Saturday, April 17 , 2021
ಜೀವಂತ ದೇವರುಗಳಾದ ಪೌರ ಕಾರ್ಮಿಕರ ಧ್ವನಿಯಾಗುವವರು ಯಾರು? -ಪ್ರೊಫೆಸರ್ ಹರಿರಾಮ್.ಎ

ಅರ್ಚಕರ ತರಬೇತಿಗೆ ಹೊಸ ಯೋಜನೆ ಜಾರಿ, ಅರ್ಚಕರಿಗೆ ಆರೋಗ್ಯ ವಿಮೆ ಹಾಗೂ ಪೆನ್ಷನ್ ನೀಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಘೋಷಿಸಿದ್ದಾರೆ. ದೇವರು ಮತ್ತು ಮನುಷ್ಯನ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಅದರಿಂದ ಜೀವನ ನಡೆಸುವವನೆ ಅರ್ಚಕ, ಬಹುಶ ಈ ಅರ್ಚಕ ಇಲ್ಲದಿದ್ದರೂ ದೇವರು ನಮ್ಮನ್ನು ಬಿಟ್ಟು ಎಲ್ಲಿಯೂ ಓಡಿ ಹೋಗುವುದಿಲ್ಲ. ಜೊತೆಗೆ ಯಾವ ಭಕ್ತನೂ ಕೂಡ ದೇವರನ್ನು ಪೂಜಿಸುವುದಾಗಲಿ ಪ್ರಾರ್ಥಿಸುವುದಾಗಲಿ ನಿಲ್ಲಿಸುವುದಿಲ್ಲ.

ನಮ್ಮ ಸರ್ಕಾರಗಳಿಗೆ ದೇವರ ಮೇಲಿನ ಭಕ್ತಿ ಮತ್ತು ಧಾರ್ಮಿಕ ಆಸಕ್ತಿಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವ-ಇಚ್ಚೆಯಿಂದ ಮಾಡುವ ಕೆಲಸದ ಬಗ್ಗೆ ಮತ್ತು ಜನಾಂಗದ ಬಗ್ಗೆ ಇರುವ ಕಾಳಜಿ ಪ್ರಜೆಗಳ ಆರೋಗ್ಯ ಮತ್ತು  ಪರಿಸರ ಸ್ವಚ್ಛತೆಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ ದುಡಿಯುತ್ತಿರುವ ಪೌರ ಕಾರ್ಮಿಕರ ಬಗ್ಗೆ ಏಕೆ ಇಲ್ಲಾ? ನಮ್ಮನ್ನು ಹಾಗು ನಮ್ಮ ದೇಶವನ್ನು ಶತ್ರುಗಳಿಂದ ರಕ್ಷಿಸಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಪ್ರತಿ ಕ್ಷಣವೂ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ನಮ್ಮ ಸೈನಿಕರ ಶ್ರಮ, ಸೇವೆಯ ಫಲವಾಗಿ ಇಲ್ಲಿ ನಾವು ಹಾಯಾಗಿ ನಮ್ಮ ಕುಟುಂಬದ ಜೊತೆಗೆ ಸಂತೋಷದಿಂದ ಜೀವನ ಕಳೆಯುತ್ತಿದ್ದೇವೆ. ಹಾಗೆಯೇ ನಾವು ನೆಮ್ಮದಿಯ ಜೀವನ ಸಾಗಿರಲು ಬೆಳಗ್ಗೆ 5 ಗಂಟೆಗೆ ಎದ್ದು ತಮ್ಮ ಗಂಡ ಮಕ್ಕಳಿಗೆ ಬೆಳಗಿನ ತಿಂಡಿಯನ್ನು ತಯಾರು ಮಾಡಿ ತಮ್ಮ ಮಕ್ಕಳ ಶಾಲೆ ಮತ್ತು ಶಿಕ್ಷಣದ ಬಗ್ಗೆ ತಲೆಕೆಡಸಿಕೊಳ್ಳದೆ ದಿನನಿತ್ಯ ನಗರ, ಪಟ್ಟಣಗಳ ಬೀದಿ ಬೀದಿಯ ಹೊಲಸನ್ನು ಸ್ವಚ್ಛ ಮಾಡಲು, ನಮ್ಮ ಬೀದಿಗಳನ್ನು ಗುಡಿಸಿ, ಸ್ವಚ್ಛ ಮಾಡಿ ನಮ್ಮ ಆರೋಗ್ಯವನ್ನು ಹಾಗು ಪರಿಸರದ ಸ್ವಚ್ಚತೆಯನ್ನು ಕಾಪಾಡುತ್ತಿರುವ ಪೌರ ಕಾರ್ಮಿಕರು ನಮ್ಮ ಯೋಧರ ಹಾಗೆ ನಮ್ಮನ್ನು ಹಾಗು ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆ.  ಆದರೆ ನಾವಾಗಲಿ ನಮ್ಮ ಸರ್ಕಾರಗಳಾಗಲಿ  ಇವರ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೆ?

ಸರಿಸುಮಾರು 1,30,88,022 ಜನಸಂಖ್ಯೆಯುಳ್ಳ ಬೆಂಗಳೂರು ಮಹಾನಗರ ಒಂದರಲ್ಲೆ ಸುಮಾರು 18,500 ಪೌರ ಕಾರ್ಮಿಕರು ಹಾಗೂ 4646 ಆಟೋ ಟಿಪ್ಪರ್ ಚಾಲಕರು ನಮ್ಮ ಮನೆಗಳಲ್ಲಿ ಹಾಗು ವ್ಯಾಪಾರ ಕೇಂದ್ರಗಳಲ್ಲಿ ಉತ್ಪಾದನೆ ಆಗುವ ಕಸವನ್ನು ತೆರುವುಗೊಳಿಸುತ್ತಾರೆ. ಹೀಗೆ ರಾಜ್ಯದ ವಿವಿಧ ಪಟ್ಟಣ ಹಾಗು ನಗರ ಪ್ರದೇಶಗಳಲ್ಲಿ ಲಕ್ಷಾಂತರ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 8 ತಿಂಗಳುಗಳಿಂದ ಪೌರಕಾರ್ಮಿಕ ಆಟೋ ಚಾಲಕರಿಗೆ ಸರ್ಕಾರ ಸಂಬಳ ನೀಡಿಲ್ಲಾ, ಸಂಬಳ ಕೇಳಿದವರನ್ನು ಗುತ್ತಿಗೆದಾರರು ಕೆಲಸದಿಂದ ತೆಗೆದು ಹಾಕಿದ್ದಾರೆ! ಈ ಸೇವೆಯು Essential Services ಅಡಿಯಲ್ಲಿ ಬಂದರೂ ಸಹ ಸರ್ಕಾರಗಳು ಇವರನ್ನು ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಂಡು, ಅತ್ಯಂತ ಕಡಿಮೆ ವೇತನ ನೀಡಿ,  ಅವರಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆಯನ್ನು ನೀಡದೆ ಅವರಿಗೆ Living Wages, ಸುರಕ್ಷತಾ ಸಲಕರಣೆಗಳು, ಜೀವ ವಿಮೆ ಅಥವಾ ಆರೋಗ್ಯ ವಿಮೆ ಹಾಗು ಪೆನ್ಷನ್ನಾಗಲಿ  ನೀಡದೆ ಅವರನ್ನು ಪ್ರಾಣಿಗಳಿಗಿಂತ ತುಚ್ಚವಾಗಿ ಕಾಣಲಾಗುತ್ತಿದೆ.

ಪೌರಕಾರ್ಮಿಕರಿಗೆ ಯಾವುದೇ ರಜೆಗಳು ಇರುವುದಿಲ್ಲ. ಅವರಿಗೆ ಆರೋಗ್ಯ ಹದಗೆಟ್ಟರೂ ಕೆಲಸಕ್ಕೆ ಬರಬೇಕು, ಇಲ್ಲದಿದ್ದರೆ ಅವರ ವೇತನವನ್ನು ಕಡಿತಗೊಳಿಸಲಾಗುತ್ತದೆ. ಅಲ್ಲದೆ ಇವರ ಮೇಲೆ ಸಾರ್ವಜನಿಕರಿಂದ ಹಿಡಿದು ತಮ್ಮ ಮೇಲಿರುವ ಎಲ್ಲಾ ಹಂತದ ಅಧಿಕಾರಿಗಳಿಂದ ಶೋಷಣೆ ನಡೆಯುತ್ತದೆ.  ಅದೆಷ್ಟೋ ಕಾರ್ಮಿಕರು ಸೇವೆಯಲ್ಲಿಯೆ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಸರ್ಕಾರಿ ಪೌರ ಕಾರ್ಮಿಕರ ಪರಿಸ್ಥಿತಿಯು  ವಿಭಿನ್ನವಾಗಿಲ್ಲಾ..,  ಅವರ ಸೇವೆ ಮುಗಿದ ನಂತರ ಅವರಿಗೆ ಯಾವುದೇ ಆರೋಗ್ಯ ವಿಮೆ ಇರುವುದಿಲ್ಲಾ, ಸೇವೆಯಲ್ಲಿದ್ದಾಗ ಅವರು ಕಲುಷಿತ ವಾತಾವರಣದಲ್ಲಿ ಕೆಲಸ ಮಾಡಿದ್ದರ ಪರಿಣಾಮವಾಗಿ ಇವರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುತ್ತಾರೆ. ಹಾಗಾಗಿ ಅವರ ಆರೋಗ್ಯ ರಕ್ಷಣೆಗೆ ಸರ್ಕಾರ ಗಮನ ಹರಿಸಬೇಕು. ಆದರೆ ಇಲ್ಲಿ ಅವರಿಗೆ ಸೇವೆಯಲ್ಲಿರುವ ಸಂದರ್ಭದಲ್ಲಿ ಸಿಗುತ್ತಿದ್ದ ಆರೋಗ್ಯ ವಿಮೆಯು ನಿವೃತ್ತಿಯ ನಂತರ ಸಿಗುವುದಿಲ್ಲಾ.  ಹಾಗಾಗಿ ಇವರು ನಿವೃತ್ತಿಯ ನಂತರ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗಿದೆ! ಹಾಗೆಯೇ ಇವರ ಪುನರ್ವಸತಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ಮುಂಗಡ ಪತ್ರದಲ್ಲಿ ಸರ್ಕಾರ ಘೋಷಿಸುತ್ತದೆ. ಆದರೆ ಅದರ ಪೈಕಿ ನಯಾ ಪೈಸೆಯು ಇವರಿಗೆ ಸಿಗುವುದಿಲ್ಲ!

ಇಲ್ಲಿಯವರೆಗೆ ಪೌರಕಾರ್ಮಿಕರಿಗೆ ಯಾವುದೇ ವಸತಿ ಯೋಜನೆಗಳನ್ನಾಗಲಿ, ಇವರ ಮಕ್ಕಳಿಗೆ ಶಿಕ್ಷಣದ ವಿಶೇಷ ಸೌಲಭ್ಯಗಳನ್ನಾಗಲಿ, ಪರ್ಯಾಯ ಉದ್ಯೋಗದ ಅವಕಾಶಗಳ ಬಗ್ಗೆಯಾಗಲಿ ಇಲ್ಲಿಯವರೆಗೂ ಯಾವುದೇ ಸರ್ಕಾರವಾಗಲಿ, ರಾಜಕಾರಣಿಗಳಾಗಲಿ ಯೋಚನೆ ಮಾಡಿಯೇ ಇಲ್ಲ! ದಲಿತರಲ್ಲಿ ದಲಿತರಾಗಿ ಬದುಕುತ್ತಿರುವ ಇವರ ಪರಿಸ್ಥಿತಿ ಶೋಚನೀಯ. ಅಸಲಿ ದೇಶ ಭಕ್ತರಾದ ಈ ಯೋಧರನ್ನು ನಮ್ಮ ಸರ್ಕಾರಗಳು ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಅಮಾನವೀಯ.  ವಿಧಾನ ಸಭೆಗಳಲ್ಲಿ ಹಾಗು ಸಂಸತ್ತಿನಲ್ಲಿ ದೇಶದ ಎಲ್ಲಾ ವರ್ಗಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಜನ ಈ ಪೌರ ಕಾರ್ಮಿಕರ ಬಗ್ಗೆ ಧ್ವನಿ ಎತ್ತದಿರುವುದು ದುರಂತವೆ ಸರಿ!

ಮಾನ್ಯ ಮಂತ್ರಿಗಳೆ, ನಿಮಗೆ ನಿಜವಾಗಿಯೂ ದೇವರ ಮೇಲೆ ನಂಬಿಕೆಯಿದ್ದರೆ ನಿಮ್ಮ  ಹಾಗು ಜನರ ಆರೋಗ್ಯವನ್ನು ಕಾಪಾಡುತ್ತಿರುವ ಜೀವಂತ ದೇವರುಗಳ  ಬಗ್ಗೆ ಗಮನ ಹರಿಸಿ, ಅವರ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಮಹತ್ವದ ಹೆಜ್ಜೆಯಿಡಲಿ. ಆಗ ನಿಮಗೂ ಹಾಗೂ ನಿಮ್ಮ ಸರ್ಕಾರಕ್ಕೆ ಒಳ್ಳೆದಾಗುತ್ತೆ!
-ಪ್ರೊಫೆಸರ್ ಹರಿರಾಮ್. ಎ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]