Monday, July 26 , 2021
ಜೆಡಿಎಸ್, ಕಾಂಗ್ರೆಸ್ ನ ಮನೆ ಸೋರುತ್ತಿತ್ತು | ನೀರು ನೆಲಕ್ಕೆ ಬೀಳದಂತೆ ಎನ್.ಮಹೇಶ್ ತಡೆಯಬೇಕಿತ್ತಂತೆ!

ಜೆಡಿಎಸ್, ಕಾಂಗ್ರೆಸ್ ನ ಮನೆ ಸೋರುತ್ತಿತ್ತು. ಬಿಎಸ್ ಪಿ ಶಾಸಕ ನೀರು ನೆಲಕ್ಕೆ ಬೀಳದಂತೆ ತಡೆಯಬೇಕಿತ್ತಂತೆ. ಇದು ಸದ್ಯದ ಪರಿಸ್ಥಿತಿ. ಕರ್ನಾಟಕ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ. ಜೆಡಿಎಸ್, ಬಿಎಸ್ ಪಿಯನ್ನು ಗುರಾಣಿಯಾಗಿಯೇ ಬಳಸಿಕೊಂಡಿದೆ. ಬಿಎಸ್ ಪಿಯ ಏಕೈಕ ಶಾಸಕರಾಗಿರುವ ಎನ್.ಮಹೇಶ್ ಅವರ ಕ್ಷೇತ್ರಕ್ಕೆ ಸರಿಯಾದ ಅನುದಾನವನ್ನೂ ನೀಡದೇ ಬರೆ ತೋರಿಕೆಗೆ ತಾನು ಕೃತಜ್ಞನಾಗಿರುವಂತೆ ಜೆಡಿಎಸ್ ವರ್ತಿಸಿತ್ತು. ಕರ್ನಾಟಕದಲ್ಲಿ ಶೂನ್ಯ ಸ್ಥಿತಿಯಲ್ಲಿದ್ದ ಜೆಡಿಎಸ್, ಬಿಎಸ್ ಪಿಯ ಬೆಂಬಲದಿಂದ 37 ಸೀಟುಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಗೆದ್ದುಕೊಂಡಿತು. ಆಗ ತಾನೆ ಬಲ ಪಡೆದುಕೊಂಡಿದ್ದ ಬಿಎಸ್ ಪಿಗೆ ಜೆಡಿಎಸ್ ಜೊತೆಗಿನ ಮೈತ್ರಿ ಬೃಹತ್ ನಷ್ಟವನ್ನುಂಟು ಮಾಡಿತ್ತು. ಜೆಡಿಎಸ್ ಜೊತೆಗಿನ ಮೈತ್ರಿ ಬಿಎಸ್ ಪಿಯಲ್ಲಿ ಸದ್ದಿಲ್ಲದೇ ಒಳಜಗಳಕ್ಕೂ ಕಾರಣವಾಗಿತ್ತು ಎನ್ನುವುದು ಸತ್ಯ. ಇಷ್ಟಾದರೂ ಜೆಡಿಎಸ್ ಗೆ ಯಾವುದೇ ತೊಂದರೆಯಾಗಿರಲಿಲ್ಲ.

ಜೆಡಿಎಸ್, ಕಾಂಗ್ರೆಸ್, ಬಿಎಸ್ ಪಿ ಮೈತ್ರಿ ಸರಕಾರ ಸೃಷ್ಟಿಯಾದ ಬಳಿಕ ಕೆಲವೇ ಸಮಯಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಮನೆಯೊಳಗೆ ಅಸಮಾಧಾನದ ಕಿಚ್ಚು ಹತ್ತಿತ್ತು.  ಕಾಂಗ್ರೆಸಿಗರು ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡಿದರೆ, ಜೆಡಿಎಸ್ ನವರು ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು. ಮೊದಲೇ ಹಾವು, ಮುಂಗುಸಿಯಂತಿದ್ದ ಗೌಡ್ರ ಫ್ಯಾಮಿಲಿ ಹಾಗೂ ಸಿದ್ದರಾಮಯ್ಯನವರಿಗೆ ಹೊಂದಾಣಿಕೆ ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಹಾಗೂ ಗೌ್ಡ್ರ ಫ್ಯಾಮಿಲಿ ನಡುವೆ ನೇರ ಪೈಪೋಟಿ ಆರಂಭವಾಗಿತ್ತು. ಇದು ಸರಕಾರ ಮುಚ್ಚುವ ಹಂತಕ್ಕೆ ತಲುಪಿದ್ದೇ  ಕರ್ನಾಟಕದ ರಾಜಕೀಯ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ 28 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಗೆದ್ದಿತು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇದ್ದರೂ ಮಾಜಿ ಪ್ರಧಾನಿ ದೇವೇಗೌಡರು ಹೀನಾಯವಾಗಿ ಸೋತರು. ಈ ಸೋಲಿಗೆ ನೇರ ಕಾರಣ ಕಾಂಗ್ರೆಸ್ ಎನ್ನುವುದು ಗೌಪ್ಯವಾಗಿಯೂ ಉಳಿದಿಲ್ಲ. ತಮ್ಮ ಪುತ್ರನನ್ನು ಮಂಡ್ಯ ಕ್ಷೇತ್ರದಲ್ಲಿ ಹೇಗಾದರೂ ಗೆಲ್ಲಿಸಬೇಕು ಎನ್ನುವ ಕುಮಾರಸ್ವಾಮಿಯ ಕನಸಿಗೆ ಭಂಗವನ್ನುಂಟು ಮಾಡಿದ್ದೂ ಕಾಂಗ್ರೆಸಿಗರೇ ಎನ್ನುವುದು ಅದಾಗಲೇ ಬಯಲಾಗಿದೆ. ಹೀಗೆ ಒಂದು ಮೈತ್ರಿ ಪಕ್ಷವಾಗಿ ಸಾಗಿದ್ದ ಕಾಂಗ್ರೆಸ್, ಜೆಡಿಎಸ್ ತಮ್ಮ ಕಾಲುಗಳನ್ನು ತಾವೇ ಎಳೆದಾಡುತ್ತಾ ತಮ್ಮವರ ಸೋಲಿಗೆ ತಾವೇ ಕಾರಣವಾಗುತ್ತಾ ಸಾಗುತ್ತಿದ್ದರು. ಈ ನಡುವೆ ಸರಕಾರವನ್ನು ಹೇಗಾದರೂ ಬೀಳಿಸ ಬೇಕೆಂದು ಕಾಯುತ್ತಿದ್ದ ಬಿಜೆಪಿಗೆ ಇದು ವರದಾನವಾಗಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ನ ಅತೃಪ್ತರು ಬಿಜೆಪಿ ಪಾಳಯಕ್ಕೆ ಸದ್ದಿಲ್ಲದಂತೆ ಬೆಂಬಲ ನೀಡಿದ್ದರು ಎಂದು ಹೇಳಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡ ಇತ್ತು ಎನ್ನುವುದೂ ಗುಟ್ಟಾಗಿ ಉಳಿದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸಹವಾಸದಿಂದ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಈ ಮೈತ್ರಿ ಉಳಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಸರಿಯಾದ ನೆಲೆ ಇರುವುದಿಲ್ಲ ಎನ್ನುವುದು ಅದಾಗಲೇ ಕಾಂಗ್ರೆಸ್ ಗೆ ಸ್ಪಷ್ಟವಾಗಿತ್ತು. ಈ ಕಾರಣಕ್ಕೆ ಅತೃಪ್ತರನ್ನು ಬಳಸಿಕೊಂಡು ಕಾಂಗ್ರೆಸ್ ಆಟವಾಡಿದೆ ಎನ್ನುವುದು ಇದೀಗ ಕೇಳಿ ಬರುತ್ತಿರುವ ಅನುಮಾನಗಳಾಗಿವೆ. ಇದಕ್ಕೆ ಸಾಕ್ಷಿ ಒದಗಿಸುವಂತೆ ಅತೃಪ್ತರು ನಾವು ಮುಂಬೈಯಲ್ಲಿ ತಲೆ ಮರೆಸಿಕೊಳ್ಳಲು ಕಾಂಗ್ರೆಸ್ ನಾಯಕರ ಕೈವಾಡವೂ ಇದೆ ಎನ್ನುವ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್ –ಜೆಡಿಎಸ್ ನ ಒಳ ರಾಜಕೀಯವಾಗಿತ್ತು. ಈ ಜಗಳ ತಾರಕಕ್ಕೇರಿದಾಗಲೇ ಮೈತ್ರಿ ಸರಕಾರ ಪತನವಾಗಿದೆ.

ಮೈತ್ರಿ ಸರಕಾರ ಪತನಕ್ಕೆ ನಿಜವಾಗಿಯೂ ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ನಾಯಕರೇ ಪ್ರಮುಖ ಕಾರಣಕರ್ತರಾಗಿದ್ದರೂ ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಿ ಅತೃಪ್ತ ಶಾಸಕರು ಮಾತ್ರವೇ ಸರಕಾರ ಬೀಳಲು ಕಾರಣ ಎಂದು ಬಿಂಬಿಸಿದ್ದರು. ಕಾಂಗ್ರೆಸ್ ಗೆ ಅತೃಪ್ತ ಶಾಸಕರು ಹಲವು ಬಾರಿ ಎಚ್ಚರಿಕೆ ನೀಡಿದಾಗಲೇ ಕಾಂಗ್ರೆಸ್ ಅವರ ಬಳಿ ಮಾತನಾಡಬಹುದಿತ್ತು. ಜೆಡಿಎಸ್ ಗೂ ಇದು ಅನ್ವಯವಾಗಬೇಕಿತ್ತು. ತಮ್ಮ ಪಕ್ಷದ ಶಾಸಕರ ಮಾತುಗಳನ್ನು ಕೇಳಿಸಿಕೊಂಡು ಅವರ ವಿಶ್ವಾಸಗಳಿಸುವ ಎಷ್ಟೋ ಅವಕಾಶಗಳು ಕಾಂಗ್ರೆಸ್ –ಜೆಡಿಎಸ್ ಕಣ್ಣ ಮುಂದೆಯೇ ಇತ್ತು. ಆದರೆ ‘ವಿಪ್’ ಅಸ್ತ್ರದ ಧೈರ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಅತೃಪ್ತರ ಮಾತುಗಳನ್ನು ಕೇಳಿಸಿಕೊಳ್ಳಲೂ ಹೋಗಿಲ್ಲ ಎನ್ನುವುದು ವಾಸ್ತವಾಂಶವಾಗಿದೆ. ಈ ಕಾರಣಕ್ಕಾಗಿಯೇ ಮೈತ್ರಿ ಸರಕಾರ ನೆಲಕಚ್ಚಿದೆ. ಇದಕ್ಕೆ ಕೇವಲ ಅತೃಪ್ತ ಶಾಸಕರ ಪಾತ್ರ ಮಾತ್ರವಲ್ಲದೇ ಜೆಡಿಎಸ್-ಕಾಂಗ್ರೆಸ್ ನ ಉನ್ನತ ಸ್ಥಾನದ ನಾಯಕರ ಪಾಲು ಹೆಚ್ಚಿದೆ ಎನ್ನುವುದು ವಾಸ್ತವ.

ಮೈತ್ರಿ ಸರಕಾರ ಪತನಕ್ಕೆ ನೇರ ಕಾರಣವಾಗಿರುವುದು ಜೆಡಿಎಸ್- ಕಾಂಗ್ರೆಸ್ ಶಾಸಕರು ಹಾಗೂ ನಾಯಕರು. ಆದರೆ ಸರಕಾರ ಪತನದ ಬಳಿಕ ಬಿಎಸ್ ಪಿ ಶಾಸಕ ಎನ್.ಮಹೇಶ್ ಸರಕಾರಕ್ಕೆ ಬೆಂಬಲ ನೀಡಿಲ್ಲ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ವ್ಯಕ್ತಪಡಿಸಿದ್ದರು. ಕಳೆದ ಚುನಾವಣೆ ಸಂದರ್ಭದಲ್ಲಿ ಬಿಎಸ್ ಪಿಯನ್ನು ಹೀನಾಮಾನವಾಗಿ ಬೈಯ್ಯುತ್ತಿದ್ದ ಇದೇ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಯಾವ ನೈತಿಕತೆಯ ಆಧಾರದಲ್ಲಿ ಬಿಎಸ್ ಪಿಯ ಬೆಂಬಲ ಕೇಳುತ್ತಾರೆ ಎಂದು ಎನ್.ಮಹೇಶ್ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ನ ಮನೆ ಸೋರುತ್ತಿತ್ತು. ಅದನ್ನು ಸರಿಪಡಿಸಲು ಬೇಕಾದಷ್ಟು ಸಮಯಾವಕಾಶಗಳೂ ಇತ್ತು. ಆದರೆ, ಇದನ್ನು ಸರಿಪಡಿಸದೇ ಬಿಎಸ್ ಪಿ ಶಾಸಕ ಎನ್.ಮಹೇಶ್ ನೀರು ಸೋರಿಕೆಯಾಗದಂತೆ ತಡೆಯ ಬೇಕಿತ್ತು ಎಂದು ಹೇಳುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿ ಬಂದಿದೆ.

ಎನ್.ಮಹೇಶ್ ಜೆಡಿಎಸ್ ಗೆ ಬೆಂಬಲ ನೀಡುತ್ತಿದ್ದರೂ ಸಮ್ಮಿಶ್ರ ಸರಕಾರ ಉಳಿಯುತ್ತಿರಲಿಲ್ಲ. ಯಾಕೆಂದರೆ, ಸಮ್ಮಿಶ್ರ ಸರಕಾರದ ಕಾಂಗ್ರೆಸ್-ಜೆಡಿಎಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗಿದ್ದರು. ಇನ್ನೊಂದೆಡೆ ಗೊಂದಲದ ಮಾಹಿತಿ ಹಾಗೂ ಸಂವಹನದ ಕೊರತೆಯಿಂದಾಗಿ ಎನ್.ಮಹೇಶ್ ತಟಸ್ಥವಾಗಿದ್ದರು ಎನ್ನುವ ಅಭಿಪ್ರಾಯ ಸದ್ಯ ಕೇಳಿ ಬಂದಿದೆ. ಕರ್ನಾಟಕದ ರಾಜಕೀಯ ಪರಿಸ್ಥಿತಿ ಹಾಗೂ ಜನರು ಆಡುತ್ತಿರುವ ಮಾತುಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ. ಕೆಲವರು ಸ್ಪೀಕರ್ ರಮೇಶ್ ಕುಮಾರ್ ಅಭಿಮಾನಿಗಳಾಗಿದ್ದಾರೆ. ಇನ್ನು ಕೆಲವರು ಸಿದ್ದರಾಮಯ್ಯ ಅಭಿಮಾನಿಗಳಾಗಿದ್ದಾರೆ. ಇನ್ನು ಕೆಲವರು ಕುಮಾರಸ್ವಾಮಿ ಅಭಿಮಾನಿಗಳಾಗಿದ್ದಾರೆ. ಹೀಗೆ ಸರಕಾರ ಉಳಿಸುವ ಹಾಗೂ ಸರಕಾರ ಬೀಳಿಸುವ ಗುಂಗಿನಲ್ಲಿ ಜೆಡಿಎಸ್ –ಕಾಂಗ್ರೆಸ್ ಮನೆ ಸೋರಲು ಪ್ರಮುಖ ಕಾರಣ ಯಾರು ಎನ್ನುವುದನ್ನು ಜನತೆ ಮರೆತು. ಕೇವಲ ಅತೃಪ್ತ ಶಾಸಕರೋ, ತಟಸ್ಥವಾಗಿ ಉಳಿದಿರುವ ಶಾಸಕರನ್ನು ಗುರಿ ಮಾಡಿಕೊಂಡು ಮಾತನಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಸದ್ಯ ಕೇಳಿ ಬಂದಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]