Friday, December 4 , 2020
ಕೋವಿಡ್- 19 ಇನ್ನೆಷ್ಟು ಎಡವಲು ಸಾಧ್ಯ? ನಾ ದಿವಾಕರ  

 

ಭಾರತದಲ್ಲಿ ಕೊರೋನಾ  ಈಗ ಸರಕಾರದ ಕಚೇರಿಯ ಕಡತಗಳಲ್ಲೇ ಏರಿಳಿತ ಕಾಣುತ್ತಿದೆ. ಸರ್ಕಾರಿ ಪ್ರೇರಿತ ತಜ್ಞರ ತಂಡಗಳು ಕೊರೋನಾ ವ್ಯಾಪಿಸುತ್ತಿದೆ, ಇನ್ನೂ ಹೆಚ್ಚಾಗುತ್ತದೆ, ದೇಶ ಶೇ 50ರಷ್ಟು ಜನರನ್ನು ಬಾಧಿಸುತ್ತದೆ ಎಂದು ಹೇಳುತ್ತಲೇ, ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ, ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ ಕೊರೋನಾ ಸೃಷ್ಟಿಸಿದ ಗೊಂದಲ ಮತ್ತು ಆತಂಕಕ್ಕಿಂತಲೂ ಹೆಚ್ಚಿನ ಗೊಂದಲ ಸೃಷ್ಟಿಸಲಾಗುತ್ತಿದೆ. ಸಮಸ್ತ ಭಾರತೀಯರನ್ನು ಅತಂಕಕ್ಕೆ ಸಿಲುಕಿಸಿರುವ ಒಂದು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಯಾವ ಸಂಸ್ಥೆ ಅಧಿಕೃತವಾದ, ವೈಜ್ಞಾನಿಕ ನೆಲೆಗಟ್ಟಿನ, ವಿಶ್ವಾಸಾರ್ಹ ಮಾಹಿತಿ ಒದಗಿಸಬೇಕು ಎಂಬುದನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಈವರೆಗೂ ನಿರ್ಧರಿಸಿಲ್ಲ.

ಪ್ರತಿಯೊಂದು ಬಾರಿ  ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಂದು ವರದಿ ಸಲ್ಲಿಸಿದ ಕೂಡಲೇ ವಿಜ್ಞಾನಿಗಳು ಅಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಆಕ್ಷೇಪದ ನೆಲೆ ಮತ್ತು ಹಿನ್ನೆಲೆ ಎರಡೂ ಜನಸಾಮಾನ್ಯರಿಗೆ ನಿಲುಕದಂತೆಯೇ ಇರುತ್ತದೆ. 2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಶೇ 50ರಷ್ಟು ಜನರು ಕೊರೋನಾ ಸೋಂಕಿತರಾಗಿರುತ್ತಾರೆ ಎಂದು ಹೇಳುವ ತಜ್ಞರೇ ಫೆಬ್ರವರಿ ಅಂತ್ಯದ ವೇಳೆಗೆ ಕೊರೋನಾ ನಿಯಂತ್ರಣಕ್ಕೆ ಬರಲಿದೆ ಎಂದೂ ಹೇಳಿದ್ದಾರೆ. (ಇಂದಿನ ಪ್ರಜಾವಾಣಿ ವರದಿ ಓದಿ). ಈಗ ಭಾರತದಲ್ಲಿ ಸೋಂಕಿತರ ಸಂಖ್ಯೆ 76 ಲಕ್ಷ ತಲುಪಿದೆ. ಜನವರಿ 2021ರ ವೇಳೆಗೆ ಇದೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋದರೆ  ಒಂದು ಕೋಟಿ ತಲುಪುತ್ತದೆ.

ಕೇಂದ್ರ ಸರ್ಕಾರದ ಆರೋಗ್ಯ ಸಚಿವರ ಹೇಳಿಕೆಯ ಪ್ರಕಾರ ಕಳೆದ ಕೆಲವು ದಿನಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು ಚಳಿಗಾಲ ಮತ್ತು ಹಬ್ಬದ ದಿನಗಳು ಎದುರಾಗುವುದರಿಂದ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ತಜ್ಞರ ಸಮಿತಿ ಹೇಳುವಂತೆ ಫೆಬ್ರವರಿ 2021ರ ವೇಳೆಗೆ ದೇಶದ ಶೇ 50ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಎಂದರೆ ಕನಿಷ್ಟ 65 ಕೋಟಿ ಸೋಂಕಿತರು ಇರುತ್ತಾರೆ. ಅದೇ ತಿಂಗಳ ಅಂತ್ಯಕ್ಕೆ ಕೊರೋನಾ ನಿಯಂತ್ರಣಕ್ಕೆ ಬರಲಿದೆ ಎಂದೂ ಹೇಳಲಾಗಿದೆ. ಈನಡುವೆ ಕೆಲವು ರಾಜ್ಯಗಳಲ್ಲಿ ಕೊರೋನಾ ಸಮುದಾಯ ಪ್ರಸರಣ ಇದೆ ಎಂದು ಕೊನೆಗೂ ಕೇಂದ್ರ ಆರೋಗ್ಯ ಸಚಿವರು ಒಪ್ಪಿಕೊಂಡಿದ್ದಾರೆ. ಇದು ಅರ್ಧಸತ್ಯ ಎನ್ನುವುದು ಅವರಿಗೂ ತಿಳಿದಿದೆ.

ಏಪ್ರಿಲ್ ತಿಂಗಳಲ್ಲೇ ಸಮುದಾಯ ಪ್ರಸರಣ ಆರಂಭವಾಗಿತ್ತು ಎಂದು ತಜ್ಞರು, ವಿಜ್ಞಾನಿಗಳು ಮತ್ತು ವೈದ್ಯರು ಎಚ್ಚರಿಕೆ ನೀಡಿದ್ದರು. ಆದರೆ ಲಾಕ್ ಡೌನ್ ಇದ್ದುದರಿಂದ ಇದು ಸಾಧ್ಯವಿಲ್ಲ ಎಂದು ನಿರೂಪಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಹಾಗಾಗಿ ತಜ್ಞರ ಅಭಿಪ್ರಾಯಗಳನ್ನು  ತಿರಸ್ಕರಿಸಲಾಗಿತ್ತು. ಇತ್ತೀಚೆಗೆ ತಜ್ಞರ ಸಮಿತಿ ನೀಡಿರುವ ವರದಿ ವೈಜ್ಞಾನಿಕವಾಗಿಲ್ಲ ಎಂದೂ,  ವಿಸ್ತೃತವಾದ ಗಣಿತೀಯ ಮಾದರಿಗಳ ಮೂಲಕ ನೀಡುವ ಅಂದಾಜುಗಳು ವಿಶ್ವಸನೀಯವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ಸಾಂಕ್ರಾಮಿಕ ಪಿಡುಗು ಇಡೀ ದೇಶದ ಜನಸಾಮಾನ್ಯರನ್ನು ಕಂಗೆಡಿಸುತ್ತಿರುವಾಗ ಈ ರೀತಿಯ ವ್ಯತಿರಿಕ್ತ ಹೇಳಿಕೆಗಳು ಬರುವುದೇ ದೇಶ ಅಸ್ವಸ್ಥವಾಗಿದೆ ಎನ್ನುವುದಕ್ಕೆ ಸಾಕ್ಷಿ.

ಇನ್ನು ಈ ಸರ್ಕಾರ ನೇಮಿಸಿರುವ ತಜ್ಞರ ವರದಿಯನ್ನು ತಿರಸ್ಕರಿಸಿರುವ ವಿಜ್ಞಾನಿಗಳು ತಮ್ಮ ಹೆಸರು ಹೇಳುವುದಕ್ಕೂ ಹಿಂಜರಿಯುವುದನ್ನು ನೋಡಿದರೆ, ಕೊರೋನಾ ಸಹ ಹಥ್ರಾಸ್ ಸಂತ್ರಸ್ತೆಯಂತೆ ಪೊಲೀಸ್ ನಿಯಂತ್ರಣಕ್ಕೆ ಒಳಪಟ್ಟಿದೆ ಎನಿಸುತ್ತದೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೇ ಮಧ್ಯ ರಾತ್ರಿ ಸುಟ್ಟುಹಾಕುವ ವ್ಯವಸ್ಥೆಯಲ್ಲಿ ಕೊರೋನಾ ಸಂಬಂಧಿತ ಮಾಹಿತಿಯನ್ನು ಹೂತು ಹಾಕುವುದು ಕಷ್ಟವೇನಲ್ಲ ಅಲ್ಲವೇ ? ಜನರ ನ್ನು ಸಾವಿನಂಚಿಗೆ ದೂಡುತ್ತಿರುವ, ಬದುಕುವವರನ್ನು ದೀವಾಳಿ ಮಾಡುತ್ತಿರುವ, ಖಾಸಗಿ ಆಸ್ಪತ್ರೆಗಳ ಲೂಟಿಗೆ ಮುಕ್ತ ಅವಕಾಶ ಮಾಡಿಕೊಡುತ್ತಿರುವ ಒಂದು ಸಾರ್ವತ್ರಿಕ ಸಮಸ್ಯೆಯ ಬಗ್ಗೆ ದೇಶದ ಪ್ರತಿಷ್ಠಿತ ವಿಜ್ಞಾನಿಗಳು ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಲು ಹೆದರುತ್ತಾರೆ ಎಂದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಗೂ  ಪೊಲೀಸ್ ವ್ಯವಸ್ಥೆಗೂ ಹೆಚ್ಚೇನೂ ವ್ಯತ್ಯಾಸ ಇಲ್ಲ ಎಂದೇ ಅರ್ಥ ಅಲ್ಲವೇ ?

ಪ್ರಜೆಗಳ ಆರೋಗ್ಯ ರಕ್ಷಣೆಯ ವಿಚಾರದಲ್ಲಿಯಾದರೂ ಆಡಳಿತ ವ್ಯವಸ್ಥೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕಲ್ಲವೇ ? ಇದು ಕನಿಷ್ಟ ವ್ಯವಧಾನ , ಸಾಮಾಜಿಕ ಪ್ರಜ್ಞೆ ಮತ್ತು ನಾಗರಿಕ ಕಾಳಜಿ ಇರುವ ಯಾವುದೇ ಸರ್ಕಾರ ಕ್ಕೆ ತಿಳಿದಿರಬೇಕು. ಗೊಂದಲಮಯ ವರದಿಗಳನ್ನು ನೀಡುವ ಮೂಲಕ ಜನರನ್ನು ದಿಕ್ಕುತಪ್ಪಿಸಿ ತನ್ನ ತಪ್ಪುಗಳನ್ನು ಮರೆಮಾಚುವುದು ಜಗತ್ತಿನ ಕಣ್ಣಿಗೆ ಮಾಸ್ಕ್ ಹಾಕಿದಂತೆ ಅಲ್ಲವೇ ? ಮೋದಿ ಸರ್ಕಾರ ಮಾಡುತ್ತಿರುವುದು ಇದನ್ನೇ. ಇಡೀ ವಿಶ್ವವೇ ಭಾರತದಲ್ಲಿ ವಿಧಿಸಿದ ಅವೈಜ್ಞಾನಿಕ ಲಾಕ್ ಡೌನ್ ನಿಂದ ಉಂಟಾದ ದುಷ್ಪರಿಣಾಮಗಳ ಬಗ್ಗೆ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿರುವಾಗಲೂ ಇಂದಿಗೂ ಲಾಕ್ ಡೌನ್ ಮಾಡಿದ್ದರಿಂದಲೇ ಕೊರೋನಾ ಪ್ರಸರಣ ಕಡಿಮೆಯಾಗಿದೆ ಎಂದು ಹೇಳುತ್ತಿರುವುದೇ ಇದಕ್ಕೆ ಸಾಕ್ಷಿ.

ಒಂದು ನಿತ್ಯ ಜೀವನದ ಉದಾಹರಣೆಯನ್ನು ನೋಡೋಣ. ಮೂರು ನಾಲ್ಕು ದಶಕಗಳ  ಹಿಂದೆ ಹಸುಗೂಸು ಇರುವ ಮನೆಯಲ್ಲಿ ಮುಂಬಾಗಿಲಿಗೆ ಒಂದು ಮೂರಡಿಯ ಮರದ  ತಾತ್ಕಾಲಿಕ ಗೇಟ್ ಇಡುತ್ತಿದ್ದರು. ಎರಡೂ ಬದಿಯ ಫ್ರೇಂನೊಳಗೆ ಕುಳಿತುಕೊಳ್ಳುವಂತೆ ಅದನ್ನು ಇಡಲಾಗುತ್ತಿತ್ತು. ಮಗು ಅಂಬೆಗಾಲಿನ ಹಂತ ದಾಟಿ ನಡೆಯುವಂತಾದ ಮೇಲೆ ಇದನ್ನು ಬಳಸಲಾಗುತ್ತಿತ್ತು. ಹೊಸ್ತಿಲು ದಾಟಿ ಓಡಿಬಿಡುತ್ತದೆ ಎನ್ನುವ ಭಯದಿಂದ. ಭಾರತ ಸರ್ಕಾರದ ಲಾಕ್ ಡೌನ್ ನೀತಿ ಇದನ್ನು ನೆನಪಿಸುತ್ತದೆ. ಕೊರೋನಾ ತೊಟ್ಟಿಲಿನಲ್ಲಿದ್ದಾಗ ಬಾಗಿಲಿಗೆ ಅಡ್ಡಲಾಗಿ ಒಂದು ಸಣ್ಣ ಗೇಟ್ ಇಟ್ಟಿದ್ದರು. ನಡೆಯುವಂತಾದ ಮೇಲೆ ತೆಗೆದುಬಿಟ್ಟರು. ಈಗ ಸರ್ಕಾರ ಹೇಳುತ್ತಿದೆ ಆಗ ಗೇಟ್ ಇಡದೆ ಇದ್ದಿದ್ದರೆ ಮಗು ಊರೆಲ್ಲಾ ಸುತ್ತಾಡಿಬಿಡುತ್ತಿತ್ತು ಎಂದು. ಈಗೇನು ಗೂಡಿನಲ್ಲಿ ಸೇರಿಕೊಂಡಿದೆಯೇ ? ಸರ್ಕಾರವೇ ಉತ್ತರಿಸಬೇಕು.

ಈಗ ಕಳೆದ ನಾಲ್ಕು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಇದೇ ವೇಳೆ ದೇಶವ್ಯಾಪಿ ಪರೀಕ್ಷೆಯ ಪ್ರಮಾಣವೂ ಪ್ರತಿದಿನ 10 ಲಕ್ಷಕ್ಕಿಂತಲೂ ಕಡಿಮೆ ಇದೆ. ಇಷ್ಟೇ ಸೂತ್ರ. ನವಂಬರ್ ತಿಂಗಳ ಅಂತ್ಯದೊಳಗೆ ಕೊರೋನಾ ತಗ್ಗುತ್ತಿದೆ ಎಂದು ವಿಶ್ವ ಮಾರುಕಟ್ಟೆಗೆ ಮನದಟ್ಟುಮಾಡಿ, ಆರ್ಥಿಕತೆ ಸುಧಾರಿಸಿದೆ ಎಂದು ತೋರಿಸದಿದ್ದರೆ ಜಿಡಿಪಿ ಮತ್ತೊಮ್ಮೆ ಕುಸಿದು ದೇಶ ಕಂಗಾಲಾಗುತ್ತದೆ. ಅದಕ್ಕಾಗಿ ಇತ್ತೀಚೆಗೆ ವಿತ್ತ ಸಚಿವರ ಮತ್ತೊಂದು ಪ್ಯಾಕೇಜ್ ಘೋಷಣೆ, ರಾಜ್ಯ ಸರ್ಕಾರಗಳ ಪರವಾಗಿ ಒಂದು ಲಕ್ಷ ಕೋಟಿ ರೂಗಳ ಸಾಲ, ಕೇಂದ್ರ ನೌಕರರಿಗೆ ಮುಂಗಡ ಹಣ ಇತ್ಯಾದಿ. ಈಗ ಕೊರೋನಾ ಪರೀಕ್ಷೆಗಳನ್ನು ಕಡಿಮೆ ಮಾಡುವ ಮೂಲಕ , ಗುಣಮುಖರಾದವರ ಸಂಖ್ಯೆಯನ್ನೇ ಪ್ರಧಾನವಾಗಿ ಬಿಂಬಿಸುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು  ಹೇಳುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ. ಹಾಗಾದರೆ ಫೆಬ್ರವರಿ 2021ರ ವೇಳೆಗೆ ದೇಶದ ಶೇ 50ರಷ್ಟು ಜನರು ಹೇಗೆ ಸೋಂಕಿತರಾಗುತ್ತಾರೆ ? ಅಲ್ಲಾದೀನನ  ದೀಪದಲ್ಲಿ ಅಡಗಿದ್ದು ಹಠಾತ್ತನೆ ಎರಗಿಬಿಡುತ್ತದೆಯೇ ?

ಹಬ್ಬ ಹರಿದಿನಗಳು ಎದುರಾಗುತ್ತಿವೆ. ನವರಾತ್ರಿ ಸಂಭ್ರಮ ಆರಂಭವಾಗಿದೆ, ಮದುವೆ ಸಮಾರಂಭಗಳು ಹೆಚ್ಚಾಗುತ್ತವೆ, ದೀಪಾವಳಿಯ ಸಂಭ್ರಮ ಬರಲಿದೆ, ದಸರಾ ಈಗಾಗಲೇ ಜನದಟ್ಟಣೆಯಿಂದ ಅಪಾಯದ ಮುನ್ಸೂಚನೆ ನೀಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಸೂಚನೆ ಏನು ? “ ಕೊರೋನಾದಿಂದ ಪಾರಾಗಲು, ಮಹಾಜನರೇ, ನಿಮ್ಮ ಮುಂದಿರುವ ಆಯ್ಕೆಗಳು ಮೂರೇ ಮೂರು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ ಕೈ ತೊಳೆಯುವುದು, ಆರು ಅಡಿ ದೈಹಿಕ ಅಂತರ ಕಾಪಾಡಿಕೊಂಡು ಜನಸಂದಣಿಯಿಂದ ದೂರ ಇರುವುದು.”  ನಿಜ ವೈದ್ಯರು, ತಜ್ಞರು ಇದನ್ನು ಲಾಕ್ ಡೌನ್ ಅವಧಿಯಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಕರ್ನಾಟಕದಲ್ಲೇ ಸರ್ಕಾರ ಮಾಡಿರುವುದೇನು ?

ಪ್ರವಾಸೋದ್ಯಮದ ಆದಾಯ ಕುಸಿಯುತ್ತದೆ ಎಂಬ ನೆಪವೊಡ್ಡಿ ಮೈಸೂರಿನ ಮತ್ತು ಕರ್ನಾಟಕದ ಎಲ್ಲ ಪ್ರವಾಸಿ ಕೇಂದ್ರಗಳನ್ನೂ, ದೇವಾಲಯಗಳನ್ನೂ ಜನರಿಗೆ ಮುಕ್ತವಾಗಿ ತೆರೆದಿಟ್ಟಿದೆ. ಈ ಜನದಟ್ಟಣೆಯಲ್ಲಿ ಆರು ಅಡಿ ಅಂತರ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಮೈಗೆ ಮೈ ತಾಕದೆ ಇದ್ದರೆ ಆರು ಅಡಿ ಎಂದುಕೊಳ್ಳಬಹುದು, ನಮ್ಮ ಅನುಕೂಲಕ್ಕೆ. ಇನ್ನು ಮಿಸುಕಾಡಲು ಜಾಗವಿರದಷ್ಟು ಜನರು ಒಂದೆಡೆ ಸೇರುವಾಗ ಮಾಸ್ಕ್ ಧರಿಸಿದರೆ ಉಸಿರುಕಟ್ಟಿದಂತಾಗುತ್ತದೆ, ವಾತಾವರಣದಲ್ಲೇ ಆ ರೀತಿಯ ಉಸಿರುಕಟ್ಟುವ ಪರಿಸ್ಥಿತಿ ಉಂಟಾಗುತ್ತದೆ. ಇನ್ನು ಸ್ಯಾನಿಟೈಸರ್ ಬದಲು ಎಲ್ಲ ಅಂಗಡಿಗಳಲ್ಲಿ ರಂಗುರಂಗಿನ ನೀರನ್ನು ಇಟ್ಟಿರುತ್ತಾರೆ (ಈಗಾಗಲೇ ಹಲವು ಅಂಗಡಿ ಮುಗ್ಗಟ್ಟುಗಳಲ್ಲಿ ಇದು ನಡೆಯುತ್ತಿದೆ, ಕೇಳುವವರಿಲ್ಲ ಅಷ್ಟೇ).

ಮಾರುಕಟ್ಟೆ ಮತ್ತು ಜನತೆಯ ಆರೋಗ್ಯ ರಕ್ಷಣೆ ಈ ಎರಡು ಆಯ್ಕೆಗಳ ನಡುವೆ ಸರ್ಕಾರಕ್ಕೆ ಎರಡನೆಯದು ನಿರ್ಲಕ್ಷಿಸಬಹುದಾದ ಆಯ್ಕೆಯಾಗಿದೆ ಏಕೆಂದರೆ ಸಾವಿನ ಪ್ರಮಾಣ ಕಡಿಮೆ ಇದೆ. ಸಂಖ್ಯೆ ಲೆಕ್ಕಕ್ಕಿಲ್ಲ. ಪ್ರಮಾಣ ಮುಖ್ಯ. ಇದು ಸಾಂಖ್ಯಿಕ ಕಸರತ್ತು ಸರ್ಕಾರಿ ಕಚೇರಿಗಳಲ್ಲಿ ನಡೆಯುವಂತಹುದು. ಕೋವಿದ್ 19 ಸಂದರ್ಭದಲ್ಲಿ ಇಂದು ಏಳನೆಯ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯಾದರೂ ಖಾಸಗಿ ವೈದ್ಯಕೀಯ ಕ್ಷೇತ್ರದ ಹೊಣೆಗಾರಿಕೆಯ ಬಗ್ಗೆ ಮಾತನಾಡಿದ್ದಾರೆಯೇ ? ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ, ಚಿಕಿತ್ಸಾ ವೆಚ್ಚವನ್ನು ನಿಯಂತ್ರಿಸುವ ಬಗ್ಗೆ ಉಲ್ಲೇಖಿಸಿದ್ದಾರೆಯೇ ? ಪ್ರಾಥಮಿಕ ಆರೋಗ್ಯ ಸೇವೆಯ ಬಗ್ಗೆ ಪ್ರಸ್ತಾಪಿಸಿದ್ದಾರೆಯೇ ? ದುಬಾರಿ ಚಿಕಿತ್ಸಾ ಶುಲ್ಕ ವಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಒಂದಾದರೂ ಎಫ್ ಐ ಆರ್ ದಾಖಲಾಗಿದೆಯೇ ? ವಿರೋಧಿಗಳು ಕೆಮ್ಮಿದರೆ ಎಫ್ ಐ ಆರ್ ದಾಖಲಿಸುವ ಸರ್ಕಾರಕ್ಕೆ ಖಾಸಗಿ ಲೋಕದ ಈ ಲೂಟಿ ಕಾಣುತ್ತಿಲ್ಲವೇ ? ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ಕುರಿತು ಒಂದಾದರೂ ಹೇಳಿಕೆ ನೀಡಿದ್ದಾರೆಯೇ ?

ಹಬ್ಬಗಳ ಸಾಲು ದಿನಗಳು ಎದುರಾಗುತ್ತಿವೆ, ಕೊರೋನಾ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಿಳಿದಿದ್ದರೂ ಬಿಹಾರದಲ್ಲಿ ಮಹಾ ಚುನಾವಣೆ, ಉತ್ತರ ಪ್ರದೇಶದಲ್ಲಿ, ಕರ್ನಾಟಕದಲ್ಲಿ ಉಪ ಚುನಾವಣೆ ನಡೆಸಲೇಬೇಕೆಂಬ ತುರ್ತು ಏನಿತ್ತು ? ಕರ್ನಾಟಕದಲ್ಲಿ ಸರಳ ದಸರಾ ಹೆಸರಿನಲ್ಲೇ ನಗರದಾದ್ಯಂತ ಚೀನಾ ದೀಪಗಳನ್ನು ಬೆಳಗಿಸಿ, ಜನರನ್ನು ಮಾರುಕಟ್ಟೆಗೆ ಆಕರ್ಷಿಸುವ ಅನಿವಾರ್ಯತೆ ಏನಿತ್ತು ?  ಕಳೆದ ಹಲವು ದಿನಗಳಿಂದ ಮೈಸೂರಿನ ಸ್ಥಳೀಯ ಪತ್ರಿಕೆಗಳಲ್ಲಿ ಕೊರೋನಾ ಸುದ್ದಿಯೇ ಪ್ರಕಟವಾಗುತ್ತಿಲ್ಲ.ಬಹುಶಃ ದಸರಾಗೆ ಬಾಧೆಯಾಗುತ್ತದೆ ಎನ್ನುವ ಕಾರಣ ಇರಬಹುದು. ಯಾವ ಬಡಾವಣೆಯಲ್ಲಿ ಸೋಂಕು ಹೆಚ್ಚಾಗಿದೆ ಎನ್ನುವ ಮಾಹಿತಿ ನೀಡುವುದಕ್ಕೆ ಎಂದೋ ತಿಲಾಂಜಲಿ ನೀಡಲಾಯಿತು. ದಿನಕ್ಕೆ ಎಷ್ಟು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಈವರೆಗೂ ಮಾಹಿತಿ ನೀಡಲಾಗಿಲ್ಲ. ಮಾರುಕಟ್ಟೆಗೆ ನೆರವಾಗಲು ಇಷ್ಟೆಲ್ಲಾ ಕಸರತ್ತು ಮಾಡುವುದು ಅರ್ಥವ್ಯವಸ್ಥೆಯ ದೃಷ್ಟಿಯಿಂದ ಅನಿವಾರ್ಯವೇ ಇರಬಹುದು. ಆದರೆ ಜನರಿಂದ ಮಾಹಿತಿ ಮುಚ್ಚಿಡುವುದರ ಅರ್ಥವೇನು ? ಮಾಧ್ಯಮಗಳೂ ಸರ್ಕಾರಗಳ ಈ ಕುತಂತ್ರಗಳಿಗೆ ಸಹಕಾರ ನೀಡುತ್ತಿರುವುದೇ ಇವತ್ತಿನ ದುರಂತ.

ಭಾರತದ ಆರೋಗ್ಯ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಕೊರೋನಾ ಸೋಂಕಿತರ ಸಂದರ್ಶನ ಅಥವಾ ಸಮೀಕ್ಷೆಯ ಮೂಲಕ ಮಾತ್ರವೇ ತಿಳಿಯಲು ಸಾಧ್ಯ. ಯಾವ ಸುದ್ದಿಮನೆಗಳೂ, ಪತ್ರಿಕೆಗಳೂ ಈ ನಿಟ್ಟಿನಲ್ಲಿ ಆಸಕ್ತಿ ತೋರುತ್ತಿಲ್ಲ. ಕೋವಿದ್ 19 ನಿಯಮಗಳನ್ನು ಉಲ್ಲಂಘಿಸಿ ಜನಸಾಮಾನ್ಯರ ಲೂಟಿ ಮಾಡುವ ಖಾಸಗಿ ಆಸ್ಪತ್ರೆಯ ಹೆಸರು ಪ್ರಕಟಿಸಲೂ ಹೆದರುವಷ್ಟು ಮಟ್ಟಿಗೆ ಸರ್ಕಾರ ಮತ್ತು ಮಾಧ್ಯಮಗಳು ಕಾರ್ಪೋರೇಟ್ ಗುಲಾಮರಾಗಿವೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಎಷ್ಟಿದೆ, ಜನರು ಎಷ್ಟು ಸುರಕ್ಷಿತವಾಗಿದ್ದಾರೆ. ಆರೋಗ್ಯ ಸೇವೆ, ಸವಲತ್ತು ಹೇಗಿದೆ ಈ ವಿಚಾರಗಳನ್ನು ಸರ್ಕಾರವಂತೂ ಲೆಕ್ಕಿಸುತ್ತಿಲ್ಲ, ಮಾಧ್ಯಮಗಳು ಮರೆತೇ ಹೋದಂತಿದೆ.

ಕೊರೋನಾ ಲಸಿಕೆಯ ಬಗ್ಗೆಯೂ ಇಲ್ಲಸಲ್ಲದ ಊಹಾಪೋಹಗಳಿಗೆ ಅವಕಾಶ ನೀಡುವ ಮೂಲಕ, ಅಂದಾಜುಗಳನ್ನು ನೀಡುವ ಮೂಲಕ ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸಲಾಗುತ್ತಿದೆ. ಲಸಿಕೆ ಇನ್ನೂ ಅಂತಿಮವಾಗಿ ಹೊರಬರುವ ಮುನ್ನವೇ ಕೇಂದ್ರ ಆರೋಗ್ಯ ಸಚಿವರು ಭಾರತಕ್ಕೆ 25 ಕೋಟಿ ಲಸಿಕೆಗಳು ಬರಲಿವೆ ಎಂದು ಹೇಳುವುದೇ ಅಲ್ಲದೆ ಅದರ ವಿತರಣೆಯ ಬಗ್ಗೆಯೂ ಹೇಳಿಕೆ ನೀಡುತ್ತಿದ್ದಾರೆ.  ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕ ವಲಯದಲ್ಲಿ ಹೇಗೆ ನಿಯಮ ಪಾಲನೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಗಮನ ಹರಿಸಿದರೆ ಸೋಂಕು ತಡೆಗಟ್ಟಲು ಸಾಧ್ಯವಾಗಬಹುದು.

ನಿರ್ಲಕ್ಷ್ಯ ಆಡಳಿತ ವ್ಯವಸ್ಥೆ, ನಿರ್ಲಜ್ಜ ರಾಜಕಾರಣ, ಅಲಕ್ಷಿತ ಆರೋಗ್ಯ ಸೇವೆ ಮತ್ತು ನಿರ್ದಯಿ ಸರ್ಕಾರ ಈ ನಾಲ್ಕು ಗೋಡೆಗಳ ನಡುವೆ ಕೊರೋನಾ ಪರ್ಯಟನ ಮಾಡುತ್ತಿದೆ, ಜನಸಾಮಾನ್ಯರು ನಲುಗಿಹೋಗುತ್ತಿದ್ದಾರೆ. ಬಡ ಜನತೆಯ ಪಾಡು ಕೇಳದವರೇ ಇಲ್ಲದಂತಾಗಿದೆ. ಅಂಕಿ ಅಂಶಗಳು, ಸಾಂಖ್ಯಿಕ ಕಸರತ್ತುಗಳ ಮೂಲಕ ಜನರನ್ನು ಸಮಾಧಾನಪಡಿಸುವ ತಂತ್ರಗಾರಿಕೆಯನ್ನು ಅನುಸರಿಸಲಾಗುತ್ತಿದೆ.  ಆದರೆ ಇದು ಮಾಸ್ಕ್ ಧರಿಸುವ ಜನರಿಗೆ ಅರ್ಥವಾಗುತ್ತದೆ. ಕೊರೋನಾ ವೈರಾಣುವಿಗೆ ಅರ್ಥವಾಗುವುದಿಲ್ಲ. ಅದು ಹರಡುತ್ತಲೇ ಹೋಗುತ್ತದೆ. ಆದರೆ ಆಡಳಿತ ನಡೆಸುವ ಸರ್ಕಾರಕ್ಕೆ ಅರ್ಥವಾಗಬೇಕಲ್ಲವೇ ? ಆಗ ಮಾತ್ರ ನಾವು ಕೊರೋನಾಗಿಂತಲೂ ಭಿನ್ನ ಎಂದು ಬೆನ್ನು ತಟ್ಟಿಕೊಳ್ಳಬಹುದು.

-ನಾ.ದಿವಾಕರ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]