುಗೇಟು ನೀಡಿದ ಸಾರಾ ಮಹೇಶ್, ‘ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಗೆ ನೀವೂ ಸ್ವಾಗತ ಮಾಡಿಲ್ಲ, ಆದರೂ ಪರವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಬಗ್ಗೆ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ನಿಮಗೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ ಎಂದು ಪ್ರತ್ಯುತ್ತರ ನೀಡಿದರು. ಆನಂತರ ಜಿಲ್ಲಾಧಿಕಾರಿಗಳು ಸಭೆಯಿಂದ ಹೊರ ನಡೆದರು.