
ಮತಭಾರತ
ವಿಶೇಷ ವರದಿ | ಗಣೇಶ್ ಕೆ.ಪಿ.
ಕೊಳ್ಳೇಗಾಲ(23.03.2019): ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಡವರನ್ನು ಬಡವರನ್ನಾಗಿಯೇ ಇಟ್ಟು ಆಡಳಿತ ನಡೆಸಿಕೊಂಡು ಬಂದಿದೆ. ಪ್ರತಿ ಚುನಾವಣೆಯಲ್ಲಿಯೂ ಬಡವ ಮತ್ತು ಶ್ರೀಮಂತ ಎನ್ನುವ ವಿಚಾರಗಳನ್ನು ಎತ್ತಿಕೊಂಡು ಜನರ ಮತಗಳನ್ನು ಗಿಟ್ಟಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರ ಪರ ಎಂದು ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿ, ಕೊಳ್ಳೇಗಾಲದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಶಿವಕುಮಾರ್ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಎನ್.ಮಹೇಶ್, ದೇಶದಲ್ಲಿ ಕಾಂಗ್ರೆಸ್ –ಬಿಜೆಪಿ ಬಡವರ ಪರ ಎಂದು ತೋರಿಸಿ ಅಧಿಕಾರಕ್ಕೆ ಬರುತ್ತಿದೆ. ಅದಕ್ಕಾಗಿ ಬಡತನವನ್ನು ಜೀವಂತವಾಗಿರಿಸಿದೆ ಎಂದು ಅವರು ಹೇಳಿದ್ದಾರೆ.
ಎಪ್ಪತ್ತರ ದಶಕದಲ್ಲಿ ಇಂದಿರಾ ಕಾಂಗ್ರೆಸ್ ವಿರುದ್ಧ ರೆಡ್ಡಿ ಕಾಂಗ್ರೆಸ್ ಹಾಗೂ ಆಗಿನ ಜನಸಂಘ(ಈಗಿನ ಬಿಜೆಪಿ) ಸೇರಿದಂತೆ ಜನತಾ ಪರಿವಾರಗಳು ನಿಂತಿದ್ದವು. ಜನತಾಪರಿವಾರ ಇಂದಿರಾಗಾಂಧಿ ವಿರುದ್ಧ ‘ಇಂದಿರಾ ಹಠಾವೋ, ದೇಶ್ ಬಚಾವೋ ಎಂದು ಸ್ಲೋಗನ್ ಬಳಸಿತು. ಈ ಸಂದರ್ಭದಲ್ಲಿ ಇಂದಿರಾಗಾಂಧಿ “ದೇ ಸೇಸ್ ಇಂದಿರಾ ಹಠಾವೋ, ಬಟ್ ಐ ಸೇ ಗರೀಬಿ ಹಠಾವೋ” ಎಂದು ಪ್ರತಿ ಸ್ಲೋಗನ್ ಬಳಸಿದರು. ಇದು ಇಂದಿಗೂ ಹೀಗೆ ಮುಂದುವರಿದುಕೊಂಡು ಬಂದಿದ್ದು, ಇದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬಡವರನ್ನು ಬಡವರನ್ನಾಗಿಸಿಯೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಅಂದು ಕಾಂಗ್ರೆಸ್ ಮಾಡುತ್ತಿದ್ದ ಚುನಾವಣಾ ಟ್ರಕ್ಸ್ ಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಅಂದು ಇಂದಿರಾ ಗಾಂಧಿಗೆ ಇಂತಹ ಸ್ಲೋಗನ್ ನೀಡುತ್ತಿದ್ದವರೇ ಇಂದು ಮೋದಿಗೂ ಅಂತಹದ್ದೇ ಸ್ಲೋಗನ್ ಗಳನ್ನು ಹೇಳಿಕೊಡುತ್ತಿದ್ದಾರೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ, ಅಚ್ಚೆ ದಿನ್, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವಂತಹ ಸ್ಲೋಗನ್ ಗಳನ್ನು ಬಳಸುತ್ತಿದ್ದಾರೆ. ಅಂದು ಕಾಂಗ್ರೆಸ್ ಮಾಡಿದ್ದನ್ನು ಇಂದು ಬಿಜೆಪಿ ಮಾಡುತ್ತಿದೆ. ಪ್ರಧಾನಿ ಮೋದಿ ಕಾಂಗ್ರೆಸ್ ಆಡಳಿತದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲರ ಅಕೌಂಟ್ ಗಳಿಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿದರು. ಇದರಿಂದಾಗಿ ಜನ ಮೋದಿಗೆ ಓಟು ಹಾಕಿ ಗೆಲ್ಲಿಸಿದರು. ಆದರೆ ದೇಶದ ಜನ ಈಗಲೂ ಬಡವರಾಗಿಯೇ ಇದ್ದಾರೆ. ಈಗ ಇದೇ ಟ್ರಿಕ್ಸ್ ನ್ನು ರಾಹುಲ್ ಗಾಂಧಿ ಬಳಸುತ್ತಿದ್ದಾರೆ. ಮೋದಿ ಶ್ರೀಮಂತರ ಪರ ಎಂದು ಹೇಳುತ್ತಿದ್ದಾರೆ. ಬಿಜೆಪಿ –ಕಾಂಗ್ರೆಸ್ ಎರಡೂ ಪಕ್ಷಗಳೂ ಬಡವರನ್ನು ಬಡವರನ್ನಾಗಿಸಿ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಇಂದಿರಾ ಗಾಂಧಿ ಎಪ್ಪತ್ತರ ದಶಕದಲ್ಲಿಯೇ ಗರೀಬಿ ಹಠಾವೋ ಎಂದು ಸ್ಲೋಗನ್ ಹೇಳಿದ್ದರು. ಆದರೆ ಇಂದಿಗೂ ದೇಶದಲ್ಲಿ ಜನರು ಅನ್ನವನ್ನು ಕೊಂಡುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದು ದಾಖಲೆ ಸಹಿತವಾಗಿ ಸಾಬೀತಾಗುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಆಡಳಿತದ ಸಂದರ್ಭದಲ್ಲಿ ತಂದ ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿ ಕುಟುಂಬಗಳ ಸಂಖ್ಯೆ 90 ಲಕ್ಷ ಎಂದು ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ಮಾಡಿಯೂ ದೇಶದಲ್ಲಿ ಇನ್ನೂ ಬಡತನ ಜೀವಂತವಾಗಿದೆಯೆಂದರೆ, ಬಡತನವನ್ನು ಎಲ್ಲಿ ಓಡಿಸಲಾಗಿದೆ? ಎಂದು ಪ್ರಶ್ನಿಸಿದ ಎನ್.ಮಹೇಶ್, ದೇಶದಲ್ಲಿ ಬಡವರನ್ನು ಬಡವರಾಗಿಟ್ಟು, ಬಡವರ ಬಡತನವನ್ನೇ ಬಂಡವಾಳವಾಗಿಸಿಕೊಂಡು ಕಾಂಗ್ರೆಸ್ ಬಿಜೆಪಿ ಚುನಾವಣೆಯಲ್ಲಿ ಗೆಲುವು ಪಡೆದುಕೊಂಡಿದೆ. ಅದನ್ನು ಈಗಲೂ ಮುಂದುವರಿಸುತ್ತಿದೆ ಎಂದು ಅವರು ಹೇಳಿದರು.