Friday, March 5 , 2021
ಕುರುಬರ ST ಮೀಸಲಾತಿ ಹೋರಾಟ: ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸುವ ಸಂಚು? ಡಾ.ಶಿವಕುಮಾರ್ 

ಇತ್ತೀಚೆಗೆ ಕರ್ನಾಟಕದ ಕುರುಬ ಸಮುದಾಯವು ನಮ್ಮನ್ನು ಎಸ್ಟಿ ಕೆಟಗರಿಗೆ ಸೇರಿಸಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಬೃಹತ್ ಪಾದಯಾತ್ರೆಯನ್ನೂ, ಬೃಹತ್ ಸಮಾವೇಶವನ್ನೂ ನಡೆಸಿತು. ನಿಜಕ್ಕೂ ಇದೊಂದು ಐತಿಹಾಸಿಕ ಹೋರಾಟ. ಈ ಹೋರಾಟದಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಐಕ್ಯತೆ ಮೆರೆದ ಕುರುಬರನ್ನು ಹಾಗು ಇಂತಹ ಹೋರಾಟವನ್ನು ರೂಪಿಸಿ ಮುನ್ನಡೆಸಿದ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿಯವರನ್ನು ತುಂಬು ಮನಸ್ಸಿನಿಂದ ಮೆಚ್ಚೋಣ.

ಇಂದು ಕೆಟಗರಿ – 2A ನಲ್ಲಿದ್ದು ಶೇ.15 ರಷ್ಟು ಮೀಸಲಾತಿಯಲ್ಲಿ ಪಾಲು ಪಡೆಯುತ್ತಿರುವ ಕುರುಬ ಸಮಾಜ ಕೇವಲ ಶೇ.3ರಷ್ಟಿರುವ ಎಸ್.ಟಿ. ( ಪರಿಶಿಷ್ಟ ಪಂಗಡ) ಗುಂಪಿಗೆ ಸೇರ್ಪಡೆಗೊಳ್ಳಲು ಉತ್ಸಾಹತೋರುತ್ತಿದೆ ಎಂದರೆ ಅರ್ಥವೇನು ? ನಿಜಕ್ಕೂ ಕುರುಬರು ಎಸ್ಟಿ ಪಟ್ಟಿಗೆ ಸೇರಿಕೊಳ್ಳಲು ಅರ್ಹರು..ಮುಂದೆ ಖಂಡಿತವಾಗಿಯೂ ಅವರು ಪರಿಶಿಷ್ಟ ಪಂಗಡಗಳ ಗುಂಪಿಗೆ ಸೇರಿಕೊಳ್ಳಲಿ. ಈ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ.  ಆದರೆ ನಮ್ಮಂಥವರನ್ನು ಕಾಡುವ ಪ್ರಶ್ನೆ ಏನೆಂದರೆ;  ಶೇ.15ರಷ್ಟಿರುವ ಮೀಸಲಾತಿಯ ಗುಂಪಿನಿಂದ ಶೇ.3 ರಷ್ಟಿರುವ ಗುಂಪಿಗೆ ಬರಲು ಕುರುಬರು ತಮ್ಮ ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅದೂ, ಕುರುಬ ಸಮಾಜಕ್ಕೆ ರಾಜಕೀಯ ಘನತೆಯನ್ನೂ, ಐಕ್ಯತೆಯನ್ನು ತಂದುಕೊಟ್ಟ ಶ್ರೀ ಸಿದ್ದರಾಮಯ್ಯನವರನ್ನು ಹೊರತುಪಡಿಸಿ! ಹೌದು ! ಶ್ರೀ ಸಿದ್ದರಾಮಯ್ಯನವರು ಈ ಹೋರಾಟದಲ್ಲಿ ಭಾಗವಹಿಸಿಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ಶ್ರೀ ಸಿದ್ದರಾಮಯ್ಯನವರು ಬಹಳ ದೊಡ್ಡ ನಾಯಕ. ತನ್ನ ಅಧಿಕಾರದ ಅವಧಿಯಲ್ಲಿ ಕುರುಬರನ್ನೂ ಒಳಗೊಂಡಂತೆ ಹಿಂದುಳಿದ ಜಾತಿಗಳಿಗೆಲ್ಲ ಸೂಕ್ತ ರಾಜಕೀಯ ಪ್ರಾತಿನಿಧ್ಯವನ್ನು ಕೊಡಿಸಿಕೊಟ್ಟಂತಹ ಜನಪರ ನಾಯಕ. ಇಂತಹ ವ್ಯಕ್ತಿಯನ್ನೇ ಕೇರುಮಾಡದೆ ST ಮೀಸಲಾತಿಗಾಗಿ ಕುರುಬ ಸಮಾಜದ ಕೆಲ ನಾಯಕರು/ ಸ್ವಾಮಿಗಳು ಹೋರಾಟ ನಡೆಸುತ್ತಿದ್ದಾರೆ ಎಂದರೆ ಅರ್ಥವೇನು ? ಇದರ ಹಿಂದೆ ಇರುವ ಸಂಚೇನು?

ಕರ್ನಾಟಕದ ರಾಜಕಾರಣದಲ್ಲಿ ಸದ್ಯಕ್ಕೆ ಶ್ರೀ ಸಿದ್ದರಾಮಯ್ಯನವರು ಬಹಳ ದೊಡ್ಡ ನಾಯಕ. ಅದರಲ್ಲೂ ತನ್ನ ಸಮುದಾಯದ ಓಟನ್ನು ಯಾರಿಗೆ ಬೇಕಾದರೂ ವರ್ಗಾಯಿಸಬಲ್ಲ ಶಕ್ತಿ ಇರುವ ಏಕೈಕ ನಾಯಕ. ಇಂತಹ ಸಾಮರ್ಥ್ಯ ಕರ್ನಾಟಕದಲ್ಲಿ ಸದ್ಯಕ್ಕೆ ಯಾವನಾಯಕರಿಗೂ ಪೂರ್ಣಪ್ರಮಾಣದಲ್ಲಿ ಇಲ್ಲ. ಇದು ಮನುವಾದಿಗಳಿಗೆ ಸಹಿಸಿಕೊಳ್ಳಲಾರದ  ವಿಚಾರವಾಗಿದೆ. ಇದರ ಜೊತೆಗೆ ಸಿದ್ದರಾಮಯ್ಯನವರು ಅಲ್ಲಲ್ಲಿ – ಆಗಾಗ ಜಾತ್ಯಾತೀತತೆಯ ಬಗ್ಗೆ, ಮಾಂಸಾಹಾರದ ಬಗ್ಗೆ,  ಮಾನವತಾವಾದ ಬಗ್ಗೆ ಹೆಚ್ಚೆಚ್ಚು ನಿರ್ಭೀತಿಯಿಂದ ಮಾತನಾಡುತ್ತಿದ್ದಾರೆ. ಇದೆಲ್ಲ ಬಹುಶಃ ಬಿ.ಜೆ.ಪಿಯ ಮನುವಾದಿಗಳಿಗೆ ದೊಡ್ಡ ತಲೆನೋವಾಗಿರಬಹುದು. ಹಾಗಾಗಿ ಅವರನ್ನು ರಾಜಕೀಯವಾಗಿ ಮುಗಿಸಲು – ಮೂಲೆ ಗುಂಪುಮಾಡಲು ಮನುವಾದಿಗಳು ಈ ಮೀಸಲಾತಿಯ ವಿಚಾರವನ್ನು ಮುಂದಿಟ್ಟುಕೊಂಡು ಕುರುಬ ಸಮಾಜದ ಕೆಲನಾಯಕರನ್ನು, ಸ್ವಾಮೀಜಿಗಳನ್ನೂ ಎತ್ತಿಕಟ್ಟಿದ್ದಾರೆಯೇ ? ಎಂಬ ಅನುಮಾನ ನಮ್ಮಂಥವರದು.

ಕುರುಬರು ST ಪಟ್ಟಿಗೆ ಸೇರಿದರೆ ಅವರಿಗೆ ಲಾಭವಿದೆಯೇ ? ಈಗಂತೂ ಲಾಭವಿಲ್ಲ, ಏಕೆಂದರೆ ST ಗಳಿಗೆ ಇರುವ ಮೀಸಲಾತಿಯ ಪ್ರಮಾಣ ಶೇ.3 ರಷ್ಟು ಮಾತ್ರ.ಅಲ್ಲೂ ಸುಮಾರು 55 ಜಾತಿಗಳು ಇವೆ.ಹಾಗಾಗಿ ಸದ್ಯಕ್ಕೆ ಲಾಭವಿಲ್ಲ.ST ಮೀಸಲಾತಿಯನ್ನು ಶೇ.3 ರಿಂದ ಶೇ.7.5 ಕ್ಕೆ (ಈಗ ಕೇಂದ್ರ ಮಟ್ಟದಲ್ಲಿರುವಂತೆ ) ಹೆಚ್ಚಿಸಿದರೆ ಮಾತ್ರ ಕುರುಬರಿಗೆ ಲಾಭವಾಗಬಹುದು. ಆದರೆ ಮುಖ್ಯ ಪ್ರಶ್ನೆ ಎಂದರೆ ಮೀಸಲಾತಿಯನ್ನು ಹೆಚ್ಚಿಸುವ ಕೆಲಸವನ್ನು ಸದ್ಯಕ್ಕೆ ಬಿಜೆಪಿಯವರು ಮಾಡುತ್ತಾರೆಯೇ ? ಈಗ ಕರ್ನಾಟಕದಲ್ಲಿ ಒಬಿಸಿ ಗಳಿಗೆ ಶೇ.32, ಎಸ್ಸಿಗಳಿಗೆ ಶೇ.15, ಎಸ್ಟಿಗಳಿಗೆ ಶೇ.3ರಷ್ಟು ಅಂದರೆ ಒಟ್ಟು ಶೇ.50 ರಷ್ಟು ಮೀಸಲಾತಿ ಜಾರಿಯಲ್ಲಿದೆ.ಸುಪ್ರೀಂ ಕೋರ್ಟ್ ಈಗಾಗಲೇ ಮೀಸಲಾತಿ ಶೇ.50 ಕ್ಕಿಂತ ಹೆಚ್ಚು ಇರಬಾರದು ಎಂದು ಸೀಲಿಂಗ್ ಹಾಕಿದೆ.ಈಗ ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಬೇಕೆಂದರೆ ಸುಪ್ರೀಂ ಕೋರ್ಟೀನ ಈ ನಿಯಮವನ್ನು ಮುರಿಯಬೇಕು. ಅದಕ್ಕಿರುವ ಮಾರ್ಗವೆಂದರೆ ತಮಿಳುನಾಡಿನಲ್ಲಿ ಈಗಾಗಲೇ ಮಾಡಿರುವಂತೆ ಒಟ್ಟು ಮೀಸಲಾತಿಯನ್ನೇ ಸಂವಿಧಾನದ 9ನೇ ಅನುಸೂಚಿಗೆ (9th Schedule)ಹಾಕಬೇಕು, ಆಗಷ್ಟೇ ಮೀಸಲಾತಿ ಹೆಚ್ಚಳ ಸಾಧ್ಯ. ಇಂತಹ ರಿಸ್ಕ್ಅನ್ನು ಬಿ.ಜೆ.ಪಿ.ಸರ್ಕಾರ ಸದ್ಯಕ್ಕೆ ತೆಗೆದು ಕೊಳ್ಳುತ್ತದೆಯೇ? ಒಬ್ಬರಿಗೆ ಮೀಸಲಾತಿ ಹೆಚ್ಚಿಸಿದರೆ ಇನ್ನುಳಿದವರು ಸುಮ್ಮನಿರುತ್ತಾರೆಯೇ ? ಅವರೂ ಹೋರಾಟ – ಪಾದಯಾತ್ರೆ ಮಾಡುವುದಿಲ್ಲವೇ ? ಖಂಡಿತವಾಗಿಯೂ ಮಾಡುತ್ತಾರೆ. ಒಟ್ಟಾರೆ ಇದು ಜೇನುಗೂಡಿಗೆ ಕಲ್ಲುಹೊಡೆದಂತೆ ! ಹಾಗಾಗಿ ಇದು ಸದ್ಯಕ್ಕಂತೂ ಕಷ್ಟದ ಕೆಲಸ.ಇದು ಬಿಜೆಪಿಯವರಿಗೆ ಗೊತ್ತಿಲ್ಲವೇ ? ಖಂಡಿತ ಗೊತ್ತು !

ಇಷ್ಟೆಲ್ಲ ಸಂಕೀರ್ಣ ಪರಿಸ್ಥಿತಿ ಇದ್ದರೂ ಬಿಜೆಪಿಯಲ್ಲಿರುವ ಮನುವಾದಿಗಳು ಕುರುಬರ ಎಸ್ಟಿ ಮೀಸಲಾತಿ ಹೋರಾಟಕ್ಕೆ ಪ್ರೇರಣೆ ಕೊಟ್ಟಿರುವುದೇಕೆ? ಇದು ಬಹುಶಃ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸಿ, ಆ ನಂತರ ಇಡೀ ಕುರುಬ ಸಮಾಜವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ತಂತ್ರ ಇರಬಹುದು.ಆದರೆ ಶ್ರೀ ಸಿದ್ದರಾಮಯ್ಯನವರಂತಹ ಸಮರ್ಥ-ಬದ್ಧತೆಯುಳ್ಳನಾಯಕನನ್ನು ಕಳೆದುಕೊಂಡು ಕುರುಬ ಸಮಾಜ ಸಾಧಿಸುವುದಾದರೂ ಏನನ್ನು? ಇಂತಹ ನಾಯಕನನ್ನು ರಾತ್ರೋರಾತ್ರಿ ದಿಢೀರನೆ ಸೃಷ್ಟಿಸಲು ಕುರುಬ ಸಮಾಜಕ್ಕೆ ಸಾಧ್ಯವಿದೆಯೇ? ಖಂಡಿತ ಸಾಧ್ಯವಿಲ್ಲ.

ಶ್ರೀ ಸಿದ್ದರಾಮಯ್ಯನವರು ರಾಜಕೀಯವಾಗಿ ಮತ್ತೊಮ್ಮೆ ಅವಕಾಶ ಸಿಕ್ಕರೆ ಕುರುಬ ಸಮಾಜವನ್ನು ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಮೇಲೆತ್ತುವ ಕೆಲಸವನ್ನು ಖಂಡಿತ ಸಮರ್ಥವಾಗಿ ಮಾಡಬಲ್ಲರು. ಇದು ಸದ್ಯಕ್ಕೆ ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ಕುರುಬರಿಗೆ ಈಗ ST ಮೀಸಲಾತಿಯನ್ನು ಪಡೆಯುವ ಹೋರಾಟಕ್ಕಿಂತಲೂ ಶ್ರೀ ಸಿದ್ದರಾಮಯ್ಯನಂತಹವರನ್ನು ರಾಜಕೀಯವಾಗಿ ಉಳಿಸಿಕೊಳ್ಳುವುದರಲ್ಲಿ , ಬೆಳೆಸುವುದರಲ್ಲಿ ಹೆಚ್ಚು ಲಾಭವಿದೆ. ಯಾರದೋ ಚಿತಾವಣೆಗೆ ಒಳಗಾಗಿ ತಮ್ಮ ದೊಡ್ಡನಾಯಕನನ್ನು ಕಳೆದುಕೊಳ್ಳುವುದು ಕುರುಬರಿಗೆ ಶ್ರೇಯಸ್ಕರವಲ್ಲ. ದಂಡನಾಯಕ  ಶಕ್ತನಿದ್ದರೆ ಮುಂದೆ ನೂರು ಯುದ್ಧಗಳನ್ನು ಬೇಕಾದರೆ ಗೆಲ್ಲಬಹುದು. ದಂಡನಾಯಕನೇ ಇಲ್ಲದೆ ಯಾವ ಯುದ್ಧವನ್ನು ಗೆಲ್ಲುವುದು ? ಸಿದ್ದರಾಮಯ್ಯನವರಂತಹ ದಂಡನಾಯಕನನ್ನು ಕಳೆದುಕೊಂಡು ಕುರುಬರು ಸಾಧಿಸುವುದಾದರೂ ಏನನ್ನು ? ಇಂತಹ ನಾಯಕನನ್ನು ದೂರಮಾಡಿ ಕೊಂಡು ಕೇವಲ ಒಂದಿಷ್ಟು ಮೀಸಲಾತಿಗಾಗಿ ಬಿಜೆಪಿ ಮನುವಾದಿಗಳ ಅಡಿಯಾಳುಗಳಾಗಿ ಕುರುಬರು ಬದುಕುವುದರಲ್ಲಿ ಯಾವ ಲಾಭವಿದೆ.?

ಈಗ ಬಿಜೆಪಿಗರು ಕೇಂದ್ರದಲ್ಲಿ ಜಾರಿಗೊಳಿಸುತ್ತಿರುವ ಖಾಸಗೀಕರಣದ ಮಹಾ ಪ್ರವಾಹದಲ್ಲಿ ಒಟ್ಟು ಮೀಸಲಾತಿಯ ಹಡಗೇ ಮುಳುಗಿ ಹೋಗುತ್ತಿದೆ. ಇಂತಹ ಹೊತ್ತಿನಲ್ಲಿ ಕುರುಬರು ಈಗ ಈ ಮುಳುಗುತ್ತಿರುವ ಹಡಗನ್ನು ಹತ್ತಬೇಕೇ? ಅಂತಹ ಮೀಸಲಾತಿಯ ಹತ್ತಾರು ಹಡಗುಗಳನ್ನು ಸೃಷ್ಟಿಸ ಬಲ್ಲ – ರಕ್ಷಿಸಬಲ್ಲ ಸಿದ್ದರಾಮಯ್ಯನವರಂತಹ ನಾಯಕನನ್ನು ಉಳಿಸಿಕೊಳ್ಳಬೇಕೇ? ಖಂಡಿತವಾಗಿಯೂ ಇದು ಸದ್ಯಕ್ಕೆ ಯೋಚಿಸಬೇಕಾದ ಗಂಭೀರ ಪ್ರಶ್ನೆ !

(ಮಾನ್ಯರಾದ ಶ್ರೀ ಸಿದ್ದರಾಮಯ್ಯನವರಲ್ಲಿ ಒಂದು ಮನವಿ: ತಾವು ಹೊರಗೆ ಮನುವಾದವನ್ನು ವಿರೋಧಿಸಿ ಮಾತನಾಡುತ್ತೀರಿ.ಆದರೆ ಒಳಗೊಳಗೆ ಆರೆಸ್ಸೆಸ್ ಮನುವಾದಿಗಳು ಕುರುಬಸಮಾಜದ ಯುವಕರನ್ನು ನಿಮ್ಮ ವಿರುದ್ದವೇ ತಯಾರುಮಾಡುತ್ತಿದ್ದಾರೆ ಗಮನಿಸಿದ್ದೀರಾ? ಮೈಸೂರಿನ ನಿಮ್ಮ ಮನೆಯ ಹತ್ತಿರವೇ ಈ ಕೆಲಸ ನಡೆಯುತ್ತಿದೆ. ಇದಕ್ಕೆ ತಾವು ಏನು ಪರಿಹಾರ ಕಂಡುಹಿಡಿಯುವಿರಿ? ಕೆಲವೇ ದಿನಗಳಲ್ಲಿ ಅವರು ನಿಮ್ಮ ವಿರುದ್ದವೇ ನಿಮ್ಮ ಸಮಾಜವನ್ನು ಛೂ ಬಿಡಲಿದ್ದಾರೆ! ಇದನ್ನು ನೀವು ಹೇಗೆ ಸರಿಪಡಿಸುವಿರಿ? ನೀವು ನಂಬಿದ ಸಮಾಜವಾದಿ ಮೌಲ್ಯಗಳನ್ನು ನಿಮ್ಮಸಮಾಜದ ಹೊಸಪೀಳಿಗೆಗೆ ಹೇಗೆ ಕಲಿಸುವಿರಿ..? ಅವರನ್ನು ನಿಮ್ಮ ಬಳಿಯಲ್ಲಿ ಹೇಗೆ ಉಳಿಸಿಕೊಳ್ಳುವಿರಿ?)
ಡಾ.ಶಿವಕುಮಾರ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]