Friday, October 16 , 2020
ಕೊರೋನಾ ನಿಯಂತ್ರಣಕ್ಕೆ ಯಾರು ಹೊಣೆ? | ನಾ ದಿವಾಕರ

       “ದೇಶದಲ್ಲಿ ಕೊರೋನಾ ಅತಿ ವೇಗದಲ್ಲಿ ಹರಡುತ್ತಿದೆ, ಈಗ ಕೊರೋನಾ ಸೋಂಕು ನಿಯಂತ್ರಿಸಲು ಇರುವ ಮಾರ್ಗ ಒಂದೇ, ಜನರು ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು ” ಇದು ಕೇಂದ್ರ ಸಚಿವರೊಬ್ಬರು ಆಕಾಶವಾಣಿ ವಾರ್ತೆಯಲ್ಲಿ ನೀಡಿದ ಸಂದೇಶ. ಕೊರೋನಾ ವೈರಾಣು ಕಾಲಿಟ್ಟ ಕ್ಷಣದಿಂದಲೂ ಜನರಿಗೆ ಇರುವುದು ಇದೊಂದೇ ಮಾರ್ಗ ಅಲ್ಲವೇ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2021ರ ಆರಂಭಕ್ಕೆ ಒಂದು ಕೋಟಿ ತಲುಪಿರುತ್ತದೆ. ಮೃತರ ಸಂಖ್ಯೆ 2 ಲಕ್ಷ ದಾಟಿರುತ್ತದೆ. ಗುಣಮುಖರಾದವರ ಪ್ರಮಾಣ ಹೆಚ್ಚಾಗಿರುತ್ತೆ ಆದರೆ ಸೋಂಕಿತರು ಹೆಚ್ಚಾಗುತ್ತಲೇ ಇರುತ್ತಾರೆ.
ಇದರೊಟ್ಟಿಗೆ ನೀಡಿದ ಮತ್ತೊಂದು ಮಾಹಿತಿ ಎಂದರೆ “ಕೇಂದ್ರ ಸರ್ಕಾರ ಕೊರೋನಾ ನಿಯಂತ್ರಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ ”. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಸಾಯುತ್ತಿರುವವರ ಪ್ರಮಾಣ ಕಡಿಮೆ ಇದೆ, ಈ ಎರಡು ಸಾಧನೆ(?)ಗಳ ನಡುವೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸೋಂಕು ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಅಡ್ಡಿಯಾಗುತ್ತಿರುವುದು ಜನಸಾಮಾನ್ಯರ ನಿರ್ಲಕ್ಷ್ಯ ಮತ್ತು ಅಸಡ್ಡೆ ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಪಾದನೆ. ಈಗ ಪ್ರಧಾನಿ ಮೋದಿ ಕೊರೋನಾ ವಿರುದ್ಧ “ ಜನಾಂದೋಲನ ” ಹಮ್ಮಿಕೊಳ್ಳುವ ಘೋಷಣೆ ಮಾಡಿದ್ದಾರೆ. ಈ ಜನಾಂದೋಲನದ ರೂಪು ರೇಷೆಗಳಾಗಲೀ, ಸ್ವರೂಪವಾಗಲಿ ಸ್ಪಷ್ಟವಾಗಿಲ್ಲ. ಮಾರ್ಚ್ ತಿಂಗಳಲ್ಲಿ ಹಮ್ಮಿಕೊಳ್ಳಬೇಕಾದ ಜನಾಂದೋಲನ ಲಾಕ್ ಡೌನ್ ಹುಚ್ಚಿಗೆ ಬಲಿಯಾಗಿ ಈಗ ಹೆಜ್ಜೆ ಇಡಲು ಪ್ರಯತ್ನಿಸುತ್ತಿದೆ.

           ನಿಜ, ಕೊರೋನಾ ಸೋಂಕು ವ್ಯಾಪಿಸುತ್ತಿರುವ ನಗರಗಳಲ್ಲೇ ಜನರು ಮಾಸ್ಕ್ ಧರಿಸುತ್ತಿಲ್ಲ, ಅಂತರ ಕಾಪಾಡಿಕೊಳ್ಳುತ್ತಿಲ್ಲ. ಏಕೆ ಹೀಗಾಗುತ್ತಿದೆ ? ಈ ಪ್ರಶ್ನೆಯನ್ನು ಜನಸಾಮಾನ್ಯರ ಮುಂದಿಟ್ಟಾಗ ಏನೆಲ್ಲಾ ಉತ್ತರ ಬರಬಹುದು. ಭಾರತ ಮೂಲತಃ ಆರ್ಥಿಕ ಪುನಶ್ಚೇತನದತ್ತ ಗಮನ ಹರಿಸುತ್ತಿದೆ. ಮಾರುಕಟ್ಟೆ ಸಂಪೂರ್ಣ ಮುಕ್ತವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಾಲ್ ಗಳು ತೆರೆಯುತ್ತವೆ. ಈಜುಕೊಳಗಳು  ತೆರೆಯುತ್ತವೆ. ಜಿಮ್ ಗಳು ಈಗಾಗಲೇ ತೆರೆದಿವೆ. ಇನ್ನು ಚಿತ್ರಮಂದಿರಗಳೂ ತೆರೆಯಲಿವೆ. ಶಾಲೆಗಳನ್ನು ಆರಂಭಿಸಲು ಮಾತ್ರ ಮೀನ ಮೇಷ ಎಣಿಸುತ್ತಿದ್ದಾರೆ. ಕರ್ನಾಟಕದಲ್ಲಿ ವಿದ್ಯಾಗಮಕ್ಕೆ ಮಕ್ಕಳು ಬರಬಹುದಾದರೆ ಶಾಲೆಗೆ ಬರಲು ಏನು  ಅಡ್ಡಿ ? ಸಿನಿಮಾ ಮಂದಿರದಲ್ಲಿ ಜನ ಸೇರಬಹುದಾದರೆ ಶಾಲೆಯಲ್ಲಿ ಸೇರಲು ಏನು  ಅಡ್ಡಿ ?

          ಸರ್ಕಾರದ ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೊರೋನಾ ದೆಹಲಿಯ ಹೈಕಮಾಂಡ್ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವುದೇನೋ ಎನಿಸುತ್ತದೆ. ಲಾಕ್ ಡೌನ್ ಅವಧಿಯಿಂದ ಅನ್ ಲಾಕ್ ಅವಧಿಯವರೆಗಿನ ಸರ್ಕಾರದ ನಿಯಮಗಳನ್ನು ಗಮನಿಸಿದರೆ ಕೊರೋನಾ ಮಾರುಕಟ್ಟೆಯ ಅನಿವಾರ್ಯತೆಗಳನ್ನೂ ಅರ್ಥಮಾಡಿಕೊಳ್ಳುವುದೇನೋ ಎನಿಸುತ್ತದೆ. ಕಳೆದ ಮೂರು ತಿಂಗಳಲ್ಲಿ ಕೋವಿದ್ 19 ಷೇರು ಮಾರುಕಟ್ಟೆಗಿಂತಲೂ ಹೆಚ್ಚಿನ ವೇಗದಲ್ಲಿ ಹರಡುತ್ತಿದ್ದು ವೈದ್ಯರನ್ನೂ, ವಿಜ್ಞಾನಿಗಳನ್ನೂ ಕಂಗೆಡಿಸುತ್ತಿದೆ. ಲಸಿಕೆಯ ನಿರೀಕ್ಷೆಯಲ್ಲಿ ನಿರ್ಲಕ್ಷ್ಯ ತೋರುವ ಧೋರಣೆಯನ್ನು ಕೇಂದ್ರ ಆರೋಗ್ಯ ಸಚಿವರ ಹೇಳಿಕೆಗಳಲ್ಲಿ ಗಮನಿಸಬಹುದು.

             ಕನಿಷ್ಟ ಆರು ಅಡಿ ಅಂತರ ಕಾಪಾಡಿಕೊಳ್ಳಲು ಆದೇಶ ನೀಡುವ ಕೇಂದ್ರ ಆರೋಗ್ಯ ಸಚಿವಾಲಯ ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಮಾತ್ರ ಜನರಿಗೆ ಅವಕಾಶ ನೀಡಿದೆ. ಇಬ್ಬರ ನಡುವೆ ಒಂದು ಕುರ್ಚಿ ಖಾಲಿ ಬಿಡಲು ಸೂಚಿಸಲಾಗಿದೆ. ಅಂದರೆ ಎರಡು ಅಡಿ ಅಂತರ ಇರುತ್ತದೆ. ಸಾರ್ವಜನಿಕ ಸಭೆಗಳಲ್ಲಿ ಮತ್ತು ಕೌಟುಂಬಿಕ ಸಮಾರಂಭಗಳಲ್ಲಿ, ಸರ್ಕಾರವೇ ಆಯೋಜಿಸುವ ಉತ್ಸವಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ಜನಾಂದೋಲನದ ಯಾವ ನಿಯಮಗಳೂ ಪಾಲನೆಯಾಗುವುದಿಲ್ಲ ಎನ್ನುವುದಕ್ಕೆ ಜನಪ್ರತಿನಿಧಿಗಳೇ ಉದಾಹರಣೆ. ಇನ್ನು ಯಾವ ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಎಚ್ಚರವಹಿಸಲಾಗುತ್ತಿದೆ ?

              ಹಿತವಲಯದಲ್ಲಿರುವ ಮೇಲ್ ಮಧ್ಯಮವರ್ಗದವರೇ ಹೆಚ್ಚಾಗಿ ಬಳಸುವ ಆಧುನಿಕ ಹವಾನಿಯಂತ್ರಿತ ಅಂಗಡಿಗಳಲ್ಲಿ, ಶೋ ರೂಂಗಳಲ್ಲಿ ಸ್ಯಾನಿಟೈಸರ್ ಬಳಸಲಾಗುತ್ತಿದೆ, ಅಂತರವನ್ನೂ ಕೊಂಚಮಟ್ಟಿಗೆ ಗಮನಿಸಲಾಗುತ್ತಿದೆ. ಆದರೆ ಆರು ಅಡಿ ಎಂದರೆ ಎಷ್ಟು ಅಂತರ ಎಂಬ ಪ್ರಶ್ನೆ ಮೂಡಿದರೆ ಅಚ್ಚರಿಯೇನಿಲ್ಲ. ಭುಜಕ್ಕೆ ಭುಜ ತಗುಲದಂತೆ ನಿಂತರೆ ಸಾಕು ಎನ್ನುವ ಧೋರಣೆ ಗ್ರಾಹರಲ್ಲಿದ್ದಂತೆಯೇ ಅಂಗಡಿ ಮಾಲಿಕರಲ್ಲೂ ಇರುತ್ತದೆ. ಇವರಿಗೆ ಖರೀದಿಯ ಕಾತುರ, ವರ್ತಕರಿಗೆ ಲಾಭದ ಆತುರ. ಇನ್ನು ಶೇ 80ರಷ್ಟು ಜನರು ಆಶ್ರಯಿಸುವ ಮಾರುಕಟ್ಟೆಯ ಜನಜಂಗುಳಿಯನ್ನು ಗಮನಿಸಿದರೆ {6 ಅಡಿ = 3 ಅಂಗುಲ} ಎನ್ನುವ ಹೊಸ ಸೂತ್ರ ಜಾರಿಯಲ್ಲಿರುವುದನ್ನು ಗಮನಿಸಬಹುದು. ಇದನ್ನು ನಿಯಂತ್ರಿಸುವ, ಗಮನಿಸುವ ಮತ್ತು ಸರಿಪಡಿಸುವ ಹೊಣೆ ಯಾರದು ?

             ಮಾಸ್ಕ್ ಧರಿಸದೆ ಹೊರಹೋಗುವವರಿಗೆ ದಂಡ ವಿಧಿಸಲು ಮುಂದಾಗುವ ರಾಜ್ಯ ಸರ್ಕಾರ ಎಲ್ಲ ವ್ಯಾಪಾರ-ವಾಣಿಜ್ಯ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಮತ್ತು ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸುತ್ತಿದೆಯೇ ? ಮಾಸ್ಕ್ ಧರಿಸದವರಿಂದ ಕೋಟ್ಯಂತರ ರೂಗಳ ದಂಡ ವಸೂಲಿ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಯಾನಿಟೈಸರ್ ಬಳಸದ, ಅಂತರ ಕಾಪಾಡಿಕೊಳ್ಳಲು ಅವಕಾಶವನ್ನೇ ಕಲ್ಪಿಸದ ವರ್ತಕರಿಗೆ ಯಾವ ರೀತಿಯ ದಂಡ ವಿಧಿಸುತ್ತಿದೆ ? ಬಳಸಲಾಗುತ್ತಿರುವ ಸ್ಯಾನಿಟೈಸರ್ ಗುಣಮಟ್ಟವನ್ನು ಪರಿಶೀಲಿಸಲಾಗುತ್ತಿದೆಯೇ ? ಎಷ್ಟೋ ಅಂಗಡಿಗಳಲ್ಲಿ ಇಟ್ಟಿರುವ ಸ್ಯಾನಿಟೈಸರ್ ನೀರಿನಂತೆ ಇರುತ್ತದೆ. ಕಲಬೆರಕೆಯ ಕರಾಳ ಮುಖ ಇಲ್ಲಿಗೂ ಹಬ್ಬಿದ್ದರೆ ಅಚ್ಚರಿಯೇನಿಲ್ಲ.

              ಇದನ್ನು ಗಮನಿಸುವವರಾರು ? ರಾಜ್ಯ ಮತ್ತು ಜಿಲ್ಲಾ ಆಡಳಿತ ವ್ಯವಸ್ಥೆ ತನ್ನ ಆರೋಗ್ಯ ಇಲಾಖೆಯ ಮೂಲಕ ಇವೆಲ್ಲವನ್ನೂ ಪರಿಶೀಲಿಸಲು ಕಾರ್ಯಪಡೆಯನ್ನು ಸಿದ್ಧಪಡಿಸಬೇಕಲ್ಲವೇ ?  ಕೋವಿದ್ 19 ನಿಯಮಗಳ ಪಾಲನೆ ಮತ್ತು  ಮೇಲ್ವಿಚಾರಣೆ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲವೇ ? ಇದನ್ನೂ ಲಾಠಿ ಬೀಸುವ ಪೊಲೀಸರೇ ನಿರ್ವಹಿಸಬೇಕೆಂದರೆ ಹೇಗೆ ಸಾಧ್ಯವಾದೀತು. ಮಾಸ್ಕ್ ದಂಡ, ಹೆಲ್ಮೆಟ್ ದಂಡ, ಸಂಚಾರ ಸಿಗ್ನಲ್ ದಂಡ ಹೀಗೆ ಸಂಚಾರಿ ಪೊಲೀಸ್ ಇಲಾಖೆಗೆ ದಂಡ ವಸೂಲಿಯಲ್ಲೇ ಸಮಯ  ಕಳೆದುಹೋಗುತ್ತದೆ. ಇನ್ನು ಕೋವಿದ್ ನಿಯಮ ಪಾಲನೆಯ ಹೊಣೆಯನ್ನೂ ಪೊಲೀಸರೇ ಹೊರಬೇಕೆಂದರೆ ಅಷ್ಟು ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಮ್ಮಲ್ಲಿದ್ದಾರೆಯೇ ? ಸಿಬ್ಬಂದಿ ಕೊರತೆ ಇರುವುದನ್ನು ಸರ್ಕಾರ ಮರೆತೇ ಹೋದಂತೆ ಕಾಣುತ್ತಿದೆ. ಪೊಲೀಸ್ ಸಿಬ್ಬಂದಿಗೂ ಅವರದೇ ಆದ ಖಾಸಗಿ ಬದುಕು ಇದೆ ಎನ್ನುವುದನ್ನೇ ಸರ್ಕಾರ ಮರೆತಂತಿದೆ. ಎಲ್ಲದಕ್ಕೂ ಪೊಲೀಸ್ ಇಲಾಖೆಯೇ ಹೊಣೆ ಎಂದಾದರೆ ಪೊಲೀಸ್ ಸಿಬ್ಬಂದಿಯ ಪಾಡೇನು ? ಅವರೇನು ಯಂತ್ರಗಳೇ ?

           ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಸಾವಿನ ಪ್ರಮಾಣ ಕಡಿಮೆ ಇದೆ ಎನ್ನುವುದು ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯಕ್ಕೆ ಭೂಮಿಕೆಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮೂಲ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವುದೂ ಸರ್ಕಾರದ ಗಮನಕ್ಕೆ ಬರಬೇಕಲ್ಲವೇ ? ಸಮರೋಪಾದಿಯಲ್ಲಿ ಕಾರ್ಯನಿರತವಾಗಿರುವ ಆರೋಗ್ಯ ಸಚಿವಾಲಯಕ್ಕೆ ಇಂದಿಗೂ ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲದೆ, ವೆಂಟಿಲೇಟರ್ಸ್ ಇಲ್ಲದೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಸಾಯುತ್ತಿರುವವರು ಗೋಚರಿಸುತ್ತಿಲ್ಲವೇ ? ಹಣ ಇದ್ದವರು ಖಾಸಗಿ ಮೊರೆ ಹೋಗುತ್ತಿದ್ದಾರೆ, ಬಡಪಾಯಿ ಬಡವರು ಸ್ಮಶಾನದ ಮೊರೆ ಹೋಗುತ್ತಿದ್ದಾರೆ. ಸತ್ತವರನ್ನು ಹೂಳುವಾಗ ಇರುವ ಎಚ್ಚರ ಸಾಯುತ್ತಿರುವವರನ್ನು ಬದುಕಿಸಲೂ ಇರಬೇಕಲ್ಲವೇ ?

       ಬಹುಶಃ ಮಾರುಕಟ್ಟೆಯ ಭರಾಟೆಯಲ್ಲಿ ಸರಕಾರಗಳು ತಮ್ಮ ಸಹೃದಯತೆಯನ್ನು (ಇರಬೇಕು, ಇದೆಯೋ ಇಲ್ಲವೋ ಎನ್ನುವುದು ನಮ್ಮ ಪ್ರಜ್ಞೆಗೆ ಬಿಟ್ಟ ವಿಚಾರ) ಮರೆತಿವೆ ಎನಿಸುತ್ತಿದೆ. ಕೊರೋನಾ ನಿಯಂತ್ರಣ ಕಾನೂನು ಸುವ್ಯವಸ್ಥೆಯ ಸಮಸ್ಯೆ ಅಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ಜೀವನೋಪಾಯದ ಘೋಷಣೆ ಅಲಂಕಾರಿಕವಾಗಿ ಕಾಣುತ್ತದೆ. ಆದರೆ ಪ್ರತಿಯೊಂದು ಸಾವೂ ಹತ್ತು ಜನರ ಜೀವನೋಪಾಯಕ್ಕೆ ಕುತ್ತು ತರುತ್ತದೆ ಎಂಬ ವಾಸ್ತವ ಸರಕಾರಕ್ಕೆ ಅರ್ಥವಾಗಬೇಕಲ್ಲವೇ ? ಸಾಯುತ್ತಿರುವವರ ಪ್ರಮಾಣ ಕಡಿಮೆಯಾಗಿರುವುದು ಸತ್ತವರಿಗೆ ತಿಳಿಯುವುದೇ ಇಲ್ಲ, ಅವರ ಕುಟುಂಬದವರಿಗೆ ಸಾಂತ್ವನವನ್ನೂ ನೀಡುವುದಿಲ್ಲ. ಈ ಸಾಂತ್ವನ ನೀಡಬೇಕಿರುವುದು ಪ್ರಭುತ್ವ ಮತ್ತು ಪ್ರಭುತ್ವದ ಏಜೆನ್ಸಿಗಳು.

           ಒಂಬತ್ತು ತಿಂಗಳು ಕಳೆದರೂ ಇಂದಿಗೂ ಖಾಸಗಿ ಆಸ್ಪತ್ರೆಗಳನ್ನು ಸರಿಯಾಗಿ ನಿಯಂತ್ರಿಸಲು ಸರಕಾರಗಳಿಂದ ಸಾಧ್ಯವಾಗುತ್ತಿಲ್ಲ ಎಂದರೆ ಅರ್ಥವೇನು ? ಹೋಗಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಪರಿಪೂರ್ಣವಾಗಿರುವುದೇ ? ಕೋವಿದ್ ಕೇಂದ್ರಗಳಲ್ಲಿ ಸೋಂಕಿತರಿಗೆ ಸಕಲ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿವೆಯೇ ? ಪಿಪಿಇ ಮತ್ತು ವೆಂಟಿಲೇಟರ್ ಸರಬರಾಜು ಸಮರ್ಪಕವಾಗಿದೆಯೇ ? ಕೊರೋನಾ ವಾರಿಯರ್ಸ್ ಎಂದು ಕರೆಯಲಾಗುವ ವೈದ್ಯಕೀಯ ಮತ್ತು ಇತರ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸಲಾಗುತ್ತಿದೆಯೇ ? ಹಿರಿಯ ನಾಗರಿಕರಿಗೆ ಮನೆಯಲ್ಲೇ ಇರುವಂತೆ ಹೇಳಲಾಗುತ್ತಿದ್ದು ಇವರ ಮೇಲ್ವಿಚಾರಣೆ ಸಮರ್ಪಕವಾಗಿ ನಡೆಯುತ್ತಿದೆಯೇ ? ಧಾರ್ಮಿಕ ಕೇಂದ್ರಗಳಲ್ಲಿ, ಮದುವೆ ಮುಂತಾದ ಸಮಾರಂಭಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಸಂಖ್ಯೆಯ ಜನ ನಿಯಮಗಳನ್ನು ಅನುಸರಿಸುತ್ತಿರುವೋ  ಇಲ್ಲವೋ ಎನ್ನುವುದನ್ನು ಗಮನಿಸಲಾಗುತ್ತಿದೆಯೇ ?

                ಈ ಎಲ್ಲ ಪ್ರಶ್ನೆಗಳಿಗೂ “ ಇಲ್ಲ ” ಎನ್ನುವ ಉತ್ತರವೇ ದೊರೆತೀತು. ಹಾಗಾದರೆ ಸರಕಾರ ಮತ್ತು ಉಸ್ತುವಾರಿ ಸಚಿವರು ಮಾಡುತ್ತಿರುವುದೇನು ? ಆರೋಗ್ಯ ಇಲಾಖೆ ಮಾಡುತ್ತಿರುವುದೇನು ? ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುತ್ತಿದೆಯೋ ಇಲ್ಲವೋ ಅಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸರಿಯಾಗಿದೆಯೇ ? ಯಾವುದೇ ಮಾಧ್ಯಮಗಳೂ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಹಾವಳಿಯ ಬಗ್ಗೆ ಯೋಚಿಸುತ್ತಿಲ್ಲ. ಸರ್ಕಾರವೂ ಯೋಚಿಸುತ್ತಿಲ್ಲ. ಏಕೆಂದರೆ ನಗರ ಕೇಂದ್ರಿತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಮೀಣ ಜನತೆಯ ಸಾವು ನೋವು ಸಹಜ ಪ್ರಕ್ರಿಯೆ ಎನಿಸಿಬಿಡುತ್ತದೆ. ಸಾಮಾನ್ಯ ಜನರ ಸಾವು ನೋವು ಸ್ವಾಭಾವಿಕ ಎನಿಸಿಬಿಡುತ್ತದೆ. ಸಾವಿನ ಪ್ರಮಾಣವೇ ಪ್ರಧಾನ ಮಾನದಂಡವಾಗಿ ಪರಿಣಮಿಸಿದಾಗ ಇಂತಿಷ್ಟು ಸಾವುಗಳು ಸಹನೀಯ ಎನಿಸಿಬಿಡುತ್ತದೆ.

              ಕೊರೋನಾ ವಿರುದ್ಧ ಜನಾಂದೋಲನದಲ್ಲಿ “ನಿಮ್ಮ ಆರೋಗ್ಯ ನಿಮ್ಮ ಹೊಣೆ” ಎಂದು ಕೈತೊಳೆದುಕೊಳ್ಳುವುದಾದರೆ ಸರಕಾರ ಮತ್ತು ಆಡಳಿತ ವ್ಯವಸ್ಥೆಯ ಅವಶ್ಯಕತೆಯಾದರೂ ಏನು ? ಜನರು ಎಚ್ಚರಿಕೆಯಿಂದಿರಬೇಕು ನಿಜ ಆದರೆ ಜೀವನ ಮತ್ತು ಜೀವನೋಪಾಯದ ಚೌಕಟ್ಟಿನಲ್ಲಿ ಇದು ಅಕ್ಷರಶಃ ಸಾಧ್ಯವಿಲ್ಲ ಎಂದಾದಮೇಲೆ ಪರ್ಯಾಯವೇನು ? ಜನಸಾಮಾನ್ಯರು ಎಚ್ಚರಿಕೆಯಿಂದಿರುವಂತೆ  ಸರಕಾರ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ ? ಕೊರೋನಾಗೆ ಸುಲಭ ತುತ್ತಾಗಬಹುದಾದ                      ನಿರ್ದಿಷ್ಟ ವಯೋಮಾನದ ಮತ್ತು ಅನಾರೋಗ್ಯ ಹೊಂದಿರುವ ಜನರ ರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ?

            ಮಾರುಕಟ್ಟೆ ದೇಶವನ್ನು ಮುಂದಕ್ಕೆ ಕರೆದೊಯ್ಯುತ್ತದೆ. ಆದರೆ ಸಾಲು ಸಾಲು ಶವಗಳು ಬಿದ್ದಿದ್ದರೂ ಅತ್ತಿತ್ತ ನೋಡದೆ ತುಳಿದುಕೊಂಡು ಹೋಗುವ ಕ್ರೌರ್ಯ ಮಾರುಕಟ್ಟೆ ವ್ಯವಸ್ಥೆಯಲ್ಲಿದೆ. ಈ ವ್ಯವಸ್ಥೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ದೇಶದ ಸಾಮಾಜಿಕ ವ್ಯವಸ್ಥೆಯೊಳಗಿನ ಜೀವಗಳನ್ನು ಕಡೆಗಣಿಸುವುದು ಇನ್ನೂ ಹೆಚ್ಚು ಕ್ರೂರ ಎನಿಸುತ್ತದೆ. ಬಹುಶಃ ಭಾರತ ಈ ಹಂತ ತಲುಪಿದೆ. 130 ಕೋಟಿ ಜನಸಂಖ್ಯೆಯಲ್ಲಿ ಕೇವಲ ಒಂದು ಲಕ್ಷ ಜನ ಸತ್ತಿದ್ದಾರೆ, ಅವರಿಗಿಂತ ನಾವೇ ಮೇಲು ಎಂದು ಮತ್ತೊಂದು ಕ್ರೂರ ವ್ಯವಸ್ಥೆಯತ್ತ ಬೆರಳು ತೋರುವ ಮುನ್ನ, ಈ ಒಂದು ಲಕ್ಷ ಜೀವಗಳ ಸಾವು ಲಕ್ಷಾಂತರ ಜನರ ಬದುಕನ್ನು ಬಾಧಿಸುತ್ತದೆ ಎಂಬ ಕಾಳಜಿ, ಕಳಕಳಿ ಮತ್ತು ಸಹೃದಯತೆ ಆಡಳಿತ ವ್ಯವಸ್ಥೆಗೆ ಇರಬೇಕು.

            ಮಾರುಕಟ್ಟೆಯತ್ತಲೇ ನೋಡಿಕೊಂಡು ಕೊರೋನಾ ನಿಯಂತ್ರಣದಲ್ಲಿ ಎಡವುತ್ತಿರುವುದನ್ನು ನೋಡಿದರೆ ರಸ್ತೆಯಲ್ಲಿ ಮೊಬೈಲ್ ನೋಡುತ್ತಾ  ನಡೆದು ತೆರೆದ ಚರಂಡಿಗೆ ಬೀಳುವ ಯುವಪೀಳಿಗೆಯ ಚಿತ್ರಣ ಎದುರಾಗುತ್ತದೆ. ದೃಷ್ಟಿ ನೆಟ್ಟಗಿದ್ದರೆ ಸಾಲದು ಸ್ಪಷ್ಟವಾಗಿಯೂ ಇರಬೇಕು. ದೂರಗಾಮಿ ಚಿಂತನೆಯಿಲ್ಲದ ಆಡಳಿತ ವ್ಯವಸ್ಥೆ ಎಡವುತ್ತಲೇ ಇರುತ್ತದೆ ಎನ್ನುವುದಕ್ಕೆ ಭಾರತವೇ ಸಾಕ್ಷಿ.
-ನಾ.ದಿವಾಕರ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]